ಇತ್ತೀಚೆಗೆ ಕೊವಿಡ್-19 ಕಾರಣದಿಂದಾಗಿ ಸಾರ್ವಜನಿಕ ಸಾರಿಗೆಯನ್ನು ಸಾಧ್ಯವಾದಷ್ಟೂ ಬಳಕೆ ಮಾಡದಿರುವ ಆಲೋಚನೆಯಲ್ಲಿ ಇರುವ ಜನರೇ ಹೆಚ್ಚಾಗಿದ್ದಾರೆ. ತಮ್ಮದೂ ಅಂತ ಒಂದು ಕಾರಿದ್ದರೆ ಚೆನ್ನಾಗಿರುತ್ತದೆ ಎಂದು ಆಲೋಚಿಸಿ, ಎಂಟ್ರಿ ಲೆವೆಲ್ ಕಾರುಗಳನ್ನು ಕೊಳ್ಳುತ್ತಾರೆ. ಇನ್ನೂ ಕೆಲವರು ತಮ್ಮ ಅಗತ್ಯ ಎಷ್ಟಿದೆ ಹಾಗೂ ಬಜೆಟ್ ಇತ್ಯಾದಿಗಳನ್ನು ಗಮನಿಸಿ, ಸೆಕೆಂಡ್ ಹ್ಯಾಂಡ್ ಕಾರಿನ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಮತ್ತೂ ಕೆಲವರು ಸೀಮಿತ ಅವಧಿಗೆ ಖರೀದಿಸಿ, ಅಂದರೆ ಕೊವಿಡ್-19 ಬಿಕ್ಕಟ್ಟು ಮುಗಿದ ಮೇಲೆ ಮಾರುವ ಆಲೋಚನೆಯೊಂದಿಗೆ ಕಡಿಮೆ ಬಂಡವಾಳದೊಂದಿಗೆ ಕೊಂಡುಕೊಳ್ಳುತ್ತಿದ್ದಾರೆ. ಒಂದು ವೇಳೆ ನೀವೂ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬೇಕು ಅಂತಿದ್ದಲ್ಲಿ ಈ ಮುಖ್ಯ ಅಂಶಗಳನ್ನು ಗಮನಿಸಿ.
1. ವಾಹನದ ಬಗೆ, ಇಸವಿ ಹಾಗೂ ಮಾಡೆಲ್ ಆಯ್ಕೆ
ಮೊದಲಿಗೆ ನೀವು ಯಾವ ಬಗೆಯ ಕಾರು ಖರೀದಿ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು. ಇದೇ ಮೊದಲ ಸಲ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುತ್ತಿದ್ದಲ್ಲಿ ಎಂಟ್ರಿ-ಲೆವೆಲ್ನದೇ ಉತ್ತಮ. ಅದರಲ್ಲೂ ಬಜೆಟ್ ಕಡಿಮೆ ಇದ್ದಲ್ಲಿ ನಿಮ್ಮ ಆದ್ಯತೆ ಇದೇ ಆಗಿರಲಿ. ಎಂಟ್ರಿ ಲೆವೆಲ್ ಕಾರಿನಿಂದ ಆರಂಭವಾಗಿ ನಿಧಾನಕ್ಕೆ ಭವಿಷ್ಯದಲ್ಲಿ ದೊಡ್ಡ ಕಾರನ್ನು ಕೊಂಡುಕೊಳ್ಳಬಹುದು. ಯಾವ ರೇಂಜಿನದು, ಕೊಳ್ಳುವ ಬೆಲೆ, ವಾರ್ಷಿಕ ನಿರ್ವಹಣೆ ವೆಚ್ಚ ಅಂತ ಅಂದುಕೊಂಡಿರುತ್ತೀರೋ ಅದಕ್ಕೆ ಬದ್ಧರಾಗಿರಬೇಕು.
2. ಹೋಲಿಕೆ ಮಾಡಬೇಕು
ಈಗೆಲ್ಲ ಹಲವಾರು ಆನ್ಲೈನ್ ಪ್ಲಾಟ್ಫಾರ್ಮ್ಗಳಿವೆ. ನಿಮ್ಮ ಬಜೆಟ್ನೊಳಗೆ ಯಾವುದು ಒಳ್ಳೆ ಡೀಲ್ ಎಂದು ಹೋಲಿಕೆ ಮಾಡುವುದಕ್ಕೆ ಸಾಧ್ಯವಿದೆ. ನೀವು ಖರೀದಿ ಮಾಡಲಿರುವ ಕಾರು ಎಷ್ಟು ಹಳೆಯದು ಹಾಗೂ ಅದರ ಸ್ಥಿತಿ ಏನು ಎಂಬ ಬಗ್ಗೆ ಗಮನ ಇರಲಿ. 2-3 ವರ್ಷಕ್ಕಿಂತ ಹಳೆಯ ಕಾರುಗಳಿಗೆ ಬ್ಯಾಂಕ್ಗಳಿಂದ ಹಣಕಾಸು ಸಾಲ ಸೌಲಭ್ಯ ಸಿಗಲ್ಲ. ಇದರ ಜತೆಗೆ ಎಷ್ಟು ಕಿಲೋಮೀಟರ್ ಕಾರು ಓಡಿದೆ, ಯಾರು ಬಳಸುತ್ತಿದ್ದರು, ಬಳಕೆ ಆಗುತ್ತಿದ್ದ ಜಾಗ ಎಂಥದ್ದು, ಅಪಘಾತ ಅಥವಾ ಮಾಡಿಫಿಕೇಷನ್ಗಳು ಮುಂತಾದವು ಪರಿಶೀಲಿಸಬೇಕು. ಇವುಗಳು ಸಾಲ ಮತ್ತು ಇನ್ಷೂರೆನ್ಸ್ ಅರ್ಹತೆ ಮೇಲೆ ಪರಿಣಾಮ ಬೀರುತ್ತದೆಯೇ ಅಂತಲೂ ನೋಡಬೇಕು. ಕಾರಿನ ಸರ್ವೀಸ್ ಹಿಸ್ಟರಿ ಬಗ್ಗೆಯೂ ಕೇಳಬೇಕು.
3. ಆಫರ್ಗಳು ಮತ್ತು ಡೀಲ್ಗಳು
ಕೆಲವು ಡೀಲರ್ಗಳು ಬ್ಯಾಂಕ್ಗಳ ಜತೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಆ ಮೂಲಕವಾಗಿ ಆ ಡೀಲರ್ ಬಳಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವಾಗ ಉತ್ತಮ ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ. ಇನ್ನು ಕೆಲವು ಕಂಪೆನಿಗಳು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವಂಥದ್ದು, ಫಿನ್ಟೆಕ್ ಸಂಸ್ಥೆಗಳು, ಎನ್ಬಿಎಫ್ಸಿಗಳು ಮತ್ತು ಬ್ಯಾಂಕ್ಗಳ ಜತೆಗೆ ಸಹಯೋಗ ಹೊಂದಿರುತ್ತವೆ. ಖರೀದಿದಾರರಿಗೆ ಶೀಘ್ರವಾಗಿ ಸಾಲ ಒದಗಿಸುತ್ತವೆ. ಸಾಲ ತೆಗೆದುಕೊಳ್ಳುವುದಕ್ಕೆ ಮುಂಚೆ ವಿವಿಧ ಸಂಸ್ಥೆಗಳ ಜತೆ ಹೋಲಿಕೆ ಮಾಡುವುದು ಉತ್ತಮ. ಪ್ರೀ ಓನ್ಡ್ ಕಾರುಗಳಿಗೆ ಹೊಸ ಕಾರುಗಳಿಗಿಂತ ಶೇ 3ರಿಂದ ಶೇ 7ರಷ್ಟು ಹೆಚ್ಚು ಬಡ್ಡಿ ದರ ಇರುತ್ತದೆ. ಸದ್ಯಕ್ಕೆ ಸೆಕೆಂಡ್ ಹ್ಯಾಂಡ್ ಸಾಲದ ದರವು ಶೇ 10ರಷ್ಟು ಮೇಲ್ಪಟ್ಟು ದೊರೆಯುತ್ತದೆ. ಹೊಸ ಕಾರುಗಳಿಗೆ ಬಡ್ಡಿ ದರ ಶೇ 7.5ರಿಂದ ಆರಂಭವಾಗುತ್ತದೆ. ಇನ್ನು ಸಾಲದ ಪ್ರೊಸೆಸಿಂಗ್ ಶುಲ್ಕ ಶೇ 1ರಿಂದ 3ರಷ್ಟು ಆಗುತ್ತದೆ.
4. ಇತರ ಸಾಲದ ಆಯ್ಕೆಗಳು
ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಪೂರ್ಣ ಪ್ರಮಾಣದಲ್ಲಿ ಸಾಲ ಸಿಗಲ್ಲ. ಅದರ ಮೌಲ್ಯಮಾಪನದ ಶೇ 60ರಷ್ಟು ಮಾತ್ರ ಸಿಗುತ್ತದೆ. ಜತೆಗೆ ಈಗಿನ ಸನ್ನಿವೇಶದಲ್ಲಿ ಬಡ್ಡಿ ದರ ಕೂಡ ಹೆಚ್ಚು. ಒಂದು ವೇಳೆ ಹೌಸಿಂಗ್ ಲೋನ್ ಇದ್ದಲ್ಲಿ ಟಾಪ್ ಅಪ್ ಮಾಡಿಸಿ. ಇನ್ನೂ ಒಂದು ಉದಾಹರಣೆ ಅಂದರೆ, ಗೋಲ್ಡ್ ಲೋನ್. ಅದರ ಬಡ್ಡಿ ದರ ಶೇ 8.80ರಿಂದ ಆರಂಭವಾಗುತ್ತದೆ. ಇವೆರಡೂ ಸಿಗುತ್ತಿಲ್ಲ ಅಂತಾದರೆ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು.
ಕಾರು ಕೊಳ್ಳುವ ಮುಂಚೆ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (ಆರ್ಸಿ), ಇನ್ಷೂರೆನ್ಸ್, ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (ಎನ್ಒಸಿ), ಪಲ್ಯೂಷನ್ ಅಂಡರ್ ಕಂಟ್ರೋಲ್ (ಪಿಯುಸಿ) ಪ್ರಮಾಣಪತ್ರವನ್ನು ಅಂತಿಮಗೊಳ್ಳುವ ಮುನ್ನ ಪರಿಶೀಲನೆ ಮಾಡಬೇಕು. ವಾಹನದ ಮಾಲೀಕತ್ವದ ವರ್ಗಾವಣೆಗೆ ಫಾರ್ಮ್ 29 ಮತ್ತು 30 ಬೇಕಾಗುತ್ತದೆ. ನೆನಪಿರಲಿ, ಖರೀದಿದಾರರಿಂದ ಮಾರಾಟಗಾರರಿಗೆ ಇನ್ಷೂರೆನ್ಸ್ ಪಾಲಿಸಿ ವರ್ಗಾವಣೆ ಆಗಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು.
ಇದನ್ನೂ ಓದಿ: Used car loans: ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಯಾವ ಬ್ಯಾಂಕ್ನಲ್ಲಿ ಬಡ್ಡಿ ದರ ಕಡಿಮೆ?
(These 4 Points To Be Noted Before Purchasing Pre Owned Cars)
Published On - 12:01 pm, Thu, 22 July 21