ಗ್ರಾಹಕನೇ ಕಿಂಗ್; ಫ್ಲೋಟಿಂಗ್ ರೇಟ್ ಮತ್ತು ಫಿಕ್ಸೆಡ್ ಬಡ್ಡಿದರ ವಿಚಾರದಲ್ಲಿ ಆರ್ಬಿಐ ತರಲಿದೆ ಮಹತ್ವದ ನಿಯಮ
RBI Rule on Floating Rate Loans: ಫ್ಲೋಟಿಂಗ್ ರೇಟ್ ಸಾಲದ ವಿಚಾರದಲ್ಲಿ ಆರ್ಬಿಐ ಕೆಲವಿಷ್ಟು ಮಹತ್ವದ ನಿಯಮ ರೂಪಿಸಿದ್ದು, ಗ್ರಾಹಕರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ. ಸಾಲದ ಕಂತುಗಳನ್ನು ಕಟ್ಟುವ ಹಣ, ಕಂತುಗಳ ಸಂಖ್ಯೆಯಲ್ಲಿ ಬದಲಾವಣೆ ಆಗುವುದಿದ್ದರೆ ಗ್ರಾಹಕರ ಗಮನಕ್ಕೆ ತಂದೇ ಮಾಡಬೇಕು ಎಂದು ತಿಳಿಸಲಾಗಿದೆ.
ನವದೆಹಲಿ, ಆಗಸ್ಟ್ 10: ಭಾರತೀಯ ರಿಸರ್ವ್ ಬ್ಯಾಂಕ್ನ ದ್ವೈಮಾಸಿಕ ಎಂಪಿಸಿ ಸಭೆಯಲ್ಲಿ ಕೆಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ರೆಪೋ, ರಿವರ್ಸ್ ರೆಪೋ ದರಗಳನ್ನು ಯಥಾಸ್ಥಿತಿಯಲ್ಲಿ ಇಟ್ಟಿದೆಯಾದರೂ ಸಿಆರ್ಆರ್ ಇತ್ಯಾದಿ ಅಂಶಗಳಲ್ಲಿ ಆರ್ಬಿಐ ಬದಲಾವಣೆಗಳನ್ನು ಮಾಡಿದೆ. ಈ ಪೈಕಿ ಬ್ಯಾಂಕ್ ಸಾಲ ಪಡೆಯುವವರಿಗೆ ತುಸು ನಿರಾಳ ತರುವ ಕ್ರಮವನ್ನು ಆರ್ಬಿಐ ಪ್ರಸ್ತಾಪಿಸಿದೆ. ಬ್ಯಾಂಕ್ ಸಾಲ ವಿಚಾರದಲ್ಲಿ ಕೆಲ ನಿಯಮಗಳನ್ನು ರೂಪಿಸಲು ಯೋಜಿಸಿದೆ. ಈ ಪ್ರಸ್ತಾಪದ ಪ್ರಕಾರ, ಗ್ರಾಹಕರು ತಮ್ಮ ಅನುಕೂಲತೆಗೆ ತಕ್ಕಂತೆ ಲೋನ್ ಬಡ್ಡಿದರ (Bank Loan Rates) ನೀತಿಯ ಆಯ್ಕೆಗಳನ್ನು ಮಾಡಬಹುದು. ಬ್ಯಾಂಕ್ ಸಾಲದ ವಿಚಾರದಲ್ಲಿ ಹೆಚ್ಚು ಪಾರದರ್ಶಕತೆ ಬರಲಿದೆ.
ಏನಿದು ಫ್ಲೋಟಿಂಗ್ ಲೋನ್ ರೇಟ್?
ಫ್ಲೋಟಿಂಗ್ ಲೋನ್ ರೇಟ್ ಎಂಬುದು ಬ್ಯಾಂಕ್ ಸಾಲದ ಮೇಲಿನ ಬಡ್ಡಿಹೊಂದಿಕೆ ವ್ಯವಸ್ಥೆ. ಆರ್ಬಿಐ ರೆಪೋ ದರ ಹೆಚ್ಚಿಸಿದರೆ ಬ್ಯಾಂಕುಗಳೂ ಬಡ್ಡಿದರ ಹೆಚ್ಚಿಸುತ್ತವೆ. ಬ್ಯಾಂಕುಗಳು ಬೇರೆ ಕಾರಣಕ್ಕೂ ಬಡ್ಡಿದರ ಹೆಚ್ಚಿಸಬಹುದು. ಈಗಾಗಲೇ ಸಾಲ ಪಡೆದು ಕಂತುಗಳನ್ನು (ಇಎಂಐ) ಕಟ್ಟುತ್ತಿರುವವರಿಗೂ ಬಡ್ಡಿದರ ಪರಿಷ್ಕೃತಗೊಳ್ಳುತ್ತದೆ. ಅದರ ಪರಿಣಾಮವಾಗಿ ಇಎಂಐ ಮೊತ್ತ ಅಥವಾ ಇಎಂಐ ಸಂಖ್ಯೆ ಹೆಚ್ಚಾಗುತ್ತದೆ. ಫ್ಲೋಟಿಂಗ್ ರೇಟ್ ಮೇಲೆ ಸಾಲ ಪಡೆದಿದ್ದರೆ ಇದು ಅನ್ವಯ ಆಗುತ್ತದೆ.
ಇದನ್ನೂ ಓದಿ: ರೆಪೋ ದರದಲ್ಲಿ ಬದಲಾವಣೆ ಇಲ್ಲ; ಯಥಾಸ್ಥಿತಿ ಮುಂದುವರಿಸಲು ಆರ್ಬಿಐ ನಿರ್ಧಾರ
ಫಿಕ್ಸೆಡ್ ಇಂಟರೆಸ್ಟ್ ರೇಟ್ ಮೇಲೆ ಸಾಲ ಪಡೆದಿದ್ದರೆ ಕೊನೆಯವರೆಗೂ ಬಡ್ಡಿದರ ಯಥಾಸ್ಥಿತಿಯಲ್ಲಿರುತ್ತದೆ. ಬ್ಯಾಂಕ್ನ ಬಡ್ಡಿದರ ಏರಲಿ, ಬಿಡಲಿ ಇವರ ಸಾಲಕ್ಕೆ ಪೂರ್ವದಲ್ಲಿ ನಿಶ್ಚಿತವಾದ ಬಡ್ಡಿದರವೇ ಅನ್ವಯ ಆಗುತ್ತದೆ.
ಸಾಲ ಪಡೆದವರಿಗೆ ಅಥವಾ ಸಾಲ ಪಡೆಯುವವರಿಗೆ ಆರ್ಬಿಐ ಹೊಸ ಕ್ರಮದಿಂದ ಏನು ಪ್ರಯೋಜನ?
ಫ್ಲೋಟಿಂಗ್ ರೇಟ್ ಮೇಲೆ ಸಾಲ ಪಡೆದ ಗ್ರಾಹಕರಿಗೆ ಅವರ ಗಮನಕ್ಕೆ ತಾರದೆಯೇ ಇಎಂಐಗಳಲ್ಲಿ ಬದಲಾವಣೆ ಮಾಡಲಾಗಿರುವ ಹಲವು ಪ್ರಕರಣಗಳು ಆರ್ಬಿಐ ಗಮನಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಕೆಲ ನಿಯಮಗಳನ್ನು ರೂಪಿಸುವ ಪ್ರಸ್ತಾಪ ನಮ್ಮ ಮುಂದಿದೆ ಎಂದು ಆರ್ಬಿಐ ತಿಳಿಸಿದೆ. ಈ ನಿಯಮಗಳು ಹೀಗಿವೆ:
- ಬ್ಯಾಂಕುಗಳು ಇಎಂಐನಲ್ಲಿ ಬದಲಾವಣೆ ಮಾಡುವಾಗ ಗ್ರಾಹಕರಿಗೆ ಮಾಹಿತಿ ನೀಡಬೇಕು.
- ಫ್ಲೋಟಿಂಗ್ ರೇಟ್ ಮೇಲೆ ಸಾಲ ಪಡೆದವರು ಫಿಕ್ಸೆಡ್ ರೇಟ್ಗೆ ಬದಲಾವಣೆ ಮಾಡಿಕೊಳ್ಳುವ ಆಯ್ಕೆ ನೀಡಬೇಕು.
- ಸಾಲವನ್ನು ಮುಂಗಡವಾಗಿ ತೀರಿಸಲು ಅವಕಾಶ ಕೊಡಬೇಕು.
- ಈ ಮೇಲಿನ ಆಯ್ಕೆಗಳನ್ನು ಗ್ರಾಹಕರು ಆಯ್ದುಕೊಂಡರೆ ಅದಕ್ಕೆ ವಿಧಿಸಬಹುದಾದ ಶುಲ್ಕದ ಬಗ್ಗೆ ಸ್ಪಷ್ಟ ಮಾಹಿತಿ ಕೊಟ್ಟಿರಬೇಕು.
ಗ್ರಾಹಕರಿಗೆ ಲಾಭವೇನು?
ಫ್ಲೋಟಿಂಗ್ ರೇಟ್ ಮೇಲೆ ಸಾಲ ಪಡೆದ ಬಳಿಕ ಬಡ್ಡಿದರ ಹೆಚ್ಚಾಗುವಂತಿದ್ದಾಗ ಗ್ರಾಹಕರು ಫಿಕ್ಸೆಡ್ ರೇಟ್ ಅವಕಾಶವನ್ನು ಆರಿಸಿಕೊಳ್ಳಬಹುದು. ಇದರಿಂದ ಬಡ್ಡಿದರ ಹೆಚ್ಚಳದ ಬಿಸಿ ತಾಕದಂತೆ ನೋಡಿಕೊಳ್ಳಬಹುದು. ಇದು ಬ್ಯಾಂಕುಗಳಿಗೆ ತುಸು ಹಿನ್ನಡೆ ತರಬಹುದಾದರೂ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತದೆ. ಆರ್ಬಿಐನ ಈ ಪ್ರಸ್ತಾವಗಳಿಗೆ ಬ್ಯಾಂಕುಗಳ ಸ್ಪಂದನೆ ಏನು ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಅದಾದ ಬಳಿಕ ಹೊಸ ನಿಯಮಗಳು ಜಾರಿಗೆ ಬರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ