ನವದೆಹಲಿ, ಮಾರ್ಚ್ 12: ಭಾರತದ ಗ್ರಾಹಕ ಬೆಲೆ ಅನುಸೂಚಿ ಆಧಾರಿತ ರೀಟೇಲ್ ಹಣದುಬ್ಬರ (Retail Inflation) ಫೆಬ್ರುವರಿಯಲ್ಲಿ ಶೇ. 3.61ರಷ್ಟಿದೆ. ಇದು ಸರ್ಕಾರ ಹಾಗೂ ವಿವಿಧ ಆರ್ಥಿಕ ತಜ್ಞರು ಮಾಡಿದ್ದ ನಿರೀಕ್ಷೆಗಿಂತಲೂ ಕಡಿಮೆ ದರವಾಗಿದೆ. ಹಿಂದಿನ ತಿಂಗಳಾದ ಜನವರಿಯಲ್ಲಿ ಹಣದುಬ್ಬರ ಶೇ. 4.31ರಷ್ಟಿತ್ತು. ಹಿಂದಿನ ವರ್ಷದ ಫೆಬ್ರುವರಿಯಲ್ಲಿ ಹಣದುಬ್ಬರ ದರ ಶೇ. 5.09 ಇತ್ತು. ಅದಕ್ಕೆ ಹೋಲಿಸಿದರೆ ಈ ಫೆಬ್ರುವರಿಯಲ್ಲಿ ಹಣದುಬ್ಬರ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಸರ್ಕಾರ ಇಂದು ಬುಧವಾರ ಈ ದತ್ತಾಂಶ ಬಿಡುಗಡೆ ಮಾಡಿದೆ. ಶೇ. 3.61ರ ಹಣದುಬ್ಬರವು ಕಳೆದ ಏಳು ತಿಂಗಳಲ್ಲೇ ಕನಿಷ್ಠ ದರ ಎನಿಸಿದೆ.
ಕಳೆದ ಕೆಲ ದಿನಗಳ ಹಿಂದೆ ನಡೆದ ವಿವಿಧ ಪೋಲ್ಗಳಲ್ಲಿ ಹಣದುಬ್ಬರ ಫೆಬ್ರುವರಿಯಲ್ಲಿ ಶೇ. 3.50ರಿಂದ ಶೇ. 4.50ರವರೆಗೂ ಇರಬಹುದು ಎನ್ನುವ ಅಭಿಪ್ರಾಯ ಬಂದಿತ್ತು. ರಾಯ್ಟರ್ಸ್ ಪೋಲ್ನಲ್ಲಿ ಆರ್ಥಿಕ ತಜ್ಞರ ಸರಾಸರಿ ಅಭಿಪ್ರಾಯ ಶೇ. 3.98ರಷ್ಟು ಹಣದುಬ್ಬರ ಇರಬಹುದು ಎಂದಿತ್ತು. ಅದೇ ಸಿಎನ್ಬಿಸಿ ನಡೆಸಿದ ಸಮೀಕ್ಷೆಯಲ್ಲಿ ಹಣದುಬ್ಬರ ಶೇ. 3.85ರಷ್ಟಿರಬಹುದು ಎನ್ನುವ ಅಂದಾಜು ಸಿಕ್ಕಿತ್ತು.
ಇದನ್ನೂ ಓದಿ: 1929ರಲ್ಲಿ ಷೇರುಪೇಟೆ ಮಹಾಕುಸಿತದ ಪರಿಣಾಮ ಭೀಕರ; ಈ ಬಾರಿ ಅದನ್ನೂ ಮೀರಿಸಿದ ಕುಸಿತವಾ?
ಆಹಾರವಸ್ತುಗಳ ಬೆಲೆಗಳು ಗಣನೀಯವಾಗಿ ಇಳಿಕೆ ಆಗಿರುವುದು ಫೆಬ್ರುವರಿಯಲ್ಲಿ ಒಟ್ಟಾರೆ ರೀಟೇಲ್ ಹಣದುಬ್ಬರ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಜನವರಿಯಲ್ಲಿ ಶೇ 6.02ರಷ್ಟಿದ್ದ ಆಹಾರ ಹಣದುಬ್ಬರ ಫೆಬ್ರುವರಿಯಲ್ಲಿ ಶೇ. 3.75ಕ್ಕೆ ಇಳಿದಿದೆ. ತರಕಾರಿಗಳ ಬೆಲೆಯಂತೂ ಗಣನೀಯವಾಗಿ ತಗ್ಗಿದೆ. ಜನವರಿಯಲ್ಲಿ ಶೇ 11.35ರಷ್ಟು ಹೆಚ್ಚಾಗಿದ್ದ ತರಕಾರಿ ಬೆಲೆ ಈಗ ಶೇ. 1.07ಕ್ಕೆ ಇಳಿದಿದೆ.
ನಗರ ಭಾಗದಲ್ಲಿ ಹಣದುಬ್ಬರವು ಶೇ 3.87ರಷ್ಟು ಇದ್ದದ್ದು ಶೇ. 3.32ಕ್ಕೆ ಇಳಿದಿದೆ. ಗ್ರಾಮೀಣ ಭಾಗದ ಹಣದುಬ್ಬರವು ಶೇ. 4.59ರಿಂದ ಶೇ. 3.79ಕ್ಕೆ ಇಳಿದಿದೆ.
ಇದನ್ನೂ ಓದಿ: ಪಿಎಂ ಸೂರ್ಯಘರ್: ಕೇವಲ 13 ತಿಂಗಳಲ್ಲಿ 10 ಲಕ್ಷ ಮೈಲಿಗಲ್ಲು ಮುಟ್ಟಿದ ರೂಫ್ಟಾಪ್ ಸೋಲಾರ್ ಸ್ಕೀಮ್
ಫೆಬ್ರುವರಿಯಲ್ಲಿ ಹಣದುಬ್ಬರ ಇಳಿಕೆ ಆಗಬಹುದು ಎಂದು ಆರ್ಬಿಐ ನಿರೀಕ್ಷಿಸಿತ್ತು. ಆದರೆ, ಇಷ್ಟೊಂದು ಕಡಿಮೆ ಆಗುವ ನಿರೀಕ್ಷೆ ಇರಲಿಲ್ಲ. ಮುಂಬರುವ ಹಣಕಾಸು ವರ್ಷದಲ್ಲಿ ಹಣದುಬ್ಬರ ಕೆಳಮಟ್ಟದಲ್ಲೇ ಇರಬಹುದು ಎಂದೂ ಆರ್ಬಿಐ ನಿರೀಕ್ಷಿಸಿದೆ. 2025-26ರಲ್ಲಿ ಹಣದುಬ್ಬರ ಶೇ. 4.2ರಷ್ಟಿರಬಹುದು ಎಂಬುದು ಅದರ ಅಂದಾಜು. ಒಟ್ಟಾರೆ ಹಣದುಬ್ಬರ ಶೇ. 4ರಷ್ಟು ಇರಬೇಕು ಎಂದು ಗುರಿ ನಿಗದಿ ಮಾಡಿರುವ ಆರ್ಬಿಐ, ತಾಳಿಕೆ ಮಿತಿಯಾಗಿ ಶೇ 2ರಿಂದ 6ರ ದರವನ್ನು ನಿಗದಿ ಮಾಡಿದೆ. ಅಂದರೆ, ಹಣದುಬ್ಬರವು ಈ ವ್ಯಾಪ್ತಿಯೊಳಗೇ ಇರುವಂತೆ ಹೇಗಾದರೂ ಮಾಡಿ ನೋಡಿಕೊಳ್ಳಬೇಕು ಎನ್ನುವುದು ಆರ್ಬಿಐನ ಟಾರ್ಗೆಟ್.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ