Covid 19 loan: ಕೆನರಾ ಬ್ಯಾಂಕ್ನಿಂದ ರೂ. 25 ಸಾವಿರದಿಂದ 2 ಕೋಟಿಯ ತನಕ 3 ಬಗೆಯ ಸಾಲ ಯೋಜನೆ ಘೋಷಣೆ
ಕೆನರಾ ಬ್ಯಾಂಕ್ನಿಂದ 3 ಸಾಲ ಯೋಜನೆಗಳನ್ನು ಘೋಷಿಸಲಾಗಿದೆ. ವೈಯಕ್ತಿಕವಾಗಿ ಸಾಲ ಪಡೆಯುವವರಿಗೆ, ಎಂಎಸ್ಎಂಇಗಳಿಗೆ ಹಾಗೂ ಹೆಲ್ತ್ಕೇರ್ ಮೂಲಸೌಕರ್ಯಕ್ಕೆ ಹೀಗೆ ಮೂರು ಬಗೆಯಲ್ಲಿ ಸಾಲ ನೀಡಲಿದೆ.
ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ನಿಂದ ಶುಕ್ರವಾರ ಮೂರು ಬಗೆಯ ಸಾಲದ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಕೊರೊನಾ ಬಿಕ್ಕಟ್ಟಿನ ಮಧ್ಯೆ ಗ್ರಾಹಕರಿಗೆ ನಿರಾಳ ಆಗುವುದಕ್ಕೆ ಸಹಾಯ ಆಗುತ್ತದೆ. ಬ್ಯಾಂಕ್ನಿಂದ ಹೇಳಿರುವ ಪ್ರಕಾರ, ಹೆಲ್ತ್ಕೇರ್ ಕ್ರೆಡಿಟ್, ವಾಣಿಜ್ಯ ಮತ್ತು ಪರ್ಸನಲ್ ಲೋನ್ ನೀಡಲಾಗುತ್ತದೆ. ಯಾವುದು ಆ ಮೂರು ಸಾಲದ ಯೋಜನೆಗಳು ಇದರಿಂದ ಗ್ರಾಹಕರಿಗೆ ಹೇಗೆ ಅನುಕೂಲ ಆಗುತ್ತದೆ ಎಂಬಿತ್ಯಾದಿ ವಿವರಗಳ ಮಾಹಿತಿಯು ಈ ಲೇಖದಲ್ಲಿದೆ. ಇನ್ನೇಕೆ ತಡ ಮುಂದೆ ಓದಿ.
* ಕೆನರಾ ಸುರಕ್ಷಾ ಪರ್ಸನಲ್ ಲೋನ್ ಯೋಜನೆ ಈ ಯೋಜನೆ ಅಡಿಯಲ್ಲಿ ಬ್ಯಾಂಕ್ನಿಂದ 25,000 ರೂಪಾಯಿಯಿಂದ ಆರಂಭವಾಗಿ 5 ಲಕ್ಷದ ತನಕ ಕೋವಿಡ್- 19ರ ಚಿಕಿತ್ಸೆಗೆ ಹಣ ದೊರೆಯುತ್ತದೆ. ಆಸ್ಪತ್ರೆಗೆ ದಾಖಲಾಗುವುದಿಂದ ಆರಂಭವಾಗಿ, ಬಿಡುಗಡೆಯಾಗುವ ನಂತರದ ತನಕ ಆಗುವ ವೆಚ್ಚವು ಸಾಲವಾಗಿ ಸಿಗುತ್ತದೆ. ಕೆನರಾ ಸುರಕ್ಷಾ ಯೋಜನೆಯಲ್ಲಿ ಆರು ತಿಂಗಳ ಕಾಲ ಸಾಲ ಮರುಪಾವತಿ ವಿನಾಯಿತಿ ಸಿಗುತ್ತದೆ. ಮತ್ತು ಈ ಯೋಜನೆ ಸೆಪ್ಟೆಂಬರ್ 30, 2021ರ ತನಕ ಇರುತ್ತದೆ.
* ಕೆನರಾ ಚಿಕಿತ್ಸಾ ಹೆಲ್ತ್ಕೇರ್ ಕ್ರೆಡಿಟ್ ಈ ಯೋಜನೆ ಅಡಿಯಲ್ಲಿ ಬ್ಯಾಂಕ್ನಿಂದ ನೋಂದಾಯಿತ ಆಸ್ಪತ್ರೆಗಳು, ನರ್ಸಿಂಗ್ ಹೋಮ್ಗಳು, ಮೆಡಿಕಲ್ ಪ್ರಾಕ್ಟೀಷನರ್ಗಳು, ಡಯಾಗ್ನೋಸ್ಟಿಕ್ ಸೆಂಟರ್ಗಳು, ಲ್ಯಾಬ್ಗಳಿಗೆ ಮತ್ತು ಯಾವುದೆಲ್ಲ ಆರೋಗ್ಯಸೇವೆ ಒದಗಿಸುತ್ತಿವೆಯೋ ಅವುಗಳ ಮೂಲಸೌಕರ್ಯಕ್ಕಾಗಿ 10 ಲಕ್ಷ ರೂಪಾಯಿಯಿಂದ 50 ಕೋಟಿಯ ತನಕ ಸಾಲ ದೊರೆಯುತ್ತದೆ. ವಿನಾಯಿತಿ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ. 10 ವರ್ಷಗಳ ಅವಧಿಗೆ ನೀಡುವ ಈ ಸಾಲಕ್ಕೆ 18 ತಿಂಗಳ ತನಕ ಸಾಲ ಮರುಪಾವತಿ ವಿನಾಯಿತಿ ಇರುತ್ತದೆ. ಈ ಯೋಜನೆಯು ಮಾರ್ಚ್ 31, 2022ರ ತನಕ ಇರುತ್ತದೆ.
* ಕೆನರಾ ಜೀವನ್ರೇಖಾ ಹೆಲ್ತ್ಕೇರ್ ಬಿಜಿನೆಸ್ ಲೋನ್ ಈ ಯೋಜನೆ ಅಡಿಯಲ್ಲಿ ವಿನಾಯಿತಿ ಬಡ್ಡಿ ದರದಲ್ಲಿ 2 ಕೋಟಿ ರೂಪಾಯಿ ತನಕ ಸಾಲ ನೀಡಲಾಗುತ್ತದೆ. ಹೆಲ್ತ್ಕೇರ್ ಉತ್ಪನ್ನಗಳನ್ನು ತಯಾರಿಸಿ, ನೋಂದಾಯಿತ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್ ಅಥವಾ ಇತರ ತಯಾರಕರು ಹಾಗೂ ಪೂರೈಕೆದಾರರಿಗೆ ಸರಬರಾಜು ಮಾಡುವವರಿಗೆ ನೀಡಲಾಗುತ್ತದೆ.
ಬ್ಯಾಂಕ್ ನೀಡಿರುವ ಮಾಹಿತಿಯಂತೆ ಈ ಸಾಲಕ್ಕೆ ಯಾವುದೇ ಪ್ರೊಸೆಸಿಂಗ್ ಶುಲ್ಕ ಇಲ್ಲ. ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳಿಗೆ (MSME) ಯಾವುದೇ ಕೊಲಾಟರಲ್ ಸೆಕ್ಯೂರಿಟಿ ಬೇಡ. ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ ಅಂಡ್ ಸ್ಮಾಲ್ ಎಂಟರ್ಪ್ರೈಸಸ್ (CGTMSE) ಅಡಿಯಲ್ಲಿ ಕವರ್ ಆಗುತ್ತದೆ ಮತ್ತು ಬ್ಯಾಂಕ್ನಿಂದಲೇ ಗ್ಯಾರಂಟಿ ಪ್ರೀಮಿಯಂ ಭರಿಸಲಾಗುತ್ತದೆ. ಯಾವುದೇ ಮೂರನೇ ವ್ಯಕ್ತಿಯ ಗ್ಯಾರಂಟಿ ಅಥವಾ ಕೊಲಾಟರಲ್ ಇಲ್ಲದೆ ಹಣಕಾಸು ನೆರವು ನೀಡುವುದಕ್ಕೆ ಅಂತಲೇ ಇರುವಂಥದ್ದು CGTMSE.
ಆದರೆ, ಎಂಎಸ್ಎಂಇ ಹೊರತಾದವಕ್ಕೆ ಕೊಲಾಟರಲ್ ಭದ್ರತೆ ಎಂದು ಕನಿಷ್ಠ ಶೇ 25ರಷ್ಟು ನೀಡಬೇಕಾಗುತ್ತದೆ. ಈ ಯೋಜನೆಯು ಮಾರ್ಚ್ 31, 2022ರ ತನಕ ಇರುತ್ತದೆ. ಇದೇ ಮೇ ತಿಂಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 50 ಸಾವಿರ ಕೋಟಿ ರೂಪಾಯಿಯನ್ನು ಬ್ಯಾಂಕ್ಗಳ ಮೂಲಕ ಸಾಲ ವಿತರಿಸುವ ಯೋಜನೆಗೆ ಘೋಷಿಸಲಾಗಿದೆ. ಅದರ ಅಡಿಯಲ್ಲೇ ಈ ಮೇಲ್ಕಂಡ ಸಾಲ ಯೋಜನೆಗಳು ಬರುತ್ತವೆ.
ಇದನ್ನೂ ಓದಿ: RBI Monetary Policy Highlights: ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಿಸಿದ ಹಣಕಾಸು ನೀತಿಯ ಪ್ರಮುಖಾಂಶಗಳು
(State owned Canara Bank announced 3 loan schemes for covid 19 financial need)
Published On - 12:29 pm, Sat, 29 May 21