Bank Crisis: ಅಮೆರಿಕದಲ್ಲಿ ಶೀತವಾದರೆ ಭಾರತಕ್ಕೆ ನೆಗಡಿ ಆಗಲೇಬೇಕಾ? ಅಲ್ಲಿ ಬ್ಯಾಂಕ್ ಬಿದ್ದರೆ ಇಲ್ಲಿ ಭಯಬೀಳಬೇಕಾ? ವಾಸ್ತವ ಸ್ಥಿತಿ ಏನು?

American Bank Crisis Effect On India: ಅಮೆರಿಕದ ಬ್ಯಾಂಕುಗಳು ಹಿನ್ನಡೆ ಕಾಣುತ್ತಿರುವುದು ಭಾರತೀಯ ಬ್ಯಾಂಕ್ ವಲಯದ ಮೇಲೂ ಪರಿಣಾಮ ಬೀರುತ್ತಿದೆ. ಬ್ಯಾಂಕ್ ಷೇರುಗಳು ಇಳಿಕೆಯ ಹಾದಿಯಲ್ಲಿವೆ. ರುಪಾಯಿ ದುರ್ಬಲಗೊಳ್ಳಬಹುದು. ಬಡ್ಡಿ ದರ ಹೆಚ್ಚಬಹುದು. ಇದೆಲ್ಲವೂ ಆರ್ಥಿಕತೆಗೆ ಹಿನ್ನಡೆ ತರಬಹುದು. ಆದರೂ ಭಾರತದ ಬ್ಯಾಂಕಿಂಗ್ ಕ್ಷೇತ್ರ ಇದನ್ನು ಎದುರಿಸುವಷ್ಟು ಸಮರ್ಥವಾಗಿದೆ ಎಂದು ಹೇಳಲಾಗುತ್ತಿದೆ.

Bank Crisis: ಅಮೆರಿಕದಲ್ಲಿ ಶೀತವಾದರೆ ಭಾರತಕ್ಕೆ ನೆಗಡಿ ಆಗಲೇಬೇಕಾ? ಅಲ್ಲಿ ಬ್ಯಾಂಕ್ ಬಿದ್ದರೆ ಇಲ್ಲಿ ಭಯಬೀಳಬೇಕಾ? ವಾಸ್ತವ ಸ್ಥಿತಿ ಏನು?
ಸಿಲಿಕಾನ್ ವ್ಯಾಲಿ ಬ್ಯಾಂಕ್
Follow us
|

Updated on: Mar 17, 2023 | 3:54 PM

ಜಾಗತಿಕ ಬ್ಯಾಂಕಿಂಗ್ ದೈತ್ಯ ಸಂಸ್ಥೆಗಳು ಸಾಲುಸಾಲಾಗಿ ನೆಲಕಚ್ಚುತ್ತಿರುವ ಸುದ್ದಿ ನೀವು ಕೇಳುತ್ತಿರಬಹುದು. ಅಮೆರಿಕದಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮತ್ತು ಸಿಗ್ನೇಚರ್ ಬ್ಯಾಂಕ್ ಪತನಗೊಂಡಿವೆ. ಸ್ವಿಟ್ಜರ್​ಲೆಂಡ್​ನ ಕ್ರೆಡಿಟ್ ಸ್ವೀಸ್ ಬ್ಯಾಂಕು (Credit Suisse Bank) ನೆಲಕಚ್ಚುತ್ತಿದೆ. ಇನ್ನೂ ಹಲವು ಜಾಗತಿಕ ಬ್ಯಾಂಕುಗಳು ಮುಚ್ಚುವ ಭೀತಿಯಿಂದ ಪರದಾಡುತ್ತಿವೆ. ಭಾರತದಲ್ಲೂ ಹಣಕಾಸು ಮತ್ತು ಉದ್ಯಮ ವಲಯ ಆತಂಕಗೊಂಡಿರುವುದು ಹೌದು. ಆದರೆ, ಪಾಶ್ಚಿಮಾತ್ಯ ದೇಶಗಳ ಬ್ಯಾಂಕ್​ಗಳು ಬಿದ್ದಿರುವುದು ಭಾರತೀಯ ಬ್ಯಾಂಕುಗಳ ಮೇಲೆ ಇನ್ನೂ ನೇರ ಪರಿಣಾಮ ಇನ್ನೂ ಆಗುತ್ತಿಲ್ಲ. ಷೇರುಪೇಟೆಯಲ್ಲಿ ಭಾರತದ ಬ್ಯಾಂಕುಗಳು ತುಸು ಹಿನ್ನಡೆ ಕಾಣುತ್ತಿರುವುದು ಬಿಟ್ಟರೆ ಬ್ಯಾಂಕ್ ಗ್ರಾಹಕರು ತಮ್ಮ ಹಣಕ್ಕಾಗಿ ಬೆನ್ನುಬೀಳುವ ದೃಶ್ಯ ಎಲ್ಲಿಯೂ ಇಲ್ಲ. ಬ್ಯಾಂಕ್ ಷೇರುಗಳು ಬಿದ್ದ ಕಾರಣಕ್ಕೆ ಷೇರುಪೇಟೆಯಲ್ಲಿನ ಬಂಡವಾಳ ಮೊತ್ತ ಇಳಿಕೆ ಆಗುತ್ತಿದೆ ಎನ್ನುವುದು ನಿಜ.

ಎಸ್​ವಿಬಿ ಎಫೆಕ್ಟ್: ಭಾರತೀಯ ಬ್ಯಾಂಕ್ ಷೇರುಗಳ ಕುಸಿತದಿಂದ ಏನು ನಷ್ಟ?

ಆದರೆ, ಬ್ಯಾಂಕ್​ಗಳ ಷೇರುಗಳು ಇಳಿಕೆ ಆಗುತ್ತಿರುವುದರ ಪರಿಣಾಮವಂತೂ ವಿವಿಧ ಸ್ತರಗಳಲ್ಲಿ ಆಗುವ ಸಾಧ್ಯತೆಯಂತೂ ಇದೆ. ಭಾರತದ ರುಪಾಯಿ ಕರೆನ್ಸಿ ಮೌಲ್ಯ ಕಡಿಮೆ ಆಗಬಹುದು. ಇದನ್ನು ನಿಯಂತ್ರಣಕ್ಕೆ ತರಲು ಆರ್​ಬಿಐ ತನ್ನ ಬಡ್ಡಿದರಗಳನ್ನು ಇನ್ನಷ್ಟು ಏರಿಸಬಹುದು. ಬಂಡವಾಳದ ಒಳಹರಿವು ಕಡಿಮೆ ಆಗಬಹುದು. ಇದರಿಂದ ಭಾರತದ ಆರ್ಥಿಕತೆಗೆ ಹಿನ್ನಡೆ ತರುವ ದಟ್ಟ ಸಾಧ್ಯತೆಯಂತೂ ಇದೆ.

ಇದಲ್ಲದೇ ಸಿಲಿಕಾನ್ ವ್ಯಾಲಿ ಬ್ಯಾಂಕ್ ವಿಶ್ವಾದ್ಯಂತ ಹಲವು ಸ್ಟಾರ್ಟಪ್ ಉದ್ದಿಮೆಗಳಿಗೆ ಜೀವಸೆಲೆಯಾಗಿತ್ತು. ಅದರಲ್ಲಿ ಕೆಲ ಭಾರತೀಯ ಸ್ಟಾರ್ಟಪ್​ಗಳೂ ಇವೆ. ಇವುಗಳ ಹಣ ವ್ಯವಹಾರ ಬಹುತೇಕ ಎಸ್​ವಿಬಿ ಜೊತೆಗೆ ಇವೆ. ಬ್ಯಾಂಕ್ ಗ್ರಾಹಕರ ಹಣ ಮರಳಿಸುವ ಬಗ್ಗೆ ಅಮೆರಿಕ ಭರವಸೆ ನೀಡಿದೆಯಾದರೂ ಎಸ್​ವಿಬಿಯಲ್ಲಿ ಹಣ ಇರಿಸಿರುವ ಸ್ಟಾರ್ಟಪ್​ಗಳಿಗೆ ತಾತ್ಕಾಲಿಕವಾಗಿಯಾದರೂ ಲಿಕ್ವಿಡಿಟಿ ಸಮಸ್ಯೆ ತಲೆದೋರುವಂತೆ ಮಾಡಿದೆ.

ಭಾರತದ ಬ್ಯಾಂಕಿಂಗ್ ವಲಯ ಕಠಿಣ ಪರಿಸ್ಥಿತಿ ಎದುರಿಸುವಷ್ಟು ಸುದೃಢವಾಗಿದೆಯಾ?

ಸಿಲಿಕಾನ್ ವ್ಯಾಲಿ ಬ್ಯಾಂಕ್, ಸಿಗ್ನೇಚರ್ ಬ್ಯಾಂಕ್, ಕ್ರೆಡಿಟ್ ಸ್ವೀಸ್ ಬ್ಯಾಂಕ್​​ಗಳು ಪತನಗೊಂಡಿರುವುದು ಜಾಗತಿಕವಾಗಿ ಠೇವಣಿದಾರರ ಹಣ ಎಷ್ಟು ಸುಭದ್ರ ಎನ್ನುವ ಪ್ರಶ್ನೆಯನ್ನಂತೂ ಮೂಡಿಸುತ್ತದೆ. ಬ್ಯಾಂಕಿಂಗ್ ವಲಯ ತೀರಾ ದುರ್ಬಲ ಎಳೆಯಲ್ಲಿ ನಿಂತಿದೆ ಎನ್ನುವಂತಹ ಭಾವನೆ ಮೂಡಿಸುತ್ತದೆ. ಆದರೆ, ಭಾರತದ ಬ್ಯಾಂಕಿಂಗ್ ವಲಯ ಇಂಥ ಶಾಕ್​ಗಳನ್ನು ಎದುರಿಸುವಷ್ಟು ಸಮರ್ಥವಾಗಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿTextile Park: ಕಲಬುರ್ಗಿಯಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಸ್ಥಾಪನೆ: ಪ್ರಧಾನಿ ಮೋದಿ ಘೋಷಣೆ

ಎಸ್​ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಹೆಚ್​ಡಿಎಫ್​ಸಿ ಬ್ಯಾಂಕುಗಳನ್ನು ಡಿಸಿಬ್​ಗಳೆಂದು (D-SIB, ಅಂದರೆ ವ್ಯವಸ್ಥಿತವಾಗಿ ಪ್ರಮುಖವಾಗಿರುವ ದೇಶೀಯ ಬ್ಯಾಂಕು) ಎಂದು ವರ್ಗೀಕರಿಸಿದೆ. ಈ ಬ್ಯಾಂಕುಗಳು ತಮ್ಮ ಕಾರ್ಯಾಚರಣೆ ಯಾವ ಸಂದರ್ಭದಲ್ಲೂ ನಿಲುಗಡೆ ಆಗದ ರೀತಿಯಲ್ಲಿ ಹೆಚ್ಚುವರಿ ಬಂಡವಾಳ ಎತ್ತಿ ಇಟ್ಟುಕೊಳ್ಳುವ ನಿಯಮವನ್ನು ರೂಪಿಸಿದೆ. ಇದರಿಂದ ದಿಢೀರನೇ ಯಾವುದಾದರೂ ಬಿಕ್ಕಟ್ಟು ಉದ್ಭವಿಸಿದರೆ ಅದನ್ನು ನಿಭಾಯಿಸಲು ಈ ಬ್ಯಾಂಕುಗಳ ಸಮರ್ಥವಾಗಿರುತ್ತವೆ ಎಂಬುದು ಆಲೋಚನೆ.

ಬ್ಯಾಂಕುಗಳು ಯಾಕೆ ವಿಫಲವಾಗುತ್ತವೆ?

ಯಾವುದೇ ಬ್ಯಾಂಕು ವಿಫಲವಾಗಲು ಅತ್ಯಂತ ಪ್ರಮುಖ ಕಾರಣ ಎಂದರೆ ಗ್ರಾಹಕರು ತಮ್ಮ ಠೇವಣಿಗಳನ್ನು ಹಿಂಪಡೆಯಲು ಏಕಕಾಲದಲ್ಲಿ ಮುಗಿಬಿದ್ದಾಗ. ಇದು ಬಹಳ ಸರಳವಾದ ಲಾಜಿಕ್. ಒಂದು ಬ್ಯಾಂಕ್​ನ ಮುಖ್ಯ ವಹಿವಾಟು ಎಂದರೆ ಸಾಲ ಮತ್ತು ಠೇವಣಿ. ಸಾಲ ನೀಡಿದರೆ ಅದು ವಾಪಸ್ಸಾಗುವುದಕ್ಕೆ ನಿರ್ದಿಷ್ಟ ಅವಧಿ ಎಂಬುದು ಇರೋದಿಲ್ಲ. ಎಲ್ಲರಿಂದಲೂ ಒಟ್ಟಿಗೆ ಸಾಲ ವಸೂಲಾತಿ ಮಾಡಲು ಸಾಧ್ಯವಾಗುವುದಿಲ್ಲ. ಅಂದರೆ ಇವು ದೀರ್ಘಾವಧಿಯ ವ್ಯವಹಾರ. ಆದರೆ, ಗ್ರಾಹಕರು ಬ್ಯಾಂಕ್​ನಲ್ಲಿ ಇರಿಸುವ ಹಣ ದೀರ್ಘಾವಧಿ ಆಗಿರುತ್ತೆ ಎಂದು ಹೇಳಲು ಅಸಾಧ್ಯ. ಗ್ರಾಹಕರು ಯಾವಾಗ ಬೇಕಾದರೂ ಹಣ ಹಿಂಪಡೆಯಲು ಮುಂದಾಗಬಹುದು. ಇದು ಯಾವುದೇ ಬ್ಯಾಂಕ್​ನ ವೀಕ್ ಪಾಯಿಂಟ್.

ಇದನ್ನೂ ಓದಿCredit Suisse: ಜಾಗತಿಕ ಬ್ಯಾಂಕಿಂಗ್ ದೈತ್ಯ ಕ್ರೆಡಿಟ್ ಸ್ವೀಸ್ ಪತನ ಸಾಧ್ಯತೆ; ಭಾರತಕ್ಕೆ ತಲೆನೋವಾಗುತ್ತಾ ಈ ಸ್ವಿಸ್ ಬ್ಯಾಂಕ್? ವಾಸ್ತವ ಪರಿಸ್ಥಿತಿ ಹೇಗಿದೆ?

ಒಂದು ಬ್ಯಾಂಕ್ ಯಾವುದೋ ವಿವಾದಕ್ಕೆ ಸಿಲುಕಿದಾಗ ಅಥವಾ ಅದು ನಷ್ಟ ಕಂಡಾಗ ಗ್ರಾಹಕರು ದಿಗಿಲುಗೊಂಡುಬಿಡಬಹುದು. ಎಲ್ಲರೂ ಏಕಕಾಲದಲ್ಲಿ ಹಣವನ್ನು ಹಿಂಪಡೆಯಲು ಮುಂದಾಗಬಹುದು. ದಿಢೀರನೇ ಅಷ್ಟೂ ಹಣವನ್ನು ಯಾವುದೇ ಬ್ಯಾಂಕಾದರೂ ಹೊಂದಿಸುವುದು ಅಸಾಧ್ಯ. ಅದೇ ಬಿಕ್ಕಟ್ಟಿನ ಸ್ಥಿತಿ. ಅಮೆರಿಕದ ಎಸ್​ವಿಬಿ ಬ್ಯಾಂಕ್ ಪತನಗೊಂಡಿದ್ದು ಇದೇ ರೀತಿಯೇ.

ಹಾಗೆಯೇ, ಬ್ಯಾಂಕು ವಿಫಲವಾಗಲು ಮತ್ತೊಂದು ಪ್ರಮುಖ ಕಾರಣ ಎನ್​ಪಿಎ. ಅಂದರೆ ನಿರುಪಯುಕ್ತ ಆಸ್ತಿ. ಅಂದರೆ, ಮರುಪಾವತಿ ಸಾಧ್ಯವಿಲ್ಲ, ಅಥವಾ ಮರುಪಾವತಿ ಕಷ್ಟಸಾಧ್ಯ ಇರುವ ಸಾಲಗಳನ್ನು ಹೆಚ್ಚು ಪ್ರಮಾಣದಲ್ಲಿ ಹೊಂದಿದ ಬ್ಯಾಂಕುಗಳು ಬಿಕ್ಕಟ್ಟಿಗೆ ಸಿಲುಕುತ್ತವೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ