ನವದೆಹಲಿ: ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಆರ್ಬಿಐ ನಿರ್ಧರಿಸಿದೆ. ಮೂರು ದಿನಗಳ ಆರ್ಬಿಐ ಹಣಕಾಸು ನೀತಿ ಸಮಿತಿ (MPC- Monetary Policy Committee) ಸಭೆ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಏಪ್ರಿಲ್ 6, ಗುರುವಾರ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ರೆಪೋ ದರ (Repo Rate) ಶೇ. 6.50ರಲ್ಲೇ ಮುಂದುವರಿಯುತ್ತದೆ ಎಂದು ತಿಳಿಸಿದರು. ಇದರೊಂದಿಗೆ ರೆಪೋ ದರದ ಸತತ ಏರಿಕೆಯ ಸರಣಿ ತುಂಡರಿಸಿದಂತಾಗಿದೆ. ಹಣದುಬ್ಬರಕ್ಕೆ (Inflation) ಕಡಿವಾಣ ಹಾಕುವ ಉದ್ದೇಶದಿಂದ ಕಳೆದ ಒಂದು ವರ್ಷದಲ್ಲಿ ಆರ್ಬಿಐ 250 ಬೇಸಿಸ್ ಪಾಯಿಂಟ್ಗಳಷ್ಟು ರೆಪೋ ದರವನ್ನು ಏರಿಕೆ ಮಾಡಿತ್ತು. ಇನ್ನಷ್ಟು ಏರಿಕೆ ಆದರೆ ಆರ್ಥಿಕ ಬೆಳವಣಿಗೆಗೆ ತೊಡಕಾಗುತ್ತದೆ ಎಂದು ಹಲವು ತಜ್ಞರು ಸಲಹೆ ನೀಡಿದ್ದರು. ಆದರೆ ಆರ್ಬಿಐ ಈ ಬಾರಿ 25 ಮೂಲಾಂಕಗಳಷ್ಟು ರೆಪೋ ದರ ಏರಿಸುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಇತ್ತು. ಆದರೆ, ಅಂತಿಮವಾಗಿ ಆರ್ಬಿಐ ರೆಪೋ ದರ ಏರಿಸದಿರಲು ನಿರ್ಧರಿಸಿರುವುದು ಗಮನಾರ್ಹ.
REPO ಎಂದರೆ ರೀಪರ್ಚೇಸಿಂಗ್ ಆಪ್ಷನ್. ಅಥವಾ ಮರುಖರೀದಿ ಒಪ್ಪಂದ. ಆರ್ಬಿಐನ ರೆಪೋ ದರ ಎಂದರೆ ಕಮರ್ಷಿಯಲ್ ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಸಾಲಕ್ಕೆ ನೀಡಬೇಕಾದ ಬಡ್ಡಿ ದರ ಇದು. ಯಾವುದೇ ಕಮರ್ಷಿಯಲ್ ಬ್ಯಾಂಕುಗಳಾದರೂ ಹಣಕಾಸು ಸಂಗ್ರಹದಲ್ಲಿ ಕೊರತೆಯಾಗುವ ಸಂದರ್ಭಗಳು ಬರುವುದುಂಟು. ಅಗ ವಾಣಿಜ್ಯ ಬ್ಯಾಂಕುಗಳು ಆರ್ಬಿಐನಿಂದ ಸಾಲ ಪಡೆದುಕೊಳ್ಳುತ್ತವೆ. ಈ ಸಾಲಕ್ಕೆ ಇರುವ ಬಡ್ಡಿ ದರವೇ ರೆಪೋ ದರ. ಸದ್ಯ ರೆಪೋ ದರ ಶೇ. 6.50ರಷ್ಟು ಇದೆ. ಅಂದರೆ, ವಾಣಿಜ್ಯ ಬ್ಯಾಂಕುಗಳು ಶೇ. 6.50ರ ಬಡ್ಡಿ ದರದಲ್ಲಿ ಅರ್ಬಿಐನಿಂದ ಸಾಲ ಪಡೆಯಬಹುದು. ಈ ದರ ಏರಿಕೆ ಆದರೆ ವಾಣಿಜ್ಯ ಬ್ಯಾಂಕುಗಳು ಈ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುತ್ತವೆ. ಆಗ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಗ್ರಾಹಕರು ಹೆಚ್ಚಿನ ಬಡ್ಡಿ ಕಟ್ಟಬೇಕಾಗುತ್ತದೆ.
ಇದನ್ನೂ ಓದಿ: Google Lawsuit: ಟ್ರೇಡ್ಮಾರ್ಕ್ ದುರುಪಯೋಗ: ಗೂಗಲ್ ಎಂಟರ್ಪ್ರೈಸಸ್ಗೆ 10 ಲಕ್ಷ ದಂಡ ವಿಧಿಸಿದ ದೆಹಲಿ ಹೈಕೋರ್ಟ್
ಭಾರತದಲ್ಲಿ ಹಣದುಬ್ಬರ ಶೇ. 6.44ರಷ್ಟಿದೆ. ಜನವರಿಗೆ ಹೋಲಿಸಿದರೆ ಫೆಬ್ರುವರಿಯಲ್ಲಿ ತುಸು ಕಡಿಮೆ ಆಗಿದೆ. ಆದರೂ ಕೂಡ ಆರ್ಬಿಐ ಹಾಕಿದ ಶೇ. 6ರ ಮಿತಿಗಿಂತ ಮೇಲೆಯೇ ಇದೆ. ಕಳೆದ ಕೆಲ ತಿಂಗಳಿಂದಲೂ ಹಣದುಬ್ಬರವು ಈ ಮಿತಿಗಿಂತ ಹೊರಗೆಯೇ ಇರುವುದು ತಲೆನೋವು ತಂದಿದೆ. ಹೀಗಾಗಿ, ಇದು ಶೇ. 6ರ ಮಟ್ಟಕ್ಕಿಂತ ಕೆಳಗೆ ಇಳಿಯುವವರೆಗೂ ಬಡ್ಡಿ ದರವನ್ನು ಹೆಚ್ಚಿಸುವ ಕ್ರಮಕ್ಕೆ ಆರ್ಬಿಐ ಮುಂದಾಗಿದೆ. ಆರ್ಬಿಐ ಮಾತ್ರವಲ್ಲ ವಿಶ್ವದ ಹಲವು ದೇಶಗಳ ಸೆಂಟ್ರಲ್ ಬ್ಯಾಂಕುಗಳು ಕೂಡ ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿ ದರ ಏರಿಕೆಯ ಅಸ್ತ್ರವನ್ನೇ ಬಳಸುತ್ತವೆ. ಆರ್ಬಿಐ ಈ ಬಾರಿ 25 ಮೂಲಾಂಕಗಳಷ್ಟು, ಅಂದರೆ ಶೇ. 6.75ಕ್ಕೆ ರೆಪೋ ದರ ಏರಿಸಿ, ಬಳಿಕ ಈ ವರ್ಷ ಪೂರ್ತಿ ಏರಿಕೆಗೆ ವಿರಾಮ ಹಾಕಬಹುದು ಎಂಬ ಅಭಿಪ್ರಾಯಗಳಿದ್ದವು. ಆದರೆ, ಈ ಬಾರಿ ಆರ್ಬಿಐ ರೆಪೋ ದರ ಹೆಚ್ಚಿಸದಿರಲು ನಿರ್ಧರಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಹಣದುಬ್ಬರಕ್ಕೆ ಕಡಿವಾಣ ಬೀಳದಿದ್ದರೆ ರೆಪೋ ದರ ಏರಿಕೆಗೆ ಮುಂದಾಗುವುದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುಳಿವು ನೀಡಿದ್ದಾರೆ.
ಇನ್ನು ರೆಪೋ ದರದಲ್ಲಿ ಯಥಾಸ್ಥಿತಿ ಮುಂದುವರಿಸಲು ಆರ್ಬಿಐ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಸರ್ಕಾರಿ ಬಾಂಡ್ನ ಮೌಲ್ಯ ಕುಸಿದಿದೆ. ಶೇ. 7.2857ರಷ್ಟಿದ್ದ ಬಾಂಡ್ ಯೀಲ್ಡ್ ಶೇ. 7.1469ಕ್ಕೆ ಇಳಿದಿದೆ. ಇಲ್ಲಿ ಬಾಂಡ್ ಯೀಲ್ಡ್ (Bond Yield) ಎಂದರೆ ಹೂಡಿಕೆಗೆ ಪ್ರತಿಯಾಗಿ ಸಿಗುವ ರಿಟರ್ನ್. ಇಲ್ಲಿ ಬಾಂಡ್ ಮೌಲ್ಯ ಹೆಚ್ಚಿದಷ್ಟೂ ಅದರ ಯೀಲ್ಡ್ ಕಡಿಮೆ ಆಗುತ್ತದೆ.
2023-24ರ ಹಣಕಾಸು ವರ್ಷದಲ್ಲಿ ಗ್ರಾಹಕ ಬೆಲೆ ಅನುಸೂಚಿ (ಸಿಪಿಐ) ಹಣದುಬ್ಬರವು ಶೇ. 5.2ಕ್ಕೆ ಇಳಿಯಬಹುದು ಎಂದು ಆರ್ಬಿಐ ಅಂದಾಜು ಮಾಡಿದೆ. ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಾದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಸಿಪಿಐ ಇನ್ಫ್ಲೇಶನ್ ಶೇ. 5.1ರಷ್ಟು ಇರಬಹುದು ಎಂದೂ ಅದು ಹೇಳಿದೆ. ಈ ಹಿಂದೆ 2023-24ರ ಹಣಕಾಸು ವರ್ಷದಲ್ಲಿ ಸಿಪಿಐ ಹಣದುಬ್ಬರ ಶೇ. 5.3ರಷ್ಟು ಇರಬಹುದು ಎಂದು ಆರ್ಬಿಐ ಅಂದಾಜು ಮಾಡಿತ್ತು. ಈಗ ಈ ಹಣದುಬ್ಬರ ಇನ್ನಷ್ಟು ಕಡಿಮೆ ಆಗಬಹುದು ಎಂದು ತನ್ನ ನಿಲುವನ್ನು ಬದಲಿಸಿದೆ.
ಇದನ್ನೂ ಓದಿ: ಅಪಾಯದಲ್ಲಿದೆ ಡಾಲರ್ ಭವಿಷ್ಯ: ನಮಗೆ ತಿಳಿದಿರಬೇಕಾದ ಅಂಶಗಳು
ಇದೇ ವೇಳೆ, ಏಪ್ರಿಲ್ 4ರಿಂದ ನಡೆದ 3 ದಿನಗಳ ಕಾಲ ಸಭೆ ನಡೆಸಿದ ಆರ್ಬಿಐನ ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಆರು ಸದಸ್ಯರಿದ್ದರು. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ಪೂರಕವಾಗಬಹುದಾದ ಸಂಗತಿಗಳು, ಹಣದುಬ್ಬರಕ್ಕೆ ಕಡಿವಾಣ ಹಾಕಲು ತೆಗೆದುಕೊಳ್ಳಬಹುದಾದ ಕ್ರಮಗಳು ಇತ್ಯಾದಿ ಎಲ್ಲವನ್ನೂ ಚರ್ಚಿಸಲಾಗಿತ್ತು. ಈ ಸಭೆಯಲ್ಲಿ ಚರ್ಚೆಯಾದ ಸಂಗತಿಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶಕ್ತಿಕಾಂತ ದಾಸ್ ಒಂದಷ್ಟು ಮಾಹಿತಿ ಹಂಚಿಕೊಂಡರು.
2023ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ. 6.5ರಷ್ಟು ಇರಬಹುದು ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ. ಮೊದಲ ಕ್ವಾರ್ಟರ್ನಲ್ಲಿ ಶೇ. 7.8, ಎರಡನೇ ಕ್ವಾರ್ಟರ್ನಲ್ಲಿ ಶೇ. 6.2, ಮೂರನೇ ಕ್ವಾರ್ಟರ್ನಲ್ಲಿ ಶೇ. 6.1 ಮತ್ತು ನಾಲ್ಕನೇ ಕ್ವಾರ್ಟರ್ನಲ್ಲಿ ಶೇ. 5.9ರಷ್ಟು ಆರ್ಥಿಕ ಬೆಳವಣಿಗೆ ಆಗಬಹುದು ಎಂದು ಆರ್ಬಿಐ ನಿರೀಕ್ಷಿಸಿದೆ.
Published On - 10:56 am, Thu, 6 April 23