RBI Monetary Policy: ಮತ್ತೆ ರೆಪೊ ದರ ಹೆಚ್ಚಿಸಲಿದೆಯೇ ಆರ್​ಬಿಐ?

| Updated By: Ganapathi Sharma

Updated on: Oct 17, 2022 | 4:04 PM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣಕಾಸು ನೀತಿ ಸಮಿತಿಯು ಮತ್ತೆ ರೆಪೊ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

RBI Monetary Policy: ಮತ್ತೆ ರೆಪೊ ದರ ಹೆಚ್ಚಿಸಲಿದೆಯೇ ಆರ್​ಬಿಐ?
ಭಾರತೀಯ ರಿಸರ್ವ್ ಬ್ಯಾಂಕ್ (ಸಂಗ್ರಹ ಚಿತ್ರ)
Follow us on

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಣಕಾಸು ನೀತಿ ಸಮಿತಿಯು (MPC) ಮತ್ತೆ ರೆಪೊ ದರ (Repo Rate) ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಹಣದುಬ್ಬರ (Inflation) ತಡೆಯುವ ಸಲುವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಆರ್​ಬಿಐ ಸೆಪ್ಟೆಂಬರ್ 30ರಂದು ರೆಪೊ ದರವನ್ನು 50 ಮೂಲಾಂಶಗಳಷ್ಟು ಹೆಚ್ಚಿಸಿತ್ತು. ಜಾಗತಿಕ ಆರ್ಥಿಕ ತಲ್ಲಣದ ಪರಿಣಾಮ ಮತ್ತು ಹಣದುಬ್ಬರ ನಿಯಂತ್ರಣಕ್ಕೆ ಬಾರದಿರುವ ಕಾರಣ ಹಣಕಾಸು ನೀತಿ ಸಮಿತಿಯು ಮತ್ತೆ 35ರಿಂದ 50 ಮೂಲಾಂಶಗಳ ವರೆಗೆ ರೆಪೊ ದರ ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಆರ್ಥಿಕ ವೃದ್ಧಿ ದರದ ಬಗ್ಗೆ ಇರುವ ಕಳವಳ, ಹಣದುಬ್ಬರ ತಡೆಗೆ ಕ್ರಮಕೈಗೊಳ್ಳಬೇಕಾದ ತುರ್ತು ಆರ್​ಬಿಐ ಹಣಕಾಸು ನೀತಿ ಸಮಿತಿ ಮುಂದಿದೆ. ಹೀಗಾಗಿ ಸಮಿತಿಯು ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರ ಹೇಳಿಕೆ ಉಲ್ಲೇಖಿಸಿ ‘ಫೈನಾನ್ಶಿಯಲ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಗ್ರಾಹಕ ದರ ಸೂಚ್ಯಂಕವು ಸೆಪ್ಟೆಂಬರ್​ನಲ್ಲಿ ಶೇಕಡಾ 7.41ಕ್ಕೆ ಹೆಚ್ಚಳವಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ಹಣಕಾಸು ನೀತಿ ಸಮಿತಿಯಿಂದ ವರದಿ ಕೇಳಿದೆ. ಅಕಾಲಿಕ ಮಳೆ, ಪೂರೈಕೆ ಸಮಸ್ಯೆಗಳು ಮತ್ತು ಜಾಗತಿಕ ಮಾರುಕಟ್ಟೆಯ ಚಂಚಲತೆಯ ಪರಿಣಾಮ ಚಿಲ್ಲರೆ ಹಣದುಬ್ಬರ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯ ಅಮೆರಿಕದ ಹಾದಿಯಲ್ಲೇ ನಾವೂ ಸಹ ಬಡ್ಡಿ ದರ ಹೆಚ್ಚಿಸುವ ಮೂಲಕ ಹಣದುಬ್ಬರ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಎಂಪಿಸಿ ಸದಸ್ಯೆ ಅಶೀಮಾ ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ
PM Kisan Samman Nidhi: ಪಿಎಂ ಕಿಸಾನ್​ ಯೋಜನೆಯ 12ನೇ ಕಂತು ಬಿಡುಗಡೆ: ಹಣ ಬಂದಿದೆಯೇ ಎಂದು ನೋಡುವುದು ಹೇಗೆ?
SBI Interest Hike: ನೀವು ಎಸ್​ಬಿಐ ಗ್ರಾಹಕರೇ? ಹೆಚ್ಚು ಮೊತ್ತದ ಇಎಂಐ ಪಾವತಿಸಲು ಸಿದ್ಧರಾಗಿ
PM Kisan 2022: ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಪ್ರಧಾನಿ ಮೋದಿ ಚಾಲನೆ, 12ನೇ ಕಂತಿನ ಹಣ ಬಿಡುಗಡೆ
Wheat Exports: ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಗೋಧಿ ರಫ್ತು ದ್ವಿಗುಣ

ಬೇಕಿದೆ ಬಡ್ಡಿ ದರ ಏರಿಕೆಗೆ ತಾತ್ಕಾಲಿಕ ತಡೆ:

ಹಣದುಬ್ಬರವನ್ನು ತಡೆಯುವುದಕ್ಕಾಗಿ ಬಡ್ಡಿ ದರ ಹೆಚ್ಚಿಸುವ ವಿಧಾನವನ್ನು ಅನುಸರಿಸಲಾಗುತ್ತಿದೆಯಾದರೂ ಸದ್ಯದ ಪರಿಸ್ಥಿತಿಯಲ್ಲಿ ಅದಕ್ಕೆ ತಾತ್ಕಾಲಿಕ ತಡೆ ನೀಡಬೇಕಾದ ಅಗತ್ಯವಿದೆ ಎಂದು ಗೋಯಲ್ ಅಭಿಪ್ರಾಯಪಟ್ಟಿದ್ದಾರೆ. ಬಡ್ಡಿ ದರವನ್ನು ಹೆಚ್ಚಿಸುತ್ತಾ ಹೋಗುವುದರಿಂದ ಮಾತ್ರವೇ ಹಣದುಬ್ಬರವನ್ನು ನಿಗದಿತ ಗುರಿಯಲ್ಲಿರುವಂತೆ ನೋಡಿಕೊಳ್ಳುವುದು ಸಾಧ್ಯವಿಲ್ಲ. ಪೂರೈಕೆಗೆ ಸಂಬಂಧಿಸಿದ ಹಣದುಬ್ಬರವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾದರೆ ಮಾತ್ರ ಯಶಸ್ಸು ಕಾಣಬಹುದು. ಇಲ್ಲವಾದಲ್ಲಿ ವೆಚ್ಚದಲ್ಲಿ ಹೆಚ್ಚಳವಾಗುವುದರಿಂದ ಬೇಡಿಕೆ ಹಾಗೂ ಹೂಡಿಕೆ ಕುಸಿತವಾಗಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: PM Kisan 2022: ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಪ್ರಧಾನಿ ಮೋದಿ ಚಾಲನೆ, 12ನೇ ಕಂತಿನ ಹಣ ಬಿಡುಗಡೆ

ಸೆಪ್ಟೆಂಬರ್ 30ರ ಹಣಕಾಸು ನೀತಿಯಲ್ಲಿ ಆರ್​ಬಿಐ ರೆಪೊ ದರವನ್ನು ಶೇಕಡಾ 0.50 ಹೆಚ್ಚಿಸಿ, 5.9ಕ್ಕೆ ನಿಗದಿಪಡಿಸಿತ್ತು. ಇದಕ್ಕೂ ಮುನ್ನ ಹಣದುಬ್ಬರ ತಡೆಗಾಗಿ ಸತತ 3 ಬಾರಿ ಆರ್​ಬಿಐ ರೆಪೊ ದರ ಹೆಚ್ಚಳ ಮಾಡಿತ್ತು.

Published On - 4:01 pm, Mon, 17 October 22