ನವದೆಹಲಿ: ಆದಾಯ ತೆರಿಗೆ (Income Tax) ವಿನಾಯಿತಿ ಮಿತಿಯನ್ನು (Tax Free Slab) 5 ಲಕ್ಷ ರೂ.ಗೆ ವಿಸ್ತರಿಸಲು ನೀತಿ ನಿರೂಪಕರು ಚಿಂತನೆ ನಡೆಸುತ್ತಿದ್ದಾರೆ. ಎರಡು ವರ್ಷ ಹಿಂದೆ ಜಾರಿಗೆ ತಂದಿದ್ದ ಪರ್ಯಾಯ ವೈಯಕ್ತಿಕ ಆದಾಯ ತೆರಿಗೆ ನೀತಿಗೆ (Alternative Tax Regime) ಪೂರಕವಾಗಿ ಈ ಕುರಿತು ಚಿಂತನೆ ನಡೆಸಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಬ್ಯುಸಿನೆಸ್ ಸ್ಟಾಂಡರ್ಡ್’ ವರದಿ ಮಾಡಿದೆ. ಪ್ರಸ್ತುತ 2.5 ಲಕ್ಷ ರೂ.ನಿಂದ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ತೆರಿಗೆ ಪಾವತಿಸಬೇಕಾಗಿಲ್ಲ. ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವುದರಿಂದ ಹೂಡಿಕೆಗೆ ಹೆಚ್ಚು ಅವಕಾಶ ಕಲ್ಪಿಸುವುದರ ಜತೆಗೆ ತೆರಿಗೆ ಮೌಲ್ಯಮಾಪನ ಪ್ರಮಾಣವನ್ನೂ ಕಡಿಮೆ ಮಾಡಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಸ್ತುತ ಕೆಲವೇ ಕೆಲವು ಮಂದಿ ತೆರಿಗೆ ಪಾವತಿದಾರರು ಮಾತ್ರ ಪರ್ಯಾಯ ತೆರಿಗೆ ನೀತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅನೇಕರಿಗೆ ಹಳೆಯ ಆದಾಯ ತೆರಿಗೆ ನೀತಿಯನ್ನು ಆಯ್ದುಕೊಂಡರೆ ‘ಆದಾಯ ತೆರಿಗೆ ಕಾಯ್ದೆ’ಯ ಸೆಕ್ಷನ್ 80ಸಿ ಹಾಗೂ 80ಡಿ ಮೂಲಕ ಹೆಚ್ಚಿನ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ಪರ್ಯಾಯ ತೆರಿಗೆ ನೀತಿಯಲ್ಲಿ ಅನೇಕ ವಿನಾಯಿತಿ ಆಯ್ಕೆಗಳು ಇಲ್ಲವಾಗಿವೆ. 5 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ದೊರೆಯುತ್ತದೆ. 2.5 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗಿನ ಆದಾಯಕ್ಕೆ ರಿಬೇಟ್ ದೊರೆಯುತ್ತದೆ. ಹೀಗಾಗಿ ಹೊಸ ಪರ್ಯಾಯ ತೆರಿಗೆ ಪದ್ಧತಿಯಲ್ಲಾಗಲೀ ಹಳೆಯ ತೆರಿಗೆ ನೀತಿಯಲ್ಲಾಗಲೀ 5 ಲಕ್ಷ ರೂ. ವರೆಗೆ ಆದಾಯ ಪಡೆಯುತ್ತಿರುವವರು ತೆರಿಗೆ ವಿನಾಯಿತಿ ಪಡೆಯುತ್ತಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಬಜೆಟ್ ಸಿದ್ಧತೆ ವೇಳೆ ಸಮಾಲೋಚನೆ
ತೆರಿಗೆ ವಿನಾಯಿತಿ ಮಿತಿ ಹೆಚ್ಚಳ, ಪರ್ಯಾಯ ಆದಾಯ ತೆರಿಗೆ ನೀತಿಯನ್ನು ಇನ್ನಷ್ಟು ಆಕರ್ಷಕಗೊಳಿಸುವ ವಿಚಾರವಾಗಿ ಬಜೆಟ್ ಸಿದ್ಧತೆ ವೇಳೆ ಸಮಾಲೋಚನೆ ನಡೆಸಲಾಗುತ್ತಿದೆ. ಅನೇಕ ಇಲಾಖೆಗಳ ವಿಚಾರವಾಗಿ ಸಲಹೆಗಳನ್ನು ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ. ತೆರಿಗೆಗೆ ಸಂಬಂಧಿಸಿದ ಬಜೆಟ್ ಸಿದ್ಧತೆಗಳು ಮುಂದಿನ ವಾರದಿಂದ ಆರಂಭವಾಗಲಿವೆ. ಪರ್ಯಾಯ ತೆರಿಗೆ ನೀತಿಯನ್ನು ಇನ್ನಷ್ಟು ಆಕರ್ಷಕಗೊಳಿಸುವ ವಿಚಾರವಾಗಿ ಬಜೆಟ್ ಸಿದ್ಧತೆ ಸಭೆಗಳಲ್ಲಿ ಚರ್ಚಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: GST Council Meet: ಮುಂದಿನ ವಾರ ಜಿಎಸ್ಟಿ ಮಂಡಳಿ ಸಭೆ; ಆರೋಗ್ಯ ವಿಮೆ ತೆರಿಗೆ ಇಳಿಕೆ ನಿರೀಕ್ಷೆ
ಆದಾಗ್ಯೂ, ಅಂಥ ಪ್ರಸ್ತಾವವು ಒಟ್ಟಾರೆ ಆದಾಯದ ಮೇಲೆ ಬೀರುವ ಪ್ರಭಾವ ಮತ್ತು ಅದನ್ನು ಜಾರಿಗೊಳಿಸಲು ಅವಕಾಶವಿದೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಮಾಡಿದರೆ ಆದಾಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಹಳೆಯ ಮತ್ತು ಪರ್ಯಾಯ ಆದಾಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಮಾಡುವ ಅಗತ್ಯವಿದೆಯೇ ಎಂಬ ಬಗ್ಗೆ ಮೊದಲಿಗೆ ಸಮಾಲೋಚನೆ ನಡೆಯಲಿದೆ ಎಂದು ಅಧಿಕಾರಿ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಪರ್ಯಾಯ ತೆರಿಗೆ ನೀತಿಯಡಿ ಈಗ ಹೀಗಿದೆ ತೆರಿಗೆ ಲೆಕ್ಕಾಚಾರ
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 am, Mon, 12 December 22