ಷೇರು ಮಾರುಕಟ್ಟೆಯಲ್ಲಿ ಎಫ್ ಅಂಡ್ ಒ ವ್ಯವಹಾರಕ್ಕೆ ಕಡಿವಾಣ ಹಾಕಲು ಸೆಬಿ ಕ್ರಮ; ಹೊಸ ನಿಯಮಗಳು ಸದ್ಯದಲ್ಲೇ ಜಾರಿ

SEBI looking to curb Futures and Options trading: ಒಂದು ರೀತಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಜೂಜಾಟದಂತಿರುವ ಎಫ್ ಅಂಡ್ ಒ ಟ್ರೇಡಿಂಗ್​ನಲ್ಲಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಇದನ್ನು ಗಮನಿಸಿರುವ ಸೆಬಿ, ಎಫ್ ಅಂಡ್ ಒ ಟ್ರೇಡಿಂಗ್​ಗೆ ಕಡಿವಾಣ ಹಾಕಲು ಮಾರ್ಗೋಪಾಯ ಹುಡುಕಲು ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಏಳು ಕ್ರಮಗಳನ್ನು ಶಿಫಾರಸು ಮಾಡಿದೆ. ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅಂತಿಮವಾಗಿ ತೀರ್ಮಾಣ ಮಾಡಲಿದೆ ಸೆಬಿ.

ಷೇರು ಮಾರುಕಟ್ಟೆಯಲ್ಲಿ ಎಫ್ ಅಂಡ್ ಒ ವ್ಯವಹಾರಕ್ಕೆ ಕಡಿವಾಣ ಹಾಕಲು ಸೆಬಿ ಕ್ರಮ; ಹೊಸ ನಿಯಮಗಳು ಸದ್ಯದಲ್ಲೇ ಜಾರಿ
ಸೆಬಿ
Follow us
|

Updated on: Jul 09, 2024 | 4:25 PM

ನವದೆಹಲಿ, ಜುಲೈ 9: ಷೇರು ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರವಾದ ಸೆಬಿ ಈಗ ಫ್ಯೂಚರ್ಸ್ ಅಂಡ್ ಆಪ್ಷನ್ಸ್ ವ್ಯವಹಾರಗಳಿಗೆ ಮೂಗುದಾರ ಹಾಕಲು ಮುಂದಾಗಿದೆ. ಸೆಬಿ ರಚಿಸಿದ್ದ ಕಾರ್ಯಕಾರಿ ಸಮಿತಿಯೊಂದು ಎಫ್ ಅಂಡ್ ಒ ಸಂಬಂಧ ಕೆಲ ಕ್ರಮಗಳಿಗೆ ಶಿಫಾರಸು ಮಾಡಿದೆ. ಇದರಲ್ಲಿ ಡಿರೈವೇಟಿವ್ ಕಾಂಟ್ರಾಕ್ಟ್​ಗಳ ಕನಿಷ್ಠ ಲಾಟ್ ಗಾತ್ರವನ್ನು 20ರಿಂದ 30 ಲಕ್ಷಕ್ಕೆ ಏರಿಸುವ ಸಲಹೆಯೂ ಇದರಲ್ಲಿ ಇದೆ. ಸದ್ಯ ಈ ಲಾಟ್ ಸೈಜ್ ಐದು ಲಕ್ಷ ರೂ ಇದೆ. ಇದನ್ನು ಕನಿಷ್ಠ ನಾಲ್ಕು ಪಟ್ಟಾದರೂ ಹೆಚ್ಚಿಸಬೇಕು ಎಂಬುದು ಸಮಿತಿಯ ಶಿಫಾರಸಾಗಿದೆ.

ಎಫ್ ಅಂಡ್ ಒ ಎಂದೇ ಖ್ಯಾತವಾಗಿರುವ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಎಂಬುವುವು ಒಂದು ವಿಧದ ಟ್ರೇಡಿಂಗ್​ಗಳಾಗಿವೆ. ಇವನ್ನು ಡಿರವೇಟಿವ್ ಮಾರ್ಕೆಟ್ ಎಂದೂ ಕರೆಯಲಾಗುತ್ತದೆ. ಡಿರವೇಟಿವ್ ಎಂದರೆ ಒಂದು ವಸ್ತುವಿನ ಮೌಲ್ಯದ ಆಧಾರಿತವಾದುದು. ಒಂದು ರೀತಿಯಲ್ಲಿ ಬೆಟ್ಟಿಂಗ್​ನಂತೆ. ಈ ಕಾರಣಕ್ಕೆ ಬಹಳಷ್ಟು ಹೂಡಿಕೆದಾರರು ಎಫ್ ಅಂಡ್ ಒ ದಲ್ಲಿ ಅದೃಷ್ಟ ಪರೀಕ್ಷೆ ಮಾಡಲು ಹೋಗಿ ಹಣ ಕಳೆದುಕೊಂಡಿರುವುದಿದೆ. ಈ ರೀತಿ ಎಫ್ ಅಂಡ್ ಒ ಟ್ರೇಡಿಂಗ್ ಮಾಡುವ ಪ್ರತೀ 10ರಲ್ಲಿ 9 ಮಂದಿ ನಷ್ಟ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: ಬಜೆಟ್​ಗೆ ಮುನ್ನ ರೈಲ್ವೆ ಕ್ಷೇತ್ರದ ಷೇರುಗಳ ಬೆಲೆ ಭರ್ಜರಿ ಏರಿಕೆ; ಕಾರಣ ಇಲ್ಲಿದೆ…

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಎಫ್​ ಅಂಡ್ ಒ ಹೆಚ್ಚು ಜನಪ್ರಿಯವಾಗುತ್ತಿದೆ. ಬಹಳಷ್ಟು ರೀಟೇಲ್ ಹೂಡಿಕೆದಾರರು ಈ ರೀತಿಯ ಟ್ರೇಡಿಂಗ್​ನಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸೆಬಿ ಗಮನಕ್ಕೆ ಬಂದಿತ್ತು. ಹೂಡಿಕೆದಾರರ ಹಿತಾಸಕ್ತಿಗೆ ಇದು ಧಕ್ಕೆ ತರುವಂತಿರುವುದರಿಂದ ಎಫ್ ಅಂಡ್ ಒ ನಿಯಂತ್ರಣಕ್ಕೆ ಏನು ಕ್ರಮ ತೆಗೆದುಕೊಳ್ಳಬಹುದು ಎಂದು ಪರಿಶೀಲಿಸಲು ಸಮಿತಿಯೊಂದನ್ನು ಸೆಬಿ ನೇಮಿಸಿತ್ತು.

ಡಿರವೇಟಿವ್ ಕಾಂಟ್ರಾಕ್ಟ್​ಗಳ ಮಿನಿಮಮ್ ಲಾಟ್ ಸೈಜ್ ಅನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಆಪ್ಷನ್ಸ್ ಕಾಂಟ್ರಾಕ್ಟ್​ಗೆ ಸ್ಟ್ರೈಕ್ ಪ್ರೈಸ್​ಗೆ ಮಿತಿ ಹಾಕಬಹುದು ಎಂದು ಈ ಸಮಿತಿ ಶಿಫಾರಸು ಮಾಡಿದೆ. ಇವೆರಡೂ ಸೇರಿದಂತೆ ಏಳು ಶಿಫಾರಸುಗಳನ್ನು ಈ ಸಮಿತಿ ಸಲ್ಲಿಸಿದೆ.

ಎಫ್ ಅಂಡ್ ಒ ನಿಯಂತ್ರಕ್ಕೆ ಸೆಬಿಗೆ ಬಂದಿರುವ ಪ್ರಸ್ತಾವಗಳಿವು

  1. ಡಿರವೇಟಿವ್ ಕಾಂಟ್ರಾಕಟ್​ಗಳ ಕನಿಷ್ಠ ಲಾಟ್ ಗಾತ್ರವನ್ನು 5 ಲಕ್ಷ ರೂನಿಂದ 30 ಲಕ್ಷ ರೂಗೆ ಹೆಚ್ಚಿಸುವುದು.
  2. ಆಪ್ಷನ್ಸ್ ಕಾಂಟ್ರಾಕ್ಟ್​ನ ಸ್ಟ್ರೈಕ್ ಪ್ರೈಸ್​ಗೆ ಮಿತಿ
  3. ವಾರದ ಆಪ್ಷನ್ಸ್ ಅನ್ನು ಒಂದಕ್ಕೆ ಮಿತಿಗೊಳಿಸುವುದು
  4. ವಾಯಿದೆ ದಿನದ ಕ್ಯಾಲಂಡರ್ ಸ್ಪ್ರೆಡ್ ಬೆನಿಫಿಟ್ ಅನ್ನು ತೆಗೆದುಹಾಕುವುದು
  5. ಅಪ್ಷನ್ಸ್​ನ ಖರೀದಿದಾರರಿಂದ ಮುಂಗಡವಾಗಿ ಪ್ರೀಮಿಯಮ್ ಸಂಗ್ರಹಿಸುವುದು.
  6. ಪೊಸಿಶನ್ ಲಿಮಿಟ್ ಮೇಲೆ ಕಣ್ಣಿಡುವುದು.
  7. ಕಾಂಟ್ರಾಕ್ಟ್ ವಾಯಿದೆ ಅಂತ್ಯ ಸಮೀಪದಲ್ಲಿ ಅಗತ್ಯವಾದ ಮಾರ್ಜಿನ್​ನಲ್ಲಿ ಹೆಚ್ಚಳ ಮಾಡುವುದು.

ಈ ಏಳು ಪ್ರಸ್ತಾಪಗಳನ್ನು ಜಾರಿ ಮಾಡುವುದರ ಅನುಕೂಲ ಮತ್ತು ಅನನುಕೂಗಳೇನು ಎಂಬ ವಿವರವನ್ನು ಸೆಬಿ ನೇಮಿತ ತಜ್ಞರ ಗುಂಪೊಂದು ಚರ್ಚಿಸಲಿದೆ.

ಇದನ್ನೂ ಓದಿ: ಜೂನ್​ನಲ್ಲಿ 42.4 ಲಕ್ಷ ಹೊಸ ಡೀಮ್ಯಾಟ್ ಖಾತೆ ರಚನೆ; ಷೇರುಪೇಟೆಯತ್ತ ಮುಗಿಬಿದ್ದ ಹೊಸಬರು

ಎಫ್ ಅಂಡ್ ಒ ಎಂದರೇನು?

ಎಫ್ ಎಂದರೆ ಫ್ಯೂಚರ್ಸ್. ಒ ಎಂದರೆ ಆಪ್ಷನ್ಸ್. ಎರಡೂ ಕೂಡ ಇಬ್ಬರ ಮಧ್ಯೆ ನಡೆಯುವ ಒಪ್ಪಂದ ಆಧಾರಿತ ಟ್ರೇಡಿಂಗ್ ಆಗಿದೆ. ಫ್ಯೂಚರ್ಸ್ ಟ್ರೇಡಿಂಗ್​ನಲ್ಲಿ ಒಂದು ಷೇರನ್ನು ನಿರ್ದಿಷ್ಟ ದಿನದಂದು ನಿರ್ದಿಷ್ಟ ಮೊತ್ತಕ್ಕೆ ಮಾರಲು ಅಥವಾ ಖರೀದಿಸಲು ಒಪ್ಪಂದ ಅಥವಾ ಕಾಂಟ್ರಾಕ್ಟ್ ನಡೆಯುತ್ತದೆ. ಆಪ್ಷನ್ಸ್​ನಲ್ಲೂ ಇದೇ ರೀತಿ ಕಾಂಟ್ರಾಕ್ಟ್ ನಡೆಯುತ್ತದೆ. ಆದರೆ, ಇಲ್ಲಿ ಹೂಡಿಕೆದಾರರಿಗೆ ಗುತ್ತಿಗೆಯಿಂದ ಹಿಂದಕ್ಕೆ ಸರಿಯುವ ಅವಕಾಶ ಇರುತ್ತದೆ. ಆದರೆ, ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ.

ಭಾರತದಲ್ಲಿ ಬಹಳ ಹೆಚ್ಚು ಎಫ್ ಅಂಡ್ ಒ ಟ್ರೇಡಿಂಗ್ ನಡೆಯುತ್ತಿದೆ. ಇದರಲ್ಲಿ ಫ್ಯೂಚರ್ಸ್ ಟ್ರೇಡಿಂಗ್ ಶೇ. 20, ಆಪ್ಷನ್ಸ್ ಟ್ರೇಡಿಂಗ್ ಶೇ. 80ರಷ್ಟು ಜನರು ತೊಡಗಿಸಿಕೊಂಡಿರುವುದುಂಟು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ