ನವದೆಹಲಿ, ಜನವರಿ 20: ಭಾರತದಲ್ಲಿ ಈಗ ಒಂದಕ್ಕಿಂತ ಹೆಚ್ಚು ಸಿಮ್ಗಳನ್ನು ಇಟ್ಟುಕೊಳ್ಳುವುದು ದುಬಾರಿ ಎನಿಸುತ್ತದೆ. ಇವತ್ತು ಜಿಯೋ ಒಳಗೊಂಡಂತೆ ಟೆಲಿಕಾಂ ಕಂಪನಿಗಳು ಮುಂದಿಟ್ಟಿರುವ ರೀಚಾರ್ಜ್ ದರಗಳು ಸಾಕಷ್ಟು ಹೆಚ್ಚಿನ ಮಟ್ಟದಲ್ಲಿವೆ. ಒಂದು ತಿಂಗಳಲ್ಲಿ ಕನಿಷ್ಠವೆಂದರೂ ನೂರು ರೂ ರೀಚಾರ್ಜ್ ಮಾಡಬೇಕಾಗುತ್ತದೆ. ಈಗ ರೀಚಾರ್ಜ್ ಪ್ಯಾಕ್ಗಳಲ್ಲಿ ಧ್ವನಿ ಕರೆ ಮತ್ತು ಮೆಸೇಜ್ಗಳ ಜೊತೆಗೆ ಡಾಟಾವನ್ನೂ ಸೇರಿಸಲಾಗಿರುತ್ತದೆ. ಹೀಗಾಗಿ, ಬೆಲೆ ಹೆಚ್ಚಿದೆ. ಇದೇ ಕಾರಣಕ್ಕೆ ಜನರು ಈಗ ಒಂದಕ್ಕಿಂತ ಹೆಚ್ಚು ಸಿಮ್ಗಳನ್ನು ಇಟ್ಟುಕೊಳ್ಳಲು ಹಿಂದೆ ಮುಂದೆ ನೋಡುವಂತಾಗಿದೆ. ಟೆಲಿಕಾಂ ನಿಯಂತ್ರಕ ಸಂಸ್ಥೆಯಾದ ಟ್ರಾಯ್ ಈ ನಿಟ್ಟಿನಲ್ಲಿ ಒಂದಷ್ಟು ಹೊಸ ನಿಯಮಗಳನ್ನು ತಂದಿದೆ. ಹೆಚ್ಚುವರಿ ಸಿಮ್ಗಳನ್ನು ಇಟ್ಟುಕೊಂಡಿರುವವರು, ಮತ್ತು ಡಾಟಾ ಅವಶ್ಯಕತೆ ಇಲ್ಲದವರು ಈಗ ನಿಟ್ಟುಸಿರು ಬಿಡಬಹುದು.
ಟೆಲಿಕಾಂ ಕಂಪನಿಗಳ ಸ್ಪೆಷಲ್ ಟಾರಿಫ್ ವೋಚರ್ಗಳ (ಎಸ್ಟಿವಿ) ವ್ಯಾಲಿಡಿಟಿ ಅವಧಿ 90 ದಿನ ಇದೆ. ಇದನ್ನು 365 ದಿನಗಳವರೆಗೆ ವಿಸ್ತರಿಸಲು ಟ್ರಾಯ್ ನಿಯಮ ಮಾಡಿದೆ. ಹಾಗೆಯೇ, 2ಜಿ ಫೀಚರ್ ಫೋನ್ ಬಳಕೆದಾರರಿಗೆ ಇಂಟರ್ನೆಟ್ ಅವಶ್ಯಕತೆ ಇರುವುದಿಲ್ಲ. ಇಂಥವರಿಗೆ ಧ್ವನಿ ಮತ್ತು ಎಸ್ಸೆಮ್ಮೆಸ್ ಸರ್ವಿಸ್ನೊಳಗೊಂಡ ಪ್ಯಾಕೇಜ್ಗಳನ್ನು ಆಫರ್ ಮಾಡಬೇಕು ಎಂದೂ ಟ್ರಾಯ್ ಆದೇಶಿಸಿದೆ. ಹೀಗಾಗಿ, ಡಾಟಾ ರಹಿತವಾದ ಪ್ಯಾಕೇಜ್ಗಳ ಆಯ್ಕೆಗಳನ್ನು ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ನೀಡಬೇಕಾಗುತ್ತದೆ. ಈ ನಿಯಮಗಳನ್ನು ಟೆಲಿಕಾಂ ಕಂಪನಿಗಳು ಯಾವಾಗಿನಿಂದ ಪಾಲಿಸುತ್ತವೆ ಕಾದುನೋಡಬೇಕು.
ಇದನ್ನೂ ಓದಿ: ಅಗ್ಗದ ಪ್ಲ್ಯಾನ್ ತರಲು ಜಿಯೋ, ಏರ್ಟೆಲ್, ವಿಗೆ ಟ್ರಾಯ್ ಖಡಕ್ ಆದೇಶ
ಈಗ ಜನರು ವಾಟ್ಸಾಪ್, ಇಂಟರ್ನೆಟ್ ಇತ್ಯಾದಿ ಬಳಕೆಗೆ ಒಂದು ಸಿಮ್ ಇಟ್ಟುಕೊಂಡಿರುತ್ತಾರೆ. ಕರೆಗಳಿಗೆ ಮಾತ್ರ ಸೀಮಿತವಾಗಿರುವ ಒಂದು ಬ್ಯಾಕಪ್ ನಂಬರ್ ಅನ್ನೂ ಇಟ್ಟುಕೊಂಡಿರುತ್ತಾರೆ. ಆದರೆ, ಈ ಬ್ಯಾಕಪ್ ನಂಬರ್ಗೆ ಡಾಟಾ ಸೌಲಭ್ಯ ಅವಶ್ಯಕತೆ ಇರುವುದಿಲ್ಲವಾದರೂ ದುಬಾರಿ ಹಣ ಕೊಟ್ಟು ಅದನ್ನು ಉಳಿಸಿಕೊಳ್ಳಲು ಹೆಣಗಬೇಕಾಗುತ್ತದೆ.
ಈ ಎರಡನೇ ಸಿಮ್ಗಳನ್ನು ಜನರು ಬ್ಯಾಕಪ್ ಉದ್ದೇಶದಿಂದ ಇಟ್ಟುಕೊಳ್ಳುವುದರಿಂದ ದಿನನಿತ್ಯ ಬಳಕೆ ಮಾಡದೇ ಇರಬಹುದು. ಹಳೆಯ ನಿಯಮದ ಪ್ರಕಾರ ಒಂದು ನಂಬರ್ಗೆ ಯಾವುದೇ ಒಳ ಕರೆ ಮತ್ತು ಆ ನಂಬರ್ನಿಂದ ಯಾವುದೇ ಹೊರ ಕರೆ 90 ದಿನಗಳಲ್ಲಿ ಒಮ್ಮೆಯೂ ಆಗದೇ ಹೋದರೆ ಅಂಥ ಸಿಮ್ ಅನ್ನು ಡೀಆ್ಯಕ್ಟಿವೇಟ್ ಮಾಡಲಾಗುತ್ತದೆ. ಈ ರೀತಿ ಫಜೀತಿಗೆ ಒಳಗಾಗವುದನ್ನು ತಪ್ಪಿಸಲು ಟ್ರಾಯ್ನಿಂದ ಮತ್ತೊಂದು ನಿಯಮ ರೂಪಿಸಲಾಗಿದೆ.
ಒಂದು ವೇಳೆ ನಿಮ್ಮ ಸಿಮ್ 90 ದಿನ ಕಾಲ ನಿಷ್ಕ್ರಿಯವಾಗಿದ್ದು, ಅದರಲ್ಲಿ ಕನಿಷ್ಠ 20 ರೂ ಪ್ರೀಪೇಯ್ಡ್ ಬ್ಯಾಲನ್ಸ್ ಇದ್ದಲ್ಲಿ ನೀವು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಇಂಥ ಸಂದರ್ಭದಲ್ಲಿ 90 ದಿನಗಳ ಬಳಿಕ ಸಿಮ್ ಮತ್ತಷ್ಟು 30 ದಿನ ಆ್ಯಕ್ಟಿವ್ ಆಗಿರುತ್ತದೆ.
ಇದನ್ನೂ ಓದಿ: ಪಿಎಲ್ಐ ಸ್ಕೀಮ್; 84 ಎಸಿ ಮತ್ತು ಎಲ್ಇಡಿ ತಯಾರಕ ಕಂಪನಿಗಳಿಂದ 10,478 ಕೋಟಿ ರೂ ಹೂಡಿಕೆ ನಿರೀಕ್ಷೆ
ಒಂದು ವೇಳೆ ನಿಮ್ಮ ಸಿಮ್ಗೆ ಕನಿಷ್ಠ 20 ರೂಗಳ ಪ್ರೀಪೇಯ್ಡ್ ಬ್ಯಾಲನ್ಸ್ ಇಲ್ಲ ಎಂದಿಟ್ಟುಕೊಳ್ಳಿ. ಆಗ 90 ದಿನ ಸತತವಾಗಿ ಸಿಮ್ ನಿಷ್ಕ್ರಿಯವಾಗಿದ್ದರೆ ಅದನ್ನು ಡೀಆ್ಯಕ್ಟಿವೇಟ್ ಮಾಡುವ ಸಂಭವ ಇರುತ್ತದೆ. ಆದಾಗ್ಯೂ ನಿಮಗೆ 15 ದಿನಗಳ ಕಾಲ ಗ್ರೇಸ್ ಪೀರಿಯಡ್ ಇರುತ್ತದೆ. 90 ದಿನ ನಿಷ್ಕ್ರಿಯ ಅವಧಿ ಮುಗಿದಿರುವುದು ಗಮನಕ್ಕೆ ಬಂದ ಕೂಡಲೇ ಕಸ್ಟಮರ್ ಕೇರ್ ಸೆಂಟರ್ಗೆ ಹೋಗಿ ರೀಆ್ಯಕ್ಟಿವೇಶನ್ ಮಾಡಿಸಲು ಅವಕಾಶ ಇದೆ.
ಒಂದು ವೇಳೆ, ನಿಮ್ಮ ಸಿಮ್ ಡೀಆ್ಯಕ್ಟಿವೇಟ್ ಆದಲ್ಲಿ ಅದನ್ನು ಮರಳಿಪಡೆಯಲು ಆಗುವುದಿಲ್ಲ. ಆ ನಂಬರ್ ಅನ್ನು ಮರು ಹಂಚಿಕೆ ಮಾಡಲಾಗುತ್ತದೆ. ಬೇರೆ ಹೊಸ ಸಿಮ್ ಖರೀದಿದಾರರಿಗೆ ಆ ನಂಬರ್ನ ಸಿಮ್ ಹೋಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ