Sensex: ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ; 5 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರಿಗೆ ಏಪ್ರಿಲ್ 11ರಿಂದ ಈಚೆಗೆ 34 ಲಕ್ಷ ಕೋಟಿ ರೂ. ನಷ್ಟ

Sensex: ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ; 5 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರಿಗೆ ಏಪ್ರಿಲ್ 11ರಿಂದ ಈಚೆಗೆ 34 ಲಕ್ಷ ಕೋಟಿ ರೂ. ನಷ್ಟ
ಸಾಂದರ್ಭಿಕ ಚಿತ್ರ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್​ನಲ್ಲಿ ಮೇ 12ನೇ ತಾರೀಕಿನ ಗುರುವಾರ 1000 ಪಾಯಿಂಟ್ಸ್​​ಗೂ ಹೆಚ್ಚು ಕುಸಿತ ಕಂಡಿದ್ದು, ಹೂಡಿಕೆದಾರರು 5 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

TV9kannada Web Team

| Edited By: Srinivas Mata

May 12, 2022 | 1:13 PM

ಭಾರತದ ಷೇರು ಮಾರುಕಟ್ಟೆ (stock market) ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಬೆಳಗ್ಗೆ ವಹಿವಾಟಿನಲ್ಲಿ 1000 ಪಾಯಿಂಟ್ಸ್​ ಇಳಿಕೆ ಕಂಡಿದ್ದು, ಎಲ್ಲ ವಲಯದ ಷೇರುಗಳಲ್ಲೂ ಮಾರಾಟ ಆಗಿದೆ. ಇದರಿಂದಾಗಿ ಮೇ 12ನೇ ತಾರೀಕು ಒಂದೇ ದಿನ ಹೂಡಿಕೆದಾರರು 5 ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ. ಇನ್ನು ಏಪ್ರಿಲ್ 11ನೇ ತಾರೀಕಿನ ಗರಿಷ್ಠ ಮಟ್ಟದ ಹಂತದಿಂದ ನೋಡಿದರೆ 34 ಲಕ್ಷ ಕೋಟಿ ರೂಪಾಯಿ ಸಂಪತ್ತು ನಷ್ಟವಾಗಿದೆ. ದತ್ತಾಂಶಗಳ ಪ್ರಕಾರ, ಬುಧವಾರದ ದಿನದ ಕೊನೆಗೆ ಬಿಎಸ್​ಇ ಮಾರುಕಟ್ಟೆ ಬಂಡವಾಳ ಮೌಲ್ಯ 246.31 ಲಕ್ಷ ಕೋಟಿ ಇತ್ತು. ಅದು 5.16 ಲಕ್ಷ ಕೋಟಿ ರೂಪಾಯಿ ಇಳಿದು, ಗುರುವಾರ 241.15 ಲಕ್ಷ ಕೋಟಿ ರೂಪಾಯಿ ಮುಟ್ಟಿದೆ. ಏಪ್ರಿಲ್ 11ನೇ ತಾರೀಕಿನಂದು ಬಿಎಸ್​ಇ ಮಾರುಕಟ್ಟೆ ಬಂಡವಾಳ ಮೌಲ್ಯ 275.17 ಲಕ್ಷ ಕೋಟಿ ರೂಪಾಯಿ ಇತ್ತು.

ಮೇ 12ನೇ ತಾರೀಕಿನಂದು ಭಾರೀ ಕುಸಿತಕ್ಕೆ ಕಾರಣವಾದ ಅಂಶಗಳು ಇಲ್ಲಿವೆ:

ಅಮೆರಿಕದ ಹಣದುಬ್ಬರ ಅಂದಾಜಿಗಿಂತ ಕಡಿಮೆ- ದತ್ತಾಂಶದ ಪ್ರಕಾರ ಅಮೆರಿಕದ ಸಿಪಿಐ ಏಪ್ರಿಲ್​ನಲ್ಲಿ ಶೇ 8.3ಕ್ಕೆ ಇಳಿದಿದೆ. ಮಾರ್ಚ್​ನಲ್ಲಿ ಇದು ಶೇ 8.5ರಷ್ಟಿತ್ತು. ಆದರೆ ನಿರೀಕ್ಷೆ ಮಾಡಿದಂತೆ ಶೇ 8.1ಕ್ಕೆ ಬಂದಿಲ್ಲ. ಈ ಮೂಲಕ ವಿಶ್ವದ ಅತಿ ದೊಡ್ಡ ಆರ್ಥಿಕತೆಯಲ್ಲಿ ಹಣದುಬ್ಬರ ಗರಿಷ್ಠ ಮಟ್ಟದಲ್ಲಿದೆ ಎಂಬುದನ್ನು ಸೂಚಿಸುತ್ತಿದೆ. ಹಣದುಬ್ಬರ ಇನ್ನಷ್ಟು ಕಡಿಮೆ ಆಗಬೇಕು ಎಂದಾದಲ್ಲಿ ಅದು ನಿಧಾನ ಗತಿಯಲ್ಲಿ ಆಗುತ್ತದೆ ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್​ನ ಆಕ್ರಮಣಕಾರಿ ನಿಲುವು ಮುಂದುವರಿಯಬಹುದು.

ಡಾಲರ್ ಏರಿಕೆ, ಏಷ್ಯಾ ಮಾರ್ಕೆಟ್ ಕುಸಿತ- ಅಮೆರಿಕದ ಹಣದುಬ್ಬರ ಅಂಕಿ-ಅಂಶ ಬಿಡುಗಡೆ ನಂತರ ಉದಯೋನ್ಮುಖ ಈಕ್ವಿಟಿ ಮಾರುಕಟ್ಟೆಗಳಿಗೆ ಪೆಟ್ಟು ನೀಡಿದ ಮೇಲೆ, ಡಾಲರ್ ಮೌಲ್ಯ ಎರಡು ದಶಕದ ಗರಿಷ್ಠ ಮಟ್ಟದಲ್ಲಿದೆ. ವಿಶ್ವದ ಆರು ಪ್ರಮುಖ ಕರೆನ್ಸಿಗಳ ಬ್ಯಾಸ್ಕೆಟ್​ಗಳ ವಿರುದ್ಧ ಗ್ರೀನ್​ಬ್ಯಾಕ್​ನ ಅಳೆಯುವ ಡಾಲರ್ ಸೂಚ್ಯಂಕವು 103.92ರಲ್ಲಿದೆ. ಬಹುತೇಕ ಏಷ್ಯನ್ ಸ್ಟಾಕ್​ಗಳು ಇಳಿಕೆ ಹಾದಿಯಲ್ಲಿವೆ. ಎಂಎಸ್​ಸಿಐ ಶೇ 0.92ರಷ್ಟು, ಜಪಾನ್​ನ ನಿಕೈ ಶೇ 1.01ರಷ್ಟು, ಹಾಂಕಾಂಗ್​ನ ಹ್ಯಾಂಗ್​ ಸೆಂಗ್ ಶೇ 1.05ರಷ್ಟು ಮತ್ತು ದಕ್ಷಿಣ ಕೊರಿಯಾದ ಕೊಸ್ಪಿ ಶೇ 0.36ರಷ್ಟು ಕುಸಿದಿದೆ.

ಮುಂದುವರಿದ ವಿದೇಶೀ ಪೋರ್ಟ್​ಫೋಲಿಯೊ ಹೊರಹರಿವು- ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಬುಧವಾರದಂದು ರೂ. 3,609.35 ಕೋಟಿಗಳಷ್ಟು ದೇಶೀಯ ಷೇರುಗಳ ನಿವ್ವಳ ಮಾರಾಟಗಾರರಾಗಿದ್ದಾರೆ ಎಂದು ತಾತ್ಕಾಲಿಕ ಡೇಟಾ ಸೂಚಿಸಿದೆ. ಎಫ್​ಪಿಐ ಹೊರಹರಿವು ಮೇ ತಿಂಗಳಲ್ಲಿ 17,403 ಕೋಟಿ ರೂಪಾಯಿ ಮತ್ತು 2022ರಲ್ಲಿ ಇದುವರೆಗೆ 1,44,565 ಕೋಟಿ ರೂ. ಆಗಿದೆ. “ಡಾಲರ್ ಸೂಚ್ಯಂಕ 104ರಲ್ಲಿ ಇದೆ ಮತ್ತು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯೊಂದಿಗೆ ಭಾರತೀಯ ಮೌಲ್ಯಮಾಪನವು ಆಕರ್ಷಕ ಆಗುವವರೆಗೆ ಎಫ್‌ಐಐಗಳು ಮಾರಾಟವನ್ನು ಮುಂದುವರಿಸುವ ಸಾಧ್ಯತೆಯಿದೆ. ಡಿಐಐ ಖರೀದಿಯು ಈಗ ಎಫ್‌ಐಐ ಮಾರಾಟಕ್ಕಿಂತ ಹೆಚ್ಚಿದ್ದರೂ ಸಹ ಮಾರುಕಟ್ಟೆಯಲ್ಲಿ ಭಾವನೆಗಳನ್ನು ಸಕಾರಾತ್ಮಕ ಆಗಿಸಲು ಸಾಕಾಗುವುದಿಲ್ಲ,” ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞರಾದ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

ಗ್ರಾಹಕ ದರ ಸೂಚ್ಯಂಕ ಮೇಲೆ ಹೂಡಿಕೆದಾರರ ಕಣ್ಣು- ಭಾರತದಲ್ಲಿ ಗ್ರಾಹಕ ದರ ಸೂಚ್ಯಂಕದ ಮೇಲೆ ಆತಂಕದಿಂದ ಹೂಡಿಕೆದಾರರು ಕಣ್ಣು ನೆಟ್ಟು ಕೂತಿದ್ದಾರೆ. ಆ ಅಂಶ ಕೂಡ ಷೇರು ಮಾರುಕಟ್ಟೆಯಲ್ಲಿ ಭಾರೀ ಇಳಿಕೆಗೆ ಕಾರಣವಾಗಿದೆ.

ಈ ವರದಿ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 1075.05 ಪಾಯಿಂಟ್ಸ್ ಅಥವಾ ಶೇ 1.99ರಷ್ಟು ಕುಸಿದು, 53,013.34 ಪಾಯಿಂಟ್ಸ್​ನಲ್ಲಿ ವ್ಯವಹರಿಸುತ್ತಿದ್ದರೆ, ನಿಫ್ಟಿ 341.10 ಪಾಯಿಂಟ್ಸ್ ಅಥವಾ ಶೇ 2.11ರಷ್ಟು ನೆಲ ಕಚ್ಚಿ, 15,826 ಪಾಯಿಂಟ್ಸ್​ನಲ್ಲಿ ವಹಿವಾಟು ನಡೆಸುತ್ತಿತ್ತು.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್

Follow us on

Related Stories

Most Read Stories

Click on your DTH Provider to Add TV9 Kannada