Power Issue: ಚೀನಾ, ಯುರೋಪ್​ ಸೇರಿ ವಿಶ್ವದಾದ್ಯಂತ ವಿದ್ಯುತ್​ ಸಮಸ್ಯೆ; ಬಿಕ್ಕಟ್ಟಿಗೆ ಎಷ್ಟೆಲ್ಲ ಕಾರಣಗಳು!

| Updated By: Srinivas Mata

Updated on: Sep 29, 2021 | 7:25 PM

ಚೀನಾ, ಯುರೋಪ್ ಸೇರಿದಂತೆ ವಿಶ್ವದಾದ್ಯಂತ ಇಂಧನ ಬಿಕ್ಕಟ್ಟು ಎದುರಾಗಿದೆ. ಉದರ ಹಿಂದಿನ ಕಾರಣಗಳು ಏನು ಎಂಬುದರ ಮಾಹಿತಿ ಇಲ್ಲಿದೆ.

Power Issue: ಚೀನಾ, ಯುರೋಪ್​ ಸೇರಿ ವಿಶ್ವದಾದ್ಯಂತ ವಿದ್ಯುತ್​ ಸಮಸ್ಯೆ; ಬಿಕ್ಕಟ್ಟಿಗೆ ಎಷ್ಟೆಲ್ಲ ಕಾರಣಗಳು!
ಚೀನಾ ಬಾವುಟ
Follow us on

ಇಂತಿಷ್ಟೇ ವಿದ್ಯುತ್ ಬಳಕೆ ಮಾಡಬೇಕು ಎಂದು ಚೀನಾ ದೇಶದಲ್ಲಿ ನಿಯಮ ಮಾಡಿ ಬಹಳ ಸಮಯವೇ ಆಗಿದೆ. ಕೈಗಾರಿಕೆ ಹಬ್ ಎನಿಸಿಕೊಂಡಿರುವ ಗ್ವಾಂಡಾಂಗ್ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ಕಡಿಮೆ ವಿದ್ಯುತ್ ಬಳಸುವಂತೆ ಕೈಗಾರಿಕೆಗಳಿಗೆ ಸೂಚಿಸಲಾಗಿದೆ. ಇದರಿಂದಾಗಿ ಕೈಗಾರಿಕೆಗಳು ಉತ್ಪಾದನೆ ಕಡಿಮೆ ಮಾಡುವಂತಾಗಿದೆ ಮತ್ತು ಕೆಲವು ಕೈಗಾರಿಕೆಗಳು ಅನಿವಾರ್ಯ ಎಂಬಂತೆ ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ನಿಲ್ಲಿಸುವಂತಾಗಿದೆ. ದಿನದಿನಕ್ಕೂ ಪರಿಸ್ಥಿತಿ ಬಿಗಡಾಯಿಸಿದ್ದು, ಬಳಕೆ ಮೇಲೆ ಮಿತಿ ಹೇರಿರುವುದರಿಂದ ಕೆಲವು ಪ್ರಾಂತ್ಯಗಳಲ್ಲಿ ಮನೆಗಳ ಮೇಲೆ ಪರಿಣಾಮ ಬೀರಿದೆ. ಏರ್​ ಕಂಡೀಷನರ್, ಎಲಿವೇಟರ್​ಗಳನ್ನು ಬಳಸದಂತೆ ನಿರ್ಬಂಧ ಹೇರಿರುವುದು ಹಲವು ನಗರಗಳಲ್ಲಿ ಒತ್ತಡದ ಪರಿಸ್ಥಿತಿ ಸೃಷ್ಟಿ ಆಗುವಂತೆ ಮಾಡಿದೆ. ಹೆಚ್ಚುತ್ತಿರುವ ನೈಸರ್ಗಿಕ ಅನಿಲದ ಬೆಲೆ ಮತ್ತು ಅದರ ಪೂರೈಕೆಯಲ್ಲಿನ ವ್ಯತ್ಯಯವು ಚೀನಾದಲ್ಲಿನ ಈಗಿನ ಬಿಕ್ಕಿಟ್ಟಿಗೆ ಕಾರಣವಾಗಿದೆ. ಮಾಲಿನ್ಯದ ವಿಚಾರಕ್ಕೆ ಬಂದಲ್ಲಿ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಇರುವ ದೇಶಗಳಲ್ಲಿ ಚೀನಾ ಕೂಡ ಒಂದು. ಇತ್ತೀಚಿನ ವರ್ಷಗಳಲ್ಲಿ ಸ್ವಚ್ಛ ಇಂಧನದ ಬಳಕೆಯನ್ನು ಹೆಚ್ಚು ಮಾಡಿದ್ದರೂ ಕಲ್ಲಿದ್ದಲು ಮೇಲಿನ ಅವಲಂಬನೆ ಈಗಲೂ ದೊಡ್ಡ ಮಟ್ಟದಲ್ಲೇ ಮುಂದುವರಿದಿದೆ.

ಇನ್ನು ಯುರೋಪ್​ನಾದ್ಯಂತ ಕೂಡ ಇಂಧನ ಬಿಕ್ಕಟ್ಟು ತೀವ್ರವಾಗಿದೆ. ನಿಧಾನ ಗತಿಯ ನೈಸರ್ಗಿಕ ಅನಿಲ ಪೂರೈಕೆ ಮತ್ತು ಹೆಚ್ಚುತ್ತಿರುವ ಬೆಲೆಗಳು ಇದಕ್ಕೆ ಕಾರಣವಾಗಿದೆ. ಇತ್ತೀಚಿನ ತಿಂಗಳಲ್ಲಿ ವಿಂಡ್ ಟರ್ಬೈನ್​ಗಳಿಂದ ವಿದ್ಯುತ್ ಉತ್ಪಾದನೆ ಕಡಿಮೆ ಆಗಿರುವುದರಿಂದ ವಿದ್ಯುತ್​ ಪೂರೈಕೆ ಮೇಲೆ ಪರಿಣಾಮ ಆಗಿದೆ. ಈ ಕಾರಣಕ್ಕೆ ಫಾಸಿಲ್ ಫ್ಯುಯೆಲ್ ಮೇಲಿನ ಅವಲಂಬನೆ ಹೆಚ್ಚಾಗಿದೆ. ಬೇಸಿಗೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಾದಂತೆ, ನೈಸರ್ಗಿಕ ಅನಿಲ ದಾಸ್ತಾನಿನ ಪ್ರಮಾಣ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಚಳಿಗಾಲ ಆರಂಭವಾದಾಗ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಯುರೋಪ್​ನ ತೀವ್ರ ಚಳಿಗಾಲದಲ್ಲಿ ಮನೆಗಳಲ್ಲಿ ಬೆಚ್ಚಗಿರುವ ಉದ್ದೇಶಕ್ಕೆ ನೈಸರ್ಗಿಕ ಅನಿಲದ ಬೇಡಿಕೆ ಹೆಚ್ಚಾಗುತ್ತದೆ. ಅನಿಲ ಕೊರತೆಯಿಂದ ತೊಂದರೆ ಅನುಭವಿಸಿರುವುದರಲ್ಲಿ ಗೊಬ್ಬರ ತಯಾರಿಕೆ ಘಟಕಗಳೂ ಇವೆ. ಬಿಕ್ಕಟ್ಟು ಹೆಚ್ಚಾದಂತೆ ಉತ್ಪಾದನೆ ಸಹ ಕಡಿತ ಮಾಡಲೇಬೇಕಾದ ಅನಿವಾರ್ಯಕ್ಕೆ ಹಲವು ಕೈಗಾರಿಕಾ ಘಟಕಗಳು ಸಿಲುಕಿವೆ.

ಪೆಟ್ರೋಲಿಯಂ, ಕಲ್ಲಿದ್ದಲು ದರಗಳಲ್ಲಿ ಏರಿಕೆ
ಇತರ ಫಾಸಿಲ್ ಫ್ಯುಯೆಲ್​ಗಳ ಬೆಲೆಯಲ್ಲಿನ ಏರಿಕೆಯಿಂದ ಚೀನಾ, ಯುರೋಪ್ ಮಾತ್ರವಲ್ಲ, ಜಗತ್ತಿನಾದ್ಯಂತ ಬಿಕ್ಕಟ್ಟಿಗೆ ಕಾರಣವಾಗಿದೆ. ಕಳೆದ ಕೆಲವು ವಾರಗಳಲ್ಲಿ ಪೆಟ್ರೋಲಿಯಂ, ಕಲ್ಲಿದ್ದಲು ದರಗಳಲ್ಲಿ ಭಾರೀ ಏರಿಕೆ ಆಗಿವೆ. ಬ್ರೆಂಟ್ ಕಚ್ಚಾ ತೈಲ ಸೋಮವಾರದಂದು ಬ್ಯಾರೆಲ್​ಗೆ 80 ಯುಎಸ್​ಡಿ ದಾಟಿದೆ. ಇನ್ನು ಕಲ್ಲಿದ್ದಲು ಬೆಲೆ 13 ವರ್ಷಗಳಲ್ಲೇ ಗರಿಷ್ಠ ಮಟ್ಟದಲ್ಲಿದೆ. ಚೀನಾ, ಯುರೋಪ್ ಮತ್ತು ಇತರ ಕಡೆಗಳಲ್ಲಿ ಇಂಧನದ ಬೇಡಿಕೆ ಹಾಗೂ ಮೇಲಿಂದ ಮೇಲೆ ಲಾಕ್​ಡೌನ್​ಗಳು ಮತ್ತು ದೀರ್ಘಾವಧಿಯ ನಿರ್ಬಂಧಗಳನ್ನು ಮುಗಿಸಿ, ಮತ್ತೆ ಆರಂಭ ಆಗಿರುವ ಜನ ಸಂಚಾರದಿಂದ ಬೇಡಿಕೆ ಕುದುರಿಕೊಂಡು, ತೈಲ ಬೆಲೆ ಏರಿಕೆ ಆಗಿದೆ. ಅಷ್ಟೇ ಅಲ್ಲ ನೈಸರ್ಗಿಕ ಅನಿಲ ಹಾಗೂ ಕಲ್ಲಿದ್ದಲಿಗೂ ಬೇಡಿಕೆ ಬಂದು, ಹುಚ್ಚಾಪಟ್ಟೆ ಬೆಲೆ ಹೆಚ್ಚಳ ಆಗಿದೆ. ಚೀನಾದ ವಿಷಯಕ್ಕೆ ಬಂದರೆ, ಅಲ್ಲಿನ ಕೈಗಾರಿಕೆಗಳಲ್ಲಿ ಸ್ಮಾರ್ಟ್​ಫೋನ್​ಗಳು, ಅಪ್ಲೈಯನ್ಸಸ್​ಗಳು ಮತ್ತು ಇತರ ಉತ್ಪಾದನಾ ವಸ್ತುಗಳ ಉತ್ಪಾದನೆಯನ್ನು ಚೀನಾದ ಕೈಗಾರಿಕೆಗಳನ್ನು ಹೆಚ್ಚು ಮಾಡಿರುವುದರಿಂದ ಚೀನಾದಲ್ಲಿ ವಿದ್ಯುತ್ ಬೇಡಿಕೆ ಜಾಸ್ತಿ ಆಗಿದೆ.

ವಿಶ್ವದಾದ್ಯಂತ ಇರುವ ದೇಶಗಳು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದಕ್ಕೆ ಬದ್ಧವಾಗಿವೆ. 2060ರ ಹೊತ್ತಿಗೆ ಕಾರ್ಬನ್ ನ್ಯೂಟ್ರಲ್ ಆಗುವುದಾಗಿ ಚೀನಾ ಸಂಕಲ್ಪ ಮಾಡಿದೆ. 2030ಕ್ಕೂ ಮುನ್ನ ಕಾರ್ಬನ್ ಹೊರಸೂಸುವಿಕೆ ಚೀನಾದಲ್ಲಿ ಗರಿಷ್ಠ ಮಟ್ಟ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ. ಈ ಕಾರ್ಬನ್ ಹೊರಸೂಸುವಿಕೆ ಕಡಿಮೆ ಮಾಡಬೇಕು ಎಂದಾದಲ್ಲಿ ಕಲ್ಲಿದ್ದಲು ಬಳಕೆ ಇಳಿಕೆ ಮಾಡಬೇಕು. ಇತರ ಫಾಸಿಲ್ ಫ್ಯುಯೆಲ್​ಗಳ ಬಳಕೆಯನ್ನೂ ಕಡಿಮೆ ಮಾಡಬೇಕು. ನೈಸರ್ಗಿಕ ಅನಿಲ ಮತ್ತು ನವೀಕರಿಸಬಹುದಾದ ಇಂಧನದ ಬಳಕೆ ಹೆಚ್ಚಿಸಬೇಕಾಗಿದೆ. 2022ರ ಫೆಬ್ರವರಿಯಲ್ಲಿ ನಡೆಯಲಿರುವ ಒಲಿಂಪಿಕ್ಸ್​ಗೂ ಮುಂಚೆ ಬೀಜಿಂಗ್​ನಲ್ಲಿ ಮಾಲಿನ್ಯ ತಗ್ಗಿಸಬೇಕು ಎಂಬ ಗುರಿಯನ್ನು ಹಾಕಿಕೊಂಡಿದೆ. ಅದಕ್ಕೆ ಬದ್ದವಾಗಿ ಕಾರ್ಬನ್​ ಪ್ರಮಾಣ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ.

ಹಾಕಿಕೊಂಡಿರುವ ಗುರಿಯೇ ಸಮಸ್ಯೆಯಾಗಿದೆ
ಈಗ ಚೀನಾ ಯಾವ ಗುರಿಯನ್ನು ಇರಿಸಿಕೊಂಡಿದೆಯೋ ಅದೇ ಆ ದೇಶದ ಪಾಲಿಗೆ ಸದ್ಯದ ಇಂಧನ ಬಿಕ್ಕಟ್ಟಿಗೆ ಕಾರಣ ಆಗಿದೆ. ಚೀನಾ ದೇಶದಲ್ಲಿ ಮೂರನೇ ಎರಡರಷ್ಟು ವಿದ್ಯುತ್ ಕಲ್ಲಿದ್ದಲು ಉರಿಸುವುದರಿಂದ ಉತ್ಪಾಸಿಸಲಾಗುತ್ತದೆ. ಇನ್ನು ಯುರೋಪಿಯನ್ ಒಕ್ಕೂಟವು 2050ರೊಳಗೆ ಕಾರ್ಬನ್ ನ್ಯೂಟ್ರಲ್ ಆಗುವ ಗುರಿ ಹಾಕಿಕೊಂಡಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 2005ಕ್ಕೆ ಹೋಲಿಸಿದಲ್ಲಿ 2030ನೇ ಇಸವಿ ಹೊತ್ತಿಗೆ ಶೇ 55ರಷ್ಟು ಇಳಿಕೆ ಮಾಡಲು ಗುರಿ ಹಾಕಿಕೊಂಡಿದೆ. ಯುರೋಪ್​ ಖಂಡದಾದ್ಯಂತ ಕಲ್ಲಿದ್ದಲು ಬಳಕೆ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಿಕೊಂಡು ಬರಲಾಗುತ್ತಿದೆ. ಹಾಗೂ ಹಸಿರು ಇಂಧನ ಮೂಲದ ಬಳಕೆ ಹೆಚ್ಚು ಮಾಡಿಕೊಂಡು ಬರಲಾಗುತ್ತಿದೆ. ಅಂದರೆ, ವಿಂಡ್​ ಟರ್ಬೈನ್, ಸೋಲಾರ್ ಪ್ಯಾನೆಲ್​ಗಳ ಬಳಕೆ ಜಾಸ್ತಿ ಆಗಿದೆ. ಈ ಬದಲಾವಣೆಯಲ್ಲಿ ನೈಸರ್ಗಿಕ ಅನಿಲವನ್ನು ಸ್ವಚ್ಛ ಫಾಸಿಲ್ ಫ್ಯುಯೆಲ್​ನ ಸೇತುವೆಯಂತೆ ಭಾವಿಸಲಾಗಿದೆ.

ಹಾಗೆ ನೋಡಿದರೆ ನೈಸರ್ಗಿಕ ಅನಿಲದ ಕೊರತೆಯೊಂದು ಮಾತ್ರ ಈ ಸಮಸ್ಯೆ ಸೃಷ್ಟಿಸಿದೆಯಾ ಅಂತ ನೋಡಿದರೆ, ಹಾಗೇನಿಲ್ಲ. ವಿದ್ಯುತ್ ಉತ್ಪಾದನೆ ಮಾಡುವ ಇತರ ಮೂಲಗಳು ಸಹ ಕಡಿಮೆ ಆಗಿವೆ. ಚೀನಾದ ದಕ್ಷಿಣ ಭಾಗದಲ್ಲಿ ಜಲವಿದ್ಯುತ್ ಘಟಕಗಳಲ್ಲಿನ ಉತ್ಪಾದನೆ ಕಡಿಮೆ ಆಗಿದೆ. ಇನ್ನು ಯುರೋಪ್​ನಲ್ಲಿ ವಿಂಡ್​ ಟರ್ಬೈನ್​ನಿಂದ ವಿದ್ಯುತ್ ಉತ್ಪಾದನೆ ಸಮರ್ಪಕ ಪ್ರಮಾಣದಲ್ಲಿ ಆಗದಿರುವುದು ಸಹ ವಿದ್ಯುತ್ ಬಿಕ್ಕಟ್ಟು ಸೃಷ್ಟಿಸಿದೆ. ಸಾಮಾನ್ಯ ಬೇಸಿಗೆಗಿಂತ ಹೆಚ್ಚಿನ ಶಾಖವು ದಕ್ಷಿಣ ಚೀನಾದ ಯುನ್ನಾನ್ ಪ್ರಾಂತ್ಯದ ಜಲಾಶಗಳನ್ನು ಬರಿದು ಮಾಡಿದೆ. ಇದರಿಂದ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಯುರೋಪ್​ನಲ್ಲಿ ಹವಾಮಾನ ತಣ್ಣಗೆ ಇರುವುದರಿಂದ ವಿಂಡ್​ ಟರ್ಬೈನ್​ನಿಂದ ಉತ್ಪಾದನೆ ಆಗುತ್ತಿಲ್ಲ. ಚೀನಾದ ಉತ್ತರ ಭಾಗದಲ್ಲಿ ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆಯಲ್ಲಿ ಕಡಿಮೆ ಆಗಿರುವುದು ವಿದ್ಯುತ್ ಕೊರತೆಗೆ ಕೊಡುಗೆ ನೀಡಿದೆ.

ನಾನಾ ಕಾರಣಗಳು
ಕಲ್ಲಿದ್ದಲು ಬೆಲೆ ಏರಿಕೆ ಹಾಗೂ ಉತ್ಪಾದನಾ ವೆಚ್ವ ಹೆಚ್ಚಾಗುತ್ತಿರುವುದರಿಂದ ಹಾಗೂ ಏರುತ್ತಿರುವ ದರದ ಕಾರಣಕ್ಕೆ ಹಲವು ಕೈಗಾರಿಕೆಗಳು ಉತ್ಪಾದನೆ ಕಡಿಮೆ ಮಾಡಿವೆ ಅಥವಾ ನಿರ್ವಹಣೆಯ ಕಾರಣಕ್ಕೆ ಮುಚ್ಚಿದ್ದು, ಆ ಮೂಲಕ ನಷ್ಟವನ್ನು ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಿವೆ. ಇದರ ಜತೆಗೆ ರಾಜಕೀಯ ತಿಕ್ಕಾಟದಿಂದಾಗಿ ಆಸ್ಟ್ರೇಲಿಯಾದಿಂದ ಕಲ್ಲಿದ್ದಲು ಖರೀದಿ ಮಾಡುವುದಕ್ಕೆ ಚೀನಾ ನಿರ್ಬಂಧ ಹೇರಿರುವುದರಿಂದ ಇಂಧನ ಉತ್ಪಾದನೆ ಕಡಿಮೆ ಆಗಲು ಅದು ಸಹ ಕಾರಣ ಆಗಿದೆ. ಇಂಡೋನೇಷ್ಯಾ ಮತ್ತು ಕೊಲಂಬಿಯಾದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಕಲ್ಲಿದ್ದಲು ಗಣಿಗಾರಿಕೆ ಉತ್ಪಾದನೆ ಮೇಲೆ ಪರಿಣಾಮ ಬೀರಿ, ಜಾಗತಿಕ ತಲ್ಲಣಕ್ಕೆ ಕಾರಣ ಆಗಿದೆ. ಉಳಿದೆಡೆಗಳಲ್ಲಿ ಕೊರೊನಾ ಬಿಕ್ಕಟ್ಟಿನಿಂದ ಕಾರ್ಮಿಕರ ಕೊರತೆ ಎದುರಾಗಿ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಪೂರೈಕೆಗಿಂತ ಬೇಡಿಕೆ ಹೆಚ್ಚಾಗಿರುವುದರಿಂದ ಮುಂಬರುವ ಚಳಿಗಾಲಕ್ಕೆ ಬೆಲೆ ಸ್ಥಿರವಾಗಿರುವ ಸಾಧ್ಯತೆಯನ್ನು ಸೂಚಿಸುತ್ತಿದೆ.

ಜಾಗತಿಕ ಮಟ್ಟದಲ್ಲಿ ಕಲ್ಲಿದ್ದಲು ಬೆಲೆ ಏರಿಕೆ ಆಗಿರುವುದರಿಂದ ಭಾರತದ ದೇಶೀ ಪೂರೈಕೆದಾರ ಕಂಪೆನಿಯಾದ ಕೋಲ್​ ಇಂಡಿಯಾದಂಥದ್ದಕ್ಕೆ ವರದಂತೆ ಆಗಿದೆ. ಪ್ರಮುಖ ವಿದೇಶೀ ಮಾರುಕಟ್ಟೆಯಲ್ಲಿನ ಪೂರೈಕೆ ಕೊರತೆ ಹೆಚ್ಚಾಗುತ್ತಿದ್ದಂತೆ ಮತ್ತು ಬೆಲೆ ಹೆಚ್ಚಳ ಆಗುತ್ತಿರುವಂತೆಯೇ ಭಾರತದಲ್ಲಿನ ದೇಶೀಯ ಕಲ್ಲಿದ್ದಲಿಗೆ ಬೇಡಿಕೆ ಕುದುರಿದೆ. ಕೋಲ್ ಇಂಡಿಯಾ ಮತ್ತು ಇತರ ಉತ್ಪಾದಕರು ಉತ್ಪಾದನೆಯನ್ನು ಹೆಚ್ಚು ಮಾಡಿದ್ದಾರೆ. ಆದರೆ ಈಗಲೂ ಪೂರೈಕೆ ಬಿಗುವಾಗಿದೆ. ಭಾರತದ ಶೇ 70ರಷ್ಟು ವಿದ್ಯುತ್ ಉತ್ಪಾದನೆ ಆಗುವುದು ಕಲ್ಲಿದ್ದಲಿನನಿಂದ. ನೈಸರ್ಗಿಕ ಅನಿಲದ ಪಾಲ ಇದರಲ್ಲಿ ಶೇ 5ರಷ್ಟು ಮಾತ್ರ. ಆದ್ದರಿಂದ ನೈಸರ್ಗಿಕ ಅನಿಲದ ಬೆಲೆ ಏರಿಕೆ ಭಾರತದಲ್ಲಿ ವಿದ್ಯುತ್ ಉತ್ಪಾದನೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

ಭಾರತದ ಸ್ಥಿತಿ ಏನಾಗಿತ್ತು?
ಆದರೆ, ಭಾರತದಲ್ಲಿ ಕೊರತೆ ಕಾಣಿಸಿಕೊಂಡಿದ್ದು ಆಗಸ್ಟ್​ ತಿಂಗಳಲ್ಲಿ. ಆಗ ವಿದ್ಯುತ್ ಘಟಕಗಳಲ್ಲಿ ಕಲ್ಲಿದ್ದಲು ದಾಸ್ತಾನು ಬಹಳ ಕೆಳಗೆ ಹೋಗಿತ್ತು ಮತ್ತು ಬೇಡಿಕೆ ಶೇ 11ರಷ್ಟು ಜಾಸ್ತಿ ಆಗಿತ್ತು. ಆದರೆ ವಿದ್ಯುತ್​ಗೆ ಹೊರತಾದ ಬಳಕೆಯಿಂದ ಅದನ್ನು ಬೇರೆ ಮಾರ್ಗಕ್ಕೆ ತಿರುಗಿಸಿದ ಮೇಲೆ ಸಮಸ್ಯೆ ಸರಿ ಮಾಡಲಾಯಿತು. ವಿದ್ಯುತ್ ಬೇಡಿಕೆ ಅದರ ಮುಂದಿನ ತಿಂಗಳು ದಾಖಲೆಯ ಎತ್ತರಕ್ಕೆ ಏರಿದೆ. ಅದು ಕೊರೊನಾ ನಿರ್ಬಂಧಗಳು ಸಡಿಲಗೊಂಡ ಮೇಲೆ ಆಗಿರುವ ಬೆಳವಣಿಗೆ. ಪೆಟ್ರೋಲಿಯಂ ಉತ್ಪನ್ನಗಳ ಬಳಕೆಗಳಾದ ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಜಾಸ್ತಿ ಆಗಿದ್ದರಿಂದ ಭಾರತದಲ್ಲಿನ ಕುಟುಂಬಗಳ ಮೇಲೆ ಪರಿಣಾಮ ಬೀರಿತು. ಪೆಟ್ರೋಲಿಯಂ ಉತ್ಪನ್ನಗಳಿಗೆ ಒಟ್ಟಾರೆಯಾಗಿ ಬೇಡಿಕೆ ಆಗಸ್ಟ್​ನಲ್ಲಿ ಶೇ 11ರಷ್ಟು ಹೆಚ್ಚಾಗಿದೆ.

ಇಂಧನ ಬಿಕ್ಕಟ್ಟು ಚೀನಾ ಮತ್ತು ಯುರೋಪ್ ಎರಡೂ ಕಡೆ ಉದ್ಯಮ ಮತ್ತು ಮನೆಗಳಿಗೆ ಸಮಸ್ಯೆ ಮಾಡಿದೆ. ವಿದ್ಯುತ್ ಉತ್ಪಾದನಾ ವೆಚ್ಚವನ್ನು ವಿದ್ಯುತ್ ಕಂಪೆನಿಗಳು ಸ್ವೀಕರಿಸಿದಂತೆ, ಯುರೋಪಿನಲ್ಲಿ ಮನೆಯವರ ಮೇಲೆ ವಿದ್ಯುತ್ ಬಿಲ್‌ಗಳ ಹೊರೆ ಬಿದ್ದಿದೆ. ಸುಂಕದ ಮೇಲೆ ಸರ್ಕಾರದ ನಿಯಂತ್ರಣದ ಕಾರಣದಿಂದಾಗಿ ಚೀನಾದಲ್ಲಿ ಇದುವರೆಗೆ ಹೆಚ್ಚಿನ ಬಿಲ್‌ಗಳು ಮನೆಗಳವರ ಮೇಲೆ ಬಿದ್ದಿಲ್ಲ. ಇಂಧನ ಬಿಕ್ಕಟ್ಟು ಚೀನಾದಲ್ಲಿ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿದೆ. ಇದು ವರ್ಷದ ಉಳಿದ ಸಮಯದಲ್ಲಿ ಆರ್ಥಿಕತೆಯ ಬೆಳವಣಿಗೆಗೆ ಅಪಾಯವನ್ನು ಉಂಟು ಮಾಡುತ್ತಿದೆ.

ವಿಶ್ಲೇಷಕರು ಮತ್ತು ದಲ್ಲಾಳಿಗಳು ಹೇಳುವಂತೆ, ಈಗಾಗಲೇ ಕಠಿಣ ವೈರಸ್ ನಿಯಂತ್ರಣ ಕ್ರಮಗಳು ಮತ್ತು ಬಿಗಿಯಾದ ನಿರ್ಬಂಧಗಳಿಂದಾಗಿ ನಿಧಾನವಾಗುತ್ತಿದ್ದ ಆರ್ಥಿಕತೆಗೆ ಕಾರ್ಖಾನೆ ಸ್ಥಗಿತಗೊಳಿಸುವಿಕೆಯು ಆರ್ಥಿಕ ಮಾರುಕಟ್ಟೆಯನ್ನು ನಿಯಂತ್ರಿಸಲು ಹಾನಿ ಉಂಟು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ. ಯುರೋಪಿನ ರಸಗೊಬ್ಬರ ತಯಾರಕದಂತಹ ಕೆಲವು ಕೈಗಾರಿಕೆಗಳು ನೈಸರ್ಗಿಕ ಅನಿಲದ ಕೊರತೆ ಮತ್ತು ಬೆಲೆ ಏರಿಕೆಯಿಂದಾಗಿ ಕಾರ್ಯಾಚರಣೆಯನ್ನು ಮೊಟಕುಗೊಳಿಸಿದ್ದವು. ರಸಗೊಬ್ಬರ ಬೆಲೆಗಳು ಏರಲು ಮತ್ತು ಆಹಾರದ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಹೆಚ್ಚಿನ ಇಂಧನ ಮತ್ತು ಆಹಾರ ಬೆಲೆಗಳಿಂದಾಗಿ ಮನೆಗಳು ಮತ್ತು ನಿಯಂತ್ರಕರು ಹಣದುಬ್ಬರದ ಒತ್ತಡವನ್ನು ಹೆಚ್ಚಿಸುತ್ತಾರೆ.

ಬಿಕ್ಕಟ್ಟು ಪ್ರಪಂಚದ ಇತರ ಭಾಗಗಳಿಗೆ ಹರಡುತ್ತದೆಯೇ?
ಜಾಗತೀಕರಣಗೊಂಡ ಪ್ರಪಂಚದಲ್ಲಿ ಇಂಧನ ಬೆಲೆ ಏರಿಕೆ ಒಂದೇ ದೇಶಕ್ಕೆ ಅಥವಾ ಖಂಡಕ್ಕೆ ಸೀಮಿತವಾಗಿಲ್ಲ. ಇಂಧನದ ಬೆಲೆ ಏರಿಕೆಯು ಎಲ್ಲ ರಾಷ್ಟ್ರಗಳ ಮೇಲೆ ಮತ್ತು ಎಲ್ಲ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ. ಭಾರತೀಯ ಗ್ರಾಹಕರು ಈಗಾಗಲೇ ಪೈಪ್‌ಲೈನ್‌ಗಳು ಮತ್ತು ಸಿಲಿಂಡರ್‌ಗಳ ಮೂಲಕ ತಮ್ಮ ಅಡುಗೆ ಅನಿಲಕ್ಕಾಗಿ ಹೆಚ್ಚಿನ ಹಣವನ್ನು ಪಾವತಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತು ನೈಸರ್ಗಿಕ ಅನಿಲದ ಪಂಪ್ ಬೆಲೆಗಳು ಕೂಡ ಏರಿಕೆಯಾಗುತ್ತಿವೆ. ಯುರೋಪ್ ಮತ್ತು ಉತ್ತರ ಏಷ್ಯಾದ ದೇಶಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾದಾಗ ಚಳಿಗಾಲದಲ್ಲಿ ಇಂಧನ ಪೂರೈಕೆಗಳು ಬಿಗಿಯಾಗಿ ಉಳಿಯುವ ಸಾಧ್ಯತೆಯಿದೆ. ಲಭ್ಯವಿರುವ ಸಾಮಗ್ರಿಗಳನ್ನು ಖರೀದಿಸಲು ರಾಷ್ಟ್ರಗಳ ನಡುವಿನ ಪೈಪೋಟಿ ಮತ್ತು ದ್ರವರೂಪದ ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲನ್ನು ಸಾಗಿಸುವ ಹಡಗುಗಳನ್ನು ತಮ್ಮ ಪೂರ್ವನಿರ್ಧರಿತ ಸ್ಥಳಗಳಿಂದ ಬೇರೆಡೆಗೆ ತಿರುಗಿಸಲು ಸಹ ಬೆಲೆಗಳನ್ನು ಹೆಚ್ಚಿಸಿದೆ.

ಜಾಗತಿಕ ಚೇತರಿಕೆಗೆ ಇದರ ಅರ್ಥವೇನು?
ಹೆಚ್ಚಿನ ಇಂಧನ ಬೆಲೆಗಳು ಸಮಸ್ಯೆಯ ಒಂದು ಭಾಗ ಮಾತ್ರ. ಚೀನಾದಲ್ಲಿ ಕಾರ್ಖಾನೆಗಳ ತಾತ್ಕಾಲಿಕ ಮುಚ್ಚುವಿಕೆಗಳು ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶಗಳು ತಮ್ಮ ಆರ್ಥಿಕತೆಯನ್ನು ಲಾಕ್ ಮಾಡಿದಾಗ ಕಳೆದ ವರ್ಷ ಮುರಿದ ಜಾಗತಿಕ ಮೌಲ್ಯ ಸರಪಳಿಗಳ ದುರಸ್ತಿಯನ್ನು ನಿಧಾನಗೊಳಿಸುತ್ತದೆ. ಈ ಸ್ಥಗಿತಗೊಳಿಸುವಿಕೆಗಳು ಪ್ರಪಂಚದಾದ್ಯಂತದ ವಿವಿಧ ಸರಕುಗಳ ತಯಾರಕರಿಗೆ ಭಾಗಗಳ ಪೂರೈಕೆಯಲ್ಲಿ ಮತ್ತೊಂದು ಸುತ್ತಿನ ಅಡಚಣೆಗೆ ಕಾರಣವಾಗುತ್ತದೆ. ತಾತ್ಕಾಲಿಕ ಸ್ಥಗಿತಗೊಳಿಸುವಿಕೆ ಎಂದರೆ ಪ್ರಪಂಚದ ಹಲವು ಭಾಗಗಳಲ್ಲಿ ನವೆಂಬರ್-ಜನವರಿ ರಜಾದಿನಗಳ ಮಾರಾಟಕ್ಕೆ ಮುಂಚಿತವಾಗಿ ಸರಕುಗಳ ವಿತರಣೆಗೆ ತಪ್ಪಿದ ಗಡುವನ್ನು ಸೂಚಿಸುತ್ತದೆ. ವಿದ್ಯುತ್ ಪಡಿತರವನ್ನು ಆದೇಶಿಸಿದಾಗ, ಉಡುಪಿನಿಂದ ಹಿಡಿದು ಮೊಬೈಲ್ ಫೋನ್‌ಗಳು ಮತ್ತು ಇತರ ಗ್ಯಾಜೆಟ್‌ಗಳವರೆಗೆ ಜಾಗತಿಕ ಮತ್ತು ದೇಶೀಯ ಬೇಡಿಕೆಯನ್ನು ಪೂರೈಸಲು ಚೀನಾದಲ್ಲಿನ ಕಾರ್ಖಾನೆಗಳು ರೇಸಿಂಗ್ ಮಾಡುತ್ತಿದ್ದವು.

ವಿದ್ಯುತ್ ಅಡಚಣೆಯಿಂದ ಪ್ರಭಾವಿತವಾಗಿರುವ ತಯಾರಕರಲ್ಲಿ ಆಪಲ್ ಕೂಡ ಒಂದು. ಹೆಚ್ಚಿನ ಇಂಧನ ಬೆಲೆಗಳು ಮತ್ತು ಕೊರತೆಗಳು ಜಾಗತಿಕ ಆರ್ಥಿಕತೆಯಲ್ಲಿ ಹಣದುಬ್ಬರದ ಒತ್ತಡವನ್ನು ಹೆಚ್ಚಿಸುತ್ತವೆ ಮತ್ತು ಕಡಿಮೆ-ಆದಾಯದ ಆರ್ಥಿಕತೆಯಲ್ಲಿ ಬೇಡಿಕೆಯ ಚೇತರಿಕೆಗೆ ಹಾನಿ ಮಾಡುತ್ತದೆ.

ಇದನ್ನೂ ಓದಿ: Evergrande: ಚೀನಾದ ಪೋಸ್ಟರ್​ಬಾಯ್​ ಎವರ್​ಗ್ರ್ಯಾಂಡ್​ ದಬ್ಬಾಕಿಕೊಂಡರೆ 171 ಬ್ಯಾಂಕ್​, 121 ಹಣಕಾಸು ಸಂಸ್ಥೆ ಅಡ್ಡಡ್ಡ