ಅಕ್ಟೋಬರ್ 4 ರಿಂದ 13ರ ವರೆಗೆ ಚುನಾವಣಾ ಬಾಂಡ್ ಮಾರಾಟ ಮಾಡಲಿದೆ ಎಸ್ಬಿಐ; ಯಾರು, ಹೇಗೆ ಖರೀದಿಸಬಹುದು? ಇಲ್ಲಿದೆ ವಿವರ
Electoral Bonds Sale; ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕಾಗಿ ವ್ಯಕ್ತಿಗಳು ಅಥವಾ ಸಂಸ್ಥೆ / ಕಂಪನಿಗಳು ಈ ಚುನಾವಣಾ ಬಾಂಡ್‌ಗಳನ್ನು ಉಪಯೋಗಿಸುತ್ತವೆ. ಎಸ್ಬಿಐ ಬ್ಯಾಂಕ್ ಅವುಗಳನ್ನು ವಿತರಿಸುತ್ತದೆ. ರಾಜಕೀಯ ನಿಧಿಗೆ ಪಾರದರ್ಶಕತೆಯನ್ನು ತರುವ ಪ್ರಯತ್ನಗಳ ಭಾಗವಾಗಿ ರಾಜಕೀಯ ಪಕ್ಷಗಳಿಗೆ ನೀಡುವ ನಗದು ದೇಣಿಗೆಗೆ ಪರ್ಯಾಯವಾಗಿ ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಲಾಗಿದೆ.
ನವದೆಹಲಿ, ಸೆಪ್ಟೆಂಬರ್ 30: ಚುನಾವಣಾ ಬಾಂಡ್‌ಗಳ (Electoral Bonds) 28ನೇ ಹಂತದ ಮಾರಾಟವನ್ನು 2023 ರ ಅಕ್ಟೋಬರ್ 4 ರಿಂದ ಆರಂಭಿಸಲಾಗುವುದು. ಅಕ್ಟೋಬರ್ 13 ರವರೆಗೆ ಚುನಾವಣಾ ಬಾಂಡ್‌ಗಳನ್ನು ಖರೀದಿಸಲು ಅವಕಾಶವಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತಿಳಿಸಿದೆ. ಬ್ಯಾಂಕ್ 29 ಅಧಿಕೃತ ಶಾಖೆಗಳ ಮೂಲಕ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದಾಗಿದೆ. 28ನೇ ಹಂತದ ಚುನಾವಣಾ ಬಾಂಡ್‌ಗಳ ಮಾರಾಟವನ್ನು 04.10.2023 ರಿಂದ 13.10.2023 ರವರೆಗೆ ಎಸ್ಬಿಐಯ 29 ಅಧಿಕೃತ ಶಾಖೆಗಳ ಮೂಲಕ ವಿತರಿಸಲು ಮತ್ತು ಎನ್‌ಕ್ಯಾಶ್ ಮಾಡಲು ಅವಕಾಶ ನೀಡಲಾಗಿದೆ ಎಂದು ಎಂದು ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.
ಚುನಾವಣಾ ಬಾಂಡ್ಗಳು ಎಂದರೇನು?
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕಾಗಿ ವ್ಯಕ್ತಿಗಳು ಅಥವಾ ಸಂಸ್ಥೆ / ಕಂಪನಿಗಳು ಈ ಚುನಾವಣಾ ಬಾಂಡ್‌ಗಳನ್ನು ಉಪಯೋಗಿಸುತ್ತವೆ. ಎಸ್ಬಿಐ ಬ್ಯಾಂಕ್ ಅವುಗಳನ್ನು ವಿತರಿಸುತ್ತದೆ. ರಾಜಕೀಯ ನಿಧಿಗೆ ಪಾರದರ್ಶಕತೆಯನ್ನು ತರುವ ಪ್ರಯತ್ನಗಳ ಭಾಗವಾಗಿ ರಾಜಕೀಯ ಪಕ್ಷಗಳಿಗೆ ನೀಡುವ ನಗದು ದೇಣಿಗೆಗೆ ಪರ್ಯಾಯವಾಗಿ ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಲಾಗಿದೆ.
ರಾಜಕೀಯ ಪಕ್ಷಗಳಿಗೆ ಹಣಕಾಸು ನೆರವು ನೀಡುವ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ 2017ರ ಹಣಕಾಸು ಕಾಯ್ದೆಯಲ್ಲಿ ಚುನಾವಣಾ ಬಾಂಡ್ ಪರಿಚಯಿಸಿತು. 2018ರಲ್ಲಿ ಚುನಾವಣಾ ಬಾಂಡ್ ಯೋಜನೆ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. 2017ರ ಬಜೆಟ್ನಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಚುನಾವಣಾ ಬಾಂಡ್‌ಗಳನ್ನು ಬಿಡುಗಡೆ ಮಾಡುವ ಯೋಜನೆ ಬಗ್ಗೆ ಘೋಷಿಸಿದ್ದರು.
ಚುನಾವಣಾ ಬಾಂಡ್‌ಗಳನ್ನು ಯಾರು, ಹೇಗೆ ಖರೀದಿಸಬಹುದು?
ಚುನಾವಣಾ ಬಾಂಡ್‌ಗಳನ್ನು ಭಾರತದ ಯಾವುದೇ ನಾಗರಿಕರು ಅಥವಾ ದೇಶದ ಸಂಘಟಿತ ಅಥವಾ ಸ್ಥಾಪಿತ ಸಂಸ್ಥೆ ಖರೀದಿಸಬಹುದು. ಒಬ್ಬ ವ್ಯಕ್ತಿಯು ಬಾಂಡ್‌ಗಳನ್ನು ಏಕಾಂಗಿಯಾಗಿ ಅಥವಾ ಇತರ ವ್ಯಕ್ತಿಗಳೊಂದಿಗೆ ಜಂಟಿಯಾಗಿ ಖರೀದಿಸಬಹುದು. ಅಸ್ತಿತ್ವದಲ್ಲಿರುವ ಎಲ್ಲಾ ಕೆವೈಸಿ ಮಾನದಂಡಗಳನ್ನು ಸರಿಯಾಗಿ ಪೂರೈಸಿದ ನಂತರ ಮತ್ತು ಬ್ಯಾಂಕ್ ಖಾತೆಯಿಂದ ಪಾವತಿ ಮಾಡುವ ಮೂಲಕ ಮಾತ್ರ ಚುನಾವಣಾ ಬಾಂಡ್ ಖರೀದಿಸಲು ಖರೀದಿದಾರರಿಗೆ ಅನುಮತಿಸಲಾಗುತ್ತದೆ. ಇದು ಪಾವತಿಸುವವರ ಹೆಸರನ್ನು ಹೊಂದಿರುವುದಿಲ್ಲ. ನಗದು ನೀಡಿ ಖರೀದಿಸಲು ಅವಕಾಶವಿಲ್ಲ. ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ದೇಣಿಗೆದಾರು ಅದನ್ನು ತನ್ನಿಚ್ಛೆಯ ರಾಜಕೀಯ ಪಕ್ಷಕ್ಕೆ ನೀಡಬಹುದು. ಅದನ್ನು ರಾಜಕೀಯ ಪಕ್ಷ 15 ದಿನಗಳ ಒಳಗಾಗಿ ಎನ್‌ಕ್ಯಾಶ್ ಮಾಡಿಕೊಳ್ಳಬೇಕು.
ಇದನ್ನೂ ಓದಿ: ಮಂಗೋಲಿಯಾದಲ್ಲಿ ಎಂಇಐಎಲ್ ಮೂರನೇ ಯೋಜನೆ; ಕಚ್ಚಾ ತೈಲ ಸಂಸ್ಕರಣಾಗಾರ ನಿರ್ಮಿಸಲು ಒಪ್ಪಂದ
ಚುನಾವಣಾ ಬಾಂಡ್ ಸ್ವೀಕರಿಸಲು ರಾಜಕೀಯ ಪಕ್ಷಕ್ಕಿರಬೇಕಾದ ಅರ್ಹತೆ ಏನು?
1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 29ಎ ಅಡಿಯಲ್ಲಿ ನೋಂದಣಿಯಾಗಿರುವ ರಾಜಕೀಯ ಪಕ್ಷ ಮಾತ್ರ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಲು ಅವಕಾಶವಿದೆ. ಅಲ್ಲದೆ, ಹಿಂದಿನ ಲೋಕಸಭೆ ಚುನಾವಣೆ ಹಾಗೂ ರಾಜ್ಯ ಚುನಾವಣೆಗಳಲ್ಲಿ ಶೇಕಡಾ 1ಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದರೆ ಅಂಥ ರಾಜಕೀಯ ಪಕ್ಷ ಚುನಾವಣಾ ಬಾಂಡ್ ಸ್ವೀಕರಿಸಲು ಅರ್ವಾಗಿರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ