RBI Repo Rate: ಬಡ್ಡಿದರ 25 ಅಂಕ ಇಳಿಸಿದ ಆರ್ಬಿಐ; ರಿಪೋ ದರ ಶೇ. 6ಕ್ಕೆ ಇಳಿಕೆ
RBI Governor Sanjay Malhotra Press Conference: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೇ. 6.25ರಷ್ಟಿದ್ದ ತನ್ನ ಬಡ್ಡಿದರವನ್ನು ಶೇ. 6ಕ್ಕೆ ಇಳಿಸಿದೆ. ಮಾನಿಟರಿ ಪಾಲಿಸಿ ಸಮಿತಿಯ ಸಭೆ ಬಳಿಕ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ರಿಪೋದರವನ್ನು 25 ಮೂಲಾಂಕಗಳಷ್ಟು ಇಳಿಸಿರುವ ನಿರ್ಧಾರವನ್ನು ಪ್ರಕಟಿಸಿದರು. ರಿವರ್ಸ್ ರಿಪೋಗಳನ್ನೂ ಆರ್ಬಿಐ ಇಳಿಸಿದೆ.

ನವದೆಹಲಿ, ಏಪ್ರಿಲ್ 9: ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರಿಪೋ ದರಗಳನ್ನು (RBI Repo Rate) 25 ಮೂಲಾಂಕಗಳಷ್ಟು ಕಡಿತಗೊಳಿಸಿದೆ. ಮೊನ್ನೆ ಮತ್ತು ನಿನ್ನೆ ನಡೆದ ಆರ್ಬಿಐ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಕಮಿಟಿ ನಿರ್ಧಾರಗಳನ್ನು ಪ್ರಕಟಿಸುತ್ತಾ, ರಿಪೋ ದರವನ್ನು ಶೇ. 6.25ರಿಂದ ಶೇ 6ಕ್ಕೆ ಇಳಿಸಿರುವುದನ್ನು ತಿಳಿಸಿದರು. ಆರ್ಬಿಐನಿಂದ ಇದು ಸತತ ಎರಡನೇ ರಿಪೋ ದರ ಇಳಿಕೆ ಆಗಿದೆ. ಫೆಬ್ರುವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲೂ 25 ಮೂಲಾಂಕಗಳಷ್ಟು ಬಡ್ಡಿದರವನ್ನು ಇಳಿಸಲಾಗಿತ್ತು. ಈಗ ಮತ್ತೊಮ್ಮೆ ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಏನಿದು ರಿಪೋ ದರ?
ರಿಪೋ ರೇಟ್ ಎಂದರೆ ರೀಪರ್ಚೇಸ್ ಅಗ್ರೀಮೆಂಟ್ ರೇಟ್ (Repo- Repurchasing Agreement) ಎಂದಿದೆ. ಇಲ್ಲಿ ಬ್ಯಾಂಕುಗಳಿಗೆ ಫಂಡಿಂಗ್ ಅವಶ್ಯಕತೆ ಬಿದ್ದಾಗ ಅವರು ಸರ್ಕಾರಿ ಬಾಂಡ್ಗಳನ್ನು (govt securities) ಆರ್ಬಿಐನಲ್ಲಿ ಅಡವಿಟ್ಟು ಸಾಲ ಪಡೆಯಬಹುದು. ಆದರೆ, ಅಡವಿಡಲಾದ ಬಾಂಡ್ ಅಥವಾ ಸೆಕ್ಯೂರಿಟಿಗಳನ್ನು ಪೂರ್ವನಿಗದಿತ ದರಕ್ಕೆ ಮರುಖರೀದಿ ಮಾಡಲಾಗುವುದೆಂದು ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅದಕ್ಕೆ ರೀಪರ್ಚೇಸ್ ಅಗ್ರೀಮೆಂಟ್ ರೇಟ್ ಎಂದು ಕರೆಯುವುದು.
ಇದನ್ನೂ ಓದಿ: ದಿವಾಳಿ ಎದ್ದ ಜೈಪ್ರಕಾಶ್ ಅಸೋಸಿಯೇಟ್ಸ್; ಖರೀದಿಗೆ ಮುಗಿಬಿದ್ದ ಅದಾನಿ, ಜಿಂದಾಲ್, ಓಬೇರಾಯ್, ಬಾಬಾ ರಾಮದೇವ್ ಮತ್ತಿತರರು
ಸರಳವಾಗಿ ತಿಳಿಸುವುದಾದರೆ, ಆರ್ಬಿಐನಿಂದ ಸಾಲ ಪಡೆಯಲು ಬ್ಯಾಂಕುಗಳು ತೆರಬೇಕಿರುವ ಬಡ್ಡಿದರವೇ ರಿಪೋ ರೇಟ್. ಹಣದುಬ್ಬರವನ್ನು ನಿಯಂತ್ರಿಸಲು ಆರ್ಬಿಐ ಬಳಿ ಇರುವ ಪ್ರಬಲ ಅಸ್ತ್ರ ಇದು.
ಬೆಲೆ ಏರಿಕೆ ಆಗುತ್ತಿದೆ ಎನಿಸಿದರೆ ಆಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಣದ ಹರಿವು ಕಡಿಮೆ ಮಾಡಲು ಆರ್ಬಿಐ ರಿಪೋ ದರವನ್ನು ಹೆಚ್ಚಿಸುತ್ತದೆ. ಹಣದುಬ್ಬರ ನಿಯಂತ್ರಣದಲ್ಲಿದ್ದರೆ, ಮತ್ತು ಆರ್ಥಿಕತೆಗೆ ಪುಷ್ಟಿ ಸಿಗುವ ಅವಶ್ಯಕತೆ ಇದೆ ಎನಿಸಿದಲ್ಲಿ ಆಗ ಬ್ಯಾಂಕಿಂಗ್ ವಲಯಕ್ಕೆ ಹೆಚ್ಚು ಹಣದ ಹರಿವು ಬೇಕಾಗುತ್ತದೆ. ಆಗ ರಿಪೋ ದರವನ್ನು ಆರ್ಬಿಐ ಇಳಿಸುತ್ತದೆ.
ಇದನ್ನೂ ಓದಿ: ಮಾದರಿ ನಾರಿ ರುಕ್ಮಿಣಿ; ಕೂಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ ಇವತ್ತು ಸಿಇಒ
ಸಂಜಯ್ ಮಲ್ಹೋತ್ರಾ ಅವರು ಆರ್ಬಿಐ ಗವರ್ನರ್ ಆಗಿ ನೇಮಕವಾದ ಬಳಿಕ ಇದು ಎರಡನೇ ಎಂಪಿಸಿ ಸಭೆಯಾಗಿದೆ. ಹೊಸ ಹಣಕಾಸು ವರ್ಷದ ಮೊದಲ ಎಂಪಿಸಿ ಸಭೆಯೂ ಇದಾಗಿದೆ. ಜಾಗತಿಕ ಅನಿಶ್ಚಿತ ಸ್ಥಿತಿ, ಸುಂಕ ಸಮರದ ಈ ಕಾಲಘಟ್ಟದಲ್ಲಿ ಆರ್ಬಿಐ ನೀತಿ ನಿರ್ಧಾರಕ್ಕೆ ಸಾಕಷ್ಟು ಸವಾಲಿನ ಸ್ಥಿತಿ ಇದೆ.
ರಿಪೋ ದರ ಕಡಿತಗೊಳಿಸುವ ಜೊತೆಗೆ, ಎಸ್ಡಿಎಫ್ ಮತ್ತು ಎಂಎಸ್ಎಫ್ ದರಗಳನ್ನೂ ತುಸು ಇಳಿಸಲಾಗಿದೆ. ಪಾಲಿಸಿ ನಿಲುವನ್ನು ನ್ಯೂಟ್ರಲ್ನಿಂದ ಅಕಾಮೊಡೇಟಿವ್ಗೆ ಬದಲಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:11 am, Wed, 9 April 25