ಆಗಸ್ಟ್ನಲ್ಲಿ ಆರ್ಬಿಐ ಎಂಪಿಸಿ ಸಭೆ; ಬಡ್ಡಿ ದರ ಹೆಚ್ಚಳವಾಗುತ್ತಾ? ಹಣದುಬ್ಬರ ಶೇ. 6ಕ್ಕಿಂತಲೂ ಹೆಚ್ಚಿರುತ್ತಾ? ತಜ್ಞರು ಏನಂತಾರೆ?
RBI MPC Meet On Aug 8-10: ಭಾರತೀಯ ರಿಸರ್ವ್ ಬ್ಯಾಂಕ್ನ ಎಂಪಿಸಿ ಸಭೆ ಆಗಸ್ಟ್ 8ರಿಂದ 10ರವರೆಗೂ ನಡೆಯಲಿದ್ದು, ಕಳೆದ 2 ಬಾರಿಯಂತೆ ಈ ಬಾರಿಯೂ ಬಡ್ಡಿ ದರ ಏರಿಕೆ ಮಾಡದಿರಲು ನಿರ್ಧರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ನವದೆಹಲಿ, ಜುಲೈ 31: ಅಮೆರಿಕ ಮತ್ತು ಯೂರೋಪ್ನ ಸೆಂಟ್ರಲ್ ಬ್ಯಾಂಕುಗಳು ಬಡ್ಡಿ ದರ ಏರಿಸಿರುವ ಹಿನ್ನೆಲೆಯಲ್ಲಿ ಮತ್ತು ಭಾರತದಲ್ಲಿ ಹಣದುಬ್ಬರ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಈಗ ಆರ್ಬಿಐ ಮೇಲೆ ನೆಟ್ಟಿದೆ. ಆಗಸ್ಟ್ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯ (RBI MPC) ದ್ವೈಮಾಸಿಕ ಸಭೆ ನಡೆಯಲಿದ್ದು, ಅಲ್ಲಿ ಏನು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. ವರದಿಗಳ ಪ್ರಕಾರ, ಹಿಂದಿನ ನೀತಿ ಮತ್ತು ನಿರ್ಧಾರಗಳನ್ನೇ ಆರ್ಬಿಐ ಮುಂದುವರಿಸುವ ಸಾಧ್ಯತೆ ಇದೆ. ಸತತ ಮೂರನೇ ಬಾರಿ ರೆಪೋ ದರ (Repo Rate) ಯಥಾಸ್ಥಿತಿಯಲ್ಲಿ ಮುಂದುವರಿಯಬಹುದು ಎನ್ನಲಾಗಿದೆ. ಆಗಸ್ಟ್ 8ರಿಂದ 10ರವರೆಗೆ ನಡೆಯುವ ಆರ್ಬಿಐ ಎಂಪಿಸಿ ಸಭೆಯಲ್ಲಿ ಇದೇ ರೆಪೋ ದರದ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಎಂಬುದು ಎಲ್ಲರಿಗೂ ಇರುವ ಹೆಚ್ಚಿನ ಕುತೂಹಲ.
ಕಳೆದ ವರ್ಷ (2022) ಮೇ ತಿಂಗಳಿಂದ ಭಾರತದಲ್ಲಿ ಹಣದುಬ್ಬರ ಮಿತಿಮೀರಿ ಹೋಗಿತ್ತು. ಇದನ್ನು ನಿಯಂತ್ರಿಸಲು ಆರ್ಬಿಐ ಸತತವಾಗಿ ರೆಪೋ ದರ (ಬಡ್ಡಿ) ಏರಿಸುತ್ತಾ ಬಂದಿತ್ತು. ಫೆಬ್ರುವರಿಯಲ್ಲಿ ಬಡ್ಡಿ ದರ ಶೇ. 6.5ಕ್ಕೆ ಏರಿಸಲಾಗಿತ್ತು. ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ ಹಣದುಬ್ಬರವು ತಾಳಿಕೆ ಮಿತಿಯ ವ್ಯಾಪ್ತಿಯಲ್ಲಿದ್ದರಿಂದ ರೆಪೋ ದರವನ್ನು ಏರಿಸಲಾಗಿಲ್ಲ. ಆದರೆ, ಜೂನ್ ತಿಂಗಳಲ್ಲಿ ಹಣದುಬ್ಬರವು ಹೆಚ್ಚಳಗೊಂಡಿರುವುದು ಹಾಗೂ ಈಗ ಟೊಮೆಟೋ ಸೇರಿದಂತೆ ಕೆಲ ಆಹಾರವಸ್ತುಗಳ ಬೆಲೆ ಏರಿರುವುದಿರಂದ ಜುಲೈನಲ್ಲಿ ಹಣದುಬ್ಬರ ಗಣನೀಯವಾಗಿ ಎರುವ ಸಾಧ್ಯತೆ ಇರುವುದರಿಂದ ಆರ್ಬಿಐ ರೆಪೋ ದರವನ್ನು ಏರಿಸಬಹುದು ಎಂಬುದು ಕೆಲವರ ನಿರೀಕ್ಷೆಯಾಗಿದೆ. ಅದರೆ, ಖಾಸಗಿ ವಲಯದ ಆರ್ಥಿಕ ತಜ್ಞರು, ಆರ್ಬಿಐನಿಂದ ರೆಪೋ ದರ ಏರಿಕೆಯ ನಿರ್ಧಾರ ಬರುವ ಸಾಧ್ಯತೆ ಇಲ್ಲ ಎಂದಿದ್ದಾರೆ.
‘ಆರ್ಬಿಐನ ದರಗಳು ಮತ್ತು ನಿಲುವಿನಲ್ಲಿ ಯಥಾಸ್ಥಿತಿ ನಿರೀಕ್ಷಿಸುತ್ತಿದ್ದೇವೆ. ಸದ್ಯಕ್ಕೆ ಹಣದುಬ್ಬರ ಶೇ. 5ಕ್ಕಿಂತಲೂ ಕಡಿಮೆ ಇದೆ. ಮುಂಬರುವ ತಿಂಗಳಲ್ಲಿ ತರಕಾರಿ ಮತ್ತು ಬೇಳೆಕಾಳುಗಳ ಬೆಲೆ ಏರಿಕೆಯಿಂದ ಹಣದುಬ್ಬರ ಸ್ವಲ್ಪಮಟ್ಟಿಗೆ ಮೇಲ್ಮುಖವಾಗಿ ಹೋಗಬಹುದು. ಆದರೆ, ರೆಪೋ ದರ ಯಥಾಸ್ಥಿತಿಯನ್ನು ನಿರೀಕ್ಷಿಸಬಹುದು’ ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಆರ್ಥಿಕ ತಜ್ಞ ಮದನ್ ಸಬ್ನವಿಸ್ ಹೇಳಿದ್ದಾರೆ.
ಹಣದುಬ್ಬರ ಶೇ. 6ಕ್ಕಿಂತಲೂ ಹೆಚ್ಚಾಗಬಹುದು
ಜುಲೈ ತಿಂಗಳಲ್ಲಿ ಗ್ರಾಹಕ ಬೆಲೆ ಅನುಸೂಚಿ ಆಧಾರಿತ ಹಣದುಬ್ಬರ ಅಥವಾ ರೀಟೇಲ್ ಹಣದುಬ್ಬರ ಶೇ. 6ಕ್ಕಿಂತಲೂ ಹೆಚ್ಚಬಹುದು ಎಂದು ಐಸಿಆರ್ಎ ಚೀಫ್ ಎಕನಾಮಿಸ್ಟ್ ಅದಿತಿ ನಾಯರ್ ಅಂದಾಜು ಮಾಡಿದ್ದಾರೆ. ಸದ್ಯ ಜೂನ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ ಶೇ. 4.75ರಷ್ಟಿದೆ.
ಆರ್ಬಿಐ ಹಣದುಬ್ಬರವನ್ನು ಶೇ. 4ಕ್ಕೆ ತಂದು ನಿಲ್ಲಿಸುವ ಮುಖ್ಯ ಗುರಿ ಹೊಂದಿದೆ. ಶೇ. 2ರಿಂದ ಶೇ. 6 ಅನ್ನು ತಾಳಿಕೆ ಮಿತಿಯಾಗಿ ನಿಗದಿ ಮಾಡಿದೆ. ಅಂದರೆ ಹಣದುಬ್ಬರ ಶೇ. 2ಕ್ಕಿಂತ ಕೆಳಗಳಿಯದಂತೆ, ಶೇ. 6ಕ್ಕಿಂತ ಮೇಲೇರದಂತೆ ನೋಡಿಕೊಳ್ಳುವ ಗುರಿ ಆರ್ಬಿಐನದ್ದಾಗಿದೆ.
ಇದನ್ನೂ ಓದಿ: US Fed Hike Effect: ಅಮೆರಿಕದಲ್ಲಿ ಬಡ್ಡಿದರ 22 ವರ್ಷದಲ್ಲೇ ಗರಿಷ್ಠ; ಭಾರತದ ಮೇಲೆ ಆಗುವ ಪರಿಣಾಮಗಳೇನು?
ವಿತ್ಡ್ರಾವಲ್ ಆಫ್ ಅಕಾಮಡೇಶನ್ ಮುಂದುವರಿಕೆ ಸಾಧ್ಯತೆ
ಇನ್ನು, ಆಗಸ್ಟ್ 10ರಂದು ಎಂಪಿಸಿ ಸಭೆಯ ನಿರ್ಧಾರಗಳನ್ನು ಘೋಷಿಸಲಿರುವ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ವಿತ್ಡ್ರಾಯಲ್ ಆಫ್ ಅಕಾಮಡೇಶನ್ ನಿಲುವನ್ನು ಮುಂದುವರಿಸಬಹುದು ಎಂದು ಕೋಟಕ್ ಮಹೀಂದ್ರ ಬ್ಯಾಂಕ್ನ ಆರ್ಥಿಕ ಮುಖ್ಯಸ್ಥೆ ಉಪಾಸನಾ ಭಾರದ್ವಜ್ ನಿರೀಕ್ಷಿಸಿದ್ದಾರೆ.
2,000 ರೂ ನೋಟು ಹಿಂಪಡೆದ ಬಳಿಕ ಹಣದ ಹರಿವು ಉತ್ತಮಗೊಂಡಿರುವುದರಿಂದ ವಿತ್ಡ್ರಾಯಲ್ ಆಫ್ ಅಕಾಮಡೇಶನ್ ಯಥಾಸ್ಥಿತಿಯಲ್ಲಿ ಮುಂದುವರಿಯಬಹುದು.
ವಿತ್ಡ್ರಾಯಲ್ ಆಫ್ ಅಕಾಮಡೇಶನ್ ಎಂದರೆ ಹಣಕಾಸು ವ್ಯವಸ್ಥೆಯಲ್ಲಿ ಹಣದ ಸರಬರಾಜನ್ನು ಕಡಿಮೆ ಮಾಡುವುದು. ಈ ಕ್ರಮದಿಂದ ಹಣದುಬ್ಬರವನ್ನು ನಿಯಂತ್ರಿಸಬಹುದು. ಆಹಾರಬೆಲೆಗಳ ಪರಿಸ್ಥಿತಿ ಶಮನಗೊಳ್ಳುವವರೆಗೂ ಆರ್ಬಿಐ ಈ ಕ್ರಮವನ್ನು ಮುಂದುವರಿಸಬಹುದು ಎಂದು ಹಿಂದಿನ ಎಂಪಿಸಿ ಸಭೆಯಲ್ಲೇ ಸುಳಿವು ಸಿಕ್ಕಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ