AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಈಗ ಚಿಪ್ ತಯಾರಿಸುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು: ರಘುರಾಮ್ ರಾಜನ್

Raghuram Rajan criticizes wrong priorities of Modi Govt: ಭಾರತದ ಆರ್ಥಿಕ ಅಭಿವೃದ್ಧಿ ಬಗ್ಗೆ ಇರುವ ದೊಡ್ಡ ಪ್ರಚಾರವನ್ನು ಭಾರತ ನಂಬಿದರೆ ಅದು ದೊಡ್ಡ ತಪ್ಪಾಗುತ್ತದೆ. 2047ರೊಳಗೆ ಭಾರತ ಮುಂದುವರಿದ ದೇಶವನ್ನಾಗಿ ಮಾಡುವ ಗುರಿ ಬಗ್ಗೆ ಆಡುವ ಮಾತು ಅಸಂಬದ್ಧ ಎಂದು ಆರ್​ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಭಾರತ ಸೆಮಿಕಂಡಕ್ಟರ್ ಚಿಪ್ ತಯಾರಿಸಲು ಹೊರಟಿದೆ. ಆದರೆ, ಈ ಉದ್ಯಮಕ್ಕೆ ಬೇಕಾಗುವ ಎಂಜಿನಿಯರ್ ಅನ್ನ ನೀಡಬಲ್ಲ ಶಿಕ್ಷಣ ವ್ಯವಸ್ಥೆಯನ್ನು ಉಪೇಕ್ಷಿಸುತ್ತಿದೆ ಎಂದು ರಾಜನ್ ಲೇವಡಿ ಮಾಡಿದ್ದಾರೆ.

ಭಾರತ ಈಗ ಚಿಪ್ ತಯಾರಿಸುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು: ರಘುರಾಮ್ ರಾಜನ್
ರಘುರಾಮ್ ರಾಜನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 26, 2024 | 4:24 PM

Share

ನವದೆಹಲಿ, ಮಾರ್ಚ್ 26: ಭಾರತದ ಆರ್ಥಿಕ ಅಭಿವೃದ್ಧಿ (Indian economic growth) ಬಗ್ಗೆ ದೊಡ್ಡ ಹೈಪ್ ಆಗಿದೆ. ಭಾರತವೇನಾದರೂ ಈ ಹೈಪ್ ನಂಬಿದರೆ ಅದು ದೊಡ್ಡ ತಪ್ಪಾಗುತ್ತದೆ ಎಂದು ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಮನ್ (Raghuram Rajan) ಎಚ್ಚರಿಸಿದ್ದಾರೆ. ಆರ್ಥಿಕ ಅಭಿವೃದ್ಧಿ ಬಗ್ಗೆ ಇರುವ ಅತಿರೇಕದ ಪ್ರಚಾರವನ್ನು ಭಾರತ ನಂಬಿದರೆ ದೊಡ್ಡ ತಪ್ಪಾಗುತ್ತದೆ. ಈ ಹೈಪ್ ವಾಸ್ತವದಲ್ಲಿ ನಿಜವಾಗುವುದನ್ನು ಖಚಿತಪಡಿಸಿಕೊಳ್ಳಬೇಕಾದರೆ ಭಾರತ ಇನ್ನೂ ಹಲವು ವರ್ಷ ಕಾಲ ಶ್ರಮ ಪಡಬೇಕಾಗುತ್ತದೆ ಎಂದೂ ರಾಜನ್ ಹೇಳಿದ್ದಾರೆ.

‘ನೀವು ಈ ಹೈಪ್ ನಂಬಬೇಕೆಂದು ರಾಜಕಾರಣಿಗಳು ಬಯಸುತ್ತಾರೆ. ನಾವು ಈ ಆರ್ಥಿಕತೆಯ ಮಟ್ಟವನ್ನು ತಲುಪಿದ್ದೇವೆ ಎಂದು ನಾವು ನಂಬುವುದು ಅವರಿಗೆ ಬೇಕು. ಈ ನಂಬಿಕೆಗೆ ಶರಣಾಗುವುದು ಭಾರತ ಮಾಡುವ ಬಹಳ ದೊಡ್ಡ ತಪ್ಪು,’ ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ. 2047ರಲ್ಲಿ ಭಾರತವನ್ನು ಮುಂದುವರಿದ ದೇಶವನ್ನಾಗಿ ಮಾಡಲು ಪ್ರಧಾನಿ ಗುರಿ ಇಟ್ಟಿರುವ ನಿರ್ಧಾರವನ್ನು ರಾಜನ್ ಕಟುವಾಗಿ ಟೀಕಿಸಿದ್ದಾರೆ. ನಿಮ್ಮ ಬಹಳಷ್ಟು ಮಕ್ಕಳಿಗೆ ಹೈಸ್ಕೂಲ್ ಶಿಕ್ಷಣವೂ ಇಲ್ಲ. ಶಾಲೆ ತೊರೆಯುತ್ತಿರುವ ಸಂಖ್ಯೆ ಹೆಚ್ಚಿರುವಾಗ ಈ ರೀತಿ ಮಾತುಗಳನ್ನು ಆಡುವುದು ಅಸಂಬದ್ಧ ಎಂದಿದ್ದಾರೆ.

ಇದನ್ನೂ ಓದಿ: ಸರ್ಕಾರದಿಂದ ಹೊಸ ವೇತನ ಕ್ರಮಕ್ಕೆ ಆಲೋಚನೆ; ಜಾರಿಯಾದರೆ ಬಹಳ ಹೆಚ್ಚಾಗಲಿದೆ ಕನಿಷ್ಠ ಸಂಬಳ

ಮೊದಲು ಶಿಕ್ಷಣ ವ್ಯವಸ್ಥೆ ಸರಿಪಡಿಸಿ ಎನ್ನುವ ರಾಜನ್

ಸರ್ಕಾರದ ನೀತಿ ಮತ್ತು ಆದ್ಯತೆಗಳನ್ನು ರಘುರಾಮ್ ರಾಜನ್ ಕಟುವಾಗಿ ವಿಮರ್ಶಿಸಿದ್ದಾರೆ. ಸರ್ಕಾರ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಗೆ ನೀಡಲು ಮುಂದಾಗಿರುವ ಸಬ್ಸಿಡಿ ಹಣವು ಒಟ್ಟಾರೆ ಉನ್ನತ ಶಿಕ್ಷಣಕ್ಕೆ ಇಟ್ಟಿರುವ ಬಜೆಟ್​ಗಿಂತ ಹೆಚ್ಚು. ಇದು ತಪ್ಪಾದ ಆದ್ಯತೆ ಎಂದು ಮಾಜಿ ಆರ್​ಬಿಐ ಗವರ್ನರ್ ಅಭಿಪ್ರಾಯಪಟ್ಟಿದ್ದಾರೆ.

ಚಿಪ್ ಮ್ಯಾನುಫ್ಯಾಕ್ಚರಿಂಗ್ ಇತ್ಯಾದಿ ದೊಡ್ಡ ಯೋಜನೆಗಳತ್ತ ಸರ್ಕಾರ ತೀರಾ ಮಗ್ನವಾಗಿದೆ. ಆದರೆ, ಈ ಉದ್ಯಮಗಳಿಗೆ ಬೇಕಾದ ಎಂಜಿನಿಯರುಗಳನ್ನು ರೂಪಿಸುವಂತಹ ಶಿಕ್ಷಣ ವ್ಯವಸ್ಥೆ ಬಗ್ಗೆ ಗಮನವೇ ಹರಿಸುತ್ತಿಲ್ಲ. ಭಾರತ ಶ್ರೇಷ್ಣ ದೇಶವಾಗಬೇಕೆಂಬ ಸರ್ಕಾರದ ಹಂಬಲ ನೈಜವಾದುದು. ಆದರೆ, ಹಾಗೆ ಆಗಲು ಏನು ಮಾಡಬೇಕು ಎಂಬುದು ಅದರ ಗಮನದಲ್ಲಿ ಇಲ್ಲ ಎಂದು ರಾಜನ್ ವಿಷಾದಿಸಿದ್ದಾರೆ.

ಇದನ್ನೂ ಓದಿ: ಮಗ ಯಾಕೆ ಮನೆಗೆ ಕರೆದ ಗೊತ್ತಿಲ್ಲ; ಏನೋ ಇದೆ ಮರ್ಮ: ಮಾಜಿ ರೇಮಂಡ್ ಮುಖ್ಯಸ್ಥ ವಿಜಯ್​ಪತ್ ಹೇಳಿಕೆ

ಚೀನಾದಿಂದ ಈ ಅಂಶವನ್ನು ಭಾರತ ಕಲಿಯಬೇಕು: ರಾಜನ್

ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದರ ಆಚೆಗೆ ಸರ್ಕಾರ ಇನ್ನೂ ಹಲವು ನೀತಿಗಳನ್ನು ರೂಪಿಸಬೇಕು. ಅಸಮಾನತೆಯನ್ನು ಕಡಿಮೆ ಮಾಡುವುದು, ಶ್ರಮ ಆಧಾರಿತ ಉತ್ಪಾದನೆ ಹೆಚ್ಚಿಸುವುದೂ ಸೇರಿದಂತೆ ವಿವಿಧ ಅಂಶಗಳಿಗೆ ಸರಕಾರ ಆದ್ಯತೆ ನೀಡಬೇಕು. ಆಡಳಿತ ವ್ಯವಸ್ಥೆ ಬಹಳ ಕೇಂಕ್ರೀಕೃತವಾಗಿದ್ದು, ಅದರ ಬದಲು ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಕೊಡಬೇಕು ಎಂದು ಹೇಳುವ ರಾಜನ್, ಚೀನಾದ ಮಾಜಿ ಮುಖ್ಯಸ್ಥ ಡೆಂಗ್ ಶಿಯೋಪಿಂಗ್ ಅವರ ಆಡಳಿತ ನೀತಿಯನ್ನು ಉದಾಹರಣೆಯಾಗಿ ನೀಡಿದ್ದಾರೆ.

ಡೆಂಗ್ ಶಿಯೋಪಿಂಗ್ ಅವರ ಆಡಳಿತದಲ್ಲಿದ್ದಂತೆ ಭಾರತವು ವಾಸ್ತವಿಕ ಕ್ರಮ ಅನುಸರಿಸಬೇಕು. ಒಂದು ಬೆಕ್ಕು ಕಪ್ಪೇ ಇರಲಿ, ಬಿಳಿಯೇ ಇರಲಿ, ಅದು ಮುಖ್ಯವಲ್ಲ. ಇಲಿಯನ್ನು ಹಿಡಿಯಬಲ್ಲುದೇ ಇಲ್ಲವೇ ಎಂಬುದು ಮುಖ್ಯವಾಗಬೇಕು. ಆ ರೀತಿಯ ಪ್ರಾಯೋಗಿಕ ಆಡಳಿತ ವಿಧಾನವನ್ನು ಸರ್ಕಾರ ಅನುಸರಿಸಬೇಕು ಎಂದು ರಘುರಾಮ್ ರಾಜನ್ ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ