ನವದೆಹಲಿ, ಅಕ್ಟೋಬರ್ 1: ಬಜೆಟ್ನಲ್ಲಿ ಘೋಷಿಸಲಾಗಿದ್ದ ಇಂಟರ್ನ್ಶಿಪ್ ಸ್ಕೀಮ್ ಇದೇ ತಿಂಗಳು ಚಾಲನೆಗೆ ಬರುತ್ತಿದೆ. ಈ ಸ್ಕೀಮ್ಗೆಂದೇ ಪ್ರತ್ಯೇಕ ಪೋರ್ಟಲ್ ರೂಪಿಸಲಾಗಿದೆ. ಅಕ್ಟೋಬರ್ 3ರಿಂದ ಕಾರ್ಪೊರೇಟ್ ಕಂಪನಿಗಳು ಇಂಟರ್ನ್ಶಿಪ್ ಅಗತ್ಯ ಇದ್ದರೆ ಅದನ್ನು ಪೋರ್ಟಲ್ನಲ್ಲಿ ಕಂಪನಿಗಳು ಪೋಸ್ಟ್ ಮಾಡಬಹುದು. ಇಂಟರ್ನ್ಶಿಪ್ ಮಾಡಲು ಬಯಸುವ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 12ರಿಂದ ಇದೇ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಉದ್ಯೋಗಾವಕಾಶ ಕಡಿಮೆ ಇರುವ, ಕಡಿಮೆ ಕೌಶಲ್ಯ ಹೊಂದಿರುವ ಯುವಕರಿಗೆ ನೈಜ ಕೆಲಸದ ಅನುಭವ ಮತ್ತು ಅಗತ್ಯ ಕೌಶಲ್ಯ ಒದಗಿಸಲು ಇಂಟರ್ನ್ಶಿಪ್ ಸ್ಕೀಮ್ ಆರಂಭಿಸಲಾಗಿದೆ. ದೇಶದ ಅಗ್ರಮಾನ್ಯ 500 ಕಾರ್ಪೊರೇಟ್ ಕಂಪನಿಗಳಲ್ಲಿ ಯುವಕ ಮತ್ತು ಯುವತಿಯರು ಒಂದು ವರ್ಷ ಇಂಟರ್ನ್ಶಿಪ್ ಮಾಡಬಹುದು.
ಹತ್ತನೇ ತರಗತಿ ತೇರ್ಗಡೆಯಾಗಿರುವ 21 ವರ್ಷದಿಂದ 24 ವರ್ಷದ ವಯಸ್ಸಿನ ಯುವಕ ಮತ್ತು ಯುವತಿಯರು ಈ ಸ್ಕೀಮ್ಗೆ ಅರ್ಹರಿರುತ್ತಾರೆ. ಐಐಟಿಯಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರು, ಚಾರ್ಟರ್ಡ್ ಅಕೌಂಟೆಂಟ್ಸ್ ಇತ್ಯಾದಿ ವೃತ್ತಿಪರ ಪದವಿ ಪಡೆದವರು, ಸರ್ಕಾರಿ ಉದ್ಯೋಗದಲ್ಲಿರುವವರ ಕುಟುಂಬದವರು, ವರ್ಷಕ್ಕೆ ಎಂಟು ಲಕ್ಷ ರೂಗಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬದವರಿಗೆ ಈ ಸ್ಕೀಮ್ ಲಭ್ಯ ಇರುವುದಿಲ್ಲ.
ಇದನ್ನೂ ಓದಿ: ಆರೋಗ್ಯಕ್ಕೆ ಜನರ ಖಾಸಗಿ ವೆಚ್ಚಕ್ಕಿಂತ ಸರ್ಕಾರಿ ವೆಚ್ಚ ಅಧಿಕ; ಭಾರತದಲ್ಲಿ ಇದೇ ಮೊದಲು; ಇದು ಆಯುಷ್ಮಾನ್ ಸ್ಕೀಮ್ ಪರಿಣಾಮವಾ?
ಒಟ್ಟಾರೆ, ಉದ್ಯೋಗಾವಕಾಶ ಕಡಿಮೆ ಇರುವ ಯುವಕ ಮತ್ತು ಯುವತಿಯರನ್ನು ಕಾರ್ಪರೇಟ್ ವಲಯಕ್ಕೆ ಬೇಕಾದ ರೀತಿಯಲ್ಲಿ ಸಿದ್ಧಪಡಿಸುವುದು ಈ ಸ್ಕೀಮ್ನ ಉದ್ದೇಶ. ಕಾರ್ಪೊರೇಟ್ ಕಂಪನಿಗಳು ಈ ಸ್ಕೀಮ್ ಅಳವಡಿಸಿವುದು ಕಡ್ಡಾಯವಲ್ಲ, ಐಚ್ಛಿಕ ಮಾತ್ರ. ಅಭ್ಯರ್ಥಿಗಳ ತರಬೇತಿಗೆ ಆಗುವ ವೆಚ್ಚಕ್ಕೆ ಸಿಎಸ್ಆರ್ ಫಂಡ್ ಅನ್ನು ವಿನಿಯೋಗಿಸುವ ಅವಕಾಶವನ್ನು ಸರ್ಕಾರ ನೀಡಿದೆ.
ಇಂಟರ್ನ್ಶಿಪ್ ಪಡೆಯಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು, ನಿಗದಿತ ಪೋರ್ಟಲ್ನಲ್ಲಿ ನೊಂದಾಯಿಸಿಕೊಳ್ಳಬೇಕು. ಆಧಾರ್ ದಾಖಲೆಗಳ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ, ತಮ್ಮ ಪ್ರೊಫೈಲ್ ರಚಿಸಬೇಕು.
ಕಾರ್ಪೊರೇಟ್ ಕಂಪನಿಗಳೂ ಕೂಡ ಪ್ರತ್ಯೇಕವಾಗಿ ಈ ಪೋರ್ಟಲ್ನಲ್ಲಿ ತಮ್ಮ ಇಂಟರ್ನ್ಶಿಪ್ ಅಗತ್ಯತೆಗಳನ್ನು ನಮೂದಿಸಬೇಕು. ಈ ಇಂಟರ್ನ್ಶಿಪ್ ಕೆಲಸಗಳಿಗೆ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಕಂಪನಿಗಳು ಯಾರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು.
ಈ ಇಂಟರ್ನ್ಶಿಪ್ ಸ್ಕೀಮ್ನಲ್ಲಿ ಅಭ್ಯರ್ಥಿಗಳ ಮೇಲೆ ಸರ್ಕಾರ ಮತ್ತು ಕಾರ್ಪೊರೇಟ್ ಎರಡೂ ಕಡೆಯಿಂದ ವೆಚ್ಚ ಆಗುತ್ತದೆ. ಸರ್ಕಾರದಿಂದ ಇಂಟರ್ನ್ಶಿಪ್ ಅಭ್ಯರ್ಥಿಗಳಿಗೆ ಏಕಕಾಲದ 6,000 ರೂ ಹಣ ನೀಡಲಾಗುತ್ತದೆ. ಮಾಸಿಕವಾಗಿ 5,000 ರೂ ಸ್ಟೈಪೆಂಡ್ ನೀಡಲಾಗುತ್ತದೆ.
ಇದನ್ನೂ ಓದಿ: Inspiring: 22 ವರ್ಷಕ್ಕೆ ಐಎಎಸ್ ಹುದ್ದೆ ಬಿಟ್ಟು 14,000 ಕೋಟಿ ರೂ ಉದ್ಯಮ ಕಟ್ಟಿದ ಯುವಕ ರೋಮನ್ ಸೈನಿ
ಇನ್ನು, ಇಂಟರ್ನೀಗಳಿಗೆ ತರಬೇತಿ ಇತ್ಯಾದಿ ವೆಚ್ಚವನ್ನು ಕಂಪನಿಗಳೇ ಭರಿಸುತ್ತವೆ. ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಜವಾಬ್ದಾರಿಯಾದ ಸಿಎಸ್ಆರ್ ಫಂಡ್ಗಳನ್ನು ಇದಕ್ಕೆ ಬಳಸಬಹುದು.
ಇಂಟರ್ನ್ಶಿಪ್ನಲ್ಲಿ ಅಭ್ಯರ್ಥಿಗಳಿಗೆ ನೈಜ ಕೆಲಸದ ಅನುಭವ ಸಿಗುತ್ತದೆ. ಕಂಪನಿಗಳ ಕಚೇರಿ, ಕಾರ್ಖಾನೆ ಇತ್ಯಾದಿ ಕಾರ್ಯಸ್ಥಳಗಳಲ್ಲಿ ಅಭ್ಯರ್ಥಿಗಳನ್ನು ನಿಯೋಜಿಸಿ ಕೆಲಸ ಮಾಡಿಸಲಾಗುತ್ತದೆ. ಕಂಪನಿಗಳ ಅಂಗ ಸಂಸ್ಥೆಗಳು, ಸಪ್ಲೈಯರ್ಸ್ ಇತ್ಯಾದಿ ಪೂರಕ ಕಂಪನಿಗಳಲ್ಲಿ ಅಗತ್ಯ ಬಿದ್ದರೆ ಅಭ್ಯರ್ಥಿಗಳನ್ನು ಕಳುಹಿಸಿ ಕೆಲಸ ಮಾಡಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ