RBI Inflation Report: ಹಣದುಬ್ಬರ ಕುರಿತ ಆರ್ಬಿಐ ವರದಿ ಬಹಿರಂಗಪಡಿಸಲಾಗದು; ಕೇಂದ್ರ
ಆರ್ಬಿಐ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದೆ. ಆದರೆ, ಈ ವರದಿಯನ್ನು ಬಹಿರಂಗಪಡಿಸಲು ನಿಯಮಗಳ ಅಡಿಯಲ್ಲಿ ಅವಕಾಶವಿಲ್ಲ ಎಂದು ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.
ನವದೆಹಲಿ: ಸತತ ಮೂರು ತ್ರೈಮಾಸಿಕಗಳಿಂದ ಹಣದುಬ್ಬರ (Inflation) ಪ್ರಮಾಣವನ್ನು ಶೇಕಡಾ 6ಕ್ಕಿಂತ ಕೆಳಮಟ್ಟದಲ್ಲಿ ಕಾಯ್ದುಕೊಳ್ಳಲು ವಿಫಲವಾಗಿರುವ ಬಗ್ಗೆ ಆರ್ಬಿಐ (RBI) ಸಲ್ಲಿಸಿರುವ ವರದಿಯನ್ನು ಬಹಿರಂಗಪಡಿಸಲಾಗದು. ಅದೊಂದು ವಿಶೇಷ ಸಂವಹನವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ವಿಚಾರವಾಗಿ ಲೋಕಸಭೆಯಲ್ಲಿ (Lok Sabha) ಕೇಳಲಾದ ಪ್ರಶ್ನೆಗೆ ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ (Pankaj Chaudhary) ಉತ್ತರಿಸಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ 45 ಝಡ್ಎನ್, ಆರ್ಬಿಐ ಹಣಕಾಸು ನೀತಿ ಸಮಿತಿಯ ಪ್ರಕ್ರಿಯೆ ನಿಯಂತ್ರಣ 7ರ ಹಾಗೂ 2016ರ ಹಣಕಾಸು ನೀತಿ ನಿಯಂತ್ರಣ ನಿಯಮಗಳ ಅನ್ವಯ ಆರ್ಬಿಐ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದೆ. ಆದರೆ, ಈ ವರದಿಯನ್ನು ಬಹಿರಂಗಪಡಿಸಲು ನಿಯಮಗಳ ಅಡಿಯಲ್ಲಿ ಅವಕಾಶವಿಲ್ಲ ಎಂದು ಪಂಕಜ್ ಚೌಧರಿ ತಿಳಿಸಿದ್ದಾರೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸಹ ವರದಿಯಲ್ಲಿ ಏನು ಉಲ್ಲೇಖಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಲು ಈ ಹಿಂದೆ ನಿರಾಕರಿಸಿದ್ದರು. ವರದಿಯು ಸರ್ಕಾರ ಮತ್ತು ಆರ್ಬಿಐ ನಡುವಣ ವಿಶೇಷ ಸಂವಹನವಾಗಿದೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: RBI Repo Rate Hike: ಆರ್ಬಿಐ ರೆಪೊ ದರ 35 ಮೂಲಾಂಶ ಹೆಚ್ಚಳ; ದುಬಾರಿಯಾಗಲಿದೆ ವಾಹನ, ಗೃಹ ಸಾಲದ ಇಎಂಐ
ಹಣದುಬ್ಬರ ನಿಯಂತ್ರಿಸಲು ವಿಫಲವಾಗಿರುವ ವಿಚಾರವಾಗಿ ನವೆಂಬರ್ 3ರಂದು ಹಣಕಾಸು ನೀತಿ ಸಮಿತಿ ವಿಶೇಷ ಸಭೆ ನಡೆಸಿತ್ತು. ಸಭೆಯಲ್ಲಿ ಸಿದ್ಧಪಡಿಸಿದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಹಣದುಬ್ಬರ ಏರಿಕೆ ತಡೆಯುವಲ್ಲಿ ವಿಫಲವಾಗಿರುವುದಕ್ಕೆ ಹಲವು ಕಾರಣಗಳನ್ನು ಆರ್ಬಿಐ ನೀಡಿರುವ ಸಾಧ್ಯತೆ ಇದೆ. ಇವುಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧ, ಕೋವಿಡ್ ವಿರುದ್ಧ ಚೀನಾದ ಶೂನ್ಯ ಸಹನೆ ನೀತಿ ಪೂರೈಕೆ ಸರಪಳಿ ಮೇಲೆ ಬೀರಿದ ಪರಿಣಾಮ ಕೂಡ ಸೇರಿರಲಿವೆ ಎಂದು ನಿರೀಕ್ಷಿಸಲಾಗಿದೆ ಎಂಬುದಾಗಿ ಆರ್ಥಿಕ ತಜ್ಞರ ಹೇಳಿಕೆಗಳನ್ನು ಉಲ್ಲೇಖಿಸಿ ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು.
ರೆಪೊ ದರ ಹೆಚ್ಚಳದ ವೇಗ ಕಡಿಮೆ ಮಾಡಿದ ಆರ್ಬಿಐ
ಡಿಸೆಂಬರ್ 7ರಂದು ಪ್ರಕಟಿಸಿದ್ದ ಹಣಕಾಸು ನೀತಿಯಲ್ಲಿ ಆರ್ಬಿಐ ರೆಪೊ ದರವನ್ನು 35 ಮೂಲಾಂಶ ಹೆಚ್ಚಿಸಿದೆ. ಈ ಮೂಲಕ ರೆಪೊ ದರ ಹೆಚ್ಚಳದ ವೇಗವನ್ನು ಕಡಿಮೆ ಮಾಡಿತ್ತು. ಇದರೊಂದಿಗೆ ಸತತ ಐದು ಬಾರಿ ಆರ್ಬಿಐ ರೆಪೊ ದರ ಹೆಚ್ಚಿಸಿದಂತಾಗಿದ್ದು, ರೆಪೊ ದರ ಪ್ರಮಾಣ ಶೇಕಡಾ 6.25 ಆಗಿದೆ. ಈ ಹಿಂದಿನ ಹಣಕಾಸು ನೀತಿಗಳಲ್ಲಿ ರೆಪೊ ದರವನ್ನು 50 ಮೂಲಾಂಶದಷ್ಟು ಆರ್ಬಿಐ ಹೆಚ್ಚಿಸಿತ್ತು. ಗ್ರಾಹಕರ ದರ ಸೂಚ್ಯಂಕ ಆಧಾರಿತ (ಸಿಪಿಐ) ಹಣದುಬ್ಬರ ಅಕ್ಟೋಬರ್ನಲ್ಲಿ ಶೇಕಡಾ 6.7ರಷ್ಟಿತ್ತು. ಸತತ 11 ತಿಂಗಳುಗಳಿಂದ ಹಣದುಬ್ಬರ ಪ್ರಮಾಣ ಸಹನೆಯ ಮಟ್ಟವಾದ ಶೇಕಡಾ 6ಕ್ಕಿಂತ ಮೇಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇಕಡಾ 6.7ರಷ್ಟು ಇರಲಿದೆ ಎಂದು ಆರ್ಬಿಐ ತಿಳಿಸಿತ್ತು. ಫೆಬ್ರವರಿಯಲ್ಲಿ ಮತ್ತೆ ಆರ್ಬಿಐ ಹಣಕಾಸು ನೀತಿ ಸಮಿತಿ ರೆಪೊ ದರ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಕೆಲವು ಮಂದಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ