ನವದೆಹಲಿ, ಸೆಪ್ಟೆಂಬರ್ 29: ಸರ್ಕಾರ 2016ರಲ್ಲಿ 500 ರೂ ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ 2,000 ರೂ ನೋಟುಗಳನ್ನು ಮುದ್ರಿಸಿತ್ತು. ಈಗ ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದೆ. ಈ ನೋಟುಗಳಿಗೆ ಸರ್ಕಾರ ಎಷ್ಟು ಖರ್ಚು ಮಾಡಿದೆ ಎಂಬ ಪ್ರಶ್ನೆಗೆ ಆರ್ಬಿಐ ಉತ್ತರ ನೀಡಿದೆ. ಒಟ್ಟು 7.40 ಲಕ್ಷಕೋಟಿ ರೂ ಮೊತ್ತವೆನಿಸುವ 370 ಕೋಟಿಗೂ ಹೆಚ್ಚು ನೋಟುಗಳನ್ನು ಪಡೆಯಲು ಸರ್ಕಾರ 1,300 ಕೋಟಿ ರೂ ಖರ್ಚು ಮಾಡಿರುವ ವಿಚಾರವನ್ನು ಆರ್ಟಿಐ ಅಡಿಯಲ್ಲಿ ಆರ್ಬಿಐ ನೀಡಿದ ಮಾಹಿತಿಯಿಂದ ತಿಳಿದುಬಂದಿದೆ. ದಿ ಹಿಂದೂ ಬಿಸಿನಿಸ್ಲೈನ್ ಪತ್ರಿಕೆ ಪ್ರಕಟಿಸಿದ ವರದಿಯಲ್ಲಿ ಇದರ ವಿವರಗಳಿವೆ.
ಆರ್ಬಿಐ ಮೂರು ಹಂತಗಳಲ್ಲಿ 2,000 ರೂ ಮುಖಬೆಲೆಯ ನೋಟುಗಳನ್ನು ಪಡೆದಿದೆ. 2016-17ರಲ್ಲಿ 350.4 ಕೋಟಿ ನೋಟುಗಳು, 2017-18ರಲ್ಲಿ 15.1 ಕೋಟಿ ನೋಟುಗಳು, ಹಾಗು 2018-19ರಲ್ಲಿ 4.7 ಕೋಟಿ ನೋಟುಗಳನ್ನು ಆರ್ಬಿಐ ಪಡೆದಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈ. ಲಿ ಸಂಸ್ಥೆ ಈ ನೋಟುಗಳನ್ನು ಆರ್ಬಿಐಗೆ ಮುದ್ರಿಸಿ ಕೊಟ್ಟಿತ್ತು.
ಇದನ್ನೂ ಓದಿ: ಎರಡು ವರ್ಷವಾದರೂ ಎಫ್ಟಿಎಸ್ಇ ಇಂಡೆಕ್ಸ್ ಪಟ್ಟಿಗೆ ಸೇರ್ಪಡೆಯಾಗದ ಭಾರತೀಯ ಬಾಂಡ್ಗಳು; ಏನಿದರ ಎಫೆಕ್ಟ್?
ನೋಟು ಮುದ್ರಣ ಸಂಸ್ಥೆಯು 2,000 ರೂ ಮುಖಬೆಲೆಯ ಒಂದು ಸಾವಿರ ನೋಟುಗಳನ್ನು 4,180 ರೂಗಳಿಗೆ ಆರ್ಬಿಐಗೆ ಮುದ್ರಿಸಿ ಕೊಟ್ಟಿದೆ. 2016-17ರಲ್ಲಿ ಒಂದು ಸಾವಿರ ನೋಟುಗಳಿಗೆ 3,540 ರೂ ಬೆಲೆಯಂತೆ ಆರ್ಬಿಐಗೆ 350.4 ಕೋಟಿ ನೋಟುಗಳನ್ನು ಕೊಟ್ಟಿದೆ. 2017-18 ಮತ್ತು 2018-19ರಲ್ಲಿ ಕ್ರಮವಾಗಿ 4,180 ರೂ ಮತ್ತು 3,530 ರೂ ಬೆಲೆಯಲ್ಲಿ ಸಾವಿರ ನೋಟುಗಳನ್ನು ಮುದ್ರಿಸಿ ಕೊಡಲಾಗಿದೆ. ಅಂದರೆ ಸುಮಾರು 3.50 ರೂನಿಂದ 4.18 ರೂ ಬೆಲೆಗೆ ಒಂದು ನೋಟನ್ನು ಪಡೆಯಲಾಗಿದೆ.
ಆರ್ಬಿಐನಿಂದ ಬಿಡುಗಡೆ ಆಗಿದ್ದ 2,000 ರೂ ಮುಖಬೆಲೆಯ ನೋಟುಗಳ ಒಟ್ಟು ಮೊತ್ತ 7.40 ಲಕ್ಷ ಕೋಟಿ ರೂಗೂ ಹೆಚ್ಚು ಇತ್ತು. ಕ್ರಮೇಣವಾಗಿ ನೋಟುಗಳನ್ನು ಚಲಾವಣೆಯಿಂದ ಆರ್ಬಿಐ ಹಿಂಪಡೆದುಕೊಳ್ಳುತ್ತಾ ಹೋಗಿತ್ತು. 2023ರ ಮಾರ್ಚ್ ತಿಂಗಳಲ್ಲಿ 3.62 ಲಕ್ಷ ಕೋಟಿ ರೂ ಮೊತ್ತದ 2,000 ರೂ ನೋಟುಗಳು ಚಲಾವಣೆಯಲ್ಲಿದ್ದವು.
ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರವನ್ನು ಮೇ ತಿಂಗಳಲ್ಲಿ ಪ್ರಕಟಿಸಿದ ಬಳಿಕ ಶೇ. 93ರಷ್ಟು ನೋಟುಗಳು ಆರ್ಬಿಐಗೆ ಹಿಂದಿರುಗಿವೆ. ಈ ನೋಟುಗಳನ್ನು ಮರಳಿಸಲು ಆರ್ಬಿಐ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿದೆ. ಇದನ್ನು ಅಕ್ಟೋಬರ್ 31ರವರೆಗೂ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ