ಸರ್ಕಾರದ ಆದಾಯಕ್ಕೆ ಕತ್ತರಿ ಬೀಳದಂತೆ ತೈಲ ಬೆಲೆ ಲೀಟರ್​ಗೆ ರೂ. 8.50 ಇಳಿಸಬಹುದು: ಇದು ತಜ್ಞರ ಲೆಕ್ಕಾಚಾರ

ಸರ್ಕಾರದ ಅಂದಾಜು ಮಾಡಿರುವ ಆದಾಯದಲ್ಲಿ ಕಡಿಮೆ ಮಾಡಿಕೊಳ್ಳದಂತೆ ಪೆಟ್ರೋಲ್- ಡೀಸೆಲ್ ದರದಲ್ಲಿ ಪ್ರತಿ ಲೀಟರ್​ಗೆ ರೂ. 8.5 ಕಡಿಮೆ ಮಾಡಬಹುದು ಎಂಬುದು ವಿಶ್ಲೇಷಕರ ಅಭಿಪ್ರಾಯ. ಅದಕ್ಕೆ ಅವರು ನೀಡಿರುವ ಕಾರಣ, ವಿವರಣೆ ಇಲ್ಲಿದೆ.

  • TV9 Web Team
  • Published On - 17:10 PM, 4 Mar 2021
ಸರ್ಕಾರದ ಆದಾಯಕ್ಕೆ ಕತ್ತರಿ ಬೀಳದಂತೆ ತೈಲ ಬೆಲೆ ಲೀಟರ್​ಗೆ ರೂ. 8.50 ಇಳಿಸಬಹುದು: ಇದು ತಜ್ಞರ ಲೆಕ್ಕಾಚಾರ
ಸಾಂದರ್ಭಿಕ ಚಿತ್ರ

ಸರ್ಕಾರದ ಆದಾಯ ಸಂಗ್ರಹದ ಗುರಿಗೆ ಪೆಟ್ಟು ಬೀಳದ ರೀತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಪ್ರತಿ ಲೀಟರ್​ಗೆ 8.5 ರೂಪಾಯಿ ಇಳಿಕೆ ಮಾಡಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮಿಂಟ್ ವರದಿ ಮಾಡಿದೆ. ಕಳೆದ ಒಂಬತ್ತು ತಿಂಗಳಿಂದ ನಿರಂತರವಾಗಿ ಪೆಟ್ರೋಲ್- ಡೀಸೆಲ್ ದರದಲ್ಲಿ ಏರಿಕೆ ಆಗುತ್ತಲೇ ಇದ್ದು, ಸದ್ಯಕ್ಕೆ ಐತಿಹಾಸಿಕ ಗರಿಷ್ಠ ಮಟ್ಟದಲ್ಲಿದೆ. ಗ್ರಾಹಕರ ಮೇಲಿನ ಹೊರೆ ಇಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್- ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಬೇಕು ಎಂದು ವಿರೋಧ ಪಕ್ಷಗಳೂ ಸೇರಿದಂತೆ ವಿವಿಧ ವರ್ಗದವರು ಒತ್ತಾಯ ಮಾಡುತ್ತಲೇ ಇದ್ದಾರೆ.

“ಹಣಕಾಸು ವರ್ಷ22ಕ್ಕೆ (2021ರ ಏಪ್ರಿಲ್​ನಿಂದ 2022ರ ಮಾರ್ಚ್ ತನಕ) ಒಂದು ವೇಳೆ ಅಬಕಾರಿ ಸುಂಕ ಇಳಿಕೆ ಮಾಡದಿದ್ದಲ್ಲಿ 4.35 ಲಕ್ಷ ಕೋಟಿ ರೂಪಾಯಿ ಸಂಗ್ರಹ ಆಗುತ್ತದೆ. ಬಜೆಟ್​​ನಲ್ಲಿ ಅಂದಾಜು ಮಾಡಿರುವ ಮೊತ್ತ 3.2 ಲಕ್ಷ ಕೋಟಿ ರೂಪಾಯಿ ಆಗಿದೆ. ಆದ್ದರಿಂದ 2021ರ ಏಪ್ರಿಲ್ 1ನೇ ತಾರೀಕಿಗೂ ಮುಂಚೆ ಪ್ರತಿ ಲೀಟರ್​ಗೆ ರೂ. 8.5 ಕಡಿತ ಮಾಡಿದರೂ 2021- 22ನೇ ಸಾಲಿನ ಬಜೆಟ್ ಅಂದಾಜು ಆದಾಯವು ಸಂಗ್ರಹ ಆಗುತ್ತದೆ,” ಎಂದು ಐಸಿಐಸಿಐ ಸೆಕ್ಯೂರಿಟೀಸ್ ತಿಳಿಸಿದೆ.

ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ಮುಟ್ಟಿತ್ತು:
ಖಾಸಗೀಕರಣ ಹಾಗೂ ಹಣದುಬ್ಬರದ ಆತಂಕ ಇದ್ದರೂ ಬೇಡಿಕೆ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಲೀಟರ್​​ಗೆ  8.5 ರೂಪಾಯಿಗಿಂತಲೂ ಹೆಚ್ಚು ಇಳಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾರ್ಚ್ 2020 ಮತ್ತು ಮೇ 2020 ಮಧ್ಯೆ ಪೆಟ್ರೋಲ್ ಹಾಗೂ ಡೀಸೆಲ್ ಅಬಕಾರಿ ಸುಂಕವನ್ನು ಪ್ರತಿ ಲೀಟರ್​ಗೆ ರೂ. 13 ಹಾಗೂ ರೂ. 16 ಏರಿಕೆ ಮಾಡಲಾಗಿದೆ.

ಈಗ ಅಬಕಾರಿ ಸುಂಕ ಡೀಸೆಲ್ ಮೇಲೆ ರೂ. 31.8 ಹಾಗೂ ಪೆಟ್ರೋಲ್ ಮೇಲೆ ಪ್ರತಿ ಲೀಟರ್​ಗೆ ರೂ. 32.9 ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಯು ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ಮುಟ್ಟಿತ್ತು. ಅದರಿಂದ ಬಂದ ಲಾಭವನ್ನು ಗ್ರಾಹಕರಿಗೆ ವರ್ಗಾವಣೆ ಮಾಡದೆ ಅಬಕಾರಿ ಸುಂಕವನ್ನು ಏರಿಕೆ ಮಾಡಲಾಗಿತ್ತು. ಆದರೆ ತೈಲ ಬೆಲೆ ಚೇತರಿಸಿಕೊಳ್ಳುತ್ತಿದ್ದಂತೆ ತೆರಿಗೆ ದರವನ್ನು ಅದರ ಮೂಲ ಸ್ಥಿತಿಗೆ ತಂದಿಲ್ಲ.

ಒಂದು ವೇಳೆ ಕಡಿತವು ಸ್ವಲ್ಪ ಮಟ್ಟಿಗೆ ಮಾತ್ರ ಆದಲ್ಲಿ ನಾವು ಅಂದುಕೊಂಡಂತೆ ಅಬಕಾರಿ ಸುಂಕವು ಬಜೆಟ್ ಅಂದಾಜಿಗಿಂತ ಹೆಚ್ಚು ಸಂಗ್ರಹವಾಗುತ್ತದೆ ಎಂದು ಐಸಿಐಸಿಐ ಸೆಕ್ಯೂರಿಟೀಸ್ ಹೇಳಿದೆ. ಪೆಟ್ರೋಲ್ ಚಿಲ್ಲರೆ ಮಾರಾಟ ದರದಲ್ಲಿ ಶೇಕಡಾ 60ರಷ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರದ ತೆರಿಗೆ ಆಗುತ್ತದೆ. ಇನ್ನು ಡೀಸೆಲ್ ಮೇಲೆ ಶೇಕಡಾ 54ಕ್ಕಿಂತ ಹೆಚ್ಚಾಗುತ್ತದೆ.  ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್​ಗೆ ರೂ. 91.17 ಇದ್ದು, ಡೀಸೆಲ್ ಪ್ರತಿ ಲೀಟರ್​ಗೆ 81.47 ರೂಪಾಯಿ ಇದೆ. ಕಳೆದ ತಿಂಗಳು ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲ ಸ್ಥಳಗಳಲ್ಲಿ ಮಾಮೂಲಿ ಪೆಟ್ರೋಲ್ ದರವು ರೂ. 100 ದಾಟಿತ್ತು. ಆ ರಾಜ್ಯಗಳು ದೇಶದಲ್ಲಿ ಅತಿ ಹೆಚ್ಚು ವ್ಯಾಟ್ (ವ್ಯಾಲ್ಯೂ ಆ್ಯಡೆಡ್ ಟ್ಯಾಕ್ಸ್) ವಿಧಿಸುತ್ತವೆ.

ಒಂಬತ್ತು ಸಲ ಅಬಕಾರಿ ಸುಂಕ ಹೆಚ್ಚಳ:
2014ರ ನವೆಂಬರ್​ನಿಂದ 2016ರ ಜನವರಿ ಮಧ್ಯೆ ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಒಂಬತ್ತು ಬಾರಿ ಅಬಕಾರಿ ಸುಂಕವನ್ನು ಏರಿಕೆ ಮಾಡಿದೆ. ಒಟ್ಟಾರೆಯಾಗಿ ಪೆಟ್ರೋಲ್ ಮೇಲಿನ ದರ ಲೀಟರ್​ಗೆ ರೂ. 11.77 ಹಾಗೂ ಡೀಸೆಲ್​ಗೆ ರೂ. 13.47 ಹೆಚ್ಚಳ ಮಾಡಲಾಗಿದೆ. ಈ ಹದಿನೈದು ತಿಂಗಳಲ್ಲಿ ಸರ್ಕಾರಕ್ಕೆ ಅಬಕಾರಿ ಆದಾಯ 2016-17ರಲ್ಲಿ 2,42,000 ಕೋಟಿ ರೂಪಾಯಿಗೆ ದುಪ್ಪಟ್ಟು ಆಗಲು ಸಹಾಯ ಮಾಡಿದೆ. 2014- 15ರಲ್ಲಿ ಈ ಮೊತ್ತ 99,000 ಕೋಟಿ ಆಗಿತ್ತು.

2017ರ ಅಕ್ಟೋಬರ್​​ನಲ್ಲಿ ಸರ್ಕಾರ 2 ರೂಪಾಯಿ ಅಬಕಾರಿ ಸುಂಕ ಇಳಿಸಿತ್ತು. ಆ ನಂತರದ ಒಂದು ವರ್ಷಕ್ಕೆ ರೂ. 1.50 ಇಳಿಸಿತು. ಆದರೆ 2019ರ ಜುಲೈನಲ್ಲಿ ಅಬಕಾರಿ ಸುಂಕವನ್ನು ಪ್ರತಿ ಲೀಟರ್​​ಗೆ ರೂ. 2 ಏರಿಸಿತು. ಆ ನಂತರ 2020ರ ಮಾರ್ಚ್​​ನಲ್ಲಿ ಪೆಟ್ರೋಲ್- ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ತಲಾ 3 ರೂಪಾಯಿ ಹೆಚ್ಚಳ ಮಾಡಿತು. ಅದೇ ವರ್ಷ ಮೇ ತಿಂಗಳಲ್ಲಿ ಅಬಕಾರಿ ಸುಂಕವನ್ನು ಪೆಟ್ರೋಲ್ ಮೇಲೆ ಲೀಟರ್​​ಗೆ ರೂ. 10 ಹಾಗೂ ಡೀಸೆಲ್​ಗೆ ರೂ. 13 ಏರಿಸಿತು.

ಇದನ್ನೂ ಓದಿ: Petrol rate: ಪೆಟ್ರೋಲ್ ಮೇಲೆ ಕೇಂದ್ರ, ರಾಜ್ಯಗಳಿಗೆ ಕಟ್ಟುವ ತೆರಿಗೆ ಲೆಕ್ಕ ಇಲ್ಲಿದೆ