World Economic Forum: ಭಾರತ ಬಲೂನ್​ನಂತೆ ಬಡ್ಡಿ ದರ ಹೆಚ್ಚಿಸಿಲ್ಲ, ಆರ್ಥಿಕ ಬೆಳವಣಿಗೆ ಸಾಧಿಸುತ್ತಿದೆ; ಅಶ್ವಿನಿ ವೈಷ್ಣವ್

| Updated By: Ganapathi Sharma

Updated on: Jan 18, 2023 | 9:25 PM

ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾದ ಮಾನವೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಭಾರತವು ಅತ್ಯಂತ ಪ್ರಾಯೋಗಿಕವಾಗಿ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ದೇಶದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುವುದರೊಂದಿಗೆ ಹೆಚ್ಚಿನ ಆರ್ಥಿಕ ಬೆಳವಣಿಗೆ ದರ ದಾಖಲಿಸಲು ಕಾರಣವಾಗಿದೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.

World Economic Forum: ಭಾರತ ಬಲೂನ್​ನಂತೆ ಬಡ್ಡಿ ದರ ಹೆಚ್ಚಿಸಿಲ್ಲ, ಆರ್ಥಿಕ ಬೆಳವಣಿಗೆ ಸಾಧಿಸುತ್ತಿದೆ; ಅಶ್ವಿನಿ ವೈಷ್ಣವ್
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (ಸಂಗ್ರಹ ಚಿತ್ರ)
Follow us on

ದಾವೋಸ್: ಭಾರತದಲ್ಲಿ ಕೇಂದ್ರೀಯ ಬ್ಯಾಂಕ್​ ಆರ್​ಬಿಐ (RBI) ಬಡ್ಡಿ ದರ ಹೆಚ್ಚಳಕ್ಕೆ ದಿಢೀರ್ ಬ್ರೇಕ್ ಹಾಕಿಲ್ಲ. ಹಾಗೆಂದು ಏಕಾಏಕಿ ಬಲೂನ್​ನಂತೆ ಹೆಚ್ಚಿಸಿಯೂ ಇಲ್ಲ. ನಮ್ಮ ಕೇಂದ್ರೀಯ ಬ್ಯಾಂಕ್ ಹಿತ-ಮಿತವಾದ ಮತ್ತು ಪ್ರಾಯೋಗಿಕವಾದ ನಿರ್ಧಾರಗಳನ್ನು ಕೈಗೊಂಡಿದೆ. ಆಮೂಲಕ ಹಣದುಬ್ಬರ (Indflation) ನಿಯಂತ್ರಣಕ್ಕೆ ಮತ್ತು ದೇಶದ ಆರ್ಥಿಕತೆಯ ಬೆಳವಣಿಗೆಗೆ ಕ್ರಮ ಕೈಗೊಂಡಿದೆ. ಸದ್ಯ ಆರ್​ಬಿಐ ಅತ್ಯುತ್ತಮ ಸ್ಥಿತಿಯಲ್ಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದರು. ಸ್ವಿಜರ್ಲೆಂಡ್​​ನ (Switzerland) ದಾವೋಸ್​​ನಲ್ಲಿ (Davos) ನಡೆಯುತ್ತಿರುವ ವಿಶ್ವ ಆರ್ಥಿಕ ಸಭೆಯಲ್ಲಿ (World Economic Forum) ಮಾತನಾಡಿದ ಅವರು ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯ ನಡುವೆಯೂ ಭಾರತ ಉತ್ತಮವಾಗಿ ಬೆಳವಣಿಗೆ ಸಾಧಿಸುತ್ತಿದೆ ಎಂದರು. ಜತೆಗೆ ಆರ್​ಬಿಐ ಕೈಗೊಂಡಿರುವ ಎಚ್ಚರಿಕೆಯ ನಡೆಯ ಬಗ್ಗೆ ವಿಶ್ವ ಸಮುದಾಯಕ್ಕೆ ಮಾಹಿತಿ ನೀಡಿದರು.

ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾದ ಮಾನವೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಭಾರತವು ಅತ್ಯಂತ ಪ್ರಾಯೋಗಿಕವಾಗಿ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ದೇಶದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುವುದರೊಂದಿಗೆ ಹೆಚ್ಚಿನ ಆರ್ಥಿಕ ಬೆಳವಣಿಗೆ ದರ ದಾಖಲಿಸಲು ಕಾರಣವಾಗಿದೆ. ಭಾರತದ ಆರ್ಥಿಕತೆಯು ಸ್ಥಿರವಾಗಿದೆ ಮತ್ತು ಹಣದುಬ್ಬರವೂ ನಿಯಂತ್ರಣಕ್ಕೆ ಬರುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Retail Inflation: ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾದ ಚಿಲ್ಲರೆ ಹಣದುಬ್ಬರ

ಕೋವಿಡ್ ಸಾಂಕ್ರಾಮಿಕ ಪ್ರಪಂಚದ ಆರ್ಥಿಕತೆ ಮೇಲೆ ಪರಿಣಾಮ ಬೀರಿತು. ಬೃಹತ್ ಪ್ಯಾಕೇಜ್​ಗಳ ಘೋಷಣೆಯ ಕಾರಣದಿಂದ ಅನೇಕ ದೇಶಗಳ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿತು. ಇದು ಹಣದುಬ್ಬರ ಏರಿಕೆಗೆ ಕಾರಣವಾಯಿತಲ್ಲದೆ ಆರ್ಥಿಕತೆ ಮೇಲೆ ಹೆಚ್ಚಿನ ಒತ್ತಡವನ್ನು ಸೃಷ್ಟಿಸಿತು. ಆದರೆ ಭಾರತ ಅತ್ಯಂತ ಪ್ರಾಯೋಗಿಕ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಸಮತೋಲನ ಕಾಯ್ದುಕೊಂಡಿತು. ಭಾರತ ಸರ್ಕಾರವು ಆರ್ಥಿಕ ನೆರವು, ಉಚಿತ ಆಹಾರ ಮತ್ತು ಉಚಿತ ಲಸಿಕೆಗಳೊಂದಿಗೆ ದುರ್ಬಲ ವರ್ಗದವರ ಹಿತದೃಷ್ಟಿಯ ಮೇಲೆ ಗಮನ ಕೇಂದ್ರೀಕರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಡಿಜಿಟಲ್ ವೇದಿಕೆಯ ಮೂಲಕ ಇವೆಲ್ಲವನ್ನೂ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ನಿಯಂತ್ರಣಕ್ಕೆ ಬಂದ ಹಣದುಬ್ಬರ

ಗ್ರಾಹಕ ದರ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣ ಡಿಸೆಂಬರ್​​ನಲ್ಲಿ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ, ಅಂದರೆ ಶೇಕಡಾ 5.72ಕ್ಕೆ ಇಳಿಕೆಯಾಗಿತ್ತು. ಸತತ 11 ತಿಂಗಳ ಬಳಿಕ ಚಿಲ್ಲರೆ ಹಣದುಬ್ಬರ ನವೆಂಬರ್​​ನಲ್ಲಿ ಶೇಕಡಾ 6ಕ್ಕಿಂತ ಕೆಳಗಿದು, ಆರ್​​ಬಿಐ ಸಹನೆಯ ಮಟ್ಟಕ್ಕೆ ಇಳಿಕೆಯಾಗಿತ್ತು. ಹಣದುಬ್ಬರ ತಡೆಯುವ ಸಲುವಾಗಿ ಆರ್​ಬಿಐ ಹಣಕಾಸು ನೀತಿ ಸಮಿತಿಯು ಡಿಸೆಂಬರ್ 7ರಂದು ರೆಪೊ ದರವನ್ನು 35 ಮೂಲಾಂಶದಷ್ಟು ಹೆಚ್ಚಿಸಿ ಶೇಕಡಾ 6.25ಕ್ಕೆ ನಿಗದಿ ಮಾಡಿತ್ತು. ಇದರ ಬೆನ್ನಲ್ಲೇ ಸಗಟು ದರ ಆಧಾರಿತ ಹಣದುಬ್ಬರವೂ ಡಿಸೆಂಬರ್​​​ನಲ್ಲಿ 22 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿ ಶೇ 4.95 ಆಗಿತ್ತು. ಈ ಮಧ್ಯೆ, ಡಿಸೆಂಬರ್​ ತ್ರೈಮಾಸಿಕ ಅವಧಿಯಲ್ಲಿ ಭಾರತದ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳ ಆದಾಯದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದ್ದು, ಆದಾಯ ಹಾಗೂ ಲಾಭದಲ್ಲಿ ಹೆಚ್ಚಳ ದಾಖಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ