ಭಾರತೀಯ ರಿಸರ್ವ್ ಬ್ಯಾಂಕ್ 90 ವರ್ಷ ಸಂಸ್ಮರಣಾರ್ಥ 90 ರೂ ವಿಶೇಷ ನಾಣ್ಯ ಬಿಡುಗಡೆ
RBI @90 years: ಆರ್ಬಿಐ ಸ್ಥಾಪನೆಯಾಗಿ ಈಗ 89 ವರ್ಷ ಪೂರ್ಣವಾಗಿದ್ದು, 90ನೇ ವರ್ಷ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಹಣಕಾಸು ಸಚಿವಾಲಯ 90 ರೂಗಳ ವಿಶೇಷ ಕಾಯಿನ್ ಅನ್ನು ಅನಾವರಣಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರ್ಬಿಐನ ಗವರ್ನರ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. 40 ಗ್ರಾಮ್ ತೂಕದ ಈ ಸ್ಪೆಷಲ್ ಕಾಯಿನ್ ಅನ್ನು ಶೇ. 99.99 ರಷ್ಟು ಶುದ್ಧ ಬೆಳ್ಳಿಯಲ್ಲಿ ತಯಾರಿಸಲಾಗಿದೆ. ಆರ್ಬಿಐನ ಲಾಂಛನ, ಅಶೋಕ ಸ್ತಂಭದ ನಾಲ್ಕು ಸಿಂಹಗಳ ಲಾಂಛನ ಈ ನಾಣ್ಯದಲ್ಲಿವೆ.
ಮುಂಬೈ, ಏಪ್ರಿಲ್ 1: ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗಿ 90ನೇ ವರ್ಷಕ್ಕೆ ಅಡಿ ಇಟ್ಟ ಸಂದರ್ಭದ ಸ್ಮರಣಾರ್ಥ 90 ರುಪಾಯಿ ಮುಖಬೆಲೆಯ ವಿಶೇಷ ನಾಣ್ಯ (Rs 90 coin) ತಯಾರಿಸಲಾಗಿದೆ. ಇಂದು ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಸ್ಪೆಷಲ್ ಕಾಯಿನ್ ಬಿಡುಗಡೆ ಮಾಡಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಣಕಾಸು ಸಚಿವಾಲಯ ಅನಾವರಣಗೊಳಿಸಿದ ಈ 90 ರೂ ನಾಣ್ಯವನ್ನು 99.99 ಪ್ರತಿಶತದಷ್ಟು ಶುದ್ಧ ಬೆಳ್ಳಿಯಿಂದ ತಯಾರಿಸಲಾಗಿದೆ. ಈ ನಾಣ್ಯ 40 ಗ್ರಾಮ್ ತೂಗುತ್ತದೆ.
90 ರೂ ನಾಣ್ಯದ ವಿಶೇಷತೆಗಳೇನಿವೆ?
ಶುದ್ಧ ಬೆಳ್ಳಿಯಿಂದ ತಯಾರಿಸಲಾದ 40 ಗ್ರಾಮ್ ತೂಕದ ಈ 90 ರೂ ಮುಖಬೆಲೆಯ ನಾಣ್ಯದಲ್ಲಿ ಆರ್ಬಿಐನ ಲಾಂಛನವನ್ನು ಕಾಣಬಹುದು. ಲಾಂಛನದ ಕೆಳಗೆ RBI@90 ಎಂದು ಬರೆಯಲಾಗಿದೆ. ಅಶೋಕ ಸ್ತಂಭದ ನಾಲ್ಕು ಸಿಂಹಗಳಿರುವ ಲಾಂಛನ ಇದೆ. ಅದರ ಕೆಳಗೆ ದೇವನಾಗರಿ ಲಿಪಿಯಲ್ಲಿ ಬರೆಯಲಾದ ಸತ್ಯಮೇವ ಜಯತೆ ಇದೆ.
ಈ 90 ರೂ ನಾಣ್ಯವನ್ನು ವಿಶೇಷ ದಿನದ ಸ್ಮರಣೆಗಾಗಿ ತಯಾರಿಸಲಾಗಿದೆ. ಇದು ಸಾರ್ವಜನಿಕ ಬಳಕೆಗೆ ಲಭ್ಯ ಇರುವ ಸಾಧ್ಯತೆ ಕಡಿಮೆ. ಕಾಯಿನ್ ಕಲೆಕ್ಟರ್ಗಳಿಗೆ ಒಂದು ಸೇರ್ಪಡೆಯಾಗಬಹುದು.
ಇದನ್ನೂ ಓದಿ: RBI 90ನೇ ಸಂಸ್ಥಾಪನಾ ದಿನ: ಐತಿಹಾಸಕ್ಕೆ ಹಂತಕ್ಕೆ ಆರ್ಬಿಐ ಪ್ರವೇಶ ಎಂದ ಪ್ರಧಾನಿ ಮೋದಿ
ಆರ್ಬಿಐ ಹುಟ್ಟಿದ ಇತಿಹಾಸ
ಭಾರತೀಯ ರಿಸರ್ವ್ ಬ್ಯಾಂಕ್ 1935ರ ಎಪ್ರಿಲ್ 1ರಂದು ಕಾರ್ಯಾರಂಭಿಸಿತು. ಬ್ರಿಟಿಷರ ಆಡಳಿತದಲ್ಲಿ ಹಿಲ್ಟನ್ ಯಂಗ್ ಕಮಿಷನ್ ಶಿಫಾರಸುಗಳ ಆಧಾರದ ಮೇಲೆ ಆರ್ಬಿಐ ಅನ್ನು ಸ್ಥಾಪಿಸಲಾಯಿತು.
ಹಣಕಾಸು ಸ್ಥಿರತೆಗೆ ಬೇಕಾದ ಮೀಸಲು ನಿಧಿಯನ್ನು ಸ್ಥಾಪಿಸಲು, ಬ್ಯಾಂಕ್ ನೋಟು, ನಾಣ್ಯಗಳನ್ನು ತಯಾರಿಸಲು ಇವೇ ಮುಂತಾದ ಕಾರ್ಯಗಳ ಹೊಣೆಗಾರಿಕೆ ರಿಸರ್ವ್ ಬ್ಯಾಂಕ್ಗೆ ಇರುತ್ತದೆ. ಯಾವುದೇ ದೇಶದಲ್ಲೂ ರಿಸರ್ವ್ ಬ್ಯಾಂಕ್ ಅಲ್ಲಿಯ ಸೆಂಟ್ರಲ್ ಬ್ಯಾಂಕ್ ಆಗಿರುತ್ತದೆ. ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಇರುವಂತೆ ಭಾರತದಲ್ಲಿ ಆರ್ಬಿಐ ಇದೆ.
ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ 642.631 ಬಿಲಿಯನ್ ಡಾಲರ್ಗೆ ಏರಿಕೆ; ಇದು ಸಾರ್ವಕಾಲಿಕ ಗರಿಷ್ಠ ಮಟ್ಟ
ಭಾರತದಲ್ಲಿ ಆರ್ಬಿಐ ಹಲವು ಸಾಂಸ್ಥಿಕ ಅಭಿವೃದ್ಧಿಗೆ ಅಂಕಿತ ಹಾಕಿದೆ. ಯೂನಿಟ್ ಟ್ರಸ್ಟ್ ಆಫ್ ಇಂಡಿಯಾ, ಐಡಿಬಿಐ, ನಬಾರ್ಡ್, ಡಿಎಫ್ಎಚ್ಐ ಇತ್ಯಾದಿ ಸಂಸ್ಥೆಗಳನ್ನು ಸ್ಥಾಪಿಸಿ ಅಭಿವೃದ್ಧಿಗೆ ಎಡೆ ಮಾಡಿಕೊಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Mon, 1 April 24