ಹೊಗೆಸೊಪ್ಪು ಕೃಷಿ ಲಾಭದಾಯಕವಾ? ತಂಬಾಕು ಬೆಳೆಯಲು ಅನುಮತಿ ಪಡೆಯುವುದು ಹೇಗೆ? ಇಲ್ಲಿದೆ ವಿವರ
Tobacco cultivation in India: ಚೀನಾ ಬಿಟ್ಟರೆ ತಂಬಾಕನ್ನು ಅತಿಹೆಚ್ಚು ಬೆಳೆಯುವ ದೇಶ ಭಾರತ ಆಗಿದೆ. ಗುಜರಾತ್, ಆಂಧ್ರ, ಉತ್ತರಪ್ರದೇಶ, ಕರ್ನಾಟಕದಲ್ಲಿ ಹೆಚ್ಚು ಹೊಗೆಸೊಪ್ಪು ಬೆಳೆಯಲಾಗುತ್ತದೆ. ಭಾರತದಲ್ಲಿ ಹೊಗೆಸೊಪ್ಪು ಬೆಳೆಯಲು ರೈತರು ಸರ್ಕಾರದಿಂದ ಅನುಮತಿ ಪಡೆಯಬೇಕು. ಕೀಟಬಾಧೆ ಇತ್ಯಾದಿ ಕಾರಣದಿಂದ ತಂಬಾಕು ಬೆಳೆಗಾರರು ಸಂಕಷ್ಟ ಅನುಭವಿಸುತ್ತಿರುವುದು ಹೌದು.
ಹೊಗೆಸೊಪ್ಪು ಅಥವಾ ತಂಬಾಕಿಗೆ ಬಹಳ ಬೇಡಿಕೆ ಇದೆ. ತಂಬಾಕು ಹೆಚ್ಚಾಗಿ ಬಳಕೆಯಾಗುವುದು ಸಿಗರೇಟುಗಳಿಗೆ. ಹೀಗಾಗಿ, ಈ ಹೊಗೆಸೊಪ್ಪಿಗೆ ಬೇಡಿಕೆ ಇದ್ದೇ ಇರುತ್ತದೆ. ಕೆಲ ಔಷಧಗಳ ತಯಾರಿಕೆ, ಕೀಟನಾಶಕಗಳ ತಯಾರಿಕೆಗೂ ತಂಬಾಕನ್ನು ಬಳಸಲಾಗುತ್ತದೆ. ವಿಶ್ವದಲ್ಲಿ ಅತಿಹೆಚ್ಚು ತಂಬಾಕು ಬೆಳೆಯುವ ದೇಶಗಳ ಸಾಲಿನಲ್ಲಿ ಚೀನಾ ನಂತರ ಎರಡನೇ ಸ್ಥಾನ ಭಾರತದ್ದು. ಅತಿಹೆಚ್ಚು ತಂಬಾಕು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕವೂ ಇದೆ. ಗುಜರಾತ್, ಆಂಧ್ರ, ಉತ್ತರಪ್ರದೇಶದಲ್ಲಿ ಅತಿಹೆಚ್ಚು ತಂಬಾಕು ಉತ್ಪಾದನೆ ಆಗುತ್ತದೆ. ನಂತರದ ಸ್ಥಾನ ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಬಿಹಾರದ್ದು. ಒಟ್ಟಾರೆ ಭಾರತದಲ್ಲಿ ವರ್ಷಕ್ಕೆ 8 ಲಕ್ಷ ಟನ್ನಷ್ಟು ಹೊಗೆಸೊಪ್ಪು ಬೆಳೆಯಲಾಗುತ್ತದೆ.
ಹೊಗೆಸೊಪ್ಪು ಬೆಳೆಯಲು ಸರ್ಕಾರದ ಅನುಮತಿ ಬೇಕು…
ತಂಬಾಕು ಕಾನೂನಾತ್ಮಕವಾಗಿ ನಿಯಂತ್ರಿತವಾಗಿರುವ ವಸ್ತು. ಮುಕ್ತವಾಗಿ ಇದನ್ನು ಬೆಳೆಯಲು ಸಾಧ್ಯವಿಲ್ಲ. ಸರ್ಕಾರದಿಂದ ಅನುಮತಿ ಬೇಕು. ಸರ್ಕಾರ ಒಂದು ವರ್ಷದಲ್ಲಿ ನಿರ್ದಿಷ್ಟ ಪ್ರಮಾಣದ ತಂಬಾಕು ಉತ್ಪಾದನೆಗೆ ನಿರ್ಧಾರ ಮಾಡುತ್ತದೆ. ಅದರಂತೆ ತಂಬಾಕು ಬೆಳೆಗಾರರಿಗೆ ಅನುಮತಿಸುತ್ತದೆ.
ತಂಬಾಕು ಕೃಷಿ ಮಾಡಬೇಕೆನ್ನುವವರು ತಂಬಾಕು ಮಂಡಳಿಯಲ್ಲಿ ನೊಂದಾಯಿಸಿಕೊಳ್ಳಬೇಕು. ಅಲ್ಲಿ ಅನುಮತಿ ಪಡೆದ ಬಳಿಕವಷ್ಟೇ ತಂಬಾಕು ಬೆಳೆಯಲು ಸಾಧ್ಯ. ಅನುಮತಿ ಇಲ್ಲದೇ ಬೆಳೆದ ತಂಬಾಕನ್ನು ಮಾರಲು ಆಗುವುದಿಲ್ಲ.
ಇದನ್ನೂ ಓದಿ: ಎ ಮತ್ತು ಬಿ ಖಾತಾ ಎಂದರೇನು? ಗುರುತಿಸುವುದು ಹೇಗೆ, ಬಿ ಖಾತಾ ಇದ್ದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ
ತಂಬಾಕು ಕೃಷಿ ಲಾಭದಾಯಕವಾ?
ಕರ್ನಾಟಕದಲ್ಲಿ ತಂಬಾಕನ್ನು ಶಿವಮೊಗ್ಗ, ಮೈಸೂರು, ತುಮಕೂರು ಮೊದಲಾದ ಕೆಲ ಭಾಗಗಳಲ್ಲಿ ಬೆಳೆಯಲಾಗುತ್ತದೆ. 20 ಡಿಗ್ರಿಯಿಂದ 30 ಡಿಗ್ರಿವರೆಗಿನ ಉಷ್ಣಾಂಶದಲ್ಲಿ ಇದು ಉತ್ತಮವಾಗಿ ಬೆಳೆಯುತ್ತದೆ.
ತಜ್ಞರ ಪ್ರಕಾರ ತಂಬಾಕು ಬೆಳೆಯಿಂದ ಒಂದು ಎಕರೆಯಲ್ಲಿ 2ರಿಂದ 4 ಲಕ್ಷ ರೂ ಆದಾಯ ಬರುತ್ತದೆ. ನಿವ್ವಳ ಲಾಭ ಒಂದು ಎಕರೆಗೆ ಸರಾಸರಿಯಾಗಿ 30,000 ರೂ ನಿರೀಕ್ಷಿಸಬಹುದು.
ಹೊಗೆಸೊಪ್ಪು ಕೃಷಿಯಲ್ಲಿನ ತೊಡಕುಗಳೇನು?
ತಂಬಾಕು ಬೆಳೆಗಾರರು ಸಾಕಷ್ಟು ನಷ್ಟ ಕಂಡ ಉದಾಹರಣೆಗಳು ಸಾಕಷ್ಟಿವೆ. ಸರಿಯಾದ ಮಳೆ ಇಲ್ಲದ್ದು ಒಂದು ಕಾರಣವಾದರೆ, ಕೀಟ ಬಾಧೆ ಮತ್ತೊಂದು ಪ್ರಮುಖ ಕಾರಣ. ಹೊಗೆಸೊಪ್ಪು ಬೆಳೆಗೆ ಕೀಟ ಬಾಧ ಬಹಳ ಹೆಚ್ಚಿರುತ್ತದೆ. ಅಪಾರ ಪ್ರಮಾಣದಲ್ಲಿ ವಿವಿಧ ರೀತಿಯ ಕೀಟನಾಶಕಗಳನ್ನು ಸಿಂಪಡಿಸಬೇಕಾಗುತ್ತದೆ. ಇದರ ವೆಚ್ಚವೇ ತಂಬಾಕು ಬೆಳೆಗಾರರನ್ನು ಪ್ರಮುಖವಾಗಿ ಕಾಡುತ್ತದೆ.
ಇದನ್ನೂ ಓದಿ: ಅಪಘಾತಗೊಂಡರೆ ಆಸ್ಪತ್ರೆಯಲ್ಲಿ ಕ್ಯಾಷ್ಲೆಸ್ ಚಿಕಿತ್ಸೆ; ರಾಷ್ಟ್ರಾದ್ಯಂತ ಯೋಜನೆ ಜಾರಿ: ನಿತಿನ್ ಗಡ್ಕರಿ
ಹಾಗೆಯೇ, ಈ ಕೃಷಿಯಲ್ಲಿ ಕೂಲಿಯಾಳುಗಳನ್ನು ಹೊಂದಿಸುವುದೂ ಕೂಡ ಕಷ್ಟವೇ. ಆರೋಗ್ಯ ಸಮಸ್ಯೆ ಕಾಡುತ್ತದೆ. ಇವನ್ನು ಹೊರತುಪಡಿಸಿದರೆ ತಂಬಾಕು ಇವತ್ತು ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದೆನಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ