ಹತ್ತು ವರ್ಷಗಳಲ್ಲಿ ಆಗಿರುವ ಸುಧಾರಣೆಗಳು ಭಾರತದ ಬೆಳವಣಿಗೆಗೆ ಶಕ್ತಿಯಾಗಲಿವೆ: ಅಮಿತಾಭ್ ಕಾಂತ್
Amitabh Kant speaks on Indian economy: ಮುಂದಿನ ಮೂರು ದಶಕಗಳಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತ ಒಳಗೊಂಡಂತೆ ಅಭಿವೃದ್ಧಿಶೀಲ ದೇಶಗಳ ಕೊಡುಗೆ ಶೇ. 75 ಇರುತ್ತದೆ ಎಂಬುದು ಐಎಂಎಫ್, ವಿಶ್ವಬ್ಯಾಂಕ್ನ ಅಂದಾಜು. ಭಾರತ, ಇಂಡೋನೇಷ್ಯಾ ಮೊದಲಾದ ಗ್ಲೋಬಲ್ ಸೌತ್ ದೇಶಗಳಿಗೆ ತಾರುಣ್ಯ ಜನರ ಸಂಖ್ಯೆಯೇ ಪ್ರಮುಖ ಶಕ್ತಿಯಾಗಲಿದೆ. ಭಾರತಕ್ಕೆ ಕಳೆದ ಹತ್ತು ವರ್ಷದಲ್ಲಿ ಆಗಿರುವ ರಚನಾತ್ಮಕ ಸುಧಾರಣೆಗಳು ಆರ್ಥಿಕ ಬೆಳವಣಿಗೆಗೆ ರಹದಾರಿ ಒದಗಿಸಲಿವೆ ಎನ್ನುತ್ತಾರೆ ಅಮಿತಾಭ್ ಕಾಂತ್.
ನವದೆಹಲಿ, ಜನವರಿ 26: ಭಾರತದ ಬಹುಸ್ತರದ ಬೆಳವಣಿಗೆಯು ಅದರ ಆರ್ಥಿಕತೆಯ ಸ್ವರೂಪವನ್ನೇ ಬದಲಿಸಿದೆ. ಸುಧಾರಣೆಗಳು, ಡಿಜಿಟಲ್ ಆವಿಷ್ಕರಣಗಳು, ಹಸಿರು ಇಂಧನ ಯೋಜನೆಗಳು, ಮೂಲಸೌಕರ್ಯಗಳು ಇವೆಲ್ಲವೂ ಭಾರತದ ಆರ್ಥಿಕತೆಯ ಬಹುಸ್ತರದ ಬೆಳವಣಿಗೆಗೆ ಕಾರಣವಾಗಿವೆ. ಜಾಗತಿಕ ಆರ್ಥಿಕ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಸ್ಥಾನಕ್ಕೆ ತಂದು ನಿಲ್ಲಿಸಿವೆ ಎಂದು ಈ ಬಾರಿಯ ಜಿ20 ಸಭೆಯ ಶೆರ್ಪಾ ಹಾಗೂ ಮಾಜಿ ನೀತಿ ಆಯೋಗ್ ಸಿಇಒ ಅಮಿತಾಭ್ ಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ದಶಕದ ಹಿಂದಿನವರೆಗೂ ಭಾರತವನ್ನು ವಿಶ್ವದ ಐದು ದುರ್ಬಲ ಆರ್ಥಿಕತೆಗಳಲ್ಲಿ ಒಂದೆಂದು ಸ್ವತಃ ಐಎಂಎಫ್ನಿಂದ ಪರಿಗಣಿಸಲಾಗಿತ್ತು. ಆದರೆ, ನೋಡ ನೋಡುತ್ತಿದ್ದಂತೆಯೇ ಭಾರತ ಫೀನಿಕ್ಸ್ನಂತೆ ಮೇಲೆದ್ದಿದೆ. ವಿಶ್ವ ಆರ್ಥಿಕತೆಗಳಲ್ಲಿ ಎರಡಂಕಿ ಸ್ಥಾನಗಳನ್ನು ಹೊಂದಿದ್ದ ಭಾರತ ಈಗ ಐದನೇ ಸ್ಥಾನಕ್ಕೆ ಏರಿದೆ. 2027ರೊಳಗೆ ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶ ಭಾರತವಾಗಲಿದೆ ಎಂದು ಸ್ವತಃ ಐಎಂಎಫ್, ವಿಶ್ವಬ್ಯಾಂಕ್ ಇತ್ಯಾದಿ ಅಂತಾರಾಷ್ಟ್ರೀಯ ಸಂಸ್ಥೆಗಳು ಒಪ್ಪಿಕೊಂಡಿವೆ. ಆ ಮಟ್ಟಿಗೆ ಭಾರತದಲ್ಲಿ ಪರಿವರ್ತನೆ ಕಾಣಲು ಸಾಧ್ಯವಾಗಿದ್ದು ಕಳೆದ ಒಂದು ದಶಕದಲ್ಲಿ ಆಗಿರುವ ರಚನಾತ್ಮಕವಾದ ಸುಧಾರಣಾ ಕ್ರಮಗಳು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬಜೆಟ್ಗೆ ದಿನಗಣನೆ; ನಿರ್ಮಲಾ ಸೀತಾರಾಮನ್ರಿಂದ ಹಲ್ವಾ ಕಾರ್ಯಕ್ರಮ; ಏನಿದರ ವಿಶೇಷತೆ?
‘ಜಾಗತಿಕವಾಗಿ ಬೆಳವಣಿಗೆ ಕ್ಷಿಪ್ರವಾಗಿ ಆಗಬೇಕಾದರೆ, ಅಭಿವೃದ್ಧಿಶೀಲ ದೇಶಗಳಿಂದ ಮುಕ್ಕಾಲು ಪಾಲು ಕೊಡುಗೆ ಬರಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಹೇಳುತ್ತದೆ. ಭಾರತ ಮತ್ತು ಇಂಡೋನೇಷ್ಯಾ ದೇಶಗಳು ಅಗಾಧವಾಗಿ ಬೆಳೆಯುವ ಈ ಅಭಿವೃದ್ಧಿಶೀಲ ದೇಶಗಳ ಸಾಲಿನಲ್ಲಿ ಪ್ರಮುಖವಾಗಿ ನಿಲ್ಲುತ್ತವೆ’ ಎಂದು ಅಮಿತಾಭ್ ಕಾಂತ್ ಹೇಳಿದ್ದಾರೆ.
ಮುಂದಿನ ಮೂರು ದಶಕದಲ್ಲಿ ವಿಶ್ವದ ಶೇ. 75ರಿಂದ 80ರಷ್ಟು ಬೆಳವಣಿಗೆಯು ಅಭಿವೃದ್ಧಿಶೀಲ ದೇಶಗಳಿಂದ ಆಗುತ್ತದೆ ಎನ್ನುವುದು ಐಎಂಎಫ್ ಮತ್ತು ವಿಶ್ವಬ್ಯಾಂಕ್ನ ಅನಿಸಿಕೆ. ಗ್ಲೋಬಲ್ ಸೌತ್ ಎಂದು ಬಣ್ಣಿಸಲಾಗುವ ಈ ಅಭಿವೃದ್ಧಿಶೀಲ ದೇಶಗಳ ಬೆಳವಣಿಗೆ ಚುರುಕಾಗಿ ಆಗಲು ಪ್ರಮುಖ ಕಾರಣವೆಂದರೆ ಅದರ ಯುವ ಜನಸಂಖ್ಯಾಬಲ. ಯೂರೋಪ್ ಮತ್ತು ಅಮೆರಿಕದಲ್ಲಿ ಇರುವ ಜನರ ಸರಾಸರಿ ವಯಸ್ಸು ಬಹಳ ಅಧಿಕವಾಗಿದೆ. ಭಾರತ ಮೊದಲಾದ ತೃತೀಯ ಜಗತ್ತಿನ ದೇಶಗಳಲ್ಲಿ ಜನಸಂಖ್ಯೆಗೆ ಇನ್ನೂ ತರುಣ ವಯಸ್ಸು. ಹೀಗಾಗಿ, ವಿಫುಲವಾಗಿ ಬೆಳೆಯಲು ಅವಕಾಶ ಹೆಚ್ಚಿದೆ ಎಂಬುದು ಕೇಳಿಬರುತ್ತಿರುವ ವಾದ.
ಇದನ್ನೂ ಓದಿ: ವಾರಕ್ಕೆ ಶೇ. 6 ರಿಟರ್ನ್ ಕೊಡುವ ಆಮಿಷಕ್ಕೆ ಮೋಸ ಹೋದ ಆಮಾಯಕರು; ಟೋರೆಸ್ ಹಗರಣದ ಆರೋಪಿ ತೌಸೀಫ್ ಬಂಧನ
ಭಾರತದಲ್ಲಿ ಮುಂದಿನ ಮೂರು ದಶಕದಲ್ಲಿ ಸರಿಯಾದ ರೀತಿಯ ಜನಸಂಖ್ಯಾ ಬಲ ಮತ್ತು ಮಾನವಸಂಪನ್ಮೂಲ ಲಭ್ಯ ಇರಲಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುವಂತಹ ಆರ್ಥಿಕತೆ ಸ್ವರೂಪ ಸಿದ್ಧವಾಗಿದೆ. ಕಳೆದ ಹತ್ತು ವರ್ಷದಲ್ಲಿ ತೆಗೆದುಕೊಳ್ಳಲಾಗಿರುವ ರಚನಾತ್ಮಕ ಸುಧಾರಣೆಗಳು ವೇಗದ ಬೆಳವಣಿಗೆಯನ್ನು ನಿರ್ವಹಿಸುವ ಶಕ್ತಿಯನ್ನು ಆರ್ಥಿಕತೆಗೆ ನೀಡಿವೆ. ಜಿಎಸ್ಟಿ ಜಾರಿಗೊಳಿಸಿರುವುದು, ಇನ್ಸಾಲ್ವೆನ್ಸಿ, ರೇರಾ ಕಾಯ್ದೆ ಇತ್ಯಾದಿಗಳು ಇದಕ್ಕೆ ಉದಾಹರಣೆ ಎಂದು ಅಮಿತಾಭ್ ಕಾಂತ್ ಅವರು ಅಸೋಸಿಯೇಶನ್ ಆಫ್ ಮ್ಯೂಚುವಲ್ ಫಂಡ್ಸ್ (ಎಎಂಎಫ್ಐ) ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ