ಫೆಡ್​ಎಕ್ಸ್ ಹೆಸರಲ್ಲಿ ಫೋನ್ ಕಾಲ್ ಬಂದ್ರೆ ಹುಷಾರ್..! ಲಕ್ಷಾಂತರ ಹಣ ಕಳೆದುಕೊಳ್ತೀರಿ; ಬೆಂಗಳೂರಲ್ಲಿ ಹೆಚ್ಚುತ್ತಿದೆ ಕೊರಿಯರ್ ಸ್ಕ್ಯಾಮ್

FedEx Scam: ತಮಗೆ ಬಂದಿರುವ ಪಾರ್ಸಲ್​ನಲ್ಲಿ ಮಾದಕವಸ್ತುಗಳಿರುವುದು ಕಸ್ಟಮ್ಸ್​ಗೆ ಗೊತ್ತಾಗಿದೆ. ತಮ್ಮ ಸರಕು ಏರ್​ಪೋರ್ಟ್ ಕಸ್ಟಮ್ಸ್​ನಲ್ಲಿ ಸಿಕ್ಕಿಕೊಂಡಿದೆ. ಕಾನೂನು ಕ್ರಮ ಎದುರಿಸುವುದರಿಂದ ತಪ್ಪಿಸಿಕೊಳ್ಳಲು ಇಂತಿಷ್ಟು ಲಕ್ಷ ರೂ ಕೊಡಿ ಎಂದು ಫೆಡ್​ಎಕ್ಸ್ ಉದ್ಯೋಗಿಗಳು ಮತ್ತು ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ವಂಚಕರು ಕರೆ ಮಾಡಿ ಬೆದರಿಸುತ್ತಿರುವ ಘಟನೆಗಳು ಹೆಚ್ಚುತ್ತಿವೆ.

ಫೆಡ್​ಎಕ್ಸ್ ಹೆಸರಲ್ಲಿ ಫೋನ್ ಕಾಲ್ ಬಂದ್ರೆ ಹುಷಾರ್..! ಲಕ್ಷಾಂತರ ಹಣ ಕಳೆದುಕೊಳ್ತೀರಿ; ಬೆಂಗಳೂರಲ್ಲಿ ಹೆಚ್ಚುತ್ತಿದೆ ಕೊರಿಯರ್ ಸ್ಕ್ಯಾಮ್
ವಂಚಕ ಕರೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 25, 2023 | 4:36 PM

ಬೆಂಗಳೂರು, ಆಗಸ್ಟ್ 25: ಸಿಲಿಕಾನ್ ನಗರಿಯಲ್ಲಿ ಸೈಬರ್ ಅಪರಾಧ ಘಟನೆಗಳು (Cyber Crime Incidents) ಅಗಣಿತ ರೀತಿಯಲ್ಲಿ ಹೆಚ್ಚುತ್ತಿವೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದು ಹಣ ಲಪಟಾಯಿಸುವುದು, ನಕಲಿ ಉದ್ಯೋಗ ಭರವಸೆ ನೀಡಿ ವಂಚಿಸುವುದು ಹೀಗೆ ನಾನಾ ರೀತಿಯಲ್ಲಿ ಆನ್​ಲೈನ್​ನಲ್ಲೇ ದುಷ್ಕರ್ಮಿಗಳು ವಂಚಿಸುವುದಿದೆ. ಬೆಂಗಳೂರಿನಂಥ ಚಟುವಟಿಕೆಭರಿತ ನಗರದಲ್ಲಿ ಇಂಥ ಸೈಬರ್ ಕ್ರೈಮ್​ಗಳು ಬಹಳ ಹೆಚ್ಚೇ ಆಗುತ್ತಿವೆ. ಜನರ ಅವಸರ ಬುದ್ಧಿಯನ್ನು ಅಪರಾಧಿಗಳು ತಮ್ಮ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪಾರ್ಸಲ್ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿರುವ ಘಟನೆಗಳೂ ಬೆಂಗಳೂರಿನಲ್ಲಿ ಹೆಚ್ಚುತ್ತಿವೆ. ಅದರಲ್ಲೂ ಫೆಡ್​ಎಕ್ಸ್ ಕೊರಿಯರ್ (FedEx Courier) ಹೆಸರಿನಲ್ಲಿ ಬೆಂಗಳೂರಿನಲ್ಲಿ ಹಲವು ಹಗರಣಗಳು ನಡೆದಿವೆ.

ಫೆಡೆಕ್ಸ್ ಕೊರಿಯರ್ ಪ್ರಕರಣಗಳು ಹೇಗೆ ಇರುತ್ತವೆ?

ಫೆಡ್​ಎಕ್ಸ್ ಎಂಬುದು ಕೊರಿಯರ್ ಕಂಪನಿ. ದುಷ್ಕರ್ಮಿಗಳು ಫೆಡೆಕ್ಸ್ ಕೊರಿಯರ್ ಕಂಪನಿಯ ಉದ್ಯೋಗಿಗಳ ಹೆಸರಿನಲ್ಲಿ ಜನರಿಗೆ ಕರೆ ಮಾಡುತ್ತಾರೆ. ಕಸ್ಟಮ್ಸ್ ಅಫಿಶಿಯಲ್ಸ್ ಸೇರಿದಂತೆ ವಿವಿಧ ಅಧಿಕಾರಿಗಳ ಸೋಗಿನಲ್ಲೂ ಕರೆ ಮಾಡುತ್ತಾರೆ. ಜನರಿಗೆ ಅನುಮಾನ ಬರದಿರಲೆಂದು ಐವಿಆರ್ ಸಿಸ್ಟಮ್ಸ್ ವ್ಯವಸ್ಥೆಯನ್ನೂ ಹೊಂದಿರುತ್ತಾರೆ. ಫೆಡ್​ಎಕ್ಸ್ ಉದ್ಯೋಗಿಗಳು, ಕಸ್ಟಮ್ಸ್ ಅಧಿಕಾರಿಗಳು ಮತ್ತು ಮುಂಬೈ ಪೊಲೀಸ್ ಅಧಿಕಾರಿಗಳ ಧ್ವನಿ ಅನುಕರಿಸುವ ಆಟೊಮೇಟೆಡ್ ಕಾಲ್ ಅನ್ನು ಈ ಐವಿಆರ್​ನಲ್ಲಿ ಅಳವಡಿಸಲಾಗಿರುತ್ತದೆ.

ಇದನ್ನೂ ಓದಿ: ಬಿಲ್ ಗೇಟ್ಸ್ ಬೆಂಗಳೂರಿಗೆ ಬಂದಾಗ ಎಳನೀರು ಖರೀದಿಸಿದಾಗ, ಅಂಗಡಿಯವನ ರಿಯಾಕ್ಷನ್ ಹೇಗಿತ್ತು?

ತಮಗೆ ಕಳುಹಿಸಲಾದ ಪಾರ್ಸಲ್​ವೊಂದು ಮುಂಬೈ ಏರ್​ಪೋರ್ಟ್​ನ ಕಸ್ಟಮ್ಸ್​ನಲ್ಲಿ ಸಿಕ್ಕಿಕೊಂಡಿದೆ. ಅದನ್ನು ಪರಿಶೀಲಿಸುವ ವೇಳೆ ಮಾದಕವಸ್ತು ಇತ್ಯಾದಿ ಅಕ್ರಮ ವಸ್ತುಗಳಿರುವುದು ಗೊತ್ತಾಗಿದೆ. ಇದರಿಂದ ನಿಮಗೆ ಕಾನೂನಾತ್ಮಕ ತೊಂದರೆಗಳು ಎದುರಾಗುತ್ತವೆ. ನೀವು ತಪ್ಪಿಸಿಕೊಳ್ಳಬೇಕಾದರೆ ಇಂತಿಷ್ಟು ಲಕ್ಷ ರೂ ಹಣ ಪಾವತಿಸಿ ಎಂದು ದುಷ್ಕರ್ಮಿಗಳು ಅಮಾಯಕ ಮಂದಿಗೆ ಕರೆ ಮಾಡಿ ತಿಳಿಸುತ್ತಾರೆ. ಈ ಕರೆಯಿಂದ ಕೆಲವರು ಭಯ ಪಟ್ಟು, ಮಾನ ಮರ್ಯಾದೆಗೆ ಅಂಜಿ ಹಣ ಕಳುಹಿಸುವುದಿದೆ.

ಇದಕ್ಕೆ ಬಗ್ಗದವರಿಗೆ ನಕಲಿ ಪೊಲೀಸ್ ಅಧಿಕಾರಿಯಿಂದ ಸ್ಕೈಪ್ ವಿಡಿಯೋ ಕಾಲ್ ಕೂಡ ಬರುತ್ತದೆ. ತಮಗೆ ಕಳುಹಿಸಲಾದ ಪಾರ್ಸಲ್​ನಲ್ಲಿ ಅಕ್ರಮ ವಸ್ತುಗಳಿವೆ. ತಮ್ಮ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆ ಅಧಿಕಾರಿ ವಿಡಿಯೋ ಕಾಲ್​ನಲ್ಲಿ ಬೆದರಿಕೆ ಹಾಕುತ್ತಾನೆ. ಬಳಿಕ ಆಧಾರ್, ಪ್ಯಾನ್ ನಂಬರ್ ಇತ್ಯಾದಿ ಮಾಹಿತಿ ಪಡೆಯುತ್ತಾರೆ. ಈ ಆಧಾರ್ ನಂಬರ್​ಗೆ ಜೋಡಿತವಾದ ಬ್ಯಾಂಕ್ ಖಾತೆಯನ್ನು ಅಕ್ರಮ ಹಣ ವರ್ಗಾವಣೆಗೆ ದುರ್ಬಳಕೆ ಆಗುತ್ತಿದೆ ಎಂದು ಸುಳ್ಳು ಹೇಳಿ ಹೆದರಿಸುತ್ತಾರೆ. ಮುಂದಾಗುವ ಕಾನೂನು ತೊಂದರೆಗಳನ್ನು ಊಹಿಸಿ ಜನರು ಆ ದುಷ್ಕರ್ಮಿಗಳು ಕೇಳಿದಷ್ಟು ಹಣ ಕೊಟ್ಟು ಕೈತೊಳೆದುಕೊಳ್ಳಲು ಮುಂದಾಗಬಹುದು.

ಬೆಂಗಳೂರಿನಲ್ಲಿ ಈ ವರ್ಷದಲ್ಲೇ ಇಂಥ 163 ಪ್ರಕರಣಗಳು ಬೆಳಕಿಗೆ ಬಂದಿವೆ. ಇಷ್ಟೂ ಪ್ರಕರಣಗಳಿಂದ 5 ಕೋಟಿ ರೂ ಹಣವನ್ನು ದುಷ್ಕರ್ಮಿಗಳು ಎಗರಿಸಿದ್ದಾರೆ.

ಇದನ್ನೂ ಓದಿ: AB-PMJAY Scheme: ಕೇಂದ್ರದ ಆಯುಷ್ಮಾನ್ ಭಾರತ್ ಕಾರ್ಡ್​ದಾರರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದರೆ ಮುಂದೇನು ಕ್ರಮ?

ಫೆಡ್​ಎಕ್ಸ್ ಹೆಸರಲ್ಲಿ ವಂಚಕ ಕರೆ ಬಂದರೆ ಏನು ಮಾಡಬೇಕು?

ನಿಮಗೆ ಫೆಡ್​ಎಕ್ಸ್ ಕೊರಿಯರ್ ಮೂಲಕ ಯಾವುದಾದರೂ ಪಾರ್ಸಲ್ ಬರುವುದಿದ್ದರೆ ಅದನ್ನು ಅಧಿಕೃತ ವೆಬ್​ಸೈಟ್ ಮೂಲಕವೇ ಟ್ರ್ಯಾಕ್ ಮಾಡಬಹುದು. ಆಗಂತುಕರು ಕಳುಹಿಸುವ ಎಸ್ಸೆಮ್ಮೆಸ್, ಇಮೇಲ್ ಅಥವಾ ವಾಟ್ಸಾಪ್​ಗಳಲ್ಲಿನ ಮೆಸೇಜ್​ನಲ್ಲಿನ ಲಿಂಕ್​ಗಳನ್ನು ಕ್ಲಿಕ್ ಮಾಡಲು ಹೋಗಬೇಡಿ.

ದುಷ್ಕರ್ಮಿಗಳು ಕರೆ ಮಾಡಿದಾಗ, ಅವರ ಬಗ್ಗೆ ನಿಮಗೆ ಸಂಶಯ ಬಂದರೆ ಕೂಡಲೇ ಕರೆ ಕಟ್ ಮಾಡಿ. ಇಲ್ಲದಿದ್ದರೆ ಅವರು ನಿಮ್ಮನ್ನು ಭಾವನಾತ್ಮಕವಾಗಿ ಹೈಜಾಕ್ ಮಾಡಲು ಯತ್ನಿಸಬಹುದು.

ನೀವು ಈ ಹಗರಣಕ್ಕೆ ತುತ್ತಾಗಿದ್ದರೆ ಕೂಡಲೇ 112 ಅಥವಾ 1930 ನಂಬರ್​ಗೆ ಡಯಲ್ ಮಾಡಿ ದೂರು ದಾಖಲಿಸಬಹುದು. ಅಥವಾ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಹೋಗಿ ಅಧಿಕೃತವಾಗಿ ದೂರು ಕೊಡಬಹುದು.

(ಮಾಹಿತಿ ಕೃಪೆ: ಸಿ.ಕೆ. ಬಾಬಾ, ಪೊಲೀಸ್ ಅಧಿಕಾರಿ)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ