ಚಿನ್ನ ಅಂದ್ರೆ ಆಪತ್ಕಾಲಕ್ಕಾಗುವ ರಮಣ ಅಂತಾರೆ ಶರವಣ

‘ಚಿನ್ನದ ಬೆಲೆ ಹತ್ತೇ ವರ್ಷಗಳಲ್ಲಿ ಭರ್ಜರಿ ಏರಿಕೆಯಾಗಿದೆ. ರಿಯಲ್ ಎಸ್ಟೇಟ್​, ಆಟೋಮೊಬೈಲ್, ಮ್ಯೂಚ್ಯುವಲ್ ಫಂಡ್​, ಷೇರು ಮಾರುಕಟ್ಟೆ ಸೇರಿ ಇನ್ಯಾವುದೇ ಕ್ಷೇತ್ರಗಳಲ್ಲೂ ಇಷ್ಟು ವೇಗವಾಗಿ ಬೆಲೆ ಏರಿಲ್ಲ’.

  • TV9 Web Team
  • Published On - 16:14 PM, 21 Jan 2021
ಚಿನ್ನ ಅಂದ್ರೆ ಆಪತ್ಕಾಲಕ್ಕಾಗುವ ರಮಣ ಅಂತಾರೆ ಶರವಣ
ಪ್ರಾತಿನಿಧಿಕ ಚಿತ್ರ

ಚಿನ್ನದಲ್ಲಿ ಹೂಡಿಕೆ ಮಾಡ್ತೀವಿ ಎಂದು ಹೊರಟವರಿಗೆ ದಾರಿಗಳು ನೂರಾರು. ಆದರೆ ಎಲ್ಲ ಆಯ್ಕೆಗಳಿಗಿಂತಲೂ ಆಭರಣ ಖರೀದಿಯೇ ಉತ್ತಮ ಎನ್ನುತ್ತಾರೆ ಕರ್ನಾಟಕ ಜ್ಯುವೆಲರಿ ಅಸೋಸಿಯೇಶನ್​ ಅಧ್ಯಕ್ಷ ಟಿ.ಎ.ಶರವಣ. ಆಭರಣ ಖರೀದಿಗೆ ಹೇಗೆ ಲಾಭದಾಯಕ ಎಂಬುದಕ್ಕೆ ಶರವಣ ನೀಡುವ ಕಾರಣಗಳಿವು…

ಇಟಿಎಫ್​ ಇರಲಿ, ಸಾವರಿನ್ ಗೋಲ್ಡ್ ಬಾಂಡ್​ ಇರಲಿ, ಉಳಿದ ಏನೇ ಡಿಜಿಟಲ್​ ಸ್ಕೀಮ್​ಗಳಿರಲಿ… ಅವೆಲ್ಲ ಪೇಪರ್​ ಗೋಲ್ಡ್​ಗಳು. ಪೇಪರ್​ ಚಿನ್ನಕ್ಕೂ, ಭೌತಿಕ ಚಿನ್ನಕ್ಕೂ ಅಜಗಜಾಂತರ ವ್ಯತ್ಯಾಸ ಇದ್ದೇ ಇರುತ್ತದೆ. ನಾವು ಚಿನ್ನಾಭರಣಗಳನ್ನು ಧರಿಸಿದಾಗ, ಅದು ನಮ್ಮ ಕಣ್ಣೆದುರು ಇದ್ದಾಗ ಸಿಗುವ ಖುಷಿ, ಪೇಪರ್​ ಚಿನ್ನದಿಂದ ಸಿಗುವುದಿಲ್ಲ. ಸಾವರಿನ್​ ಗೋಲ್ಡ್ ಬಾಂಡ್​, ಇಟಿಎಫ್​ಗಳಂಥ ಹೂಡಿಕೆಗಳನ್ನು ಮಧ್ಯಮವರ್ಗದವರು ಇಷ್ಟಪಡೋದಿಲ್ಲ. ನಮ್ಮಲ್ಲೂ ಸ್ವಲ್ಪ ಚಿನ್ನ ಇರಲಿ ಎಂದೇ ನಮ್ಮ ಜನ ಭಾವಿಸುತ್ತಾರೆ. ಮಗು ಹುಟ್ಟಿದಾಗ ಮಾಡುವ ನಾಮಕರಣದಿಂದ ಹಿಡಿದು, ಮದುವೆ ಸೇರಿ ಇನ್ಯಾವುದೇ ಶುಭಕಾರ್ಯಕ್ಕೂ ಚಿನ್ನ, ಬೆಳ್ಳಿ ಇರಬೇಕು ಎಂದು ಜನರು ಆಸೆಪಡುತ್ತಾರೆ. ನಮ್ಮಲ್ಲಿ ಚಿನ್ನ ಅವಶ್ಯಕ ಮತ್ತು ಅನಿವಾರ್ಯ!

ಚಿನ್ನಾಭರಣಗಳಲ್ಲಿ ಹೂಡಿಕೆ ಮಾಡುವುದು ಉತ್ತಮ
ಚಿನ್ನದ ಬೆಲೆ ಹತ್ತೇ ವರ್ಷಗಳಲ್ಲಿ ಭರ್ಜರಿ ಏರಿಕೆಯಾಗಿದೆ. ರಿಯಲ್ ಎಸ್ಟೇಟ್​, ಆಟೋಮೊಬೈಲ್, ಮ್ಯೂಚ್ಯುವಲ್ ಫಂಡ್​, ಷೇರು ಮಾರುಕಟ್ಟೆ ಸೇರಿ ಇನ್ಯಾವುದೇ ಕ್ಷೇತ್ರಗಳಲ್ಲೂ ಇಷ್ಟು ವೇಗವಾಗಿ ಬೆಲೆ ಏರಿಲ್ಲ.

ಚಿನ್ನದ ಬೆಲೆ 2001ರಲ್ಲಿ 10 ಗ್ರಾಂಗೆ ₹ 4300 ಇತ್ತು. 2011ರಲ್ಲಿ ಅದು ₹ 26,000ಕ್ಕೆ ಏರಿಕೆಯಾಗಿದೆ. ಹಾಗೇ 2020-21ರ ಈ ಅವಧಿಯಲ್ಲಿ ₹ 48,000ದ ಆಸುಪಾಸಿನಲ್ಲಿದೆ. ಅಂದರೆ ಚಿನ್ನದ ಬೆಲೆಯಲ್ಲಿ ವೇಗವಾಗಿ ಏರಿಕೆಯಾಗುತ್ತಿದೆ. 2001ರಿಂದಲೇ ಗಮನಿಸುತ್ತ ಬಂದರೆ ಚಿನ್ನದ ಬೆಲೆ ಪ್ರತಿವರ್ಷವೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಬಂದಿದೆ.

2001ರಲ್ಲಿ 10ಗ್ರಾಂಗೆ ₹4300 ಇತ್ತು. 2002ರಲ್ಲಿ ₹ 5000 ಆಯಿತು. 2005ರ ಹೊತ್ತಿಗೆ ₹ 7000ಕ್ಕೆ ತಲುಪಿತು. ಅಲ್ಲಿಂದಲೂ ಚಿನ್ನದ ಬೆಲೆ ವೇಗವಾಗಿ ಏರಿಕೆಯಾಗಿ, ಕಳೆದ ವರ್ಷ ಅಂದರೆ 2019ರ ಡಿಸೆಂಬರ್​, 2020ರ ಜನವರಿಯಲ್ಲಿ ₹ 35,000 ಇತ್ತು. ಅಷ್ಟರಲ್ಲಿ ಲಾಕ್​ಡೌನ್​ ಹೇರಲಾಯಿತು. ಲಾಕ್​ಡೌನ್ ಬಳಿಕ ₹ 48,000ಕ್ಕೆ ಏರಿಕೆಯಾಗಿದೆ. ಒಂದು ವರ್ಷದಲ್ಲಿ ಶೇ 40ರಷ್ಟು ಬೆಲೆ ಏರಿಕೆಯಾಗಿದೆ. ಹೀಗಿರುವಾಗ ಹೂಡಿಕೆಗೆ ಚಿನ್ನಾಭರಣಗಳು ಉತ್ತಮ ಅಲ್ಲ ಎಂದು ಹೇಗೆ ಹೇಳಲು ಸಾಧ್ಯ?

ಹೂಡಿಕೆಗೆ ಆಭರಣಗಳು ಉತ್ತಮ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕಾ? ನೀವು 5 ವರ್ಷಗಳ ಹಿಂದೆ ಕೊಂಡ ಚಿನ್ನವನ್ನು ಈಗ ಮಾರಿದರೆ ನಷ್ಟವೇನು? ಭೌತಿಕ ಚಿನ್ನದ ಮೇಲೆ ಹೂಡಿದರೆ ತಪ್ಪೇನು?

ಚಿನ್ನ ನಮ್ಮ ಸಂಸ್ಕೃತಿ
ಆಭರಣಗಳು ಅಲಂಕಾರಕ್ಕಷ್ಟೇ ಎಂದು ಭಾವಿಸುವುದು ತಪ್ಪು. ಇದರಲ್ಲಿ ಇನ್​ವೆಸ್ಟ್​ಮೆಂಟ್​ ಮಾಡಿದರೆ ನಷ್ಟವಿಲ್ಲ. ಅದರಾಚೆಗೆ ಚಿನ್ನ ನಮ್ಮ ಸಂಸ್ಕೃತಿ, ಸಂಪ್ರದಾಯವಾಗಿಬಿಟ್ಟಿದೆ. ಮಗು ಹುಟ್ಟಿದಾಗ ಮಾಡುವ ನಾಮಕರಣದಿಂದ ಹಿಡಿದು, ನಿಶ್ಚಿತಾರ್ಥ, ಮದುವೆ ಸೇರಿ ಎಲ್ಲ ಶುಭಕಾರ್ಯಗಳಲ್ಲೂ ಬಂಗಾರಕ್ಕೆ ಅದರದ್ದೇ ಆದ ಮಹತ್ವ ಇದೆ. ಮಾಂಗಲ್ಯದಲ್ಲಂತೂ ಚಿನ್ನ ಇರಲೇಬೇಕು..!

ಚಿನ್ನ ಧರಿಸಿದರೆ ಸಮಾಜ ನಮ್ಮನ್ನು ನೋಡುವ ದೃಷ್ಟಿಯೇ ಬೇರೆ. ನಮ್ಮ ಸ್ಟೇಟಸ್​ ಹೆಚ್ಚುತ್ತದೆ. ಅದೇ ಕೃತಕ ಆಭರಣಗಳನ್ನು ಧರಿಸಿದರೆ ಜನರು ನಮ್ಮನ್ನು ನೋಡುವ ದೃಷ್ಟಿಯೇ ಬೇರೆ ಆಗಿರುತ್ತದೆ. ಅದೆಷ್ಟೇ ಬಡವರಾಗಿರಲಿ ನಮ್ಮಲ್ಲಿ 2 ಗ್ರಾಂ.ಗಳಷ್ಟಾದರೂ ಬಂಗಾರವಿರಲಿ ಎಂದು ಭಾವಿಸುತ್ತಾರೆ. ಇದೇ ಕಾರಣಕ್ಕೆ ಮದುವೆ ಸಂದರ್ಭದಲ್ಲಿ ಮಾಂಗಲ್ಯದಲ್ಲಿ ಸ್ವಲ್ಪ ಪ್ರಮಾಣದಲ್ಲೂ ಚಿನ್ನ ಅಳವಡಿಸಲಾಗುತ್ತದೆ.

ಚಿನ್ನಾಭರಣಗಳ ಮಹತ್ವ ಇಷ್ಟಕ್ಕೇ ಮುಗಿಯುವುದಿಲ್ಲ. ಸಮಾಜದಲ್ಲಿ ಸ್ಟೇಟಸ್​ ತಂದುಕೊಂಡುವ ಚಿನ್ನ ಸಂಪತ್ತಿನ ಅಧಿದೇವತೆ. ಆರೋಗ್ಯಕ್ಕೂ ಒಳ್ಳೆಯದು. ಬೆಳ್ಳಿ, ಬಂಗಾರದ ಅಂಶಗಳು ಹೊಟ್ಟೆಗೆ ಹೋದರೆ ಯಾವುದೇ ಕಾಯಿಲೆಗಳೂ ಹತ್ತಿರ ಸುಳಿಯುವುದಿಲ್ಲ ಎಂಬುದು ವೈದ್ಯಕೀಯವಾಗಿಯೇ ಸಾಬೀತಾಗಿದೆ. ಅದೇ ಕಾರಣಕ್ಕೆ ಕೆಲವರು ಬೆಳ್ಳಿಯ ತಟ್ಟೆಗಳಲ್ಲಿ ಊಟ ಮಾಡುತ್ತಾರೆ, ಲೋಟದಲ್ಲಿ ಒಂದು ಚಿನ್ನದ ಕಾಯಿನ್ ಅಳವಡಿಸಿ ನೀರು ಕುಡಿಯುತ್ತಾರೆ.

ತಕ್ಷಣ ಸ್ಪಂದಿಸುವ ಚಿನ್ನ
ನಾವು ಜೀವನದಲ್ಲಿ ಸಂಕಟ ಬಂದಾಗ ವೆಂಕಟರಮಣ ಎನ್ನುತ್ತೇವೆ. ಆದರೆ ತತ್​ಕ್ಷಣಕ್ಕೆ ಸ್ಪಂದಿಸುವ ರಮಣ ಅಂತ ಇದ್ದರೆ ಅದು ಚಿನ್ನ ಮಾತ್ರ. ಇನ್ಯಾವುದೇ ಹೂಡಿಕೆಯಲ್ಲೂ ನಿಮಗೆ ತಕ್ಷಣಕ್ಕೆ ಹಣ ಸಿಗುವುದಿಲ್ಲ. ಕಷ್ಟ ಎಂದೋ, ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ಅವಶ್ಯಕತೆ ಅಥವಾ ಮನೆ ಕಟ್ಟುವ ಅಗತ್ಯಕ್ಕೆಂದು ನಿಮ್ಮ ಚಿನ್ನಾಭರಣ ಮಾರಾಟ ಮಾಡಿದರೆ ಆ ಕ್ಷಣಕ್ಕೇ ನಿಮ್ಮ ಕೈಯಲ್ಲಿ ಹಣ ಸಿಗುತ್ತದೆ. ಆದರೆ ಅನಗತ್ಯವಾಗಿ ಚಿನ್ನಾಭರಣಗಳನ್ನು ಯಾವತ್ತೂ ಖರೀದಿಸಿದ ಆರು ತಿಂಗಳು, ಒಂದು ವರ್ಷಕ್ಕೆಲ್ಲ ಮಾರಾಟ ಮಾಡಬಾರದು. ಕನಿಷ್ಠ ನಾಲ್ಕೈದು ವರ್ಷ ಕಾಯಬೇಕು. ಆಗ ಏನೂ ನಷ್ಟವಾಗುವಿದಲ್ಲ. ಆದರೆ ಕೆಲವೊಮ್ಮೆ ಅನಿವಾರ್ಯವಾಗಿ ಅವಸರವಾಗಿ ಬಂಗಾರ ಮಾರಾಟ ಮಾಡಲೇಬೇಕಾಗುತ್ತದೆ. ಸ್ವಲ್ಪ ನಷ್ಟವಾದರೂ ತತ್​ಕ್ಷಣಕ್ಕೆ ಹಣವಂತೂ ಕೈಸೇರುತ್ತದೆ.

ಅನೇಕರಿಗೆ ಒಂದೇ ಬಾರಿಗೆ ಹೆಚ್ಚು ಮೌಲ್ಯದ ಚಿನ್ನ ಖರೀದಿ ಸಾಧ್ಯವಿಲ್ಲ. ಅಂಥವರು ಸಾಧ್ಯ ಆದಾಗಲೆಲ್ಲ ಎಷ್ಟಾಗತ್ತೋ ಅಷ್ಟು ಚಿನ್ನ ಖರೀದಿ ಮಾಡಿಟ್ಟುಕೊಳ್ಳಬೇಕು. ಹೂಡಿಕೆಯೂ ಆಯಿತು, ಹಾಕಿಕೊಂಡು ಎಂಜಾಯ್ ಮಾಡುವುದಕ್ಕೂ ಆಯಿತು. ಹೆದರಿಕೆ ಬೇಡ ಚಿನ್ನದ ಬೆಲೆ ಕುಸಿಯುವುದಿಲ್ಲ. ಹಾಗೊಮ್ಮೆ ಇಳಿಕೆಯಾದರೂ ದೊಡ್ಡಮಟ್ಟದಲ್ಲಿ ಏನೂ ಆಗೋದಿಲ್ಲ. ಈಗ ₹ 48,000 ರೂ. ಇರುವ ಚಿನ್ನದ ಬೆಲೆ ಇನ್ನು ನಾಲ್ಕೈದು ವರ್ಷಗಳಲ್ಲಿ ₹ 70 ಸಾವಿರಕ್ಕೆ ಏರುತ್ತದೆ. ಮುಂದಿನ 10 ವರ್ಷಗಳಲ್ಲಿ ₹ 1 ಲಕ್ಷಕ್ಕೂ ತಲುಪಬಹುದು. ಕೆಲವರು ನಾಲ್ಕು ಸಾವಿರಕ್ಕೇ ಹೆಚ್ಚು ಎಂದು ಬಿಟ್ಟವರು ಈಗ ಇನ್ನೂ ಕಷ್ಟ ಎನ್ನುತ್ತಿದ್ದಾರೆ, ಕೆಲವರು 8000 ಇದ್ದಾಗ ಖರೀದಿಸಿ, ಅಬ್ಬಾ ಒಳ್ಳೆಯದು ಮಾಡಿದೆವು ಎನ್ನುತ್ತಿದ್ದಾರೆ. ಒಟ್ಟಾರೆ ಚಿನ್ನ ಖರೀದಿ ನಮ್ಮ ಜೀವನದಲ್ಲಿ ನಿರಂತರ ಪ್ರಕ್ರಿಯೆ. ಅದರಲ್ಲೂ ಮಹಿಳೆಯರಿಗಂತೂ ಚಿನ್ನದೊಂದಿಗೆ ಭಾವನಾತ್ಮಕ ಸಂಬಂಧವಿದೆ. ಯಾರೆಷ್ಟೇ ಪ್ರಯತ್ನ ಮಾಡಿದರೂ ಹಳದಿ ಲೋಹದ ಖರೀದಿಯನ್ನು ಯಾರಿಂದಲೂ ನಿಲ್ಲಿಸಲಾಗದು.

ಇನ್ನು ಶುದ್ಧತೆಯ ಬಗ್ಗೆ ಯಾವುದೇ ಅನುಮಾನ ಬೇಡ. ಹಿಂದಿನ ಕಾಲದಲ್ಲಿ ಮೋಸ ನಡೆಯುತ್ತಿತ್ತು. ಆದರೆ ಅದನ್ನು ತಪ್ಪಿಸಲೆಂದೇ ಕೇಂದ್ರ ಸರ್ಕಾರ ಹಾಲ್​ಮಾರ್ಕ್​ ವ್ಯವಸ್ಥೆಯನ್ನು ಹೊರತಂದಿದೆ. ಇದೀಗ ಎಲ್ಲ ಚಿನ್ನಾಭರಣಕ್ಕೂ ಹಾಲ್​ ಮಾರ್ಕ್ ಮುದ್ರೆ ಕಡ್ಡಾಯ. ಮೆಲ್ಟ್ ಮಾಡಿ ಅದರಲ್ಲಿ ಎಷ್ಟು ಕ್ಯಾರೆಟ್ ಚಿನ್ನ ಇದೆ ಎಂದು ಪರಿಶೀಲನೆ ಬಳಿಕವೇ ಮಾರಾಟ ನಡೆಯುತ್ತದೆ. ಶೇ 91.60ರಷ್ಟು ಶುದ್ಧತೆಯಿದ್ದರೆ 22 ಕ್ಯಾರೆಟ್​ ಎಂದೂ, ಶೇ 70ರಷ್ಟು ಶುದ್ಧತೆ ಇದ್ದರೆ 18 ಕ್ಯಾರೆಟ್​ ಎಂದೂ ಮುದ್ರಿಸಲಾಗುತ್ತದೆ. ಹೀಗಾಗಿ ರಾಜಮಹಾರಾಜರ ಕಾಲದಿಂದಲೂ ಮಹತ್ವ ಪಡೆದಿರುವ ಚಿನ್ನ ಅಂದಿನಿಂದಲೂ ಬಲು ಚೆನ್ನ. ಬಂಗಾರ ಬಲು ಭಾರವಿದ್ದರೂ ಬೇಡಿಕೆ ಕಡಿಮೆ ಆಗಿಲ್ಲ.

ಬಡವರು ಏನು ಮಾಡಬಹುದು?
ಬಡವರಿಗೆ ಬಂಗಾರ ಸ್ವಲ್ಪ ದುಬಾರಿಯೇ ಹೌದು. ಅವರು ಚಿನ್ನದ ಬದಲು ಬೆಳ್ಳಿಯನ್ನು ಖರೀದಿಸಬಹುದು. ಈಗಂತೂ ಬೆಳ್ಳಿಯಲ್ಲೂ ಎಲ್ಲ ರೀತಿಯ ಆಭರಣಗಳನ್ನೂ ತಯಾರಿಸಲಾಗುತ್ತಿದೆ. ಅಷ್ಟಕ್ಕೂ ಚಿನ್ನವೇ ಬೇಕು ಎಂದರೂ ಕೂಡ ಅವರಿಗಾಗಿಯೇ ಕೆಲವು ಯೋಜನೆಗಳನ್ನು ನಾವು ತರುತ್ತಿದ್ದೇವೆ. ಉದಾಹರಣೆಗೆ ನಮ್ಮ ಸಾಯಿಗೋಲ್ಡ್​ನಿಂದ ಸಾಯಿ ಸಮೃದ್ಧಿ ಉಳಿತಾಯ ಯೋಜನೆಯಿದೆ. ಇದರಲ್ಲಿ ಕನಿಷ್ಠ ₹ 1000ದಿಂದ 1 ಲಕ್ಷದವರೆಗೆ ಪ್ರತಿ ತಿಂಗಳೂ ನೀವು ನಿಮ್ಮ ಕೈಲಾದಷ್ಟು ಹೂಡಿಕೆ ಮಾಡಬಹುದು. ಇದರ ಅವಧಿ 12 ತಿಂಗಳು. ಆ12 ತಿಂಗಳ ಹೂಡಿಕೆ ಬಳಿಕ 13ನೇ ತಿಂಗಳಿಗೆ ಅದನ್ನು ಚಿನ್ನದ ರೂಪದಲ್ಲಿ ನಿಮಗೆ ಕೊಡುತ್ತೇವೆ. ಇದರ ಹೂಡಿಕೆ ಪ್ರಕ್ರಿಯೆಗಳೆಲ್ಲ ಆನ್​ಲೈನ್​ನಲ್ಲೇ ನಡೆಸಬಹುದು. ಚಿನ್ನ ಖರೀದಿಗೆ ಮಾತ್ರ ಅವರು ಬಂದರೆ ಸಾಕು.

ಚಿನ್ನದ ಕಾಯಿನ್​ಗಳಿಂದೇನು ಉಪಯೋಗ?
ಅಲಂಕಾರ ಮತ್ತು ಹೂಡಿಕೆ ಎರಡೂ ಕಾರಣಗಳಿಂದ ಆಭರಣಗಳ ಖರೀದಿಯೇ ಉತ್ತಮ. ಬರೀ ಹೂಡಿಕೆ ಎಂದಾದರೆ ಕಾಯಿನ್​ಗಳು ಇನ್ನೂ ಬೆಸ್ಟ್​. ಕಾರಣ ಅಲ್ಲಿ ಮೇಕಿಂಗ್ ಚಾರ್ಜಸ್​ ಕೇವಲ 5 ಪರ್ಸೆಂಟ್ ಇರುತ್ತದೆ. ಅದೇ ಆಭರಣಗಳಾದರೆ ಮೇಕಿಂಗ್ ಚಾರ್ಜಸ್​ ಶೇ 10 ಇರುತ್ತದೆ. ಆದರೆ ಈ ಕಾಯಿನ್​ಗಳು ಬೇರೇನೂ ಬಳಕೆಗೆ ಬರೋದಿಲ್ಲ. ಯಾರಿಗಾದರೂ ಗಿಫ್ಟ್ ಕೊಡಬಹುದು. ಅವರು ಮತ್ತೆ ಅದನ್ನು ಎಕ್ಸ್​​ಚೇಂಜ್ ಮಾಡಿ ಏನು ಬೇಕೋ ಪಡೆಯಬಹುದು ಹೊರತು ಬಳಕೆಗೆ ಬರುವುದಿಲ್ಲ.

(ನಿರೂಪಣೆ: ಲಕ್ಷ್ಮೀ ಹೆಗಡೆ)

ಟಿ.ಎ.ಶರವಣ

 

ಗೋಲ್ಡ್ ETFನಲ್ಲಿ ಹೂಡಿಕೆ ತುಂಬ ಸರಳ.. ಸಾವರಿನ್​ ಗೋಲ್ಡ್ ಬಾಂಡ್​ ಖರೀದಿ ಲಾಭದಾಯಕ

ಸಿ.ಎಸ್.ಸುಧೀರ್ ಬರಹ | ಹೂಡಿಕೆಗೆ ಚಿನ್ನ ಸರಿಯಾದ ಆಯ್ಕೆಯಲ್ಲ, ನೀವು ಬಂಗಾರ ಖರೀದಿಗೆ ಮುಂದಾದಷ್ಟೂ ದೇಶಕ್ಕೆ ಆರ್ಥಿಕ ಸಂಕಷ್ಟ ಹೆಚ್ಚು

ನೀವು ಈಗಷ್ಟೇ ಕೆಲಸಕ್ಕೆ ಸೇರಿ ಹಣ ಉಳಿಸುವ ಕುರಿತು ಯೋಚಿಸುತ್ತಿದ್ದರೆ ಈ ಲೇಖನ ಓದಿ ಬಿಡಿ..

ಕಾಸಿದ್ರೆ ಕೈಲಾಸ | 15 ಸಾವಿರ ಸಂಬಳದಲ್ಲಿ 12 ಸಾವಿರದ ಮೊಬೈಲ್ ಕೊಳ್ಳೋದು ಹೇಗೆ?