AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಟ್ ಏರ್ವೇಸ್​ಗೆ ಅಂತಿಮ ವಿದಾಯ ಹೇಳಿದ ಸುಪ್ರೀಂಕೋರ್ಟ್; ಏರ್ಲೈನ್ಸ್ ಸಂಸ್ಥೆಯ ಸಮಾಪ್ತಿಗೆ ಕೋರ್ಟ್ ಆದೇಶ

Jet Airways liquidation: ನರೇಶ್ ಗೋಯಲ್ ಸಂಸ್ಥಾಪಿಸಿದ ಜೆಟ್ ಏರ್ವೇಸ್ ಸಂಸ್ಥೆಯನ್ನು ಖರೀದಿಸುವ ಜೆಕೆಸಿ ಕನ್ಸಾರ್ಟಿಯಂನ ಪ್ರಯತ್ನ ವಿಫಲವಾಗಿದೆ. ಮಾಲಕತ್ವ ವರ್ಗಾವಣೆಯ ಷರತ್ತುಗಳು ಈಡೇರದ ಹಿನ್ನೆಲೆಯಲ್ಲಿ ಜೆಟ್ ಏರ್ವೇಸ್​ನ ಆಸ್ತಿಯನ್ನು ಮಾರಲು ಸುಪ್ರೀಂಕೋರ್ಟ್ ಆದೇಶಿಸಿದೆ. ಇದರೊಂದಿಗೆ ಜೆಟ್ ಏರ್ವೇಸ್ ಗತ ಇತಿಹಾಸದ ಪುಟಕ್ಕೆ ಸೇರಲಿದೆ.

ಜೆಟ್ ಏರ್ವೇಸ್​ಗೆ ಅಂತಿಮ ವಿದಾಯ ಹೇಳಿದ ಸುಪ್ರೀಂಕೋರ್ಟ್; ಏರ್ಲೈನ್ಸ್ ಸಂಸ್ಥೆಯ ಸಮಾಪ್ತಿಗೆ ಕೋರ್ಟ್ ಆದೇಶ
ಜೆಟ್ ಏರ್ವೇಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 07, 2024 | 3:41 PM

Share

ನವದೆಹಲಿ, ನವೆಂಬರ್ 7: ಐದು ವರ್ಷದಿಂದ ನಿಲುಗಡೆ ಆಗಿರುವ ಜೆಟ್ ಏರ್ವೇಸ್ ಸಂಸ್ಥೆ ಇನ್ನು ಗತ ಇತಿಹಾಸವಾಗಲಿದೆ. ಜಲನ್ ಕಲ್​ರಾಕ್ ಕನ್ಸಾರ್ಟಿಯಂಗೆ (ಜೆಕೆಸಿ) ಮಾಲಕತ್ವ ವರ್ಗಾವಣೆ ಮಾಡುವ ಪ್ರಯತ್ನಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆ ಹಾಕಿದೆ. ಅಷ್ಟೇ ಅಲ್ಲ, ಜೆಟ್ ಏರ್ವೇಸ್​ನ ಎಲ್ಲಾ ಆಸ್ತಿಗಳನ್ನು ಮಾರುವಂತೆ ಆದೇಶ ಹೊರಡಿಸಿದೆ. ಈ ಮೂಲಕ ಜೆಟ್ ಏರ್ವೇಸ್​ಗೆ ಕೋರ್ಟ್ ಅಂತಿಮ ವಿದಾಯ ಹೇಳಿದೆ. ಜೆಟ್ ಏರ್ವೇಸ್​ನ ಆಸ್ತಿಗಳನ್ನು ಮಾರಲು ಬರಖಾಸ್ತುದಾರರೊಬ್ಬರನ್ನು (ಲಿಕ್ವಿಡೇಟರ್) ನೇಮಿಸುವಂತೆ ಮುಂಬೈ ವಿಭಾಗದ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಗೆ ಸುಪ್ರೀಂಕೋರ್ಟ್ ಆದೇಶಿಸಿದೆ.

ನರೇಶ್ ಗೋಯಲ್ ಸ್ಥಾಪಿಸಿದ ಜೆಟ್ ಏರ್ವೇಸ್ ಸಂಸ್ಥೆ ದಿವಾಳಿ ಎದ್ದು 2019ರಲ್ಲಿ ಕಾರ್ಯಾಚರಣೆ ನಿಲ್ಲಿಸಿತ್ತು. ಅದನ್ನು ಖರೀದಿಸಲು ಯುಎಇ ದೇಶದ ಎನ್​ಆರ್​ಐ ಮುರಾರಿ ಜಲನ್ ಮತ್ತು ಕಲ್​ರಾಕ್ ಕ್ಯಾಪಿಟಲ್ ಪಾರ್ಟ್ನರ್ಸ್​ನ ಸಮೂಹವಾದ ಜೆಕೆಸಿ ಪ್ರಸ್ತಾಪಿಸಿತ್ತು. ನಿಗದಿತ ಸಮಯದಲ್ಲಿ ನಿಗದಿತ ಹಣ ನೀಡಬೇಕೆಂಬ ಷರತ್ತುಗಳೊಂದಿಗೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ಜೆಕೆಸಿಗೆ ಅವಕಾಶ ಕೊಟ್ಟಿತು. ಮಾಲಕತ್ವ ವರ್ಗಾವಣೆಗೆ ಅನುಮತಿ ಕೊಟ್ಟಿತು.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆ ಇಲಾನ್ ಮಸ್ಕ್ ಸಂಪತ್ತು ಸಖತ್ ಹೆಚ್ಚಳ; ವಿಶ್ವ ಶ್ರೀಮಂತರ ಪಟ್ಟಿ

ಆದರೆ, ನಿರ್ಣಯದ ಪ್ಲಾನ್ ಪ್ರಕಾರ ಯಾವುದೂ ನಡೆಯುತ್ತಿಲ್ಲ. ಮಾಲಕತ್ವ ವರ್ಗಾವಣೆ ಆಗಬಾರದು ಎಂದು ನ್ಯಾಯಮಂಡಳಿ ತೀರ್ಪು ಪ್ರಶ್ನಿಸಿ ಎಸ್​ಬಿಐ ಮುಂತಾದ ಸಾಲಗಾರ ಸಂಸ್ಥೆಗಳು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದವು. ಸಾಲಗಾರರ ವಾದವನ್ನು ಒಪ್ಪಿರುವ ಕೋರ್ಟ್, ಜೆಟ್ ಏರ್ವೇಸ್ ಆಸ್ತಿಯನ್ನು ಮಾರಿ ಸಂಬಂಧ ಪಟ್ಟವರಿಗೆ ಹಂಚಲು ಆದೇಶಿಸಿದೆ. ಸಂವಿಧಾನದಲ್ಲಿರುವ ಆರ್ಟಿಕಲ್ 142 ನೀಡುವ ವಿಶೇಷಾಧಿಕಾರ ಬಳಸಿ ಸುಪ್ರೀಂ ನ್ಯಾಯಪೀಠ ಈ ಮಹತ್ವದ ತೀರ್ಮಾನ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರು ಈ ನ್ಯಾಯಪೀಠದಲ್ಲಿದ್ದರು. ಅಕ್ಟೋಬರ್ 16ರಂದು ಈ ನ್ಯಾಯಪೀಠ ಎಲ್ಲಾ ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿತ್ತು.

ಜೆಟ್ ಏರ್ವೇಸ್ ಮಾರಾಟಕ್ಕೆ ಸಂಬಂಧಿಸಿದ ನಿರ್ಣಯದಲ್ಲಿ ಏನಿತ್ತು?

ಜೆಟ್ ಏರ್ವೇಸ್​ನ ಮಾಲಿಕತ್ವವನ್ನು ಪಡೆಯಲು ಜೆಕೆಸಿ ಸಂಸ್ಥೆಯು ಆರಂಭದಲ್ಲಿ 350 ಕೋಟಿ ರೂ ನೀಡುವುದೂ ಸೇರಿದಂತೆ ಒಟ್ಟಾರೆ 4,783 ಕೋಟಿ ರೂ ಹಣ ಪಾವತಿಸಬೇಕೆಂದು ನಿರ್ಣಯ ಮಾಡಲಾಗಿತ್ತು. ಆದರೆ, ಆರಂಭಿಕ ಪಾವತಿಯಾದ 350 ಕೋಟಿ ರೂ ಅನ್ನು ಜೆಕೆಸಿ ನೀಡದೇ ಇದ್ದರೂ ಮಾಲಕತ್ವ ವರ್ಗಾವಣೆಗೆ ಜೆಕೆಸಿ ಅನುಮತಿ ನೀಡಿತ್ತು. ಎಸ್​ಬಿಐ ಮೊದಲಾದ ಸಾಲಗಾರರ ಗುಂಪು ಈ ನಿರ್ಧಾರವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿದ್ದವು.

ಇದನ್ನೂ ಓದಿ: ಜಿಎಸ್​ಟಿ ಇಲಾಖೆ ಸ್ಪೆಷಲ್ ಡ್ರೈವ್; 18,000 ನಕಲಿ ಜಿಎಸ್​ಟಿ ನೊಂದಣಿ, 25 ಸಾವಿರ ಕೋಟಿ ರೂ ತೆರಿಗೆ ಕಳ್ಳತನ ಪತ್ತೆ

ಈಗ ಜೆಟ್ ಏರ್ವೇಸ್​ನ ಎಲ್ಲಾ ಆಸ್ತಿಯನ್ನೂ ಮಾರಿ, ಸಾಲಗಾರರು ಸೇರಿದಂತೆ ಯಾರ್ಯಾರಿಗೆ ಸಲ್ಲಬೇಕೋ ಅವರಿಗೆ ಹಣ ಹಂಚಲಾಗುತ್ತದೆ. ಆಸ್ತಿ ಹರಾಜು ಮಾಡಲು ಬರಖಾಸ್ತುದಾರರನ್ನು ನೇಮಿಸಲಾಗುತ್ತದೆ.

ಇದೇ ವೇಳೆ, ಜೆಟ್ ಏರ್ವೇಸ್​ನ ಸಂಸ್ಥಾಪಕ ನರೇಶ್ ಗೋಯಲ್ ಅವರು ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪ ಹೊತ್ತು ಸಂಕಷ್ಟದಲ್ಲಿದ್ದಾರೆ. ಜೈಲಿನಲ್ಲಿದ್ದ ಅವರು ಸದ್ಯ ಬೇಲ್ ಪಡೆದು ತಾತ್ಕಾಲಿಕವಾಗಿ ಹೊರಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ