ನವದೆಹಲಿ, ಏಪ್ರಿಲ್ 2: ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಇತ್ಯಾದಿ ಮೆಟಾದ ಆ್ಯಪ್ಗಳಲ್ಲಿ (Meta) ಭಾರತೀಯ ಬಳಕೆದಾರರು ರಚಿಸುವ ಪೋಸ್ಟ್ಗಳು ವಿದೇಶಗಳಲ್ಲಿರುವ ಸರ್ವರ್ನಲ್ಲಿ ಸಂಗ್ರಹವಾಗುತ್ತವೆ. ಭೌತಿಕವಾಗಿ ಇವು ವಿದೇಶಗಳಲ್ಲಿ ಇರುತ್ತವೆ. ಇದೀಗ ಭಾರತದಲ್ಲೇ ಮೆಟಾ ಡಾಟಾ ಸೆಂಟರ್ (Data Center) ಇರಲಿದೆ. ಇದರಿಂದ ಮೆಟಾದ ಭಾರತೀಯ ಬಳಕೆದಾರರ ದತ್ತಾಂಶಗಳೆಲ್ಲವೂ (Indian user generated content) ಈ ಡಾಟಾ ಸೆಂಟರ್ನಲ್ಲೇ ಇರಲಿವೆ. ರಿಲಾಯನ್ಸ್ ಇಂಡಸ್ಟ್ರೀಸ್ನ ಚೆನ್ನೈ ಕ್ಯಾಂಪಸ್ನಲ್ಲಿರುವ ಡಾಟಾ ಸೆಂಟರ್ ಕೇಂದ್ರದಲ್ಲಿ ಮೆಟಾದ ಡಾಟಾ ಸೆಂಟರ್ ಇರಲಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಇತ್ಯಾದಿ ಆ್ಯಪ್ಗಳನ್ನು ಹೊಂದಿರುವ ಮೆಟಾ ಜಾಗತಿಕವಾಗಿ 14 ಡಾಟಾ ಸೆಂಟರ್ಸ್ ಹೊಂದಿದೆ. ಚೆನ್ನೈನಲ್ಲಿ ಸ್ಥಾಪನೆಯಾಗಲಿರುವುದು 15ನೆಯದು. ಭಾರತದಲ್ಲಿ ಮೆಟಾದ ಮೊದಲ ಡಾಟಾ ಸೆಂಟರ್ ಇದಾಗಿರುತ್ತದೆ.
ಗುಜರಾತ್ನ ಜಾಮ್ನಗರ್ನಲ್ಲಿ ಕಳೆದ ತಿಂಗಳು ನಡೆದ ಮುಕೇಶ್ ಅಂಬಾನಿ ಕೊನೆಯ ಮಗ ಅನಂತ್ ಅಂಬಾನಿ ಅವರ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ಒಡೆಯ ಮುಕೇಶ್ ಅಂಬಾನಿ ಮಧ್ಯೆ ಈ ಡಾಟಾ ಸೆಂಟರ್ ನಿರ್ಮಾಣ ಸಂಬಂಧ ಮಾತುಕತೆ ನಡೆದು, ಒಪ್ಪಂದವನ್ನು ಅಂತಿಮಗೊಳಿಸಲಾಗಿತ್ತು.
ಇದನ್ನೂ ಓದಿ: ತಾತನ 30 ವರ್ಷ ಹಿಂದಿನ ಎಸ್ಬಿಐ ಷೇರು ಸರ್ಟಿಫಿಕೇಟ್ ಅಚಾನಕ್ಕಾಗಿ ಸಿಕ್ಕಿದಾಗ… ಈಗೆಷ್ಟಿದೆ ನೋಡಿ ಅದರ ಮೌಲ್ಯ
ಚೆನ್ನೈನ ಅಂಬತ್ತೂರು ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿ 10 ಎಕರೆ ಜಾಗದಲ್ಲಿ ಎಂಎಎ10 ಡಾಟಾ ಸೆಂಟರ್ ನಿರ್ಮಾಣವಾಗಿದೆ. ರಿಲಾಯನ್ಸ್ ಇಂಡಸ್ಟ್ರೀಸ್, ಡಿಜಿಟಲ್ ರಿಯಲ್ಟಿ ಮತ್ತು ಬ್ರೂಕ್ಫೀಲ್ಡ್ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳು ಒಟ್ಟು ಸೇರಿ ರಚಿಸಿರುವ ಡಿಜಿಟಲ್ ಕನೆಕ್ಸಿಯಾನ್ ನಿರ್ಮಿಸಿರುವ ಈ ಡಾಟಾ ಸೆಂಟರ್ 100 ಮೆಗಾ ವ್ಯಾಟ್ ಐಟಿ ಲೋಡ್ ಸಾಮರ್ಥ್ಯ ಹೊಂದಿರುತ್ತದೆ. ಈ ಡಾಟಾ ಸೆಂಟರ್ ನಿರ್ಮಾಣವಾದ ಬಳಿಕ ಭಾರತದಾದ್ಯಂತ ನಾಲ್ಕೈದು ನೋಡ್ಗಳಲ್ಲಿ ಮೆಟಾ ಕಾರ್ಯಾಚರಿಸಬಹುದು. ಇದರಿಂದ ಡಾಟಾ ಪ್ರೋಸಸಿಂಗ್ ಬಹಳ ವೇಗವಾಗಿ ಆಗುತ್ತದೆ. ಟ್ರಾನ್ಸ್ಮಿಶನ್ ವೆಚ್ಚ ಕೂಡ ಕಡಿಮೆ ಆಗುತ್ತದೆ.
ಸದ್ಯ ಮೆಟಾದ ಭಾರತೀಯ ಬಳಕೆದಾರರ ದತ್ತಾಂಶವು ಸಿಂಗಾಪುರದಲ್ಲಿರುವ ಡಾಟಾ ಸೆಂಟರ್ಗೆ ಹೋಗುತ್ತಿದೆ. ಈಗ ಚೆನ್ನೈನಲ್ಲಿರುವ ಡಾಟಾ ಸೆಂಟರ್ನಲ್ಲೇ ಎಲ್ಲವೂ ಪ್ರೋಸಸ್ ಆಗಲಿದೆ. ಈ ಎಂಎಎ10 ಡಾಟಾ ಸೆಂಟರ್ ಕ್ಯಾಂಪಸ್ ಎಐ ಲ್ಯಾಂಗ್ವೇಜ್ ಮಾಡಲ್ ತಂತ್ರಜ್ಞಾನಗಳಿಗೆ ಸಂಬದ್ಧವಾಗಿರುತ್ತದೆ.
ಭಾರತದಲ್ಲಿ ಇದೇ ವೇಳೆ ಮುಂದಿನ ಮೂರು ವರ್ಷದಲ್ಲಿ ಡಾಟಾ ಸೆಂಟರ್ ಉದ್ಯಮ ಮೂರು ಪಟ್ಟು ಬೆಳೆಯುವ ನಿರೀಕ್ಷೆ ಇದೆ. ಜಾಗತಿಕ ದತ್ತಾಂಶ ರಚನೆಯಲ್ಲಿ ಭಾರತದ ಪಾಲು ಶೇ. 20ರಷ್ಟಿದ್ದರೂ ಡಾಟಾ ಸೆಂಟರ್ ಸಾಮರ್ಥ್ಯದಲ್ಲಿ ಭಾರತದ ಪಾಲು ಶೇ. 3 ಮಾತ್ರವೇ. ದೊಡ್ಡ ಟೆಕ್ ಕಂಪನಿಗಳು ಈಗ ಭಾರತದಲ್ಲೇ ಡಾಟಾ ಸೆಂಟರ್ ನಿರ್ಮಿಸಲು ಮುಂದಾಗಿವೆ. ಮೆಟಾ ರೀತಿಯಲ್ಲಿ ಗೂಗಲ್ ಕೂಡ ನವಿ ಮುಂಬೈನಲ್ಲಿ 22.5 ಎಕರೆ ಜಾಗದಲ್ಲಿ ಕ್ಯಾಪ್ಟಿವ್ ಡಾಟಾ ಸೆಂಟರ್ ನಿರ್ಮಿಸಲು ಯೋಜಿಸಿದೆ.
ಇದನ್ನೂ ಓದಿ: ವಂಚಕ ಲೋನ್ ಆ್ಯಪ್ಗಳ ಉಪಟಳ ನಿಗ್ರಹಕ್ಕೆ ಸರ್ಕಾರ ತರುತ್ತಿದೆ ಡಿಜಿಟಾ ಅಸ್ತ್ರ
ಒಂದು ಸರ್ವರ್ನಲ್ಲಿ ಒಂದು ಆ್ಯಪ್ನ ದತ್ತಾಂಶ ಸಂಗ್ರಹಕ್ಕೆ ಅನುಮತಿ ಇರುತ್ತದೆ. ಸರ್ವರ್ಗಳು ಡಾಟಾ ಸೆಂಟರ್ನ ಒಂದು ಭಾಗವಾಗಿರುತ್ತವೆ. ಒಂದು ಡಾಟಾ ಸೆಂಟರ್ನಲ್ಲಿ ಸರ್ವರ್ಗಳಲ್ಲದೇ ಡಾಟಾ ಸ್ಟೋರೇಜ್ ಡ್ರೈವ್ಗಳು, ನೆಟ್ವರ್ಕ್ ಉಪಕರಗಳು ಇತ್ಯಾದಿ ಐಟಿ ಸಿಸ್ಟಂಗಳಿಗೆ ಬೇಕಿರುವ ಕಂಪ್ಯೂಟಿಂಗ್ ಇನ್ಫ್ರಾಸ್ಟ್ರಕ್ಚರ್ ಇರುತ್ತದೆ. ಅಂದರೆ ಡಾಟಾ ಸೆಂಟರ್ನಲ್ಲಿ ಒಂದಕ್ಕಿಂತ ಹೆಚ್ಚು ಸರ್ವರ್ಗಳನ್ನು ಇರಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ