ನವದೆಹಲಿ, ಅಕ್ಟೋಬರ್ 18: ಸಕ್ಕರೆ ರಫ್ತಿನ ಮೇಲಿನ ನಿರ್ಬಂಧವನ್ನು (sugar export restriction) ಅನಿರ್ದಿಷ್ಟಾವಧಿಯವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಎಲ್ಲಾ ತಳಿಯ ಸಕ್ಕರೆಯ ರಫ್ತಿಗೆ ಅಕ್ಟೋಬರ್ 31ರವರೆಗೆ ನಿರ್ಬಂಧ ಇದೆ. ಇದೀಗ ಅದನ್ನು ಅನಿರ್ದಿಷ್ಟಾವಧಿಯವರೆಗೆ ಮುಂದುವರಿಸುತ್ತಿರುವುದಾಗಿ ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯ (DGFT- Directorate General of Foreign Trade) ಬುಧವಾರ (ಅ. 18) ಅಧಿಸೂಚನೆಯಲ್ಲಿ ತಿಳಿಸಿದೆ. ಆದರೆ, ಕೆಲ ಸಕ್ಕರೆ ರಫ್ತುಗಳಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.
‘ಸಿಎಕ್ಸ್ಎಲ್ ಮತ್ತು ಟಿಆರ್ಕ್ಯೂ ಕೋಟಾ ಅಡಿಯಲ್ಲಿ ಯೂರೋಪಿಯನ್ ಯೂನಿಯನ್ ಮತ್ತು ಅಮೆರಿಕಕ್ಕೆ ರಫ್ತು ಮಾಡಲಾಗುವ ಸಕ್ಕರೆ ಮೇಲೆ ಈ ನಿರ್ಬಂಧ ಅನ್ವಯ ಆಗುವುದಿಲ್ಲ’ ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ ಸಕ್ಕರೆ ಬೆಲೆ ಹೆಚ್ಚಿ ಹಣದುಬ್ಬರ ಏರದಂತೆ ನಿಯಂತ್ರಿಸಲು ಮುನ್ನೆಚ್ಚರಿಕೆಯಾಗಿ ಕಳೆದ ವರ್ಷ ಕೇಂದ್ರ ಸರ್ಕಾರ ಸಕ್ಕರೆಯನ್ನು ರಫ್ತು ನಿರ್ಬಂಧಿತ ವಸ್ತುಗಳ ಪಟ್ಟಿಗೆ ಸೇರಿಸಿತ್ತು. 2023ರ ಅಕ್ಟೋಬರ್ 31ರವರೆಗೂ ಈ ನಿರ್ಬಂಧ ಇದೆ. ಈಗ ಇದನ್ನು ಇನ್ನಷ್ಟು ಕಾಲ ಮುಂದುವರಿಸಲಾಗುತ್ತಿದೆ. ಸಕ್ಕರೆ ಅಭಾವ ಆಗುವುದಿಲ್ಲ ಎಂದು ಖಾತ್ರಿ ಆಗುವವರೆಗೂ ಈ ರಫ್ತು ನಿರ್ಬಂಧ ಇರಲಿದೆ.
ಇದನ್ನೂ ಓದಿ: ಹೊಸ ಸ್ಕ್ಯಾಮ್..! ಒಟಿಪಿ ಬರದೆಯೇ ಆಧಾರ್ ಬಳಸಿ ಹಣ ಎಗರಿಸುತ್ತಾರೆ; ಈಗಲೇ ಬಯೋಮೆಟ್ರಿಕ್ ಲಾಕ್ ಮಾಡಿ; ಇದು ಹೇಗೆ?
ಸಕ್ಕರೆ ಉತ್ಪಾದನೆ ಮತ್ತು ರಫ್ತಿನಲ್ಲಿ ಭಾರತ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದೆ. ಮಹಾರಾಷ್ಟ್ರ, ಕರ್ನಾಟಕ ಸಕ್ಕರೆ ಉತ್ಪಾದನೆಯಲ್ಲಿ ಭಾರತದ ಪ್ರಮುಖ ರಾಜ್ಯಗಳಾಗಿವೆ. ಭಾರತದ ಒಟ್ಟು ಸಕ್ಕರೆ ಉತ್ಪಾದನೆಯಲ್ಲಿ ಈ ಎರಡು ರಾಜ್ಯಗಳ ಪಾಲು ಅರ್ಧದಷ್ಟಿದೆ. ಆದರೆ, ಈ ವರ್ಷ ಸರಿಯಾದ ಮಳೆ ಇಲ್ಲದ ಕಾರಣ ಕಬ್ಬು ಬೆಳೆ ಇಳುವರಿ ಬಹಳಷ್ಟು ಕಡಿಮೆ ಆಗಿದೆ.
ಭಾರತೀಯ ಸಕ್ಕರೆ ಕಾರ್ಖಾನೆ ಸಂಸ್ಥೆ (ಐಎಸ್ಎಂಎ) ಪ್ರಕಾರ 2023-24ರ ಸೀಸನ್ನಲ್ಲಿ ಭಾರತದಲ್ಲಿ ಸಕ್ಕರೆ ಉತ್ಪಾದನೆ 31.7 ಮಿಲಿಯನ್ ಟನ್ನಷ್ಟು ಮಾತ್ರವೇ ಸಕ್ಕರೆ ಉತ್ಪಾದನೆ ಆಗಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಕ್ಕರೆ ಉತ್ಪಾದನೆ ಶೇ. 3ಕ್ಕಿಂತಲೂ ಹೆಚ್ಚು ಇಳಿಕೆ ಆಗಬಹುದು ಎನ್ನಲಾಗಿದೆ.
ಇದನ್ನೂ ಓದಿ: Deepavali Bonus: ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್; ಹಬ್ಬಕ್ಕೆ ಮುಂಚೆ 7,000 ರೂವರೆಗೆ ಬೋನಸ್ ಪ್ರಕಟ
ಈ ಕಾರಣಕ್ಕೆ ಸರ್ಕಾರ ಸಕ್ಕರೆ ರಫ್ತಿಗೆ ನಿರ್ಬಂಧ ಹಾಕಿದೆ. ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡ ಋತುವಿನಲ್ಲಿ ಸಕ್ಕರೆ ಕಾರ್ಖಾನೆಗಳು 6.1 ಮಿಲಿಯನ್ ಟನ್ನಷ್ಟು ಮಾತ್ರ ಸಕ್ಕರೆ ರಫ್ತಿಗೆ ಅವಕಾಶ ಕೊಡಲಾಗಿತ್ತು. ಹಿಂದಿನ ಸೀಸನ್ನಲ್ಲಿ 11.1 ಮಿಲಿಯನ್ ಟನ್ನಷ್ಟು ಸಕ್ಕರೆ ರಫ್ತಿಗೆ ಅವಕಾಶ ಕೊಡಲಾಗಿತ್ತು. ಈ ಸೀಸನ್ನಲ್ಲಿ ರಫ್ತು ಮಿತಿಯನ್ನು ಅರ್ಧದಷ್ಟು ಇಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ