SBI Fixed Deposits: ಎಸ್ಬಿಐನಿಂದ ಫಿಕ್ಸೆಡ್ ಡೆಪಾಸಿಟ್ಗಳ ಬಡ್ಡಿ ದರ ಹೆಚ್ಚಳ; ಇಲ್ಲಿದೆ ಸಂಪೂರ್ಣ ಮಾಹಿತಿ
ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಫಿಕ್ಸೆಡ್ ಡೆಪಾಸಿಟ್ಗಳ ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.
ದೇಶದ ಹಲವಾರು ಪ್ರಮುಖ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಹಾದಿಯನ್ನೇ ಅನುಸರಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಫಿಕ್ಸೆಡ್ ಡೆಪಾಸಿಟ್ ಬಡ್ಡಿದರಗಳನ್ನು ಹೆಚ್ಚಿಸಿದೆ. ಪರಿಷ್ಕೃತ ಬಡ್ಡಿದರಗಳು ಫೆಬ್ರವರಿ 15, 2022ರಿಂದ ಅನ್ವಯವಾಗುತ್ತವೆ ಎಂದು ದೇಶದ ಅತಿದೊಡ್ಡ ಬ್ಯಾಂಕ್ ಆದ ಎಸ್‌ಬಿಐ ತಿಳಿಸಿದೆ. ಪರಿಷ್ಕೃತ ದರಗಳು 2 ವರ್ಷಗಳಿಗಿಂತ ಹೆಚ್ಚಿನ ಅವಧಿಯ ಫಿಕ್ಸೆಡ್ ಡೆಪಾಸಿಟ್ಸ್ಗಳ ಮೇಲೆ ಅನ್ವಯಿಸುತ್ತವೆ ಎಂದು ಎಸ್‌ಬಿಐ ತಿಳಿಸಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೌಲ್ಯದ ಎಫ್‌ಡಿಗಳಿಗೆ ಪರಿಷ್ಕೃತ ದರಗಳು ಅನ್ವಯಿಸುತ್ತವೆ ಎಂದು ಬ್ಯಾಂಕ್ನಿಂದ ಮಾಹಿತಿ ನೀಡಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಎಫ್.ಡಿ. ಬಡ್ಡಿ ದರಗಳು ಇಲ್ಲಿವೆ:
– 2ರಿಂದ 3 ವರ್ಷಗಳಲ್ಲಿ ಮೆಚ್ಯೂರ್ ಆಗುವ ಫಿಕ್ಸೆಡ್ ಡೆಪಾಸಿಟ್ಗಳ ಮೇಲೆ ಎಸ್‌ಬಿಐ ವಾರ್ಷಿಕ ಶೇ 5.20ರ ಬಡ್ಡಿದರವನ್ನು ನೀಡುತ್ತದೆ. ಎಸ್‌ಬಿಐ ಈ ಹಿಂದೆ ಶೇ 5.10ರ ಬಡ್ಡಿ ದರವನ್ನು ನೀಡುತ್ತಿತ್ತು.
– ಸರ್ಕಾರಿ ಸ್ವಾಮ್ಯದ ಎಸ್‌ಬಿಐ ಎರಡರಿಂದ ಐದು ವರ್ಷದ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು 15 ಬೇಸಿಸ್ ಪಾಯಿಂಟ್‌ಗಳಿಂದ ಶೇ 5.30ರಿಂದ ಶೇ 5.45ಕ್ಕೆ ಹೆಚ್ಚಿಸಿದೆ.
– ಎಸ್‌ಬಿಐ ಗ್ರಾಹಕರು 5ರಿಂದ 10 ವರ್ಷಗಳ ಅವಧಿಯೊಂದಿಗೆ ಫಿಕ್ಸೆಡ್ ಠೇವಣಿಗಳ ಮೇಲೆ ಶೇ 5.50ರ ಬಡ್ಡಿದರವನ್ನು ಪಡೆಯುತ್ತಾರೆ.
ಆದರೆ, ಎಸ್‌ಬಿಐ ಅಲ್ಪಾವಧಿಯ ಫಿಕ್ಸೆಟ್ ಡೆಪಾಸಿಟ್ಗಳ ಎಫ್.ಡಿ. ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿದೆ. ಉದಾಹರಣೆಗೆ, ಎಸ್‌ಬಿಐ ಒಂದರಿಂದ ಎರಡು ವರ್ಷಗಳಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಮೇಲೆ ಶೇ 5.10ರಷ್ಟು ಬಡ್ಡಿದರವನ್ನು ನೀಡುತ್ತಿದೆ.
ಅಲ್ಲದೆ, ಹಿರಿಯ ನಾಗರಿಕರು ಎಲ್ಲ ಎಫ್‌ಡಿ ಹೂಡಿಕೆಗಳ ಮೇಲೆ 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿದರಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿಯು ಇತ್ತೀಚೆಗೆ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಕ್ರಮವಾಗಿ ಶೇ 4 ಮತ್ತು ಶೇ 3.35ರಲ್ಲೇ ಇರಿಸಲು ನಿರ್ಧರಿಸಿದ ನಂತರ ಎಸ್ಬಿಐನಿಂದ ಎಫ್.ಡಿ. ಬಡ್ಡಿ ದರಗಳ ಪರಿಷ್ಕರಣೆಯ ಘೋಷಣೆ ಬಂದಿದೆ.
ಆರ್ಬಿಐನಿಂದ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸುವ ನಿರ್ಧಾರ ಮಾಡಿದ ನಂತರ ಹಲವಾರು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳು ಸ್ಥಿರ ಠೇವಣಿ ಹೂಡಿಕೆಗಳ ಮೇಲಿನ ಬಡ್ಡಿದರಗಳನ್ನು ಶೀಘ್ರದಲ್ಲೇ ಹೆಚ್ಚಿಸಲು ನಿರ್ಧರಿಸಿವೆ. ಇಲ್ಲಿಯವರೆಗೆ ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯುಕೊ ಬ್ಯಾಂಕ್ ಮತ್ತು ಈಗ ಎಸ್‌ಬಿಐ 2 ಕೋಟಿಗಿಂತ ಕಡಿಮೆ ಮೌಲ್ಯದ ಎಫ್‌ಡಿ ಯೋಜನೆಗಳ ಬಡ್ಡಿ ದರವನ್ನು ಪರಿಷ್ಕರಿಸಿವೆ.
ಇದನ್ನೂ ಓದಿ: IMPS Charges: ಎಸ್ಬಿಐನಲ್ಲಿ 5 ಲಕ್ಷ ರೂಪಾಯಿ ತನಕ ಆನ್ಲೈನ್ ಐಎಂಪಿಎಸ್ ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ