ವಾರಸುದಾರರಿಲ್ಲದ ಠೇವಣಿ ಬಗ್ಗೆ ಜಾಗೃತಿ ಅಭಿಯಾನ ಆರಂಭಿಸಿದ ಆರ್ಬಿಐ
ಹೆಚ್ಚಿನ ಠೇವಣಿ ಖಾತೆಗಳು ತಮಿಳುನಾಡು, ಪಂಜಾಬ್, ಗುಜರಾತ್, ಮಹಾರಾಷ್ಟ್ರ , ಬಂಗಾಳ, ಕರ್ನಾಟಕ, ಬಿಹಾರ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಇದೆ ಎಂದು ಆರ್ಬಿಐ ಅಧಿಕಾರಿಗಳು ಹೇಳಿದ್ದಾರೆ.
ಗರಿಷ್ಠ ಸಂಖ್ಯೆಯಲ್ಲಿ ವಾರಸುದಾರರಿಲ್ಲದ ಠೇವಣಿ (unclaimed deposits) ಹೊಂದಿರುವ ಎಂಟು ರಾಜ್ಯಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಜಾಗೃತಿ ಅಭಿಯಾನವನ್ನು ಆರಂಭಿಸಿದೆ. ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ಈ ಎಂಟು ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿ ಈ ಅಭಿಯಾನ ನಡೆಯುತ್ತಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ವಾರಸುದಾರರಿಲ್ಲದ ಠೇವಣಿ 39,264 ಕೋಟಿ ಆಗಿದ್ದು 2022ರ ಆರ್ಥಿಕ ವರ್ಷದಲ್ಲಿ ಇದು 48,262 ಕೋಟಿಗೆ ತಲುಪಿದೆ ಎಂದು ಆರ್ಬಿಐ ವಾರ್ಷಿಕ ವರದಿ ಹೇಳಿದೆ. ಹೆಚ್ಚಿನ ಠೇವಣಿ ಖಾತೆಗಳು ತಮಿಳುನಾಡು, ಪಂಜಾಬ್, ಗುಜರಾತ್, ಮಹಾರಾಷ್ಟ್ರ , ಬಂಗಾಳ, ಕರ್ನಾಟಕ, ಬಿಹಾರ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಇದೆ ಎಂದು ಆರ್ಬಿಐ ಅಧಿಕಾರಿಗಳು ಹೇಳಿದ್ದಾರೆ. ಆರ್ಬಿಐ ನಿಯಮ ಪ್ರಕಾರ ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆಯಲ್ಲಿ ಹಣವಿದ್ದು 10 ವರ್ಷಗಳ ವರಗೆ ಅದನ್ನು ನಿರ್ವಹಿಸದೇ ಇದ್ದರೆ ಅಥವಾ ಮೆಚ್ಯುರಿಟಿಯ ದಿನಾಂಕದಿಂದ 10 ವರ್ಷದೊಳಗೆ ಠೇವಣಿ ಹಣವನ್ನು ಪಡೆಯದೇ ಇದ್ದರೆ ಅಂಥಾ ಖಾತೆಗಳನ್ನು ವಾರಸುದಾರರಿಲ್ಲದ ಖಾತೆ ಎಂದು ವರ್ಗೀಕರಿಸಲಾಗುತ್ತದೆ.
ಇದಾದ ಮೇಲೆ ಬ್ಯಾಂಕ್ ಗಳು ಈ ಹಣವನ್ನು ಆರ್ಬಿಐ ನಿರ್ವಹಿಸುತ್ತಿರುವ ಠೇವಣಿದಾರರ ಶಿಕ್ಷಣ ಮತ್ತು ಜಾಗೃತ ನಿಧಿಗೆ ವರ್ಗಾವಣೆ ಮಾಡುತ್ತದೆ. ಠೇವಣಿದಾರರು ಆ ಹಣ ಮತ್ತು ಅದಕ್ಕೆ ಸಿಕ್ಕಿದ ಬಡ್ಡಿಯನ್ನು ಪಡೆಯಬಹುದು. ಆದಾಗ್ಯೂ, ಸಮಯಕ್ಕೆ ಸರಿಯಾಗಿ ಬ್ಯಾಂಕ್ ಗಳು ಮತ್ತು ಆರ್ ಬಿಐ ಸಾರ್ವಜನಿಕ ಜಾಗೃತಿ ಅಭಿಯಾನದ ನಡೆಸುತ್ತಿದ್ದರೂ ಈ ರೀತಿ ವಾರಸುದಾರರಿಲ್ಲದ ಠೇವಣಿಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ ಎಂದು ಆರ್ ಬಿಐ ಹೇಳಿದೆ.
ಠೇವಣಿದಾರರು ತಮ್ಮ ಉಳಿತಾಯ ಅಥವಾ ಚಾಲ್ತಿ ಖಾತೆಗಳನ್ನು ಮುಚ್ಚದೇ ಇರುವುದು, ಖಾತೆಗಳನ್ನು ನಿರ್ವಹಿಸದೇ ಇರುವುದು ಅಥವಾ ಮೆಚ್ಯುರ್ಡ್ ಸ್ಥಿರ ಠೇವಣಿಯನ್ನು ಪಡೆಯಲು ಅರ್ಜಿ ಸಲ್ಲಿಸದೇ ಇರುವುದು ವಾರಸುದಾರರಿಲ್ಲದ ಠೇವಣಿ ಏರಿಕೆಗೆ ಕಾರಣವಾಗಿದೆ. ಮೃತ ವ್ಯಕ್ತಿಯ ಖಾತೆಯಿದ್ದರೆ ಅದರ ಹಣವನ್ನು ಪಡೆಯಲು ಯಾರೂ ಬಾರದೇ ಇರುವುದು ಕೂಡಾ ವಾರಸುದಾರರಿಲ್ಲದ ಠೇವಣಿಗೆ ಕಾರಣವಾಗುತ್ತದೆ.
Published On - 6:30 pm, Fri, 29 July 22