Budget 2021 ನಿರೀಕ್ಷೆ | ಉದ್ಯೋಗ ಕಳೆದುಕೊಂಡ ಮಹಿಳೆಯರಿಗೆ ಆಸರೆ ಸಿಗಬೇಕಿದೆ

ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿರುವ ಬಜೆಟ್​ನಲ್ಲಿ ಗೃಹೋದ್ಯಮದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬಹುದೇ? ನಿರೀಕ್ಷೆಗಳೊಂದಿಗೆ ಎದುರು ನೋಡುತ್ತಿದ್ದಾರೆ ದೇಶದ ಮಹಿಳೆಯರು.

  • ರಶ್ಮಿ ಕಾಸರಗೋಡು
  • Published On - 14:11 PM, 28 Jan 2021
Budget 2021 ನಿರೀಕ್ಷೆ | ಉದ್ಯೋಗ ಕಳೆದುಕೊಂಡ ಮಹಿಳೆಯರಿಗೆ ಆಸರೆ ಸಿಗಬೇಕಿದೆ
ಪ್ರಾತಿನಿಧಿಕ ಚಿತ್ರ

ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್​ಡೌನ್​ನಿಂದಾಗಿ ಹೆಚ್ಚು ಸಂಕಷ್ಟಕ್ಕೊಳಗಾದವರು ಮಹಿಳೆಯರು. ಮನೆಯಲ್ಲಿ ದುಡಿಯುವ ಗಂಡು ಕೆಲಸ ಕಳೆದುಕೊಂಡಾಗ ಕುಟುಂಬ ನಿರ್ವಹಣೆಗಾಗಿ ಇವರು ಹರಸಾಹಸಪಡಬೇಕಾಯಿತು. ಗೃಹಿಣಿಯರ ಕೆಲಸ ಎಂದಿಗೂ ಲೆಕ್ಕಕ್ಕೆ ಬರುವುದೇ ಇಲ್ಲ. ಲಾಕ್​ಡೌನ್ ಘೋಷಣೆಯಾದಾಗ ಇವರ ಕೆಲಸದ ಹೊರೆ ಮತ್ತಷ್ಟು ಹೆಚ್ಚಿತು. ಮಕ್ಕಳಿಗೆ ಆನ್​ಲೈನ್ ಕ್ಲಾಸು, ಗಂಡನಿಗೆ ವರ್ಕ್​ಫ್ರಮ್ ಹೋಮ್. ಮನೆಯಲ್ಲಿ ಹಿರಿಯರು ಇದ್ದರೆ ಕೊರೊನಾ ಹರಡದಂತೆ ಮತ್ತಷ್ಟು ಕಾಳಜಿ. ಮನೆ ಸ್ವಚ್ಛವಾಗಿಡುವ ಜವಾಬ್ದಾರಿ, ಇವೆಲ್ಲವುಗಳ ಜೊತೆಗೆ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಬಹುತೇಕ ಮಹಿಳೆಯರದ್ದಾಗಿತ್ತು.

ಕೆಲಸಕ್ಕೆ ಹೋಗುವ ಮಹಿಳೆಯರ ಪೈಕಿ ಹೆಚ್ಚಿನವರಿಗೆ ಉದ್ಯೋಗ ನಷ್ಟವಾಯಿತು. ಕೆಲಸ ಉಳಿಸಿಕೊಂಡವರಿಗೆ ಲಾಕ್​ಡೌನ್ ಕಾಲದಲ್ಲಿ ವರ್ಕ್​ಫ್ರಮ್ ಹೋಮ್ ವ್ಯವಸ್ಥೆಗೆ ಒಗ್ಗಿಕೊಂಡು ಮನೆ ಮತ್ತು ಕಚೇರಿ ಕೆಲಸವನ್ನು ಒಟ್ಟೊಟ್ಟಿಗೆ ನಿರ್ವಹಿಸಬೇಕಾದ ಒತ್ತಡ. ಮನೆ ಮತ್ತು ಮನಸ್ಸು ಎರಡನ್ನೂ ಸುಸ್ಥಿತಿಯಲ್ಲಿಡಲು ಮಹಿಳೆ ಅಧಿಕ ಶ್ರಮ ವಹಿಸಬೇಕಾಗಿ ಬಂತು.

ಕೊರೊನಾ ವೈರಸ್ ಲಾಕ್​ಡೌನ್​ನಿಂದಾಗಿ ದೇಶದಲ್ಲಿ ಶೇ 79ಕ್ಕಿಂತಲೂ ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಆಕ್ಷನ್ ಏಡ್ ಅಸೋಸಿಯೇಷನ್ ಮೇ- ಜೂನ್ ತಿಂಗಳಲ್ಲಿ ನಡೆಸಿದ ಇನ್ಫಾರ್ಮಲ್ ವರ್ಕರ್ಸ್ ಸಮೀಕ್ಷೆ ಹೇಳಿದೆ. ಶೇ 51ಕ್ಕಿಂತಲೂ ಹೆಚ್ಚು ಮಹಿಳೆಯರಿಗೆ ಲಾಕ್​ಡೌನ್ ಅವಧಿಯಲ್ಲಿ ಸಂಬಳವೂ ಸಿಕ್ಕಿಲ್ಲ ಎಂದಿದೆ ಈ ಸಮೀಕ್ಷೆ. ಮೇ ತಿಂಗಳ ಮಧ್ಯ ಅವಧಿಯಲ್ಲಿ ಮಹಿಳೆಯರ ನಿರುದ್ಯೋಗ ಶೇ 79ಕ್ಕೆ ತಲುಪಿದ್ದು ಶೇ 75ರಷ್ಟು ಪುರುಷರು ಕೆಲಸ ಕಳೆದುಕೊಂಡಿದ್ದರು.

ಈ ಅವಧಿಯಲ್ಲಿ ಅತಿಹೆಚ್ಚು ಸಂಕಷ್ಟ ಅನುಭವಿಸಿದ್ದು ಮನೆಗೆಲಸ ಮಾಡುವವರು. ಶೇ 85ಕ್ಕಿಂತ ಹೆಚ್ಚು ಮಂದಿ ಕೆಲಸ ಕಳೆದುಕೊಂಡರು ಅವರಿಗೆ ಸಂಬಳವೂ ಸಿಗಲಿಲ್ಲ. ಶೇ 99ರಷ್ಟು ಮಂದಿ ತಮ್ಮ ಉಳಿತಾಯವನ್ನೇ ದೈನಂದಿನ ಜೀವನಕ್ಕೆ ಬಳಸಿಕೊಳ್ಳಬೇಕಾಯಿತು. ಶೇ 68 ಮಂದಿ ಸಾಲ ಪಡೆದು ಜೀವನ ನಡೆಸಬೇಕಾಗಿ ಬಂತು. ಮನೆಗೆಲಸದವರು, ಗದ್ದೆಯಲ್ಲಿ ಕೆಲಸ ಮಾಡುವ ಕಾರ್ಮಿಕರು, ಬೀಡಿ ಕಾರ್ಮಿಕರು, ಸ್ವಚ್ಛತಾ ಕಾರ್ಯ ಮಾಡುವ ಕಾರ್ಮಿಕರು ಹೆಚ್ಚು ಕಷ್ಟ ಅನುಭವಿಸಿದರು ಎಂದು ಈ ಸಮೀಕ್ಷೆ ಹೇಳಿದೆ.

ಸಮೀಕ್ಷೆ ಪ್ರಕಾರ ಮನೆಗೆಲಸ ಮಾಡುವವರಲ್ಲಿ ಶೇ 88 ರಷ್ಟು ಮಂದಿ ನಗರ ಪ್ರದೇಶದಲ್ಲಿ ಮತ್ತು ಶೇ 11.5 ಮಂದಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಪೈಕಿ ಶೇ 40ರಷ್ಟು ಮಹಿಳೆಯರು ವಲಸೆ ಬಂದವರು. CARE ರೇಟಿಂಗ್ಸ್ ವರದಿ ಪ್ರಕಾರ 2020ರಲ್ಲಿ ಉದ್ಯೋಗ ದರ ಶೇ 3.5ಕ್ಕೆ ಕುಸಿದಿತ್ತು. ಅದಕ್ಕಿಂತ ಹಿಂದಿನ ವರ್ಷ ಉದ್ಯೋಗ ದರ ಶೇ 3.8 ಆಗಿತ್ತು. 2019ಕ್ಕೆ ಹೋಲಿಸಿದರೆ, 2020ಕ್ಕೆ ತಲುಪುವಾಗ ಉದ್ಯೋಗಿಗಳ ಸಂಖ್ಯೆ 48.32 ಲಕ್ಷದಿಂದ 50.02 ಲಕ್ಷಕ್ಕೆ ಏರಿಕೆ ಆಗಿದೆ.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಪ್ರಕಾರ ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಲಾಕ್​ಡೌನ್​ ಜಾರಿಗೊಳಿಸಿದ ಬಳಿಕ ಜುಲೈ ತಿಂಗಳಲ್ಲಿ 50 ಲಕ್ಷ ಉದ್ಯೋಗ ನಷ್ಟ ಆಗಿದೆ. 2020ರ ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಗ್ರಾಮೀಣ ಮಹಿಳಾ ಕಾರ್ಮಿಕರ ಪ್ರಮಾಣ ಶೇ 6.9ಕ್ಕೆ ಇಳಿಕೆಯಾಗಿತ್ತು. ಸಿಎಂಐಇ ಕನ್ಸ್ಯೂಮರ್ ಪಿರಮಿಡ್ಸ್ ಹೌಸ್ ಹೋಲ್ಡ್ ಸರ್ವೇ ಪ್ರಕಾರ ಕೆಲಸದಲ್ಲಿ ತೊಡಗಿಸಿಕೊಂಡಿರುವ ಗ್ರಾಮೀಣ ಮಹಿಳೆಯರ ಸಂಖ್ಯೆ ನಗರ ಪ್ರದೇಶದಲ್ಲಿ ಕೆಲಸದಲ್ಲಿರುವ ಮಹಿಳೆಯರಿಗಿಂತ ಕಡಿಮೆ ಆಗಿದೆ. 2019-20ರಲ್ಲಿ ಮಹಿಳಾ ಕಾರ್ಮಿಕರ ಸರಾಸರಿ ಸಂಖ್ಯೆ (FLPR – Female Labour Participation Rate) ನಗರ ಪ್ರದೇಶದಲ್ಲಿ ಶೇ 9.7, ಗ್ರಾಮೀಣ ಪ್ರದೇಶದಲ್ಲಿ ಶೇ 11.3.

ಏಪ್ರಿಲ್ 2020ರಲ್ಲಿ ನಗರ ಪ್ರದೇಶದಲ್ಲಿ ಎಫ್ಎಲ್​ಪಿಆರ್ ಶೇ 7.35 ಆಗಿದೆ. 2019- 20ರಲ್ಲಿ ಇದು ಸರಾಸರಿ ಶೇ 9.7 ಆಗಿತ್ತು. ಅಕ್ಟೋಬರ್ 2020ಲ್ಲಿ ನಗರ ಪ್ರದೇಶದಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಕಾರ್ಮಿಕರ ಸರಾಸರಿ ಸಂಖ್ಯೆ ಶೇ. 7.2 ಆಗಿದ್ದು, ನವೆಂಬರ್​ನಲ್ಲಿ ಶೇ 6.9 ಆಗಿತ್ತು. ಏಪ್ರಿಲ್ 2020ರಲ್ಲಿ ಶೇ 13.9 ಮಹಿಳೆಯರಿಗೆ ಉದ್ಯೋಗ ನಷ್ಟವಾಗಿದೆ. ನವೆಂಬರ್ 2020ರಲ್ಲಿ ಉದ್ಯೋಗ ಕಳೆದುಕೊಂಡ ಪುರುಷರಲ್ಲಿ ಬಹುತೇಕರು ಮತ್ತೆ ಉದ್ಯೋಗ ಗಿಟ್ಟಿಸಿಕೊಂಡರು. ಆದರೆ ನವೆಂಬರ್ ತಿಂಗಳ ಹೊತ್ತಿಗೆ ಶೇ 49ರಷ್ಟು ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ ಎಂದು ಸಿಎಂಐಇ ದತ್ತಾಂಶಗಳು ಸೂಚಿಸುತ್ತಿವೆ.

ಇದನ್ನೂ ಓದಿ: ಈ ವರ್ಷದ ಬಜೆಟ್​ನಿಂದ ಮಹಿಳೆಯರು ಬಯಸುತ್ತಿರುವುದೇನು?

ಪ್ರಾತಿನಿಧಿಕ ಚಿತ್ರ (ಕೃಪೆ: ಪಿಟಿಐ)

ತಜ್ಞರು ಏನಂತಾರೆ?
ಈ ಬಾರಿಯ ಬಜೆಟ್ ನಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಹೊಸ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಘೋಷಿಸಬಹುದು ಎಂಬ ನಿರೀಕ್ಷೆ ಇದೆ ಅಂತಾರೆ ಎಫ್​ಕೆಸಿಸಿಐ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ರಾಣಿ. ವಿತ್ತ ಸಚಿವರು ಮಹಿಳೆ ಆಗಿರುವುದರಿಂದ ಅವರು ಮಹಿಳೆಯರ ನೋವಿಗೆ ಸ್ಪಂದಿಸಬಹುದು ಎಂಬ ಆಶಾಭಾವನೆಯನ್ನು ಅವರು ಮುಕ್ತವಾಗಿ ಹಂಚಿಕೊಂಡರು. ಅವರ ಮಾತಿನ ಅಕ್ಷರರೂಪ ಇಲ್ಲಿದೆ…

ಸಿಎಂಐಇ ದತ್ತಾಂಶದ ಪ್ರಕಾರ ಶೇ 49 ಮಹಿಳೆಯರು ಲಾಕ್​ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದಾರೆ. ಯಾರೊಬ್ಬರೂ ಈ ರೀತಿ ಸಾಂಕ್ರಾಮಿಕ ರೋಗ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಸಂಬಳವನ್ನು ನಂಬಿಕೊಂಡೇ ಬದುಕುವ ಜನರು, ಮನೆಯಲ್ಲಿ ಜವಾಬ್ದಾರಿ ಹೊತ್ತವರು ಹೀಗೆ ಎಲ್ಲರ ಬದುಕನ್ನು ಕೊರೊನಾ ಬುಡಮೇಲು ಮಾಡಿತು. ಈ ಹೊತ್ತಲ್ಲಿ ಮಹಿಳೆಯರು ಕುಟುಂಬ ನಿರ್ವಹಣೆಗಾಗಿ ಗೃಹೋದ್ಯಮವನ್ನು ನೆಚ್ಚಿಕೊಂಡರು. ಮನೆಯಲ್ಲಿ ಮಾಸ್ಕ್ ಮಾಡುವುದು, ಮಸಾಲೆ ಪುಡಿ ತಯಾರಿಸುವುದು ಈ ಮೂಲಕ ಸಂಪಾದನೆ ಮಾಡುವ ದಾರಿಯನ್ನು ನಾವು ಹೇಳಿಕೊಟ್ಟಿದ್ದೇವೆ. ಹೀಗೆ ಸ್ವಯಂ ಉದ್ಯೋಗ ಮಾಡುವವರಿಗೆ ಸಾಲ ಮರುಪಾವತಿಯ ಅವಧಿಯನ್ನು ಅಂದರೆ ಮೊರೊಟೊರಿಯಂ ಸವಲತ್ತನ್ನು ಇನ್ನೂ ಐದು ತಿಂಗಳು ವಿಸ್ತರಿಸಿದರೆ ಒಳ್ಳೆಯದು.

ಹೊಸ ಯೋಜನೆಗಳನ್ನು ಘೋಷಿಸುವುದಕ್ಕಿಂತ ಈಗಾಗಲೇ ಘೋಷಣೆ ಮಾಡಿರುವ ಯೋಜನೆಗಳನ್ನು ವಿಸ್ತರಿಸಿದರೆ ಒಳ್ಳೆಯದು. ಉದಾಹರಣೆಗೆ STEP (Support to Training and Employment Programme for Women). ಈ ಯೋಜನೆ ಬಗ್ಗೆ ಎಷ್ಟು ಜನರಿಗೆ ತಿಳಿದಿದೆ? ಈ ಯೋಜನೆಗೆ ₹40 ಕೋಟಿ ಅನುದಾನ ನೀಡಲಾಗಿತ್ತು. 2019 ರಲ್ಲಿ ಈ ಯೋಜನೆಗಿರುವ ಅನುದಾನವನ್ನು ₹5 ಕೋಟಿಗೆ ಇಳಿಸಿದ್ದಾರೆ. ಈ ರೀತಿಯ ಯೋಜನೆಗಳ ಬಗ್ಗೆ ಜನರಿಗೆ ಗೊತ್ತಿಲ್ಲ. ಯಾವುದೇ ಯೋಜನೆಗಳನ್ನು ಘೋಷಿಸುವಾಗ ಸರ್ಕಾರ ಯಾಕೆ ಅದರ ಬಗ್ಗೆ ಜನರಿಗೆ ಅರಿವು ಮೂಡಿಸುವುದಿಲ್ಲ? ಕಡೇ ಪಕ್ಷ ಜನರಿಗೆ ಅರಿವು ಮೂಡಿಸುವ ಕಾರ್ಯಗಳನ್ನು ಎನ್​ಜಿಒಗಳಿಗೆ ವಹಿಸಿಕೊಡಬೇಕು. ಅವರು ಜನರಿಗೆ ತರಬೇತಿ ನೀಡುತ್ತಾರೆ. ಹೊಸ ಯೋಜನೆಗಳ ಘೋಷಣೆ ಮಾಡುವ ಮುನ್ನ ಹಳೆಯ ಯೋಜನೆಗಳನ್ನು ಪರಿಷ್ಕರಿಸಲಿ.

ಪ್ರಸ್ತುತ ಗ್ರಾಮೀಣ ಮಾತ್ರವಲ್ಲ ನಗರ ಪ್ರದೇಶದಲ್ಲಿರುವ ಮಹಿಳೆಯರೂ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗಿದೆ. ಗ್ರಾಮೀಣ ಪ್ರದೇಶದ ಜನರು ಬದುಕು ಕಟ್ಟಿಕೊಳ್ಳುವುದಕ್ಕಾಗಿ ನಗರಕ್ಕೆ ಬಂದರು. ಲಾಕ್​ಡೌನ್ ಹೊಡೆತದಿಂದಾಗಿ ಮನೆ ಬಾಡಿಗೆ ಕಟ್ಟಲಾಗದೆ ಊರಿಗೆ ಮರಳಿದ್ದಾರೆ. ಇಂಥವರಿಗೆ ನೆರವಾಗಲು ಸ್ಥಳೀಯ ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳುವ ಕಾರ್ಯಗಳನ್ನು ಮಾಡಬೇಕು. ಅವರಿಗೆ ತರಬೇತಿ ನೀಡಬೇಕು. ನಗರದಿಂದ ಮರಳಿದ ಮಂದಿ ಹಳ್ಳಿಗಳಲ್ಲಿ ಕೃಷಿ ಮಾಡುತ್ತಿದ್ದಾರೆ. ಅವರಿಗೆ ಸಹಾಯವಾಗುವಂತ ಯೋಜನೆಗಳನ್ನು ತರಬೇಕು. ಇದೀಗ ₹2.5 ಲಕ್ಷವರಿಗಿನ ಆದಾಯದವರಿಗೆ ಆದಾಯ ತೆರಿಗೆ ವಿನಾಯಿತಿ ಇದೆ. ಇದರಿಂದ ಮಹಿಳೆಯರಿಗೆ ಹಣ ಉಳಿತಾಯ ಆಗುತ್ತದೆ. ಮಕ್ಕಳ ಶಿಕ್ಷಣಕ್ಕೆ ಸಹಾಯವಾಗುತ್ತದೆ. ಮಹಿಳೆಯರ ಗೃಹೋದ್ಯಮಕ್ಕೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ನಾವು ಈ ಬಜೆಟ್​ನಲ್ಲಿ ನಿರೀಕ್ಷಿಸುತ್ತಿದ್ದೇವೆ.

Union Budget 2021 ನಿರೀಕ್ಷೆ | ಸಿಗಬಹುದೇ ಆದಾಯ ತೆರಿಗೆ ವಿನಾಯ್ತಿ?

Union Budget 2021: ಬಜೆಟ್ ಮೊಬೈಲ್ ಆ್ಯಪ್​ನಲ್ಲಿ ಏನಿದೆ?