Telecom vs Whatsapp: ಭಾರತೀಯ ಟೆಲಿಕಾಂ ಕಂಪನಿಗಳ ಆದಾಯ ನುಂಗಿದ ವಾಟ್ಸಾಪ್ ಇತ್ಯಾದಿ ಆ್ಯಪ್​ಗಳು

TRAI Paper on Telecom Revenue In 10 Years: ಟೆಲಿಕಾಂ ಆಪರೇಟರುಗಳಿಗೆ ಧ್ವನಿ ಕರೆ ಮತ್ತು ಎಸ್ಸೆಮ್ಮೆಸ್​ಗಳಿಂದ ಸಿಗುತ್ತಿದ್ದ ಆದಾಯ ಕಳೆದ 10 ವರ್ಷಗಳಲ್ಲಿ ಗಣನೀಯವಾಗಿ ಇಳಿದಿರುವುದು ಟ್ರಾಯ್ ಪ್ರಕಟಿಸಿದ ವರದಿಯೊಂದರಲ್ಲಿ ಕಂಡುಬರುತ್ತದೆ.

Telecom vs Whatsapp: ಭಾರತೀಯ ಟೆಲಿಕಾಂ ಕಂಪನಿಗಳ ಆದಾಯ ನುಂಗಿದ ವಾಟ್ಸಾಪ್ ಇತ್ಯಾದಿ ಆ್ಯಪ್​ಗಳು
ಸಾಂದರ್ಭಿಕ ಚಿತ್ರ

Updated on: Jul 10, 2023 | 11:34 AM

ನವದೆಹಲಿ: ಏರ್​ಟೆಲ್, ಜಿಯೋ, ವೊಡಾಫೋನ್ ಐಡಿಯಾ ಇತ್ಯಾದಿ ಭಾರತೀಯ ಟೆಲಿಕಾಂ ಆಪರೇಟರ್​ಗಳ (Telecom Operators) ಕೆಲ ಆದಾಯಮೂಲವೇ ಬಹುತೇಕ ಮುಚ್ಚಿಹೋಗುವ ಸ್ಥಿತಿಯಲ್ಲಿದೆ. ಧ್ವನಿ ಕರೆ ಮತ್ತು ಎಸ್ಸೆಮ್ಮೆಸ್ ಸೇವೆಗಳಿಂದ ಟೆಲಿಕಾಂ ಕಂಪನಿಗಳಿಗೆ ಬರುತ್ತಿದ್ದ ಆದಾಯ ಕಳೆದ 10 ವರ್ಷದಲ್ಲಿ ನಶಿಸಿರುವುದು ಬೆಳಕಿಗೆ ಬಂದಿದೆ. ಭಾರತದ ಟೆಲಿಕಾಂ ನಿಯಂತ್ರಕ ಪ್ರಾಧಿಕಾರ ಟ್ರಾಯ್ (TRAI) ಇತ್ತೀಚೆಗೆ ಪ್ರಕಟಿಸಿದ ವರದಿಯೊಂದರಲ್ಲಿ ಕಳೆದ 10 ವರ್ಷಗಳ ಡಾಟಾವನ್ನು ಪ್ರಸ್ತುತಪಡಿಸಿದೆ. ಅದರ ಪ್ರಕಾರ ಧ್ವನಿ ಕರೆಗಳಿಂದ ಸಿಗುತ್ತಿದ್ದ ಆದಾಯ ಶೇ. 80ರಷ್ಟು ಕಡಿಮೆ ಆಗಿದೆ. ಇನ್ನು ಎಸ್ಸೆಮ್ಮೆಸ್ ಸಂದೇಶದಿಂದ ಸಿಗುತ್ತಿದ್ದ ಆದಾಯ ಬರೋಬ್ಬರಿ ಶೇ 94ರಷ್ಟು ಕಡಿಮೆ ಆಗಿದೆ. ಇದು 2013ರ ಜೂನ್ ಕ್ವಾರ್ಟರ್​ನಿಂದ 2022ರ ಡಿಸೆಂಬರ್ ಕ್ವಾರ್ಟರ್​ವರೆಗಿನ ಅವಧಿಯಲ್ಲಿ ಆಗಿರುವ ಬೆಳವಣಿಗೆಯ ಮಾಹಿತಿ.

ಒಟಿಟಿ ಪ್ಲಾಟ್​ಫಾರ್ಮ್​ಗಳಿಂದ ಎಸ್ಸೆಮ್ಮೆಸ್ ಧೂಳೀಪಟ

ವಾಟ್ಸಾಪ್, ಗೂಗಲ್ ಮೀಟ್, ಫೇಸ್​ಟೈಮ್ ಇತ್ಯಾದಿ ಓಟಿಟಿ ಆ್ಯಪ್​ಗಳನ್ನು ಮೆಸೇಜ್ ಕಳುಹಿಸಲು, ಧ್ವನಿ ಸಂವಹನ ನಡೆಸಲು ಹೆಚ್ಚೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಮೊಬೈಲ್ ಧ್ವನಿ ಕರೆ ಮತ್ತು ಎಸ್ಸೆಮ್ಮೆಸ್ ಸೇವೆಗಳನ್ನು ಬಳಸುವವರ ಸಂಖ್ಯೆ ಬಹಳ ಕಡಿಮೆ ಆಗಿದೆ. ಟ್ರಾಯ್ ತನ್ನ ಇತ್ತೀಚಿನ ವರದಿಯಲ್ಲಿ ಈ ಸಂಗತಿಯನ್ನು ತಿಳಿಸಿದೆ.

ಇದನ್ನೂ ಓದಿIT Return: ಒಂದಿಷ್ಟು ತೆರಿಗೆ ಉಳಿಸಲು ಆದಾಯ ಕಡಿಮೆ ತೋರಿಸದಿರಿ; ಜೈಲಿಗೆ ಹೋಗಬೇಕಾದೀತು ಜೋಕೆ..!

2013ರಿಂದ 2022ರವರೆಗೆ ಎಆರ್​ಪಿಯುನ (ARPU- ಪ್ರತೀ ಬಳಕೆದಾರನಿಂದ ಸಿಗುವ ಸರಾಸರಿ ಆದಾಯ) ಪ್ರಮುಖ ಅಂಶಗಳೆಲ್ಲವೂ ಕಡಿಮೆಗೊಂಡಿವೆ. ಡಾಟಾ ಆದಾಯ ಏರಿರುವುದು ಹೊರತುಪಡಿಸಿ ಏಆರ್​ಪಿಯುನ ಉಳಿದ ಪ್ರಮುಖ ಅಳತೆಗಳಲ್ಲಿ ವರಮಾನ ಕಡಿಮೆ ಆಗಿದೆ.

2013ರಿಂದ 2022ರವರೆಗೆ ಎಆರ್​ಪಿಯು 123.77 ರೂನಿಂದ 146.96 ರೂಪಾಯಿಗೆ ಏರಿದೆ. ಆದರೆ, ಡಾಟಾದಿಂದ ಸಿಗುವ ಆದಾಯ 10 ಪಟ್ಟು ಹೆಚ್ಚಾಗಿದೆ.

ಇದನ್ನೂ ಓದಿTomato: ಪೆಟ್ರೋಲ್​ಗಿಂತ ದುಬಾರಿಯಾದ ಟೊಮೆಟೋ ಬೆಲೆ ಯಾವಾಗ ಇಳಿಯುತ್ತೆ? ತಜ್ಞರು ಹೇಳೋದೇನು? ಇಲ್ಲಿದೆ ಡೀಟೇಲ್ಸ್

2013ರಲ್ಲಿ ಒಬ್ಬ ಬಳಕೆದಾರನಿಂದ ಧ್ವನಿ ಕರೆಗಳಿಂದ ಟೆಲಿಕಾಂ ಕಂಪನಿಗಳಿಗೆ ಸರಾಸರಿ 72.53 ರೂ ಆದಾಯ ಬರುತ್ತಿತ್ತು. ಈಗ ಅದು 14.79 ರೂಗೆ ಇಳಿದಿದೆ. ಇನ್ನು, ಎಸ್ಸೆಮ್ಮೆಸ್​ನಿಂದ 3.99 ರೂನಷ್ಟು ಸಿಗುತ್ತಿದ್ದ ಆದಾಯ ಈಗ ಕೇವಲ 23 ಪೈಸೆಗೆ ಇಳಿದಿದೆ.

ವಾಟ್ಸಾಪ್ ಇತ್ಯಾದಿಗಳ ಮೇಲೆ ನಿರ್ಬಂಧಕ್ಕೆ ಆಲೋಚನೆ

ವಾಟ್ಸಾಪ್ ಇತ್ಯಾದಿ ಒಟಿಟಿ ಆ್ಯಪ್​ಗಳನ್ನು ಲೈಸೆನ್ಸಿಂಗ್ ಫ್ರೇಮ್​ವರ್ಕ್ ಅಡಿಯಲ್ಲಿ ತರಲು ಟ್ರಾಯ್ ಚಿಂತನೆ ನಡೆಸಿದೆ. ಈ ಆ್ಯಪ್​ಗಳು ಎಂಟ್ರಿ ಫೀಸ್ ಪಾವತಿಸಬೇಕಾಗುತ್ತದೆ. ಆದಾಯ ಹಂಚಿಕೊಳ್ಳುವುದು, ಕಾಲ್ ರೆಕಾರ್ಡ್ ಒದಗಿಸುವುದು ಇತ್ಯಾದಿ ಕಾನೂನು ಪಾಲನೆ ಮಾಡಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us