ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುವ ಪ್ರಯತ್ನ ಅರಂಭಿಸಿದೆ. ಕೊರೊನಾ ವೈರಸ್ ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ಘೋಷಿಸಿದ್ದ ಲಾಕ್ಡೌನ್ ವೇಳೆ ಮನೆಬಿಟ್ಟು ಹೊರಬರಲು ಸಾಧ್ಯವಾಗದೆ ಕಷ್ಟ ಅನುಭವಿಸುತ್ತಿದ್ದ ಗ್ರಾಹಕರಿಗೆ ನೆರವಾಗಲು ಎಸ್ಬಿಐ ಈ ಸೇವೆ ಆರಂಭಿಸಿತ್ತು. ನಂತರದ ದಿನಗಳಲ್ಲಿ ಈ ಸೇವೆ ಜನಪ್ರಿಯವಾಗಿತ್ತು.
ಬ್ಯಾಂಕ್ ಶಾಖೆಗಳಲ್ಲಿ ದೊರೆಯುವ ಪ್ರಮುಖ ಬ್ಯಾಂಕಿಂಗ್ ಸೇವೆಗಳಾದ ನಗದು/ಚೆಕ್ ಸ್ವೀಕೃತಿ, ನಗದು ವಿತರಣೆ, ಗ್ರಾಹಕರ ವಿವರ ಸಂಗ್ರಹ (ಕೆವೈಸಿ), ಚೆಕ್ಪುಸ್ತಕ ಸೇವೆಗೆ ನೋಂದಣಿ, ಫಾರಂ ನಂ 15 ಎಚ್ ಸ್ವೀಕೃತಿ, ಎಫ್ಡಿ ಪ್ರಮಾಣ ಪತ್ರ ವಿತರಣೆ, ಜೀವಂತ ಪ್ರಮಾಣ ಪತ್ರ ಸ್ವೀಕೃತಿ ಸೇರಿದಂತೆ ಹಲವು ಜನಪ್ರಿಯ ಸೇವೆಗಳನ್ನು ಎಸ್ಬಿಐ ಇದೀಗ ಮನೆಬಾಗಿಲಲ್ಲೇ ಒದಗಿಸುತ್ತಿದೆ.
ಹಲವು ಹಿರಿಯ ನಾಗರಿಕರು, ಅಂಗವಿಕಲರು, ವ್ಯಾಪಾರಿಗಳು ಈಗಾಗಲೇ ಈ ಸೇವೆ ಬಳಸಿಕೊಳ್ಳುತ್ತಿದ್ದಾರೆ. ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ ಪಡೆದುಕೊಳ್ಳುವುದು ತುಂಬಾ ಸುಲಭ. ನಿಮಗೂ ಈ ಸೇವೆ ಪಡೆದುಕೊಳ್ಳುವ ಆಸಕ್ತಿಯಿದ್ದಲ್ಲಿ ಹೀಗೆ ಮಾಡಿ.
ಎಸ್ಬಿಐನಲ್ಲಿರುವ ನಿಮ್ಮ ಅಕೌಂಟ್ಗೆ ಕೆವೈಸಿ (ಗ್ರಾಹಕರ ವಿವರ) ಸಮರ್ಪಕವಾಗಿ ಅಪ್ಡೇಟ್ ಆಗಿದೆಯೇ ಚೆಕ್ ಮಾಡಿಸಿಕೊಳ್ಳಿ. ಸಮರ್ಪಕ ಕೆವೈಸಿ ದಾಖಲೆ ಕೊಟ್ಟಿರುವವರು ಮತ್ತು ಖಾತೆ ಇರುವ ಶಾಖೆಯಿಂದ 5 ಕಿಮೀ ಅಂತರದಲ್ಲಿ ವಾಸವಿರುವವರಿಗೆ ಮಾತ್ರ ಈ ಸೇವೆ ಸಿಗುತ್ತದೆ.
ಬ್ಯಾಂಕ್ ಕಾರ್ಯನಿರ್ವಹಣೆಯ ದಿನಗಳಂದು ಬೆಳಿಗ್ಗೆ 9ರಿಂದ ಸಂಜೆ 4ರ ಒಳಗೆ ಟೋಲ್ಫ್ರೀ ಸಂಖ್ಯೆ 1800 1111 03 ಕರೆ ಮಾಡಿ, ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆಗೆ ನೋಂದಣಿ ಮಾಡಿಕೊಳ್ಳಿ. ನಿಮ್ಮ ಖಾತೆಯಿರುವ ಬ್ರಾಂಚ್ನಲ್ಲಿ ನಿಮ್ಮ ಮನವಿಯನ್ನು ನೋಂದಾಯಿಸಲಾಗುತ್ತದೆ. ಹಣಕಾಸು ವಹಿವಾಟು ಆಗಿದ್ದರೆ ₹ 100+ಜಿಎಸ್ಟಿ, ನಗದು ಅಲ್ಲದ ವಹಿವಾಟು ಆಗಿದ್ದರೆ ₹ 60+ಜಿಎಸ್ಟಿ ಶುಲ್ಕ ವಿಧಿಸಲಾಗುತ್ತದೆ. ಈ ಸೇವೆಯಡಿ ಒಂದು ದಿನದಲ್ಲಿ ₹ 20,000 ನಗದು ಜಮೆ ಅಥವಾ ಸ್ವೀಕೃತಿ ಸಾಧ್ಯ.
ಇದನ್ನೂ ಓದಿ: 4 ಬ್ಯಾಂಕ್ಗಳ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ
ಕಾರ್ಯನಿರ್ವಹಣೆ ಹೇಗೆ
1) ಈ ಸೇವೆ ಪಡೆದುಕೊಳ್ಳಲು ಇಚ್ಛಿಸುವ ಗ್ರಾಹಕರು ನಿಮ್ಮ ನೋಂದಾಯಿತ ಮೊಬೈಲ್ಸಂಖ್ಯೆಯಿಂದ 1800111103 ಸಂಖ್ಯೆಗೆ ಬೆಳಿಗ್ಗೆ 9ರಿಂದ ಸಂಜೆ 4ರ ಒಳಗೆ ನೋಂದಾಯಿಸಿಕೊಳ್ಳಿ.
2) ಕಾಲ್ ಕನೆಕ್ಟ್ ಆದ ನಂತರ ನಿಮ್ಮ ಉಳಿತಾಯ ಅಥವಾ ಚಾಲ್ತಿ ಖಾತೆಯ ಕೊನೆಯ 4 ಅಂಕಿಗಳನ್ನು ನಮೂದಿಸಬೇಕು. ಈ ಪ್ರಕ್ರಿಯೆ ಯಶಸ್ವಿಯಾದ ನಂತರ ನಿಮ್ಮ ಕರೆಯನ್ನು ಕಸ್ಟಮರ್ ಕೇರ್ ಎಕ್ಸಿಕ್ಯುಟಿವ್ ಸ್ವೀಕರಿಸುತ್ತಾರೆ. ಅಲ್ಲಿ ಮತ್ತೊಮ್ಮೆ ನಿಮ್ಮ ವಿವರಗಳನ್ನು ಪರಿಶೀಲಿಸಲಾಗುತ್ತದೆ.
3) ನೀವು ಬೆಳಿಗ್ಗೆ 9ರಿಂದ ಸಂಜೆ 5ರ ನಡುವೆ ಸೇವೆ ಪಡೆದುಕೊಳ್ಳುವ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಕೋರಿಕೆಯನ್ನು ಬ್ಯಾಂಕ್ ಒಪ್ಪಿಕೊಂಡ ನಂತರ ನಿಮ್ಮ ಮೊಬೈಲ್ಗೆ ದೃಢೀಕರಣದ ಎಸ್ಎಂಎಸ್ ಬರುತ್ತದೆ.
4) ನಿಮ್ಮ ಮನೆಗೆ ಬರುವ ಬ್ಯಾಂಕ್ ಪ್ರತಿನಿಧಿ (Doorstep Banking Agent) ನಿಮಗೆ ಕರೆ ಮಾಡಿ ಸಮಯ ನಿಗದಿಪಡಿಸಿಕೊಳ್ಳುತ್ತಾರೆ. ನಿಗದಿತ ಸಮಯದಲ್ಲಿ ಅವರು ನಿಮ್ಮ ಮನೆಗೆ ಬಂದು ತಮ್ಮ ಗುರುತಿನ ಚೀಟಿ ಮತ್ತು ಬ್ಯಾಂಕ್ನ ಅಧಿಕೃತ ಪತ್ರ ತೋರಿಸಿ ಪರಿಚಯಿಸಿಕೊಳ್ಳುತ್ತಾರೆ. ನಿಮ್ಮ ಗುರುತಿನಚೀಟಿ ಮತ್ತು ಬ್ಯಾಂಕ್ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳುತ್ತಾರೆ.
5) ಬ್ಯಾಂಕ್ ಪ್ರತಿನಿಧಿ ತಮ್ಮ ಬಳಿಯಿರುವ ಮೊಬೈಲ್ ಆ್ಯಪ್ನಲ್ಲಿ ಗ್ರಾಹಕರಿಗೆ ಬ್ಯಾಂಕ್ನಿಂದ ಬಂದಿರುವ ಎಸ್ಎಂಎಸ್ನಲ್ಲಿರುವ ಕೋಡ್ ನಮೂದಿಸುತ್ತಾರೆ. ನಂತರ ಗ್ರಾಹಕರು ಕೋರಿರುವ ಬ್ಯಾಂಕಿಂಗ್ ಸೇವೆ ಒದಗಿಸುತ್ತಾರೆ. ವಹಿವಾಟು ಪೂರ್ಣಗೊಂಡ ನಂತರ ಗ್ರಾಹಕರಿಗೆ ಮತ್ತೊಮ್ಮೆ ದೃಢೀಕರಣದ ಎಸ್ಎಂಎಸ್ ಬರುತ್ತದೆ.
ಅಪ್ರಾಪ್ತರ ಖಾತೆಗಳು, ಜಂಟಿ ಖಾತೆಗಳಿಗೆ ಈ ಸೇವೆ ಸಿಗುವುದಿಲ್ಲ. ಪಾಸ್ಬುಕ್ ಮತ್ತು ಚೆಕ್ಬುಕ್ಗಳ ಮೂಲಕ ಹಣದ ವಹಿವಾಟು ನಡೆಸಲು ಅವಕಾಶ ನೀಡಲಾಗುತ್ತದೆ. ಇದೇ ರೀತಿ ಎಚ್ಡಿಎಫ್ಸಿ, ಐಸಿಐಸಿಐ, ಆ್ಯಕ್ಸಿಸ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ಗಳು ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುತ್ತದೆ.
ಹೆಚ್ಚಿನ ಮಾಹಿತಿಗೆ ಎಸ್ಬಿಐ ವೆಬ್ಸೈಟ್ ಅಥವಾ ಕಸ್ಟಮರ್ ಕೇರ್ ಸಂಖ್ಯೆಗಳಿಗೆ 1800 1037 188 ಅಥವಾ 1800 1213 721ಗೆ ಕರೆ ಮಾಡಿ.
Our staff from Nagaon branch made sure that customers experience seamless banking service by providing them door-step cash facility. We shall fight this pandemic together.#COVID19 #Coronavirus #SBIFamily #ProudSBI pic.twitter.com/0JuI3J0hNb
— State Bank of India (@TheOfficialSBI) April 2, 2020