Edible Oil Price: ಅಡುಗೆಮನೆಗೆ ತಟ್ಟಿದ ಉಕ್ರೇನ್ ಸಂಘರ್ಷದ ಬಿಸಿ: ಖಾದ್ಯತೈಲದ ಬೆಲೆ ಶೇ 60ರಷ್ಟು ಏರಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 08, 2022 | 1:48 PM

ಬೆಲೆ ಏರಿಕೆಗೆ ಕಡಿವಾಣ ಹಾಕಲೆಂದು ಕೇಂದ್ರ ಸರ್ಕಾರ ತೆಗೆದುಕೊಂಡಿದ್ದ ಕ್ರಮಗಳು ಇನ್ನೇನು ಫಲ ನೀಡಲಿವೆ ಎನ್ನುವ ಹಂತದಲ್ಲಿ ಆರಂಭವಾದ ರಷ್ಯಾ-ಉಕ್ರೇನ್ ಸಂಘರ್ಷ ಖಾದ್ಯ ತೈಲಗಳ ಬೆಲೆಯ ಮೇಲೆ ಮತ್ತೆ ಬೆಲೆಏರಿಕೆಯ ಕಾರ್ಮೋಡ ಕವಿಯುವಂತೆ ಮಾಡಿವೆ.

Edible Oil Price: ಅಡುಗೆಮನೆಗೆ ತಟ್ಟಿದ ಉಕ್ರೇನ್ ಸಂಘರ್ಷದ ಬಿಸಿ: ಖಾದ್ಯತೈಲದ ಬೆಲೆ ಶೇ 60ರಷ್ಟು ಏರಿಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಷ್ಯಾ-ಉಕ್ರೇನ್ ಬಿಕ್ಕಟ್ಟಿನ (Russia Ukraine Crisis) ಹಿನ್ನೆಲೆಯಲ್ಲಿ ಭಾರತದಲ್ಲಿ ಖಾದ್ಯತೈಲದ ಬೆಲೆ ಸತತ ಏರಿಕೆ ಕಾಣುತ್ತಿದೆ. ಹೆಚ್ಚು ಜನರು ಅಡುಗೆಗೆ ಬಳಕೆ ಮಾಡುವ ಕಡ್ಲೆಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ತಾಳೆ ಎಣ್ಣೆಗಳ ಬೆಲೆ ಗಗನಕ್ಕೇರಿದೆ. ಕೊವಿಡ್ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದೀಚೆಗೆ ಎಣ್ಣೆ ಬೀಜಗಳ ದೇಶೀಯ ಉತ್ಪಾದನೆ ಕಡಿಮೆಯಾಗಿತ್ತು. ಎಣ್ಣೆ ಉತ್ಪಾದನೆ ಕುಂಠಿತಗೊಂಡ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಯಿತು. ಬೆಲೆ ಏರಿಕೆಗೆ ಕಡಿವಾಣ ಹಾಕಲೆಂದು ಕೇಂದ್ರ ಸರ್ಕಾರ ತೆಗೆದುಕೊಂಡಿದ್ದ ಕ್ರಮಗಳು ಇನ್ನೇನು ಫಲ ನೀಡಲಿವೆ ಎನ್ನುವ ಹಂತದಲ್ಲಿ ಆರಂಭವಾದ ರಷ್ಯಾ-ಉಕ್ರೇನ್ ಸಂಘರ್ಷ ಖಾದ್ಯ ತೈಲಗಳ ಬೆಲೆಯ ಮೇಲೆ ಮತ್ತೆ ಬೆಲೆಏರಿಕೆಯ ಕಾರ್ಮೋಡ ಕವಿಯುವಂತೆ ಮಾಡಿವೆ.

ಖಾದ್ಯತೈಲದ ಬೆಲೆ ನಿಯಂತ್ರಣಕ್ಕೆಂದು ಅಡುಗೆ ಎಣ್ಣೆ ಮತ್ತು ಎಣ್ಣೆ ಬೀಜಗಳನ್ನು ಆಮದು ಮಾಡಿಕೊಳ್ಳಲು ಇದ್ದ ತೆರಿಗೆಯ ಮೇಲೆ ಭಾರತ ಸರ್ಕಾರವು ರಿಯಾಯ್ತಿ ಘೋಷಿಸಿತು. ಸೋಯಾಬಿನ್ ಎಣ್ಣೆ, ತಾಳೆ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲೆ ಅಕ್ಟೋಬರ್ 2021ರ ವೇಳೆಗೆ ಸಂಪೂರ್ಣ ತೆರಿಗೆ ಮನ್ನಾ ಆಗಿತ್ತು. ತಾಳೆ ಎಣ್ಣೆಯನ್ನು ನಿರ್ಬಂಧಿತ ವಲಯದಿಂದ ಮುಕ್ತ ವಲಯಕ್ಕೆ ತಂದಿತ್ತು. ಖಾದ್ಯತೈಲ ವಿಚಾರದಲ್ಲಿ ದೇಶವನ್ನು ಸ್ವಾವಲಂಬಿ ಮಾಡುವ ದೃಷ್ಟಿಯಿಂದ ‘ರಾಷ್ಟ್ರೀಯ ಖಾದ್ಯತೈಲ ಮಂಡಳಿ’ (National Edible Oil Mission – NEOM) ಆರಂಭಿಸಿ ಎಣ್ಣೆ ಬೀಜಗಳನ್ನು ಬೆಳೆಯುವವರಿಗೆ ಸಾಕಷ್ಟು ಪ್ರೋತ್ಸಾಹಕಗಳನ್ನೂ ಘೋಷಿಸಲಾಯಿತು.

ಆದರೆ ಬೆಲೆಯೇರಿಕೆ ಮಾತ್ರ ನಿಯಂತ್ರಣಕ್ಕೆ ಬರಲಿಲ್ಲ. ಜನವರಿ 2020ರಲ್ಲಿ ಒಂದು ಲೀಟರ್ ಕಡ್ಲೆಕಾಯಿ ಎಣ್ಣೆಯ ಬೆಲೆ ₹ 107 ಇತ್ತು. ಇದು 2020ರ ವೇಳೆಗೆ ₹ 149ಕ್ಕೆ, ಡಿಸೆಂಬರ್ 2021ರಲ್ಲಿ ಈ ಮೊತ್ತ ₹ 164ಕ್ಕೆ ಏರಿಕೆಯಾಯಿತು. ಇದೀಗ ರಷ್ಯಾ-ಉಕ್ರೇನ್ ಸಂಘರ್ಷ ಆರಂಭವಾದ ನಂತರ ಸೂರ್ಯಕಾಂತಿ ಎಣ್ಣೆಯ ಪೂರೈಕೆ ಜಾಲ ತುಂಡಾಗಿರುವುದರಿಂದ ಕಡ್ಲೆಕಾಯಿ ಎಣ್ಣೆಯ ಬೆಲೆ ಮತ್ತೆ ಹೆಚ್ಚಾಗುತ್ತಿದೆ.

ಸೂರ್ಯಕಾಂತಿ ಎಣ್ಣೆಯ ಬೆಲೆ ಏರಿಕೆ

ರಷ್ಯಾ-ಉಕ್ರೇನ್ ಸಂಘರ್ಷ ಆರಂಭವಾದ ನಂತರ, ಅದರಲ್ಲೂ ಕಳೆದ 7 ದಿನಗಳಲ್ಲಿ ಸೂರ್ಯಕಾಂತಿ ಎಣ್ಣೆಯ ಸರಾಸರಿ ಬೆಲೆ ಶೇ 6.15ರಷ್ಟು ಏರಿಕೆಯಾಗಿದೆ. ಕಳೆದ 30 ದಿನಗಳಲ್ಲಿ ಈ ಪ್ರಮಾಣ ಶೇ 11.38ರಷ್ಟು ಏರಿಕೆಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತವು 22 ಲಕ್ಷ ಟನ್ ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಂಡಿತ್ತು. ಇದರಲ್ಲಿ ಶೇ 80ರಷ್ಟು ಉತ್ಪನ್ನ ಉಕ್ರೇನ್ ದೇಶ ಒಂದರಲ್ಲೇ ಬಂದಿತ್ತು. ಆದರೆ ಈಗ ಉಕ್ರೇನ್​ನಿಂದ ಬರುತ್ತಿದ್ದ ಸೂರ್ಯಕಾಂತಿ ಎಣ್ಣೆ ನಿಂತು ಹೋಗಿದೆ.

ಭಾರತದಲ್ಲಿಯೂ ಈ ವರ್ಷ ಸೂರ್ಯಕಾಂತಿ ಬೆಳೆ ಹಾಳಾಗಿದೆ. ದೇಶೀಯ ಉತ್ಪಾದನೆಯೂ ಕುಂಠಿತವಾಗಿರುವುದರಿಂದ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಸರ್ಕಾರ ತುರ್ತಾಗಿ ಬೆಂಬಲ ಘೋಷಣೆ ಮತ್ತು ಇತರ ಕ್ರಮಗಳಿಂದ ದೇಶೀಯ ಉತ್ಪಾದನೆ ಹೆಚ್ಚಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ರೈತ ನಾಯಕ ರಾಜು ಶೆಟ್ಟಿ ಹೇಳುತ್ತಾರೆ.

ನಮ್ಮ ದೇಶದಲ್ಲಿ ಸೂರ್ಯಕಾಂತಿಯನ್ನು ಮುಂಗಾರಿನಲ್ಲಿ ಬೆಳೆಯುತ್ತಾರೆ. ಈ ವರ್ಷದ ಬೆಳೆ ಹೇಗೂ ಮುಗಿದಿದೆ. ಮುಂದಿನ ಎರಡು ತಿಂಗಳಲ್ಲಿ ಬಿತ್ತನೆ ಆರಂಭವಾಗಲಿದೆ. ಈ ಹಂತದಲ್ಲಿ ಸರ್ಕಾರ ಚುರುಕಾದರೆ ದೇಶೀಯ ಉತ್ಪಾದನೆ ಹೆಚ್ಚಿಸಲು ಸಾಧ್ಯವಿದೆ. ಆರಂಭದಲ್ಲೇ ಬೆಂಬಲ ಬೆಲೆ ಘೋಷಿಸಿದರೆ ರೈತರಿಗೂ ಬೆಲೆ ಖಾತ್ರಿ ಸಿಕ್ಕಂತೆ ಆಗುತ್ತದೆ ಎನ್ನುತ್ತಾರೆ ಮತ್ತೋರ್ವ ರೈತ ನಾಯಕ ಪುಷ್ಪೇಂದ್ರ ಸಿಂಗ್.

ದೇಶದಲ್ಲಿ ಎಣ್ಣೆಕಾಳುಗಳ ಬೆಳೆ ಹೆಚ್ಚಾಗುವುದು ಇದೀಗ ರಾಷ್ಟ್ರೀಯ ಹಿತಾಸಕ್ತಿ ಎನಿಸಿಕೊಂಡಿದೆ. ಇದರಿಂದ ಕೃಷಿ ಕ್ಷೇತ್ರಕ್ಕೆ ಕಾಯಕಲ್ಪ ಸಿಗುವುದರೊಂದಿಗೆ ಅಮೂಲ್ಯ ವಿದೇಶಿ ಮೀಸಲು ನಿಧಿಯ ಉಳಿತಾಯವೂ ಸಾಧ್ಯವಾಗುತ್ತದೆ.

ತೆಂಗಿನ ಎಣ್ಣೆಗೆ ಬೆಲೆ ಏರಿಕೆ ನಿರೀಕ್ಷೆ

ಇಷ್ಟು ದಿನದ ಸೂರ್ಯಕಾಂತಿ ಮತ್ತು ತಾಳೆ ಎಣ್ಣೆ ಅಗ್ಗದ ದರದಲ್ಲಿ ಸಿಗುತ್ತಿದ್ದ ಕಾರಣ ಭಾರತದ ಸಾಂಪ್ರದಾಯಿಕ ಖಾದ್ಯ ತೈಲ ಎನಿಸಿದ್ದ ತೆಂಗಿನ ಎಣ್ಣೆ ಬೆಲೆ ಕುಸಿದಿತ್ತು. ಆದರೆ ಇದೀಗ ರಷ್ಯಾ-ಉಕ್ರೇನ್ ಸಂಘರ್ಷದ ಕಾರಣದಿಂದಾಗಿ ಸೂರ್ಯಕಾಂತಿ ಎಣ್ಣೆಯ ಬೆಲೆ ಹೆಚ್ಚಾಗುತ್ತಿದೆ. ಮಲೇಷಿಯಾ ಸರ್ಕಾರ ತಾಳೆ ಎಣ್ಣೆ ರಫ್ತಿಗೆ ನಿರ್ಬಂಧಗಳನ್ನು ಹೇರಿದೆ. ಸೂರ್ಯಕಾಂತಿ ಎಣ್ಣೆ ಮತ್ತು ತಾಳೆ ಎಣ್ಣೆ ದುರ್ಲಭವಾಗುವ ನಿರೀಕ್ಷೆ ಇರುವುದರಿಂದ ದೇಶೀಯವಾಗಿ ಉತ್ಪಾದನೆಯಾಗುವ ಕಡ್ಲೆಕಾಯಿ ಎಣ್ಣೆಯ ಧಾರಣೆಯೂ ಹೆಚ್ಚುತ್ತಿದೆ. ಹೀಗಾಗಿ ಜನರಿಗೆ ಸಾಂಪ್ರದಾಯಿಕ ತೆಂಗಿನ ಎಣ್ಣೆಯ ಬಳಕೆಯ ಕಡೆ ಮತ್ತೆ ಒಲವು ಹೆಚ್ಚಾಗುವ ನಿರೀಕ್ಷೆಯಿದ್ದು, ತೆಂಗಿನ ಎಣ್ಣೆಯ ಬೆಲೆಯೂ ಹೆಚ್ಚಾಗಲಿದೆ. ಪ್ರಸ್ತುತ ಒಂದು ಲೀಟರ್ ತೆಂಗಿನ ಎಣ್ಣೆಯ ಬೆಲೆ ಸುಮಾರು ₹ 300ರ ಆಸುಪಾಸಿನಲ್ಲಿದೆ.

ಸರಾಸರಿ ಬೆಲೆ ಏರಿಕೆ ವಿವರ (ರೂಪಾಯಿಗಳಲ್ಲಿ)

ಸಾಮಾನ್ಯ ಅಡುಗೆ ಎಣ್ಣೆ: 130-185, ದೀಪಂ ಎಣ್ಣೆ: 135-180, ಗೋಲ್ಡ್​​ ವಿನ್ನರ್: 130-170, ಸನ್​ಪ್ಯೂರ್ ಆಯಿಲ್: 130-170, ಫ್ರೀಡಂ ಆಯಿಲ್: 135-175, ಓಂ ಆಯಿಲ್: 140-180, ಜೆಮಿನಿ ಆಯಿಲ್: 140-185, ರುಚಿಗೋಲ್ಡ್​​ ಆಯಿಲ್: 125-155, ಫಾರ್ಚುನ್​ ಆಯಿಲ್: 135-175.

ಬೆಲೆ ಏರಿಕೆ ಸರಾಸರಿ (ಶೇಕಡಾವಾರು)

ಕಚ್ಚಾ ತೈಲ: ಶೇ 25, ತಾಳೆ ಎಣ್ಣೆ: ಶೇ 13, ಸೋಯಾಬೀನ್ ಎಣ್ಣೆ: ಶೇ 9.2, ತಾಮ್ರ: ಶೇ 3, ಕೃಷಿ ಉತ್ಪನ್ನ: ಶೇ 4, ಅಲ್ಯುಮಿನಿಯಂ: ಶೇ 8, ಇತರ ಲೋಹಗಳು ಶೇ 5, ಚಿನ್ನ: ಶೇ 10, ಬೆಳ್ಳಿ: ಶೇ 2. ಫೆಬ್ರುವರಿ 24ರಂದು 22 ಕ್ಯಾರೆಟ್ ಚಿನ್ನದ ಧಾರಣೆ ಗ್ರಾಂಗೆ ₹ 4,450 ಇತ್ತು. ಆದರೆ ಮಾರ್ಚ್​ 3ರಂದು ಇದು ₹ 4,950ಕ್ಕೆ ಮುಟ್ಟಿತು. ದೇಶದಲ್ಲಿ ಪೆಟ್ರೋಲ್ ಬೆಲೆ ಸದ್ಯ ಒಂದು ಲೀಟರ್​ಗೆ ₹ 100.58, ಡೀಸೆಲ್ ಬೆಲೆ ₹ 85.01 ಇದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ₹ 115ರಿಂದ 122ಕ್ಕೆ ಹಾಗೂ ಡೀಸೆಲ್​₹ 100ರಿಂದ 105ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: ರಷ್ಯಾ ಮತ್ತು ಉಕ್ರೇನ್ ನಡುವೆ ಮಧ್ಯಸ್ಥಿಕೆಗೆ ಮುಂದಾದ ಭಾರತ: ಪುಟಿನ್ ಮತ್ತು ಝೆಲೆನ್​ಸ್ಕಿ ಮಧ್ಯೆ ಸಂಧಾನಕ್ಕೆ ಮೋದಿ ಪ್ರಸ್ತಾವ

ಇದನ್ನೂ ಓದಿ: ಉಕ್ರೇನ್​ನಲ್ಲಿ ಫಲಕೊಡುತ್ತಿದೆ ಎಂಜಿಆರ್ ತಂತ್ರ: ಉಕ್ರೇನ್​ ಅಧ್ಯಕ್ಷ ಝೆಲೆನ್​ಸ್ಕಿ ಬದುಕಿನ ಮೇಲೆ ತಮಿಳುನಾಡಿನ ಎಂಜಿಆರ್ ಛಾಯೆ