Petrol Price: ಪೆಟ್ರೋಲ್ ದರ ಭಾರತದಲ್ಲೇ ಅತಿ ಕಡಿಮೆ; ಹರದೀಪ್ ಸಿಂಗ್ ಪುರಿ
ಕೆಲವು ರಾಜ್ಯಗಳಲ್ಲಿ 17 ರೂ.ವರೆಗೆ ವ್ಯಾಟ್ ವಿಧಿಸಲಾಗುತ್ತಿದ್ದರೆ ಬಿಜೆಪಿಯೆತರ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ 32 ರೂ.ವರೆಗೆ ವ್ಯಾಟ್ ವಿಧಿಸಲಾಗುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ.
ನವದೆಹಲಿ: ಬೇರೆ ದೇಶಗಳಿಗೆ ಹೋಲಿಸಿದರೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗೆ (Crude Oil) ಹೋಲಿಸಿದರೆ ಭಾರತದಲ್ಲೇ ಪೆಟ್ರೋಲ್ ದರ (Petrol Price) ಅತಿ ಕಡಿಮೆ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ (Petroleum Minister) ಹರದೀಪ್ ಸಿಂಗ್ ಪುರಿ (Hardeep Singh Puri) ಹೇಳಿದ್ದಾರೆ. ಲೋಕಸಭೆಯಲ್ಲಿ (Lok Sabha) ಪ್ರಶ್ನೋತ್ತರ ಅವಧಿಯಲ್ಲಿ ಉತ್ತರ ನೀಡಿ ಅವರು ಮಾತನಾಡಿದ್ದಾರೆ. ಬಿಜೆಪಿಯೇತರ ಪಕ್ಷಗಳ ಸರ್ಕಾರ ಇರುವ ಆರು ರಾಜ್ಯಗಳು ಪೆಟ್ರೋಲ್ ಮೇಲಿನ ಮೌಲ್ಯ ವರ್ಧಿತ ತೆರಿಗೆ ವ್ಯಾಟ್ (VAT) ಅನ್ನು ಕಡಿಮೆ ಮಾಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಹಾಗೂ ಜಾರ್ಖಂಡ್ ರಾಜ್ಯಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ವ್ಯಾಟ್ ಕಡಿಮೆ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಕೆಲವು ರಾಜ್ಯಗಳಲ್ಲಿ 17 ರೂ.ವರೆಗೆ ವ್ಯಾಟ್ ವಿಧಿಸಲಾಗುತ್ತಿದ್ದರೆ ಬಿಜೆಪಿಯೆತರ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ 32 ರೂ.ವರೆಗೆ ವ್ಯಾಟ್ ವಿಧಿಸಲಾಗುತ್ತಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100 ರೂ. ಆಸುಪಾಸಿನಲ್ಲಿದೆ. ಇತರ ರಾಜ್ಯಗಳಿಗಿಂತ 8-10 ರೂ. ಕಡಿಮೆ ಇದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Domestic Crude: ದೇಶೀಯ ಕಚ್ಚಾ ತೈಲದ ಹೆಚ್ಚುವರಿ ಅಬಕಾರಿ ಸುಂಕದಲ್ಲಿ ಭಾರೀ ಕಡಿತ; ಪೆಟ್ರೋಲ್, ಡೀಸೆಲ್ ದರದ ಮೇಲೂ ಪರಿಣಾಮ
ಪ್ರತಿಪಕ್ಷಗಳ ಸಂಸದರಿಗೆ ಸಲಹೆ
ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ವ್ಯಾಟ್ ಕಡಿಮೆ ಮಾಡುವಂತೆ ನಿಮ್ಮ ರಾಜ್ಯ ಸರ್ಕಾರಗಳಿಗೆ ಸೂಚಿಸಿ ಎಂದು ಪ್ರತಿಪಕ್ಷಗಳ ಸಂಸದರಿಗೆ ಹರದೀಪ್ ಸಿಂಗ್ ಪುರಿ ಸೂಚಿಸಿದ್ದಾರೆ. ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿ ವ್ಯಾಟ್ ಕಡಿಮೆ ಮಾಡುವಂತೆ ಮಾಡಬೇಕು ಎಂದು ಸಂಸದರನ್ನು ಅವರು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ಪೆಟ್ರೋಲ್ ಪಂಪ್ಗಳಲ್ಲಿ ದರ ಸ್ಥಿರವಾಗಿರುವಂತೆ ನೋಡಿಕೊಂಡಿದೆ. 2021ರ ನವೆಂಬರ್ ಮತ್ತು 2022ರ ಮೇ ತಿಂಗಳಲ್ಲಿ ಎರಡು ಬಾರಿ ಅಬಕಾರಿ ಸುಂಕ ಕಡಿತ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 2022ರ ಏಪ್ರಿಲ್ 6ರಿಂದ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾದರೂ ಭಾರತದಲ್ಲಿ ಏರಿಕೆ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ತರಲು ಕೇಂದ್ರ ಸಿದ್ಧ; ಸಚಿವ ಹರದೀಪ್ ಸಿಂಗ್ ಪುರಿ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಹೆಚ್ಚಳದಿಂದಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು 27,276 ಕೋಟಿ ರೂ. ನಷ್ಟ ಅನುಭವಿಸಿವೆ ಎಂದೂ ಅವರು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಕೇಂದ್ರ ಸಿದ್ಧವಿದೆ. ಆದರೆ ರಾಜ್ಯ ಸರ್ಕಾರಗಳು ಸಮ್ಮತಿಸುವ ಸಾಧ್ಯತೆ ಬಹಳ ಕಡಿಮೆ ಇದೆ. ಯಾಕೆಂದರೆ ಇಂಧನ ಮತ್ತು ಮದ್ಯ ಮಾರಾಟವೇ ಅವುಗಳ ಆದಾಯದ ಪ್ರಮುಖ ಮೂಲಗಳು ಎಂದು ಹರದೀಪ್ ಸಿಂಗ್ ಪುರಿ ಇತ್ತೀಚೆಗೆ ಹೇಳಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Fri, 16 December 22