Tomato Rate: ಬಹುತೇಕ ರಾಜ್ಯಗಳಲ್ಲಿ ಟೊಮೆಟೊ ಬೆಲೆ ಅಪ್ಪಚ್ಚಿ; ಕೇಜಿಗೆ 4 ರೂಪಾಯಿಯಂತೆ ಪಾತಾಳ ತಲುಪಿದ ದರ

ಟೊಮೆಟೊ ಬೆಳೆಯುವ ಪ್ರಮುಖ ರಾಜ್ಯಗಳ ಹಲವು ಸಗಟು ಮಾರುಕಟ್ಟೆಗಳಲ್ಲಿ ಬೆಲೆಯು ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇಳಿಕೆ ಪ್ರಮಾಣ ಭಾರೀ ಮಟ್ಟದಲ್ಲಿದೆ.

Tomato Rate: ಬಹುತೇಕ ರಾಜ್ಯಗಳಲ್ಲಿ ಟೊಮೆಟೊ ಬೆಲೆ ಅಪ್ಪಚ್ಚಿ; ಕೇಜಿಗೆ 4 ರೂಪಾಯಿಯಂತೆ ಪಾತಾಳ ತಲುಪಿದ ದರ
ಟೊಮೆಟೊ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Srinivas Mata

Updated on: Aug 30, 2021 | 5:50 PM

ಟೊಮೆಟೊವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ರಾಜ್ಯಗಳಲ್ಲಿನ ಸಗಟು ಮಾರುಕಟ್ಟೆಗಳಲ್ಲಿ (ಹೋಲ್​ಸೇಲ್​ ಮಾರ್ಕೆಟ್​) ಟೊಮೆಟೊ ಬೆಲೆ ಕೇಜಿಗೆ 4 ರೂಪಾಯಿಗೆ ಕುಸಿದಿದೆ. ಸರಬರಾಜು ಕೊರತೆಯ ಮಧ್ಯೆಯೂ ಈ ಬೆಳವಣಿಗೆ ಆಗಿದೆ ಎಂದು ಸರ್ಕಾರಿ ಅಂಕಿ-ಅಂಶಗಳಿಂದ ತಿಳಿದಿದೆ. ಹಾಗೆ ನೋಡಿದರೆ, ಸರ್ಕಾರದಿಂದ ನಿಗಾ ಮಾಡಲಾಗುವ 31 ಕೇಂದ್ರಗಳ ಪೈಕಿ ಟೊಮೆಟೊ ಬೆಳೆಯುವ 23 ಕೇಂದ್ರಗಳಲ್ಲಿ ಒಂದು ವರ್ಷದ ಹಿಂದಿನ ಬೆಲೆಗಿಂತ ಶೇ 50ರಷ್ಟು ಕಡಿಮೆ ಅಥವಾ ಮೂರು ವರ್ಷದ ಋತುವಿನ ಸರಾಸರಿ ಬೆಲೆಗಿಂತ ಕೆಳಗೆ ವಹಿವಾಟು ಆಗುತ್ತಿದೆ. ಪ್ರಸ್ತುತ, 2021-22ರ ಬೆಳೆ ವರ್ಷದ (ಜುಲೈ-ಜೂನ್) ಆರಂಭಿಕ ಖಾರೀಫ್ (ಬೇಸಿಗೆ) ಟೊಮೆಟೊ ಬೆಳೆ ಕೊಯ್ಲು ಮಾಡಲಾಗುತ್ತಿದೆ. ಡೇಟಾ ಪ್ರಕಾರ, ಮಧ್ಯಪ್ರದೇಶದ ದೇವಾಸ್‌ನಲ್ಲಿ ಟೊಮೆಟೊ ಸಗಟು ಬೆಲೆ- ಇದು ದೇಶದlಲ್ಲಿ ಟೊಮೆಟೊ ಬೆಳೆಯುವ ಟಾಪ್ ರಾಜ್ಯ- ಒಂದು ವರ್ಷದ ಹಿಂದೆ ಆಗಸ್ಟ್ 28ರಂದು ಪ್ರತಿ ಕೇಜಿಗೆ ರೂ. 11ಕ್ಕೆ ಮಾರಾಟ ಆಗುತ್ತಿತ್ತು. ಅದು ಈ ವರ್ಷ ಆಗಸ್ಟ್ 28ರಂದು ರೂ. 8ಕ್ಕೆ ಕುಸಿದಿದೆ.

ಅದೇ ರೀತಿ, ಮಹಾರಾಷ್ಟ್ರದ ಜಲಗಾಂವ್​ನಲ್ಲಿ ಟೊಮೆಟೊ ಸಗಟು ಬೆಲೆ- ಇದು ದೇಶದಲ್ಲಿ ಆರನೇ ಅತಿ ಹೆಚ್ಚು ಟೊಮೆಟೊ ಬೆಳೆಯುವ ರಾಜ್ಯ- ಕಳೆದ ವರ್ಷ ಆಗಸ್ಟ್ 28ರಂದು ಪ್ರತಿ ಕೆಜಿಗೆ ರೂ. 21ರಂತೆ ವಹಿವಾಟು ಆಗುತ್ತಿದ್ದದ್ದು ಈ ಬಾರಿ ಶೇ 80ರಷ್ಟು ಇಳಿಕೆ ಕಂಡು, ರೂ. 4ರಂತೆ ವ್ಯವಹಾರ ನಡೆಸಿತು. ಔರಂಗಾಬಾದ್​ನಲ್ಲಿ ಟೊಮೆಟೊ ಬೆಲೆ ಪ್ರತಿ ಕೆಜಿಗೆ ರೂ. 4.50 ಕ್ಕೆ ಇಳಿಕೆಯಾಗಿದ್ದು, ವರ್ಷದ ಹಿಂದೆ ಪ್ರತಿ ಕೆಜಿಗೆ ರೂ. 9.50 ಇತ್ತು. ಸೊಲ್ಲಾಪುರದಲ್ಲಿ ಬೆಲೆ ಕೇಜಿಗೆ 15 ರೂಪಾಯಿಯಿಂದ 5 ರೂಪಾಯಿಗೆ ಮತ್ತು ಕೊಲ್ಲಾಪುರದಲ್ಲಿ ಪ್ರತಿ ಕೇಜಿಗೆ ವರ್ಷದ ಹಿಂದೆ ಇದ್ದ 25 ರೂಪಾಯಿಯಿಂದ ರೂ. 6.50ಕ್ಕೆ ಇಳಿದಿದೆ.

ಟೊಮೆಟೊ ಬೆಳೆ ಉತ್ತಮವಾಗಿದೆ “ಪೂರೈಕೆ ಕೊರತೆಯಿಂದಾಗಿ ಟೊಮೆಟೊ ಬೆಳೆಯುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಬೆಲೆಯ ಒತ್ತಡಕ್ಕೆ ಸಿಲುಕಿವೆ. ಅನುಕೂಲಕರ ವಾತಾವರಣದಿಂದಾಗಿ ಟೊಮೆಟೊ ಬೆಳೆ ಉತ್ತಮವಾಗಿದೆ,” ಎಂದು ರಾಷ್ಟ್ರೀಯ ತೋಟಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (NHRDF) ಹಂಗಾಮಿ ನಿರ್ದೇಶಕ ಪಿ.ಕೆ. ಗುಪ್ತಾ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಬೇಸಿಗೆ (ಟೊಮೆಟೊ ಉತ್ಪಾದನೆ) ಕಳೆದ ವರ್ಷಕ್ಕಿಂತ ಉತ್ತಮವಾಗಿದೆ ಎಂದು ಅಂದಾಜಿಸಲಾಗಿದೆ ಮತ್ತು ಆಹಾರ ಸಂಸ್ಕರಣಾ ಕಂಪೆನಿಗಳು ರಕ್ಷಣೆಗೆ ಬಂದರೆ ಬೆಲೆ ಇಳಿಕೆಯಿಂದ ರೈತರನ್ನು ಉಳಿಸಬಹುದು ಎಂದು ಅವರು ಹೇಳಿದ್ದಾರೆ. ನಿಸ್ಸಂದೇಹವಾಗಿ, ಅನುಕೂಲಕರ ವಾತಾವರಣವು ಬೆಳೆ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡಿದೆ. ಆದರೆ ರೈತರು ಬಿತ್ತನೆ ಮಾಡುವ ಸಮಯದಲ್ಲಿ ಬೆಲೆ ಅಧಿಕವಾಗಿತ್ತು. ಇದರಿಂದಾಗಿ ಉತ್ಪಾದನೆಯನ್ನು ಹೆಚ್ಚಿಸಿದೆ. “ಉತ್ಪಾದನೆಯು ಹೆಚ್ಚಾದಾಗ, ಬೆಲೆಗಳು ಒತ್ತಡಕ್ಕೆ ಒಳಗಾಗುತ್ತವೆ” ಎಂದು ಗುಪ್ತಾ ಹೇಳಿದ್ದಾರೆ.

ಕರ್ನಾಟಕದ ಕೋಲಾರದಲ್ಲಿ ಕೇಜಿಗೆ 5.30 ರೂಪಾಯಿ ಸರ್ಕಾರದ ಮಾಹಿತಿಯ ಪ್ರಕಾರ, ದೇಶದಲ್ಲೇ ಅತಿ ಹೆಚ್ಚು ಟೊಮೆಟೊ ಬೆಳೆಯುವ ನಾಲ್ಕನೇ ರಾಜ್ಯವಾದ ಕರ್ನಾಟಕದ ಕೋಲಾರದಲ್ಲಿ ಟೊಮೆಟೊ ಸಗಟು ಬೆಲೆ ಆಗಸ್ಟ್ 28ರಂದು ಕೇಜಿಗೆ 5.30 ರೂಪಾಯಿಗೆ ಇಳಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಪ್ರತಿ ಕೆಜಿಗೆ 18.70 ರೂಪಾಯಿ ಇತ್ತು. ಚಿಕ್ಕಬಳ್ಳಾಪುರದಲ್ಲಿ ಈ ಅವಧಿಯಲ್ಲಿ ಪ್ರತಿ ಕೆಜಿಗೆ ಕಳೆದ ವರ್ಷ ಇದ್ದ 18.50 ರೂಪಾಯಿಯಿಂದ ಈ ಬಾರಿ 7.30 ರೂಪಾಯಿಗೆ ಇಳಿದಿದೆ. ಅದೇ ರೀತಿ ದೇಶದಲ್ಲಿ ಎರಡನೇ ಅತಿ ಹೆಚ್ಚು ಟೊಮೆಟೊ ಬೆಳೆಯುವ ರಾಜ್ಯವಾದ ಆಂಧ್ರಪ್ರದೇಶದ, ಚಿತ್ತೂರು ಜಿಲ್ಲೆಯ ಪಲಮನೇರ್​ನಲ್ಲಿ ಸಗಟು ಬೆಲೆ ಪ್ರತಿ ಕೇಜಿಗೆ ಕಳೆದ ವರ್ಷ ಇದ್ದ 40 ರೂಪಾಯಿಯಿಂದ 18.50 ರೂಪಾಯಿಗೆ ಇಳಿದಿದೆ. ಪಲಮನೇರ್ ಮತ್ತು ಚಿತ್ತೂರು ಜಿಲ್ಲೆಯ ಮದನಪಲ್ಲಿ ಮತ್ತು ಮುಲಕಲಚೆರುವಿನಲ್ಲಿರುವ ಎರಡು ನಗರಗಳಲ್ಲಿ ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಬೆಲೆಗಳು ತೀವ್ರವಾಗಿ ಕುಸಿದಿವೆ. ಮತ್ತು ಈ ಮೂರು ಕೇಂದ್ರಗಳನ್ನು ಸರ್ಕಾರದ ‘ಆಪರೇಷನ್ ಗ್ರೀನ್’ ಕಾರ್ಯಕ್ರಮದ ಅಡಿಯಲ್ಲಿ ಅಭಿವೃದ್ಧಿಗೆ ಕ್ಲಸ್ಟರ್​ಗಳೆಂದು ಗುರುತಿಸಲಾಗಿದೆ.

ಉತ್ತರಪ್ರದೇಶ ಮತ್ತಿತರ ಕಡೆಗಳಲ್ಲಿ ಉತ್ತರಪ್ರದೇಶದಲ್ಲೂ ಈ ವರ್ಷ ಬೆಲೆ ಕುಸಿದಿದೆ. ಕಳೆದ ವರ್ಷ ಆಗಸ್ಟ್ 28ರ ಸಮಯದಲ್ಲಿ ಪ್ರತಿ ಕೇಜಿಗೆ ರೂ. 14ರಿಂದ 28 ಇದ್ದ ಬೆಲೆ, ಈಗ ಪ್ರತಿ ಕೇಜಿಗೆ ರೂ. 8ರಿಂದ 20ರ ವ್ಯಾಪ್ತಿಗೆ ಕುಸಿದಿದೆ. ಪಶ್ಚಿಮ ಬಂಗಾಳದಲ್ಲಿ, ಟೊಮೆಟೊದ ಸಗಟು ಬೆಲೆ ಪ್ರತಿ ಕೇಜಿಗೆ ರೂ. 25ರಿಂದ 32ಕ್ಕೆ ಇಳಿದಿದ್ದು, ಟೊಮೆಟೊ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಪ್ರತಿ ಕೇಜಿಗೆ ರೂ. 34ರಿಂದ 65 ರಷ್ಟಿತ್ತು ಎಂದು ಡೇಟಾ ಮೂಲಕ ತಿಳಿದುಬಂದಿದೆ. ಬಳಕೆ ಮಾಡುವ ಮಾರುಕಟ್ಟೆಯಲ್ಲಿಯೂ ಟೊಮೆಟೊ ಸಗಟು ಬೆಲೆಗಳು ಕುಸಿತವನ್ನು ಕಂಡಿವೆ. ದೆಹಲಿಯ ಅಜಾದ್‌ಪುರ್ ಮಂಡಿಯಲ್ಲಿ ಟೊಮೆಟೊ ಸಗಟು ಬೆಲೆ ಆಗಸ್ಟ್ 28ಕ್ಕೆ ಪ್ರತಿ ಕೇಜಿಗೆ ರೂ. 24ಕ್ಕೆ ಇಳಿದಿದ್ದು, ಕಳೆದ ವರ್ಷ ಪ್ರತಿ ಕೆಜಿಗೆ 36 ರೂಪಾಯಿ ಇತ್ತು.

ಬೆಂಗಳೂರಿನಲ್ಲಿ ಕೇಜಿಗೆ 8 ರೂಪಾಯಿ ಮುಂಬೈನಲ್ಲಿ ಟೊಮೆಟೊ ಸಗಟು ಬೆಲೆ ಪ್ರತಿ ಕೇಜಿಗೆ ಕಳೆದ ವರ್ಷ ರೂ. 30 ಇದ್ದದ್ದು 12 ರೂಪಾಯಿಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಕಳೆದ ವರ್ಷ ಕೇಜಿಗೆ 30 ರೂಪಾಯಿ ಇದ್ದದ್ದು ಈಗ 8 ರೂಪಾಯಿ ಮುಟ್ಟಿದೆ. ನಾಟಿ ಮಾಡಿದ ಸುಮಾರು 2ರಿಂದ 3 ತಿಂಗಳಲ್ಲಿ ಟೊಮೆಟೊ ಬೆಳೆ ಕಟಾವಿಗೆ ಸಿದ್ಧವಾಗುತ್ತದೆ. ಭಾರತದ ಟೊಮೆಟೊ ಉತ್ಪಾದನೆಯು 2020-21ರ ಬೆಳೆ ವರ್ಷದಲ್ಲಿ (ಜುಲೈ-ಜೂನ್) 20.55 ಮಿಲಿಯನ್ ಟನ್‌ಗಳಾಗಿದ್ದರೆ, ವರ್ಷದ ಹಿಂದಿನ ಅವಧಿಗಿಂತ ಶೇಕಡಾ 2.20ರಷ್ಟು ಹೆಚ್ಚಾಗಿ, 21 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗಿದೆ. ಅಂದಹಾಗೆ ಇಲ್ಲಿರುವ ಅಂಕಿ- ಅಂಶವು ಕೃಷಿ ಸಚಿವಾಲಯದ ಎರಡನೇ ಮುಂಗಡ ಅಂದಾಜಿನ ಪ್ರಕಾರ ಇದೆ.

ಇದನ್ನೂ ಓದಿ: China Products Ban: ಕ್ಸಿನ್​ಜಿಯಾಂಗ್​ನಲ್ಲಿ ತಯಾರಾದ ಉತ್ಪನ್ನಗಳ ಆಮದು ನಿಷೇಧ ಕಾನೂನಿಗೆ ಅಮೆರಿಕ ಸೆನೆಟ್ ಅಸ್ತು

(Tomato Price Crash In Wholesale Markets Of Many Major Growing States)