Chip factory: ಮೈಕ್ರೋನ್, ಎಎಂಡಿ ಬಳಿಕ ಈಗ ಟಾಟಾ ಗ್ರೂಪ್ನಿಂದ ಚಿಪ್ ಫ್ಯಾಕ್ಟರಿ ಸ್ಥಾಪನೆಗೆ ಅರ್ಜಿ; ಈ ವರ್ಷವೇ ಘಟಕ ನಿರ್ಮಾಣ ಸಾಧ್ಯತೆ
Tata Group and Semiconductor Factory: ಭಾರತದಲ್ಲಿ ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸಲು ಮುಂದಾಗಿರುವ ಅಥವಾ ಆಸಕ್ತಿ ತೋರಿರುವ ಕಂಪನಿಗಳ ಪಟ್ಟಿಗೆ ಟಾಟಾ ಸೇರಿದೆ. ಗುಜರಾತ್ನ ಧೋಲೆರಾದಲ್ಲಿ ಟಾಟಾದಿಂದ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಯೂನಿಟ್ ತಯಾರಾಗುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದೆ. ಟಾಟಾಗೆ ಟೆಕ್ನಿಕಲ್ ಪಾರ್ಟ್ನರ್ ಸಿಕ್ಕು, ಸಂಪುಟದ ಅನುಮೋದನೆ ಸಿಕ್ಕ ಬಳಿಕ ಘಟಕ ನಿರ್ಮಾಣ ಶುರುವಾಗಬಹುದು.
ಗಾಂಧಿನಗರ್, ಜನವರಿ 12: ಐಫೋನ್ ಫ್ಯಾಕ್ಟರಿಗಳನ್ನು ನಡೆಸುತ್ತಿರುವ ಟಾಟಾ ಗ್ರೂಪ್ ಇದೀಗ ಗುಜರಾತ್ನಲ್ಲಿ ಸೆಮಿಕಂಡಕ್ಟರ್ ಘಟಕ (Semiconductor fab unit) ಸ್ಥಾಪನೆಗೆ ಮುಂದಾಗಿದೆ. ಮೊನ್ನೆಯ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ (Vibrant Gujarat Global Summit) ಟಾಟಾ ಸಂಸ್ಥೆ ಈ ವಿಚಾರವನ್ನು ಘೋಷಿಸಿದೆ. ಗುಜರಾತ್ನ ಧೋಲೇರಾದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್ ಸ್ಥಾಪಿಸುವುದಾಗಿ ಅದು ಹೇಳಿದೆ. ಈ ಮೂಲಕ ಭಾರತದಲ್ಲಿ ಬಹಳ ಮುಖ್ಯ ಎನಿಸಿರುವ ಚಿಪ್ ತಯಾರಿಕೆಯ ಫ್ಯಾಕ್ಟರಿ ಶುರುವಾಗಲಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಕೂಡ ಟಾಟಾ ಗ್ರೂಪ್ನ ಫ್ಯಾಕ್ಟರಿ ಪ್ರಸ್ತಾವವನ್ನು ಸ್ವಾಗತಿಸಿದ್ದಾರೆ. ಇದು ದೇಶಕ್ಕೆ ಬೇಕಾದ ಬಹಳ ಮುಖ್ಯ ಹೂಡಿಕೆ ಆಗಿದೆ ಎಂದು ವೈಷ್ಣವ್ ಬಣ್ಣಿಸಿದ್ದಾರೆ.
‘ಈ ವಿಚಾರದಲ್ಲಿ (ಟಾಟಾದಿಂದ ಸೆಮಿಕಂಡಕ್ಟರ್ ಸ್ಥಾಪನೆಯಾಗುವ ವಿಚಾರ) ಸಾಕಷ್ಟು ಬೆಳವಣಿಗೆ ಆಗಿದೆ. ಇದನ್ನು ಕ್ಯಾಬಿನೆಟ್ ಸಮ್ಮತಿಗೆ ತರಲಾಗುವುದು. ಸಂಪುಟದ ಅನುಮೋದನೆ ಬೇಕಾಗುತ್ತದೆ. ಅದು ಸಿಕ್ಕ ಬಳಿಕ ಫ್ಯಾಕ್ಟರಿ ನಿರ್ಮಾಣ ಆರಂಭ ಮಾಡಬಹುದು’ ಎಂದು ಸಚಿವ ವೈಷ್ಣವ್ ಹೇಳಿದ್ದಾರೆ.
ಇದನ್ನೂ ಓದಿ: Interim Budget 2024: ಮೊಬೈಲ್ ಬಿಡಿಭಾಗಗಳಿಗೆ ಆಮದು ಸುಂಕ ಕಡಿಮೆ ಮಾಡುವ ಸಾಧ್ಯತೆ; ಆ್ಯಪಲ್ನಂತಹ ಕಂಪನಿಗಳಿಗೆ ಅನುಕೂಲ
ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ ಅವರು ಈ ವರ್ಷವೇ ಪ್ರಾಜೆಕ್ಟ್ ಮೊದಲುಗೊಳ್ಳುತ್ತದೆ ಎಂದಿದ್ದಾರೆ.
ಆದರೆ, ಟಾಟಾ ಗ್ರೂಪ್ ಹಾಗೇ ಸುಮ್ಮನೆ ಸೆಮಿಕಂಡಕ್ಟರ್ ಘಟಕ ತೆರೆಯಲು ಆಗುವುದಿಲ್ಲ. ಚಿಪ್ ಫ್ಯಾಕ್ಟರಿ ತೆರೆಯುವಂತಹ ತಂತ್ರಜ್ಞಾನ ಯಾವ ಭಾರತೀಯ ಕಂಪನಿಗೂ ಇಲ್ಲ. ಹೀಗಾಗಿ, ಟೆಕ್ನಿಕಲ್ ಪಾರ್ಟ್ನರ್ ಸಂಸ್ಥೆಯೊಂದು ಬೇಕಾಗುತ್ತದೆ. ಅದು ಸಿಕ್ಕ ಬಳಿಕವಷ್ಟೇ ಟಾಟಾ ಸಂಸ್ಥೆಗೆ ಫ್ಯಾಕ್ಟರಿ ಸ್ಥಾಪನೆಗೆ ಅವಕಾಶ ಸಿಗುತ್ತದೆ.
ಈ ಹಿಂದೆ ವೇದಾಂತ ಸಂಸ್ಥೆ ಕೂಡ ಚಿಪ್ ಉತ್ಪಾದನಾ ಘಟಕ ಸ್ಥಾಪಿಸಲು ಅರ್ಜಿ ಹಾಕಿತ್ತು. ಆದರೆ, ತಾಂತ್ರಿಕ ಸಹವರ್ತಿ ಸಂಸ್ಥೆ ಸಿಕ್ಕಿರಲಿಲ್ಲ. ಹೀಗಾಗಿ ಅದರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.
ಇದನ್ನೂ ಓದಿ: Infosys-InSemi: ಬೆಂಗಳೂರಿನ ಸೆಮಿಕಂಡಕ್ಟರ್ ಡಿಸೈನ್ ಕಂಪನಿ ಇನ್ಸೆಮಿಯನ್ನು ಖರೀದಿಸಲು ಮುಂದಾದ ಇನ್ಫೋಸಿಸ್
ಅಮೆರಿಕದ ಮೈಕ್ರೋನ್ ಟೆಕ್ನಾಲಜಿ, ಎಎಂಡಿ ಸಂಸ್ಥೆಗಳು ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಕ್ಟರಿ ಸ್ಥಾಪಿಸುತ್ತಿವೆ. ಇವು ಘಟಕ ಸ್ಥಾಪಿಸುವ ತಂತ್ರಜ್ಞಾನ ಹೊಂದಿವೆ. ಹೀಗಾಗಿ, ಬೇರೆ ಕಂಪನಿಗಳನ್ನು ಅವಲಂಬಿಸುವ ಅವಶ್ಯಕತೆ ಇಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ