ಸಾಂದರ್ಭಿಕ ಚಿತ್ರ
ದಾಂಪತ್ಯ ಜೀವನವು ಸದಾ ಖುಷಿಯಿಂದ ಕೂಡಿರಬೇಕೆಂದು ಬಯಸುವುದು ಸಹಜ. ಆದರೆ, ಇಬ್ಬರ ಇಷ್ಟ ಕಷ್ಟಗಳು ಭಿನ್ನವಾಗಿದ್ದರೆ ಸಂಸಾರ ಸಾಗಿಸುವುದೇ ದೊಡ್ಡ ಸವಾಲಿನ ವಿಚಾರ. ಅದರಲ್ಲಿ ಆರ್ಥಿಕ ಸ್ಥಿತಿಯು ಉತ್ತಮವಾಗಿದ್ದರೆ ಮಾತ್ರ ಸಂಸಾರದ ಬಂಡಿಯು ಯಾವುದೇ ಅಡೆತಡೆಗಳಿಲ್ಲದೇ ಸಾಗಲು ಸಾಧ್ಯ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಇಬ್ಬರ ಖರ್ಚು ವೆಚ್ಚಗಳ ಬಗ್ಗೆ ಇಬ್ಬರಿಗೂ ಕೂಡ ತಿಳಿದಿರಬೇಕು. ಭವಿಷ್ಯದ ದೃಷ್ಟಿಯಿಂದ ದಂಪತಿಗಳಿಬ್ಬರೂ ಹಣಕಾಸಿನ ಯೋಜನೆಗಳ ಬಗ್ಗೆ ಹೆಚ್ಚು ಗಮನಹರಿಸಬೇಕು. ಈಗ ತಾನೇ ಮದುವೆಯಾಗಿದ್ದರೆ ನಿಮ್ಮ ಸುಂದರ ಬದುಕಿಗಾಗಿ ಹಣಕಾಸಿನ ನಿರ್ವಹಣೆಯನ್ನು ಈ ರೀತಿಯಾಗಿ ಮಾಡಿ.
- ವೈಯಕ್ತಿಕ ಮತ್ತು ಹಣಕಾಸಿನ ಗುರಿಗಳನ್ನು ಚರ್ಚಿಸಿ : ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಖರ್ಚು ವೆಚ್ಚಗಳು ದುಪ್ಪಟ್ಟಾಗುತ್ತದೆ. ಹೀಗಾಗಿ ಸಂಗಾತಿಯೊಂದಿಗೆ ಪ್ರತಿ ತಿಂಗಳ ಸಂಪಾದನೆ ಎಷ್ಟು, ಎಷ್ಟು ಉಳಿತಾಯ ಮಾಡುತ್ತೀರಿ. ನಿಮ್ಮ ಬ್ಯಾಂಕ್ ಖಾತೆಗಳು, ಹೂಡಿಕೆಗಳು, ಉಳಿದ ಆದಾಯದ ಮೂಲಗಳು, ಸಾಲದ ಬಗ್ಗೆ ಮುಕ್ತವಾಗಿ ಚರ್ಚಿಸುವುದು ಅಗತ್ಯ. ಅದಲ್ಲದೆ ಹಣಕಾಸಿನ ಗುರಿಯನ್ನು ಹೊಂದಿಸುವುದು ಕೂಡ ಹಣಕಾಸಿನ ನಿರ್ವಹಣೆಗೆ ಸಹಾಯ ಮಾಡುತ್ತದೆ.
- ಮನೆಯ ಖರ್ಚುವೆಚ್ಚಗಳನ್ನು ಹಂಚಿಕೊಳ್ಳಿ : ಮದುವೆಗೂ ಮುಂಚೆ ಖರ್ಚುಗಳು ಅಷ್ಟೇನು ಇರುವುದಿಲ್ಲ. ಆದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸತಿ ಪತಿಗಳಿಬ್ಬರೂ ಉದ್ಯೋಗಸ್ಥರಾಗಿದ್ದರೆ ಮನೆಯ ಖರ್ಚುಗಳು ಒಬ್ಬರಿಗೆ ಹೊರೆಯಾಗದಿರಲಿ. ಅದಲ್ಲದೇ ಮನೆಯ ಖರ್ಚು ವೆಚ್ಚದಲ್ಲಿ ಸಮಾನ ಹಂಚಿಕೆಯಿರಲಿ. ಯಾವಾಗ, ಯಾರು ಎಷ್ಟು ಖರ್ಚು ಮಾಡಬೇಕು ಈ ಬಗ್ಗೆ ಇಬ್ಬರೂ ಮುಕ್ತವಾಗಿ ಚರ್ಚಿಸಿ. ಈ ಮಾತುಕತೆಯು ಹಣಕಾಸನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆ.
- ಜಂಟಿ ಖಾತೆಯನ್ನು ತೆರೆಯಿರಿ : ಮದುವೆಗೆ ಮೊದಲು ವೈಯಕ್ತಿಕ ಬ್ಯಾಂಕ್ ಖಾತೆಗಳು ಮತ್ತು ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ ಅದು ಹಾಗೆಯೇ ಇರಲಿ. ಆದರೆ ಸಂಗಾತಿಯೊಂದಿಗೆ ಮಾತನಾಡಿ ಜಂಟಿ ಖಾತೆ ತೆರೆಯಿರಿ. ಸಂಬಳದ ಇಂತಿಷ್ಟು ಹಣವನ್ನು ಇಬ್ಬರೂ ಚರ್ಚಿಸಿ ಜಂಟಿ ಖಾತೆಯಲ್ಲಿ ಹೂಡಿಕೆ ಮಾಡುವುದು ಉತ್ತಮ. ಈ ಉಳಿತಾಯವು ದಂಪತಿಗಳ ಬೇಡಿಕೆಯನ್ನು ಈಡೇರಿಸಿಕೊಳ್ಳಲು ನೆರವಾಗುತ್ತದೆ.
- ಬಜೆಟ್ ಪ್ಲಾನ್ ಮಾಡಿ ಸರಿಯಾಗಿ ನಿರ್ವಹಿಸಿ : ದಂಪತಿಗಳಿಬ್ಬರೂ ತಿಂಗಳಿಗೆ ಎಷ್ಟು ದುಡಿಯುತ್ತೀರಿ ಎನ್ನುವುದರ ಮೇಲೆ ಬಜೆಟ್ ಪ್ಲಾನ್ ಮಾಡಿ. ಈ ರೀತಿ ಯೋಜನೆ ಹಾಕಿಕೊಳ್ಳುವುದು ನಮ್ಮಲ್ಲಿರುವ ಅಲ್ಪಸ್ವಲ್ಪ ಹಣದಲ್ಲಿಯೇ ಹೇಗೆ ಬದುಕಬೇಕು ಎಂಬುದಕ್ಕೆ ಮಿತಿಯನ್ನು ಹಾಕಿದಂತಾಗುತ್ತದೆ. ಹೀಗಾಗಿ ಬಜೆಟ್ ಯೋಜನೆ ರೂಪಿಸಿ ಹಣವನ್ನು ನಿರ್ವಹಿಸುತ್ತ ಗಮನ ಕೊಡಿ.
- ತುರ್ತು ನಿಧಿಯಿರಲಿ : ಸಮಯ ಸಂದರ್ಭಗಳು ಒಂದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ತುರ್ತು ಪರಿಸ್ಥಿತಿಯಲ್ಲಿ ಕೈಯಲ್ಲಿ ಹಣವೆ ಇಲ್ಲದೇ ಹೋಗಬಹುದು. ಸಂಗಾತಿಗೆ ಕೆಲಸವಿಲ್ಲದಿದ್ದಾಗ, ಆನಾರೋಗ್ಯ ಇನ್ನಿತ್ತರ ಸಂದರ್ಭದಲ್ಲಿ ಉಳಿತಾಯ ಮಾಡಿದ ಈ ಹಣವು ಉಪಯೋಗಕ್ಕೆ ಬರುತ್ತದೆ. ಹೀಗಾಗಿ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜೀವನ ನಡೆಸಲು ಸಾಕಾಗುವಷ್ಟು ಹಣವನ್ನು ತುರ್ತು ನಿಧಿಯ ಭಾಗವಾಗಿ ಮೀಸಲಿಡುವುದು ಒಳ್ಳೆಯದು.
- ನಿಮ್ಮ ವಿಮಾ ರಕ್ಷಣೆಯನ್ನು ಪರಿಶೀಲಿಸಿ ಎಂದಿಗೂ ನಿರ್ಲಕ್ಷಿಸಬೇಡಿ : ಹೆಚ್ಚಿನ ದಂಪತಿಗಳು ಹಣಕಾಸಿನ ನಿರ್ವಹಣೆ ಮಾಡುವ ಆತುರದಲ್ಲಿ ವಿಮಾ ರಕ್ಷಣೆಯನ್ನು ನಿರ್ಲಕ್ಷಿಸುತ್ತಾರೆ. ಆದರೆ ಇದು ಹಣಕಾಸಿನ ಯೋಜನೆಯ ನಿರ್ಣಾಯಕ ಭಾಗವಾಗಿದೆ. ಒಂದಾದರೂ ಜೀವ ವಿಮಾ ಪಾಲಿಸಿ ಹಾಗೂ ಆರೋಗ್ಯ ವಿಮಾ ಪಾಲಿಸಿಯು ಇರಲಿ. ಆರೋಗ್ಯವು ಕೈ ಕೊಟ್ಟಾಗ ಆರೋಗ್ಯ ವಿಮಾ ಪಾಲಿಸಿ ಇದ್ದರೆ ಆರ್ಥಿಕ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಅದಲ್ಲದೇ ನೀವು ಮಾಡಿಸಿರುವ ವಿಮಾ ಪಾಲಿಸಿಯ ಕವರೇಜ್ ಹೇಗಿದೆ? ಇಲ್ಲವಾದರೆ ಹೆಚ್ಚಿಸಬೇಕೇ ಎಂದು ಒಮ್ಮೆ ಸಂಗಾತಿಯೊಂದಿಗೆ ಚರ್ಚಿಸುವುದು ಉತ್ತಮ.
- ಸಾಲವನ್ನು ಜಾಣತನದಿಂದ ನಿಭಾಯಿಸಿ : ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಾಲದ ಹೊರೆಯು ಹೆಚ್ಚಾದರೆ ಜೀವನ ನಡೆಸುವುದೇ ಕಷ್ಟವಾಗುತ್ತದೆ. ಮದುವೆಗಾಗಿ ಮಾಡಿದ ಸಾಲವಿದ್ದರೆ ಅದನ್ನು ಆದಷ್ಟು ಬೇಗನೇ ಪಾವತಿಸಿ. ಮುಂಬರುವ ದಿನಗಳಲ್ಲಿ ಮನೆ ಅಥವಾ ಕಾರು ಖರೀದಿಸುವ ಯೋಜನೆಯಿದ್ದರೆ ಆದಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ತೆಗೆಯಿರಿ. ಅನಗತ್ಯ ಸಾಲವನ್ನು ಮಾಡುವುದು ತಪ್ಪಿಸಿ.
- ನಿವೃತ್ತಿ ನಂತರದ ಜೀವನಕ್ಕಾಗಿ ಹಣವನ್ನು ಉಳಿಸಿ : ನಿವೃತ್ತಿ ಹೊಂದಿದ ಬಳಿಕ ಕೈಯಲ್ಲಿ ಹಣವಿಲ್ಲದೇ ಇದ್ದರೆ ಜೀವನ ನಡೆಸುವುದು ಕಷ್ಟವಾಗುತ್ತದೆ. ನಿವೃತ್ತಿ ನಂತರದಲ್ಲಿ ದೈನಂದಿನ ವೆಚ್ಚ, ಆರೋಗ್ಯ ವೆಚ್ಚಕ್ಕೆ ಸಂಬಂಧಪಟ್ಟಂತೆ ಹಣವನ್ನು ಈಗಿನಿಂದಲೇ ಉಳಿಸುವುದು ಅತ್ಯಗತ್ಯ. ಹೀಗಾಗಿ ದಂಪತಿಗಳಿಬ್ಬರೂ ಕೆಲಸ ಮಾಡುತ್ತಿದ್ದರೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ಪಿಪಿಎಫ್ ಅಥವಾ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (ಎನ್‌ಪಿಎಸ್) ಸೇರಿದಂತೆ ಇನ್ನಿತ್ತರ ಮಾರ್ಗಗಳಲ್ಲಿ ಹಣ ಉಳಿತಾಯ ಮಾಡಿ, ಇದು ನಿವೃತ್ತಿ ನಂತರದಲ್ಲಿ ಉಪಯೋಗಕ್ಕೆ ಬರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ