Budget 2021 ನಿರೀಕ್ಷೆ | ಬೇಕಿದೆ ಜೀವವಿಮೆಗೆ 80CCD, ಆರೋಗ್ಯವಿಮೆಗೆ ಜಿಎಸ್​ಟಿ ವಿನಾಯ್ತಿ

ದೇಶದಲ್ಲಿ ದೊಡ್ಡ ಪ್ರಮಾಣದ ಜನರು ನಿವೃತ್ತಿಯ ನಂತರದ ಆರಾಮದಾಯಕ ಬದುಕಿಗೆ ಜೀವವಿಮೆ ನೀಡುವ ಪಾಲಿಸಿಗಳನ್ನೇ ಅವಲಂಬಿಸಿದ್ದಾರೆ. ಎನ್​ಪಿಎಸ್​ಗೆ ಸಿಗುವ ತೆರಿಗೆ ಸೌಕರ್ಯ ಜೀವವಿಮೆಗೂ ಸಿಗಬೇಕು ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ.

  • ಸ್ಕಂದ ಕೆ.ಎನ್.
  • Published On - 19:24 PM, 28 Jan 2021
Budget 2021 ನಿರೀಕ್ಷೆ | ಬೇಕಿದೆ ಜೀವವಿಮೆಗೆ 80CCD, ಆರೋಗ್ಯವಿಮೆಗೆ ಜಿಎಸ್​ಟಿ ವಿನಾಯ್ತಿ
ದೇಶದ ಅತಿದೊಡ್ಡ ಜೀವವಿಮೆ ಕಂಪನಿ ಎಲ್​ಐಸಿ

ಈ ಬಾರಿಯ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಇಷ್ಟು ವರ್ಷಗಳ ಕಾಲ ನಡೆಯುತ್ತಿದ್ದ ಬಜೆಟ್​ ಮಂಡನೆಗೂ ಈ ಬಾರಿಯ ಬಜೆಟ್​ಗೂ ಸಹಜವಾಗಿಯೇ ವ್ಯತ್ಯಾಸ ಇರಲಿದೆ. ಇಡೀ ದೇಶವೇ ಕೊರೊನಾ ಹೊಡೆತಕ್ಕೆ ಸಿಕ್ಕು ಸಂಕಷ್ಟವನ್ನು ಹೊದ್ದು ನಿಂತಿರುವಾಗ ಜನರ ಕಣ್ಣಲ್ಲಿ ನಿರೀಕ್ಷೆಗಳಲ್ಲದೇ ಇನ್ನೇನಿರಲು ಸಾಧ್ಯ? ಒಂದು ಬಜೆಟ್ ಇಡೀ ದೇಶದ ಜನರ ಬದುಕಿನ ಲಯವನ್ನೇ ಬದಲಿಸುವ ತಾಕತ್ತು ಹೊಂದಿರುವಾಗ ಸರ್ಕಾರದ ಹೆಗಲ ಮೇಲೆ ಭಾರವೂ ಹೆಚ್ಚಿರುತ್ತದೆ. ಅದನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೇಗೆ ನಿರ್ವಹಿಸಲಿದೆ ಎಂಬುದು ಸದ್ಯದ ಕುತೂಹಲ.

ಕಳೆದ ಕ್ಯಾಲೆಂಡರ್ ವರ್ಷದಲ್ಲಿ ಆರಂಭದ ಎರಡೂವರೆ ತಿಂಗಳಷ್ಟೇ ನಮ್ಮ ಹಿಡಿತದಲ್ಲಿತ್ತು. ಕಳೆದ ಆರ್ಥಿಕ ವರ್ಷದ ಮೊದಲ ತಿಂಗಳಾದ ಮಾರ್ಚ್​ ನಂತರದ ದಿನಗಳು ನಮ್ಮ ಜೀವ ಹಾಗೂ ಜೀವನದ ಬಗ್ಗೆ ಅಭದ್ರತೆಯನ್ನು ಹುಟ್ಟುಹಾಕಿತು. ಯಾರು ಯಾವಾಗ ಬದುಕಿನ ಪಯಣ ಮುಗಿಸುತ್ತಾರೋ ಎಂಬ ಭಯ ಎದೆಯಾಳದಲ್ಲಿ ಮೊಳಕೆಯೊಡೆಯಿತು. ಕೆಲಸ ಕಳೆದುಕೊಂಡವರಿಗೆ, ಊರು ತೊರೆದವರಿಗೆ, ಆಸ್ಪತ್ರೆಗೆ ಲಕ್ಷಾಂತರ ಸುರಿದವರಿಗೆ ಭವಿಷ್ಯದ ಬಗೆಗಿನ ಅತಂತ್ರತೆ ಇನ್ನಿಲ್ಲದಂತೆ ಕಾಡಿತು.

ಆರೋಗ್ಯ ವಿಮೆ, ಜೀವವಿಮೆಗಳ ಪ್ರಾಮುಖ್ಯತೆ ಅರಿವಿಗೆ ಬರುವಂತೆ ಮಾಡಿದ ವರ್ಷ 2020. ಜೀವವಿಮೆಯ ವಲಯ ದೇಶದ ಜನರಿಗೆ ಸಾಮಾಜಿಕ ಭದ್ರತೆ ಒದಗಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಜೀವನಕ್ಕೆ ಭದ್ರತೆ ನೀಡುವುದರ ಜೊತೆಜೊತೆಗೆ ದೀರ್ಘಕಾಲೀನ ಉಳಿತಾಯ ಮತ್ತು ಭವಿಷ್ಯದ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಲು ಸಹಕರಿಸುತ್ತದೆ. ಕೊರೊನಾ ಕಲಿಸಿದ ಪಾಠವನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡುವುದಾದರೆ ಈ ಬಾರಿಯ ಬಜೆಟ್​ನಲ್ಲಿ ಜೀವವಿಮೆ ವಲಯಕ್ಕೆ ಹೆಚ್ಚಿನ ಒತ್ತು ಸಿಗಬೇಕೆಂದು ಜನ ಬಯಸುತ್ತಿದ್ದಾರೆ.

ಇದನ್ನೂ ಓದಿ: Budget 2021: ಏನಿದು ಆರ್ಥಿಕ ಸಮೀಕ್ಷೆ? ಏನಿದರ ಮಹತ್ವ?

ಉಳಿತಾಯದ ಮಾರ್ಗವೂ ಹೌದು
ದೇಶದಲ್ಲಿ ದೊಡ್ಡ ಪ್ರಮಾಣದ ಜನರು ನಿವೃತ್ತಿಯ ನಂತರದ ಆರಾಮದಾಯಕ ಬದುಕಿಗೆ ಜೀವವಿಮೆ ನೀಡುವ ಯೋಜನೆಗಳನ್ನೇ ಅವಲಂಬಿಸಿದ್ದಾರೆ. ನಿವೃತ್ತಿಯ ನಂತರ ನಿಯಮಿತ ಆದಾಯದ ಮೂಲವಾಗಿ ಇವುಗಳನ್ನು ಪರಿಗಣಿಸಿದ್ದಾರೆ. ಒಂದೆಡೆ ಬದುಕಿನ ನಿರೀಕ್ಷೆ ಹೆಚ್ಚುತ್ತಿದ್ದರೆ, ಆರ್ಥಿಕ ಅಸ್ಥಿರತೆ, ಮಾರುಕಟ್ಟೆಯ ಏರಿಳಿತಗಳು, ಉದ್ಯೋಗದ ಅಭದ್ರತೆ ಕೂಡಾ ಕಾಡುತ್ತಿರುತ್ತದೆ. ಹೀಗಿರುವಾಗ ಜೀವ ವಿಮೆಯನ್ನೇ ಈ ಸಮಸ್ಯೆಗಳಿಗಾಗಿ ಪರಿಹಾರವೆಂದು ಜನ ನೆಚ್ಚಿಕೊಳ್ಳುವುದು ಸಹಜ.

ಸಾಮಾಜಿಕ ಭದ್ರತೆಯ ದೃಷ್ಟಿಕೋನದಲ್ಲಿ ಅವಲೋಕಿಸದರೆ, ಜೀವವಿಮೆ ಪಾಲಿಸಿಗಳು ಮತ್ತು ಎನ್​ಪಿಎಸ್ (ರಾಷ್ಟ್ರೀಯ ಪಿಂಚಣಿ ಯೋಜನೆ) ಎರಡೂ ಸಹ ನಿವೃತ್ತಿಯ ನಂತರದ ಬದುಕಿಗೆ ಒಂದೇ ತೆರನಾಗಿ ಆಧಾರವಾಗುತ್ತವೆ. ಆದರೆ, ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸೆಕ್ಷನ್​ 80CCD ಅಡಿಯಲ್ಲಿರುವ ತೆರಿಗೆ ವಿನಾಯಿತಿಯ ಸೌಕರ್ಯ ಜೀವವಿಮೆ ಯೋಜನೆಗೆ ಲಭ್ಯವಿಲ್ಲ. ಈ ಕಾರಣದಿಂದ ಎರಡೂ ಯೋಜನೆಗಳಿಗೆ ಸಮಾನವಾದ ವಿನಾಯಿತಿ ಸಿಗಬೇಕೆಂಬ ನಿರೀಕ್ಷೆ ಜನರಲ್ಲಿದೆ.

ಜಿಎಸ್​ಟಿ ತಗ್ಗಲಿ
ಜೀವವಿಮೆ ಪರಿಹಾರದ ಮೇಲಿರುವ ಜಿಎಸ್​ಟಿ ತಗ್ಗಿಸಿದರೆ ಹೆಚ್ಚು ಜನರು ಇದರತ್ತ ಮುಖ ಮಾಡುವುದು ಸುಲಭವಾಗುತ್ತದೆ. ನಿರ್ದಿಷ್ಟ ಅವಧಿಯ ಯೋಜನೆಗಳ ಮೇಲಿನ ಜಿಎಸ್​ಟಿ ಕಡಿತಗೊಳಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಈ ಕಾರಣದಿಂದ ಪ್ರಸ್ತುತ ಬಜೆಟ್​ನಲ್ಲಿ ಸರ್ಕಾರ ಇಂತಹದ್ದೊಂದು ಘೋಷಣೆ ಮಾಡಲಿ ಎಂಬ ನಿರೀಕ್ಷೆ ಇದೆ.

ಮೊದಲ ಬಾರಿಗೆ ಜೀವವಿಮೆ ಪಾಲಿಸಿಗೆ ನೋಂದಣಿ ಮಾಡಿಕೊಳ್ಳುತ್ತಿರುವವರಿಗೆ ಮತ್ತು ಮಹಿಳೆಯರಿಗೆ ವಿಶೇಷ ತೆರಿಗೆ ವಿನಾಯಿತಿ ನೀಡಬೇಕೆಂಬ ನಿರೀಕ್ಷೆಯಿದೆ. ಇದು ಯುವ ಸಮುದಾಯದಲ್ಲಿ ಹಣ ಉಳಿತಾಯ ಮಾಡಲು ನೆರವಾಗುವ ಜೊತೆಗೆ, ಮಹಿಳೆಯರಿಗೂ ಬಲ ತುಂಬಲಿದೆ. ಈ ಸಂದರ್ಭದಲ್ಲಂತೂ ಜೀವವಿಮೆ ಮತ್ತು ಆರೋಗ್ಯ ವಿಮೆಯ ಅವಶ್ಯಕತೆ ಹೆಚ್ಚಿರುವುದರಿಂದ ಸರ್ಕಾರ ಈ ಕ್ಷೇತ್ರಗಳತ್ತ ವಿಶೇಷ ಗಮನಹರಿಸಬೇಕಿದೆ.

Budget 2021: ಬಜೆಟ್ ಮಂಡನೆ ಹೇಗೆ ನಡೆಯುತ್ತದೆ? ಎಲ್ಲಿ ವೀಕ್ಷಿಸಬಹುದು?

Union Budget 2021 ನಿರೀಕ್ಷೆ | ಜಿಎಸ್​ಟಿ ಪಾವತಿಯಲ್ಲಿ ಲಂಚಾವತಾರ, ಬೇಕಿದೆ ಕಡಿವಾಣ