AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ, ಯೂರೋಪ್ ಮೊದಲಾದೆಡೆ ಬಡ್ಡಿದರ ಇಳಿಕೆ; ಭಾರತದಲ್ಲೂ ಇಳಿಯುತ್ತಾ ದರ? ಈ ವಾರ ಆರ್​ಬಿಐ ಎಂಪಿಸಿ ಸಭೆಯಲ್ಲಿ ನಿರ್ಧಾರ

RBI MPC meet this week: ಕಳೆದ ಒಂದೂವರೆ ವರ್ಷದಿಂದ ಶೇ. 6.5ರಲ್ಲಿರುವ ಬಡ್ಡಿದರ ಈ ಬಾರಿಯೂ ಹಾಗೇ ಮುಂದುವರಿಯಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ. ಅಮೆರಿಕ, ಯೂರೋಪ್​ನ ಸೆಂಟ್ರಲ್ ಬ್ಯಾಂಕುಗಳು ಬಡ್ಡಿದರ ಇಳಿಸಿದ ಹಿನ್ನೆಲೆಯಲ್ಲಿ ಭಾರತದಲ್ಲೂ ದರ ಇಳಿಸಬಹುದು ಎನ್ನುವ ಅನಿಸಿಕೆ ಇತ್ತು. ಆದರೆ, ಆ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಈ ವಾರ ಆರ್​ಬಿಐನ ಎಂಪಿಸಿ ಸಭೆಯಲ್ಲಿ ಇದರ ನಿರ್ಧಾರವಾಗಲಿದೆ.

ಅಮೆರಿಕ, ಯೂರೋಪ್ ಮೊದಲಾದೆಡೆ ಬಡ್ಡಿದರ ಇಳಿಕೆ; ಭಾರತದಲ್ಲೂ ಇಳಿಯುತ್ತಾ ದರ? ಈ ವಾರ ಆರ್​ಬಿಐ ಎಂಪಿಸಿ ಸಭೆಯಲ್ಲಿ ನಿರ್ಧಾರ
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 07, 2024 | 11:55 AM

Share

ನವದೆಹಲಿ, ಅಕ್ಟೋಬರ್ 7: ಭಾರತೀಯ ರಿಸರ್ವ್ ಬ್ಯಾಂಕ್​ನ ಮಾನಿಟರಿ ಪಾಲಿಸಿ ಕಮಿಟಿಯ ದ್ವೈಮಾಸಿಕ ಸಭೆ (RBI MPC meeting) ಈ ವಾರ ನಡೆಯಲಿದೆ. ಯಥಾಪ್ರಕಾರ ಈ ಸಭೆಯಲ್ಲಿ ರೆಪೋ ದರ ಪರಿಷ್ಕರಿಸಬಹುದಾ ಎನ್ನುವ ಅಪೇಕ್ಷೆ ಹಲವರಿದ್ದಿದೆ. ಎಲ್ಲರ ಚಿತ್ತ ಈ ವಿಚಾರದ ಬಗ್ಗೆ ನೆಟ್ಟಿದೆ. ಅಮೆರಿಕ, ಯೂರೋಪ್ ಮೊದಲಾದ ಹಲವೆಡೆ ಅಲ್ಲಿನ ಸೆಂಟ್ರಲ್ ಬ್ಯಾಂಕುಗಳು ಬಡ್ಡಿದರಗಳನ್ನು ಇಳಿಸಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಸಹಜವಾಗಿ ದರ ಇಳಿಕೆ ಮಾಡಬಹುದು ಎಂಬ ನಿರೀಕ್ಷೆ ಇದೆ. ಭಾರತದಲ್ಲಿ ಸದ್ಯ ರೆಪೋ ದರ (ಬಡ್ಡಿ) ಶೇ. 6.5ರಲ್ಲಿದೆ. ಒಂದೂವರೆ ವರ್ಷದಿಂದ (2023ರ ಫೆಬ್ರುವರಿ) ಈ ಬಡ್ಡಿದರದಲ್ಲಿ ಬದಲಾವಣೆಯೇ ಆಗಿಲ್ಲ. ಆದರೆ, ತಜ್ಞರ ಪ್ರಕಾರ ಈ ಬಾರಿಯೂ ಬಡ್ಡಿದರ ಇಳಿಕೆ ಸಾಧ್ಯತೆ ಇಲ್ಲ.

ರೀಟೇಲ್ ಹಣದುಬ್ಬರ ನಿರೀಕ್ಷಿತ ರೀತಿಯಲ್ಲಿ ತಹಬದಿಗೆ ಬರುತ್ತಿಲ್ಲದ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಬಡ್ಡಿದರ ಇಳಿಸುವ ಗೋಜಿಗೆ ಆರ್​ಬಿಐಗೆ ಹೋಗುವುದಿಲ್ಲ ಎನ್ನಲಾಗುತ್ತಿದೆ. ಡಿಸೆಂಬರ್​ನಲ್ಲಿ ಇಳಿಕೆ ಕುರಿತ ಆರ್​ಬಿಐ ಆಲೋಚಿಸಬಹುದು ಎಂಬುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ: ‘ಭಾರತದಲ್ಲಿ ಶನಿವಾರ, ಭಾನುವಾರ ರಜೆಯ ಕಾನ್ಸೆಪ್ಟೇ ಇರಲಿಲ್ಲ, ಇದೆಲ್ಲಾ ಪಾಶ್ಚಿಮಾತ್ಯದ ಎರವಲು’: ಟ್ರೋಲ್ ಆದ ಒಲಾ ಸಿಇಒ

ಈ ಬಾರಿ ಆರ್​ಬಿಐ ಯಾಕೆ ಬಡ್ಡಿದರ ಇಳಿಸಲ್ಲ? ಸಂಭಾವ್ಯ ಕಾರಣಗಳು

  • ಹಣದುಬ್ಬರ ನಿರೀಕ್ಷಿತ ರೀತಿಯಲ್ಲಿ ನಿಯಂತ್ರಣಕ್ಕೆ ಸಿಗದೇ ಇರುವುದು.
  • ಪಶ್ಚಿಮ ಏಷ್ಯಾದಲ್ಲಿ ಯುದ್ಧ ಭೀತಿಯ ಪರಿಣಾಮಗಳು
  • ಪೆಟ್ರೋಲ್, ಡೀಸಲ್ ಬೆಲೆ ಏರಿಕೆಯ ದಟ್ಟ ಸಾಧ್ಯತೆ

ಹಣದುಬ್ಬರ ಕಾರಣಕ್ಕೆ ಆರ್​ಬಿಐ ಬಡ್ಡಿದರವನ್ನು ಮೇಲ್ಮಟ್ಟದಲ್ಲಿ ಮುಂದುವರಿಸುತ್ತಿರುವುದು. ಕೋವಿಡ್ ನಂತರ ಹಣದುಬ್ಬರ ಶೇ. 7ಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ಹೋಗಿತ್ತು. ಸತತವಾಗಿ ಬಡ್ಡಿ ಹೆಚ್ಚಿಸುತ್ತಾ ಹೋಗಲಾಗಿತ್ತು. ಶೇ. 2.5ರಷ್ಟು ಬಡ್ಡಿದರ ಹೆಚ್ಚಳವಾಗಿ ಶೇ. 6.5ಕ್ಕೆ ತರಲಾಯಿತು. ಒಂದೂವರೆ ವರ್ಷದಿಂದ ಇದೇ ಬೆಲೆ ಇದೆ.

ಹಣದುಬ್ಬರವನ್ನು ಸತತವಾಗಿ ಶೇ. 4ಕ್ಕೆ ಕಟ್ಟಿಹಾಕುವುದು ಆರ್​ಬಿಐನ ಗುರಿ. ಈ ನಿಟ್ಟಿನಲ್ಲಿ ತಾಳಿಕೆ ಮಿತಿಯಾಗಿ ಶೇ. 2ರಿಂದ 6ರ ದರವನ್ನು ನಿಗದಿ ಮಾಡಿದೆ. ಸದ್ಯ ಹಣದುಬ್ಬರ ಕೆಲ ತಿಂಗಳಿಂದ ಶೇ. 5ರ ಒಳಗೆಯೇ ಇದೆಯಾದರೂ ಭವಿಷ್ಯದಲ್ಲಿ ಬೆಲೆ ಏರಿಕೆ ಸಾಧ್ಯತೆ ದಟ್ಟವಾಗಿದೆ. ಆಹಾರ ಹಣದುಬ್ಬರ ನಿಯಂತ್ರಣಕ್ಕೆ ಸಿಗುತ್ತಿಲ್ಲ.

ಇದನ್ನೂ ಓದಿ: ಕಂಪನಿ ಮಾರಿ 400 ನೌಕರರನ್ನು ಶ್ರೀಮಂತರನ್ನಾಗಿಸಿದ ಸಿಇಒ ಜ್ಯೋತಿ ಬನ್ಸಾಲ್

ಈಗ ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ತೈಲ ಬೆಲೆ ಹೆಚ್ಚತೊಡಗಿದೆ. ಇದರಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಸ್ವಾಭಾವಿಕವಾಗಿ ಹೆಚ್ಚಬಹುದು. ಪರಿಣಾಮವಾಗಿ, ಹಣದುಬ್ಬರವೂ ಹೆಚ್ಚಬಹುದು. ಹೀಗಾಗಿ, ಆರ್​ಬಿಐ ಈ ಬಾರಿ ಬಡ್ಡಿದರ ಇಳಿಕೆಯ ಸಾಹಸಕ್ಕೆ ಕೈಹಾಕುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ