IPO Listing Time: ಷೇರುಪೇಟೆಗೆ ಲಿಸ್ಟ್ ಆಗುವ ಕಾಲಾವಧಿ 6 ಬದಲು 3 ದಿನಕ್ಕೆ ಇಳಿಕೆ; ಸೆಬಿ ಒಪ್ಪಿಗೆ
SEBI Approves Proposal: ಐಪಿಒದಲ್ಲಿ ಬಿಕರಿಯಾದ ಷೇರು ಎಕ್ಸ್ಚೇಂಜ್ ಕೇಂದ್ರಗಳಲ್ಲಿ ಲಿಸ್ಟ್ ಆಗುವ ಕಾಲವನ್ನು 6 ದಿನಗಳಿಂದ 3 ದಿನಕ್ಕೆ ಇಳಿಸಬೇಕೆನ್ನುವ ಪ್ರಸ್ತಾವಕ್ಕೆ ಸೆಬಿ ಒಪ್ಪಿಗೆ ಸೂಚಿಸಿದೆ. ಡಿಸೆಂಬರ್ 1ರಿಂದ ಇದು ಕಡ್ಡಾಯವಾಗಲಿದೆ.
ನವದೆಹಲಿ: ಆರಂಭಿಕ ಸಾರ್ವಜನಿಕ ಕೊಡುಗೆ ಅಥವಾ ಐಪಿಒಗಳಲ್ಲಿ (IPO- Initial Public Offerings) ಮಾರಾಟವಾದ ಷೇರುಗಳನ್ನು ಬಿಎಸ್ಇ, ಎನ್ಎಸ್ಇ ಇತ್ಯಾದಿ ಷೇರುವಿನಿಮಯ ಕೇಂದ್ರಗಳಲ್ಲಿ (Stock Exchange Centers) ಲಿಸ್ಟ್ ಆಗಲು ಸದ್ಯಕ್ಕೆ 6 ದಿನಗಳಾಗುತ್ತವೆ. ಇದನ್ನು 3 ದಿನಕ್ಕೆ ಇಳಿಸಬೇಕೆನ್ನುವ ಪ್ರಸ್ತಾವವೊಂದಕ್ಕೆ ಸೆಬಿ ಅನುಮೋದನೆ ನೀಡಿದೆ. ಅಂದರೆ ಒಂದು ಐಪಿಒನ ಅವಧಿ ಮುಕ್ತಾಯಗೊಂಡು 3 ದಿನದಲ್ಲಿ ಅದರ ಷೇರುಗಳು ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಆಗಬೇಕಾಗುತ್ತದೆ. ಈ ಹೊಸ ನಿಯಮವನ್ನು ಎರಡು ಹಂತದಲ್ಲಿ ಜಾರಿಗೆ ತರಲಾಗುತ್ತಿದೆ. 2023ರ ಡಿಸೆಂಬರ್ 1ರಿಂದ ಎಲ್ಲಾ ಐಪಿಒಗಳಿಗೂ ಇದು ಕಡ್ಡಾಯವಾಗಿದೆ.
ಐಪಿಒಗಳು ಲಿಸ್ಟ್ ಆಗುವ ಕಾಲಾವಧಿಯಲ್ಲಿ ಇಳಿಕೆಯಾಗುವುದರಿಂದ ಏನು ಲಾಭ?
ಐಪಿಒಗಳ ವೇಳೆ ಮಾರಾಟವಾದ ಷೇರುಗಳನ್ನು ಎಕ್ಸ್ಚೇಂಜ್ ಕೇಂದ್ರಗಳಲ್ಲಿ ಲಿಸ್ಟ್ ಮಾಡುವ ಕಾಲಾವಧಿ 6 ದಿನದಿಂದ 3 ದಿನಕ್ಕೆ ಇಳಿಸುವ ಕ್ರಮದಿಂದ ಹೂಡಿಕೆದಾರ ಮತ್ತು ಕಂಪನಿ, ಇಬ್ಬರಿಗೂ ಲಾಭವಾಗುತ್ತದೆ. ಆಂಕರ್ ಇನ್ವೆಸ್ಟರ್ಸ್, ರಿಜಿಟ್ರಾರ್, ಟ್ರಾನ್ಸ್ಫರ್ ಏಜೆಂಟ್, ಬ್ರೋಕರ್, ಡಿಸ್ಟ್ರಿಬ್ಯೂಟರ್, ಬ್ಯಾಂಕ್ ಮೊದಲಾದವರೊಂದಿಗೆ ಸೆಬಿ ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ: TCS: ವಿದೇಶಗಳಿಗೆ ಕಳುಹಿಸುವ ಹಣಕ್ಕೆ ತೆರಿಗೆ ಹೆಚ್ಚಳ; ಹೊಸ ದರ ಜುಲೈ 1 ಬದಲು ಅಕ್ಟೋಬರ್ 1ರಿಂದ ಅನ್ವಯ
ಕಂಪನಿಗಳು ಐಪಿಒಗಳ ಮೂಲಕ ಷೇರುಗಳ ವಿತರಣೆಯಿಂದ ಸಂಗ್ರಹವಾದ ಹಣವು ಕೈಗೆ ಸಿಗುವುದು, ಆ ಷೇರುಗಳು ಸ್ಟಾಕ್ ಮಾರ್ಕೆಟ್ನಲ್ಲಿ ಲಿಸ್ಟ್ ಆದ ಬಳಿಕವಷ್ಟೇ. ಐಪಿಒ ಆಗಿ 6 ದಿನಗಳ ನಂತರ ಕಂಪನಿಗೆ ಹಣ ಬರುವುದು. ಈಗ ಹೊಸ ನಿಯಮ ಜಾರಿಯಾದರೆ ಹಣ ಬೇಗ ಬರುತ್ತದೆ.
ಹಾಗೆಯೇ, ಐಪಿಒದಲ್ಲಿ ಹಣ ತೆತ್ತು ಷೇರು ಖರೀದಿಸಿದ ಹೂಡಿಕೆದಾರರಿಗೆ ಅವರ ಷೇರುಗಳು ಬೇಗ ಕೈಗೆ ಸಿಗುತ್ತವೆ. ಐಪಿಒ ವೇಳೆ ಹಣ ತೆತ್ತರೂ ಷೇರು ಅಲಾಟ್ ಆಗದೇ ಇದ್ದವರಿಗೆ ಬೇಗ ಹಣ ವಾಪಸ್ ಆಗುತ್ತದೆ.
ಐಪಿಒ ವೇಳೆ ಹಣ ನೀಡಿದ ಖರೀದಿಸಿದ್ದರೂ ಷೇರು ಅಲಾಟ್ ಆಗದೇ ಇರಲು ಕಾರಣ ಇದೆ. ಒಂದು ಐಪಿಒದಲ್ಲಿ ಎಷ್ಟು ಮಂದಿ ಬೇಕಾದರೂ ಷೇರು ಖರೀದಿಸಬಹುದು. ಆದರೆ, ಷೇರುಗಳ ಸಂಖ್ಯೆಯಲ್ಲಿ ಮಿತಿ ಇರುತ್ತದೆ. ಷೇರುಗಳ ಸಂಖ್ಯೆಗಿಂತ ಹೆಚ್ಚು ಮಂದಿ ಅರ್ಜಿ ಹಾಕಿದ್ದರೆ ಆಗ ರಿಜಿಸ್ಟ್ರಾರ್ನಿಂದ ಲಾಟರಿ ಮೂಲಕ ಷೇರುಗಳನ್ನು ಹಂಚಿಕೆ ಮಾಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ