SBI Special FD: ಎಸ್​ಬಿಐ ವಿಶೇಷ ಎಫ್​ಡಿ ಯೋಜನೆ ಮಾರ್ಚ್ 31, 2022ರ ತನಕ ವಿಸ್ತರಣೆ

| Updated By: Srinivas Mata

Updated on: Oct 01, 2021 | 10:13 PM

ಹಿರಿಯ ನಾಗರಿಕರಿಗಾಗಿ ಇರುವ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದ ವಿಶೇಷ ಎಫ್​ಡಿ ಯೋಜನೆಯನ್ನು 2022ರ ಮಾರ್ಚ್​ ತನಕ ವಿಸ್ತರಿಸಲಾಗಿದೆ.

SBI Special FD: ಎಸ್​ಬಿಐ ವಿಶೇಷ ಎಫ್​ಡಿ ಯೋಜನೆ ಮಾರ್ಚ್ 31, 2022ರ ತನಕ ವಿಸ್ತರಣೆ
ಪ್ರಾತಿನಿಧಿಕ ಚಿತ್ರ
Follow us on

ಸಾಮಾನ್ಯವಾಗಿ ಬ್ಯಾಂಕ್​ನಲ್ಲಿ ಹಣವನ್ನು ನಿಶ್ಚಿತ ಠೇವಣಿಯಾಗಿ (Fixed Deposit) ಇಡುವುದು ಅಂದರೆ ಇವತ್ತಿಗೆ ಅಂಥ ದೊಡ್ಡ ಮಟ್ಟದ ಅನುಕೂಲ ಇಲ್ಲ. ಏಕೆಂದರೆ ಬಡ್ಡಿ ದರ ಕಡಿಮೆ ಹಾಗೂ ಅತಿ ಹೆಚ್ಚಿನ ಹಣದುಬ್ಬರದ ಕಾರಣಕ್ಕೆ ಆಕರ್ಷಕ ಎನಿಸುವಂತಿಲ್ಲ. ಆದರೂ ಭದ್ರತೆಯನ್ನು ಬಯಸುವವರಿಗೆ ಎಫ್​.ಡಿ. ಉತ್ತಮ ಆಯ್ಕೆ. ವಿಶೇಷವಾಗಿ ಹಿರಿಯ ನಾಗರಿಕರಿಗೆ ಹಾಗೂ ಹೂಡಿಕೆಯಲ್ಲಿ ಅಪಾಯ ಮೈ ಮೇಲೆ ಎಳೆದುಕೊಳ್ಳುವುದು ಬೇಡ ಅಂದುಕೊಳ್ಳುವವರಿಗೆ ಫಿಕ್ಸೆಡ್​ ಡೆಪಾಸಿಟ್​ ಅತ್ಯುತ್ತಮ ಆಯ್ಕೆ. ಕೊರೊನಾ ಬಿಕ್ಕಟ್ಟಿನ ನಂತರ ಹಲವು ಬ್ಯಾಂಕ್​ಗಳು ವಿಶೇಷ ಫಿಕ್ಸೆಡ್​ ಡೆಪಾಸಿಟ್​ ಯೋಜನೆಗಳನ್ನು ಹಿರಿಯ ನಾಗರಿಕರಿಗಾಗಿ ಪರಿಚಯಿಸಿವೆ. 60 ವರ್ಷ ಮೇಲ್ಪಟ್ಟ ವಯಸ್ಸಿನವರಿಗಾಗಿ ಹೆಚ್ಚಿನ ಬಡ್ಡಿ ದರವನ್ನು ನೀಡಲಾಗುತ್ತಿದೆ. 2020ರಲ್ಲಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಿಂದ ಹಿರಿಯ ನಾಗರಿಕರಿಗಾಗಿ ವಿಶೇಷ ಫಿಕ್ಸೆಡ್ ಡೆಪಾಸಿಟ್ ಆರಂಭಿಸಲಾಯಿತು. ಅದನ್ನು “WECARE” ಹಿರಿಯ ನಾಗರಿಕರ ಟರ್ಮ್ ಡೆಪಾಸಿಟ್ ಸ್ಕೀಮ್ ಎಂದು ಹೆಸರಿಸಲಾಯಿತು. ಮೇ 12, 2020ರಲ್ಲಿ ಆರಂಭವಾಗಿದ್ದು, ಮೊದಲಿಗೆ 2020ರ ಸೆಪ್ಟೆಂಬರ್ ತನಕ ಮಾತ್ರ ಇತ್ತು. ಆದರೆ ಕೊವಿಡ್-19 ಬಿಕ್ಕಟ್ಟಿನ ಕಾರಣಕ್ಕೆ ವಿಶೇಷ ಎಫ್​.ಡಿ. ಯೋಜನೆ ಹಲವು ಸಲ ವಿಸ್ತರಣೆ ಆಯಿತು.

“ರೀಟೇಲ್ ಟರ್ಮ್ ಡೆಪಾಸಿಟ್ ವಿಭಾಗದಲ್ಲಿ ಪರಿಚಯಿಸಲಾದ ಹಿರಿಯ ನಾಗರಿಕರ ವಿಶೇಷ ಎಸ್‌ಬಿಐ ವಿಕೇರ್ ಠೇವಣಿ 30 ಬಿಪಿಎಸ್ ಹೆಚ್ಚುವರಿ ಪ್ರೀಮಿಯಂ ಅನ್ನು (ಈಗ ಇರುವ ಹೆಚ್ಚುವರಿ 50 ಬಿಪಿಎಸ್‌ ಬಡ್ಡಿಗಿಂತ ಹೆಚ್ಚು) ಹಿರಿಯ ನಾಗರಿಕರಿಗೆ ಅವರ ರೀಟೇಲ್ ಟರ್ಮ್ ಡೆಪಾಸಿಟ್ ಅಡಿಯಲ್ಲಿ 5 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಅವಧಿಗೆ ಪಾವತಿಸಲಾಗುತ್ತದೆ. “SBI Wecare” ಠೇವಣಿ ಯೋಜನೆಯು 31 ಮಾರ್ಚ್ 2022ರವರೆಗೆ ವಿಸ್ತರಿಸಲಾಗಿದೆ,” ಎಂದು SBI ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.

ಈ ಮೊದಲು, ಐಸಿಐಸಿಐ ಬ್ಯಾಂಕ್ ತನ್ನ ಗೋಲ್ಡನ್ ಇಯರ್ಸ್ ವಿಶೇಷ ಎಫ್‌ಡಿಯನ್ನು ಹಿರಿಯರಿಗಾಗಿ ಅಕ್ಟೋಬರ್ 7, 2021ರವರೆಗೆ ವಿಸ್ತರಿಸಿತ್ತು. ಪ್ರಚಲಿತ ಬಡ್ಡಿ ದರಗಳಿಗಿಂತ 80 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿತು. ಈ ಯೋಜನೆಯು ಹಿರಿಯ ನಾಗರಿಕರಿಗೆ ಠೇವಣಿಗಳ ಮೇಲೆ ಶೇಕಡಾ 6.30 ಬಡ್ಡಿದರ ನೀಡುತ್ತದೆ. 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಮಾತ್ರ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರು. ಈ ಯೋಜನೆಯು ದೇಶೀಯ ಅವಧಿ ಠೇವಣಿ. ಆದ್ದರಿಂದ NRI ಹಿರಿಯ ನಾಗರಿಕರು ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರಲ್ಲ.

ಇದನ್ನೂ ಓದಿ: Fixed Deposits: 3ರಿಂದ 5 ವರ್ಷದ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚಿನ ಬಡ್ಡಿ ದರ ನೀಡುವ ಟಾಪ್ 5 ಬ್ಯಾಂಕ್​ಗಳಿವು