AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಮನೆಗೆ ಸೌರಶಕ್ತಿ; ಪಿಎಂ ಸೂರ್ಯಘರ್ ಯೋಜನೆಯಲ್ಲಿ 1.45 ಲಕ್ಷ ನೊಂದಣಿ; ಅರ್ಜಿ ಸಲ್ಲಿಸುವ ಕ್ರಮಗಳ ವಿವರ

PM Surya Ghar Muft Bijli Yojana: ಮನೆಯ ಮೇಲ್ಛಾವಣಿ ಮೇಲೆ ಸೋಲಾರ್ ಸ್ಥಾಪಿಸುವ ಪಿಎಂ ಸೂರ್ಯಘರ್ ಮುಫ್ತ್ ಬಿಜಲಿ ಯೋಜನೆ ಅಡಿ ಇಲ್ಲಿಯವರೆಗೆ 26 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆ ಆಗಿವೆ. ಈ ಪೈಕಿ 6.34 ಲಕ್ಷ ಮನೆಗಳ ಮೇಲೆ ಸೋಲಾರ್ ಸ್ಥಾಪನೆ ಮಾಡಲಾಗಿದೆ. ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಹೆಚ್ಚಿನವು ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಆಗಿವೆ.

ಮನೆಮನೆಗೆ ಸೌರಶಕ್ತಿ; ಪಿಎಂ ಸೂರ್ಯಘರ್ ಯೋಜನೆಯಲ್ಲಿ 1.45 ಲಕ್ಷ ನೊಂದಣಿ; ಅರ್ಜಿ ಸಲ್ಲಿಸುವ ಕ್ರಮಗಳ ವಿವರ
ಸೋಲಾರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 04, 2024 | 4:14 PM

Share

ನವದೆಹಲಿ, ಡಿಸೆಂಬರ್ 4: ಮನೆ ಛಾವಣಿ ಮೇಲೆ ಸೌರಫಲಕಗಳನ್ನು ಹಾಕಿ ಸೌರಶಕ್ತಿ ತಯಾರಿಸಲು ಉತ್ತೇಜಿಸುವ ಪಿಎಂ ಸೂರ್ಯಘರ್ ಮುಫ್ತ್ ಬಿಜಲಿ ಯೋಜನೆ ಅಡಿ ಈರೆಗೆ 1.45 ಕೋಟಿ ನೊಂದಣಿಗಳಾಗಿವೆ. ಈ ಪೈಕಿ 6.34 ಲಕ್ಷ ಸೌರಫಲಕಗಳನ್ನು ಸ್ಥಾಪಿಸಲಾಗಿದೆ. ಕೇಂದ್ರ ಮರುಬಳಕೆ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಅವರು ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದಾರೆ.

ಪಿಎಂ ಸೂರ್ಯಘರ್ ಮುಫ್ತ್ ಬಿಜಲಿ ಯೋಜನೆಯ ಪೋರ್ಟಲ್​ನಲ್ಲಿ 1.45 ಕೋಟಿ ನೊಂದಣಿಗಳಾಗಿವೆ. 26.38 ಲಕ್ಷ ಅರ್ಜಿಗಳನ್ನು ಆನ್​ಲೈನ್​ನಲ್ಲಿ ಸಲ್ಲಿಸಲಾಗಿದೆ. ಇದರಲ್ಲಿ 6.34 ಲಕ್ಷ ಮನೆಗಳ ಮೇಲ್ಛಾವಣಿಗೆ ಸೌರಫಲಕಗಳನ್ನು ಹಾಕಲಾಗಿದೆ. 3.66 ಲಕ್ಷ ಮಂದಿಗೆ ಸರ್ಕಾರದಿಂದ ಸಬ್ಸಿಡಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಗುಜರಾತ್, ಮಹಾರಾಷ್ಟ್ರ, ಯುಪಿಯಲ್ಲಿ ಹೆಚ್ಚು ಇನ್ಸ್​ಟಾಲೇಶನ್ಸ್

2024ರ ಫೆಬ್ರುವರಿ 15ರಂದು ಆರಂಭಿಸಲಾದ ಪಿಎಂ ಸೂರ್ಯ ಘರ್ ಯೋಜನೆಯು 2026-27ರ ವೇಳೆಗೆ ಒಂದು ಕೋಟಿ ಮನೆಗಳಲ್ಲಿ ಸೋಲಾರ್ ಸ್ಥಾಪಿಸುವ ಗುರಿ ಹೊಂದಿದೆ. ಇದರಲ್ಲಿ ಶೇ. 40ರಷ್ಟು ವೆಚ್ಚವನ್ನು ಸರಕಾರ ಸಬ್ಸಿಡಿ ಮೂಲಕ ಭರಿಸುತ್ತದೆ. ಈವರೆಗೆ ಸಲ್ಲಿಕೆಯಾಗಿರುವ 26.38 ಲಕ್ಷ ಅರ್ಜಿಗಳಲ್ಲಿ ಗುಜರಾತ್, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ರಾಜ್ಯಗಳಿಂದ ಹೆಚ್ಚಿನವು ಸಲ್ಲಿಕೆ ಆಗಿವೆ. ಗುಜರಾತ್​ನಲ್ಲಿ 2,86,545 ಅರ್ಜಿಗಳು ಸಲ್ಲಿಕೆ ಆಗಿವೆ. ಮಹಾರಾಷ್ಟ್ರದಿಂದ 1.26 ಲಕ್ಷ ಅರ್ಜಿಗಳು ಬಂದಿದ್ದರೆ, ಉತ್ತರಪ್ರದೇಶದ 53,423 ನಿವಾಸಿಗಳು ಸೋಲಾರ್​ಗಾಗಿ ಅರ್ಜಿ ಹಾಕಿದ್ದಾರೆ.

ಇದನ್ನೂ ಓದಿ: ಪಿಎಲ್​ಐ ಸ್ಕೀಮ್​ನಿಂದ 5.84 ಲಕ್ಷ ನೇರ ಉದ್ಯೋಗಗಳ ಸೃಷ್ಟಿ; ಸ್ಮಾರ್ಟ್​ಫೋನ್, ಫಾರ್ಮಾ, ಆಹಾರ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗ

ಏನಿದು ಪಿಎಂ ಸೂರ್ಯಘರ್ ಯೋಜನೆ?

ಮನೆಗಳ ಮೇಲೆ ಸೌರಫಲಕಗಳನ್ನು ಸ್ಥಾಪಿಸಿ, ಸೂರ್ಯನ ಬಿಸಿಲಿನಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಸೋಲಾರ್ ಇನ್ಸ್​ಟಾಲೇಶನ್​ಗೆ ಆಗುವ ವೆಚ್ಚದಲ್ಲಿ ಶೇ. 40ರಷ್ಟು ಮೊತ್ತವನ್ನು ಸರ್ಕಾರ ಸಬ್ಸಿಡಿ ಮೂಲಕ ನೀಡುತ್ತದೆ. ಒಟ್ಟು ಸಬ್ಸಿಡಿ ಮಿತಿ 78,000 ರೂ ಇದೆ.

1-2 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಗೆ 60,000 ರೂವರೆಗೂ ಸಬ್ಸಿಡಿ ಸಿಗುತ್ತದೆ. 2-3 ಕಿವ್ಯಾ ವಿದ್ಯುತ್ ಉತ್ಪಾದನೆಗೆ 78,000 ರೂವರೆಗೆ ಸಬ್ಸಿಡಿ ಸಿಗುತ್ತದೆ. ಅದಕ್ಕೂ ಮೇಲ್ಪಟ್ಟ ಸಾಮರ್ಥ್ಯದ ಸೋಲಾರ್ ಸ್ಥಾಪನೆ ಮಾಡಿದರೆ ಸಬ್ಸಿಡಿ ಮಿತಿ 78,000 ರೂ ಇರುತ್ತದೆ.

ನಿಮ್ಮ ಮನೆಗೆ ಒಂದು ತಿಂಗಳಲ್ಲಿ ಬಳಸಲಾಗುವ ವಿದ್ಯುತ್ ಪ್ರಮಾಣ 150 ಯೂನಿಟ್​ಗಿಂತ ಕಡಿಮೆ ಇದ್ದಲ್ಲಿ 1-2 ಕಿವ್ಯಾ ಸೋಲಾರ್ ಸ್ಥಾಪಿಸಬಹುದು. 150ರಿಂದ 300 ಯೂನಿಟ್​ಗಳಷ್ಟು ವಿದ್ಯುತ್ ಬಳಕೆ ಇದ್ದರೆ 2-3 ಕಿವ್ಯಾ ಸೋಲಾರ್ ಅನ್ನು ಇನ್ಸ್​ಟಾಲ್ ಮಾಡಬೇಕಾಗುತ್ತದೆ. ಹೆಚ್ಚಿನ ವಿದ್ಯುತ್ ಬಳಕೆ ಇದ್ದಲ್ಲಿ ಇನ್ನೂ ಹೆಚ್ಚಿನ ಸಾಮರ್ಥ್ಯದ ಸೋಲಾರ್ ಬೇಕಾಗುತ್ತದೆ.

ಇದನ್ನೂ ಓದಿ: ಒಂದು ವರ್ಷದ ಗರಿಷ್ಠ ಮಟ್ಟಕ್ಕೆ 250ಕ್ಕೂ ಹೆಚ್ಚು ಷೇರುಗಳ ಬೆಲೆ; ಎಚ್​ಡಿಎಫ್​ಸಿ, ಡಿಕ್ಸಾನ್, ಓಬೇರಾಯ್ ಇತ್ಯಾದಿ ಸ್ಟಾಕ್ಸ್​ಗೆ ಹೆಚ್ಚಿದ ಬೇಡಿಕೆ

ಪಿಎಂ ಸೂರ್ಯಘರ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಪಿಎಂ ಸೂರ್ಯಘರ್ ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಹೋಗಿ: pmsuryaghar.gov.in/
  • ಇಲ್ಲಿ ನೀವು ಅರ್ಜಿ ಸಲ್ಲಿಸಬಹುದು. ಇದಾದ ಬಳಿಕ ನಿಮ್ಮ ವ್ಯಾಪ್ತಿಗೆ ಬರುವ ಬೆಸ್ಕಾಂ, ಮೆಸ್ಕಾಂ ಇತ್ಯಾದಿ ಡಿಸ್ಕಾಂಗಳಿಂದ ಅನುಮೋದನೆ ಸಿಗುವವರೆಗೂ ಕಾಯಬೇಕು.
  • ಇದಾದ ಬಳಿಕ ಡಿಸ್ಕಾಂನಲ್ಲಿ ನೊಂದಾಯಿತವಾಗಿರುವ ವೆಂಡರ್ ಮೂಲಕ ಸೋಲಾರ್ ಸ್ಥಾಪಿಸಬೇಕು. ಅದರ ಖರ್ಚುವೆಚ್ಚವೆಲ್ಲಾ ನಿಮ್ಮದೇ ಆಗಿರುತ್ತದೆ.
  • ಸೋಲಾರ್ ಇನ್ಸ್​ಟಾಲ್ ಆದ ಬಳಿಕ ಅದರ ವಿವರವನ್ನು ಸಲ್ಲಿಸಿ, ನೆಟ್ ಮೀಟರ್​ಗೆ ಅರ್ಜಿ ಹಾಕಬೇಕು.
  • ಡಿಸ್ಕಾಂನವರು ಪರಿಶೀಲನೆ ನಡೆಸಿ ನೆಟ್ ಮೀಟರ್ ಅಳವಡಿಸುತ್ತಾರೆ.
  • ಬಳಿಕ ಪೋರ್ಟಲ್​ನಿಂದ ನಿಮಗೆ ಕಮಿಷನಿಂಗ್ ಸರ್ಟಿಫಿಕೇಟ್ ಕೊಡಲಾಗುತ್ತದೆ.
  • ಈ ರಿಪೋರ್ಟ್ ಬಂದ ಬಳಿಕ ಪೋರ್ಟಲ್​ಗೆ ಹೋಗಿ ಬ್ಯಾಂಕ್ ಖಾತೆ ವಿವರ ನೀಡಬೇಕು. ಕ್ಯಾನ್ಸಲ್ ಚೆಕ್ ಅನ್ನು ನೀಡಬೇಕು. ಆಗ ನಿಮ್ಮ ಬ್ಯಾಂಕ್ ಖಾತೆಗೆ 30 ದಿನದೊಳಗೆ ನಿರ್ದಿಷ್ಟ ಮೊತ್ತದ ಸಬ್ಸಿಡಿ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ