ಅಮೆರಿಕದ ಸರಕುಗಳಿಗೆ ಚೀನಾದಿಂದಲೂ ಶೇ. 34 ಪ್ರತಿಸುಂಕ ಹೇರಿಕೆ; ಎಲ್ಲಿಯವರೆಗೆ ಹೋಗುತ್ತೆ ಈ ಟ್ರೇಡ್ ವಾರ್?
China Imposes 34% Tariff on US Goods: ಚೀನಾ ಸರಕುಗಳಿಗೆ ಅಮೆರಿಕ ಹೆಚ್ಚುವರಿ ಶೇ. 34 ಟ್ಯಾರಿಫ್ ಹೇರಿಕೆ ಮಾಡಿತ್ತು. ಈಗ ಚೀನಾ ಪ್ರತಿಕ್ರಮ ಕೈಗೊಂಡಿದ್ದು ಶೇ. 34ರಷ್ಟು ಹೆಚ್ಚುವರಿ ಸುಂಕ ಹಾಕಿದೆ. ಇದರೊಂದಿಗೆ ಅಮೆರಿಕದ ಸರಕುಗಳಿಗೆ ಚೀನಾ ವಿಧಿಸುತ್ತಿರುವ ಒಟ್ಟು ಟ್ಯಾರಿಫ್ ಅಮೆರಿಕದ್ದನ್ನೂ ಮೀರಿಸಲಿದೆ. ಸುಂಕ ಮಾತ್ರವಲ್ಲ, ಅಪರೂಪದ ಲೋಹಗಳ ರಫ್ತಿಗೂ ಚೀನಾ ನಿರ್ಬಂಧಗಳನ್ನು ಹಾಕುತ್ತಿದ್ದು, ಇದು ಅಮೆರಿಕಕ್ಕೆ ಹಿನ್ನಡೆ ತರುವ ಸಾಧ್ಯತೆ ಇದೆ.

ಬೀಜಿಂಗ್, ಏಪ್ರಿಲ್ 4: ಚೀನಾದ ಸರಕುಗಳಿಗೆ ಅಮೆರಿಕ ಅತಿಹೆಚ್ಚು ಸುಂಕ ವಿಧಿಸಿದ ಬೆನ್ನಲ್ಲೇ ಇದೀಗ ಚೀನಾ ಕೂಡ ಪ್ರತಿಸುಂಕ ಕ್ರಮ ಘೋಷಿಸಿದೆ. ಅಮೆರಿಕದ ಸರಕುಗಳಿಗೆ ಚೀನಾ ಶೇ. 34ರಷ್ಟು ಹೆಚ್ಚುವರಿ ಸುಂಕ (additional tariffs) ವಿಧಿಸಲು ನಿರ್ಧರಿಸಿದೆ. ಏಪ್ರಿಲ್ 10ರಿಂದ ಚೀನಾದ ಹೊಸ ಸುಂಕ ಜಾರಿಗೆ ಬರಲಿದೆ. ಚೀನಾದ ಈ ಕ್ರಮ ನಿರೀಕ್ಷಿತವೇ ಆಗಿದೆ. ಇವಿಷ್ಟೂ ಮಾತ್ರವಲ್ಲ, ಎಲೆಕ್ಟ್ರಿಕ್ ಕಾರುಗಳಿಂದ ಹಿಡಿದು ಬಾಂಬ್ಗಳವರೆಗೆ ವಿವಿಧ ಪ್ರಮುಖ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುವ ಕೆಲ ಖನಿಜಗಳು ಅಮೆರಿಕಕ್ಕೆ ಸಿಗುವುದು ಕಷ್ಟವಾಗುವ ರೀತಿಯಲ್ಲಿ ಚೀನಾ ಕ್ರಮ ಕೈಗೊಳ್ಳಲು ಮುಂದಾಗಿದೆ.
ಅಮೆರಿಕದ ಸರಕುಗಳ ಮೇಲೆ ಚೀನಾ ಈಗಾಗಲೇ ಹೆಚ್ಚಿನ ಸುಂಕ ಹಾಕುತ್ತಿದೆ. ಈಗ ಶೇ. 34ರಷ್ಟು ಹೆಚ್ಚುವರಿ ತೆರಿಗೆಯೂ ಸೇರ್ಪಡೆಯಾದರೆ, ಕೆಲ ಸರಕುಗಳಿಗೆ ಒಟ್ಟು ಸುಂಕ ಶೇ. 60ರಷ್ಟಾಗುತ್ತದೆ. ಅತ್ತ, ಅಮೆರಿಕ ಮೊನ್ನೆ ಚೀನಾ ಸರಕುಗಳ ಮೇಲೆ ಶೇ. 34ರಷ್ಟು ಹೆಚ್ಚು ಹೆಚ್ಚುವರಿ ಸುಂಕ ವಿಧಿಸಿತ್ತು. ಮೂಲ ಸುಂಕವನ್ನೂ ಸೇರಿಸಿದರೆ ಒಟ್ಟಾರೆ ಟ್ಯಾರಿಫ್ ಶೇ. 44 ಆಗುತ್ತದೆ. ಚೀನಾ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.
ಇದನ್ನೂ ಓದಿ: ಎರಡು ಶತ್ರು ದೇಶಗಳನ್ನು ಒಂದು ಮಾಡುತ್ತಾ ಟ್ರಂಪ್ ಟ್ಯಾರಿಫ್?
ಅಪರೂಪದ ಖನಿಜಗಳ ರಫ್ತಿಗೆ ಚೀನಾ ಕಡಿವಾಣ
ಚೀನಾದಲ್ಲಿ ವಿಶೇಷವಾಗಿ ಲಭ್ಯ ಇರುವ ಕೆಲ ಅಪರೂಪ ಖನಿಜಗಳು ಅಮೆರಿಕಕ್ಕೆ ಸಿಗದಂತೆ ಮಾಡಲೂ ಚೀನಾ ಕ್ರಮ ಕೈಗೊಳ್ಳುತ್ತಿರುವಂತೆ ತೋರುತ್ತಿದೆ. ಇದರಲ್ಲಿ ಗ್ಯಾಡೋಲಿನಿಯಂ ಮತ್ತು ವೈಟ್ರಿಯಮ್ ಮೊದಲಾದ ರೇರ್ ಅರ್ಥ್ ಎಲಿಮೆಂಟ್ ಅಥವಾ ಅಪರೂಪ ಭೂ ವಸ್ತುಗಳು ಸೇರಿವೆ. ರೇರ್ ಅರ್ಥ್ ಎಲಿಮೆಂಟ್ಸ್ ಎಂಬುದು ತಂತ್ರಜ್ಞಾನ ಉತ್ಪನ್ನಗಳ ತಯಾರಿಕೆಗೆ ಬಳಸಲು ಹೇಳಿ ಮಾಡಿಸಿದ ಗುಣ ಹೊಂದಿರುತ್ತವೆ. ಹೀಗಾಗಿ, ಇವುಗಳಿಗೆ ಬಹಳ ಬೇಡಿಕೆ ಇದೆ. ಎಲೆಕ್ಟ್ರಿಕ್ ಕಾರುಗಳಿಂದ ಹಿಡಿದು ಬಾಂಬ್ಗಳವರೆಗೆ ಹಲವು ತಂತ್ರಜ್ಞಾನ ಆಧಾರಿತ ಉತ್ಪನ್ನಗಳ ತಯಾರಿಕೆಗೆ ಈ ಕಚ್ಚಾ ವಸ್ತು ಬೇಕಾಗುತ್ತದೆ. ಇದು ಹೆಚ್ಚಾಗಿ ಸಿಗುವುದು ಚೀನಾದಲ್ಲಿ. ಹೀಗಾಗಿ, ಚೀನಾ ಮೇಲೆ ಇಡೀ ವಿಶ್ವವೇ ಅವಲಂಬಿತವಾಗಿದೆ. ಇದನ್ನು ಚೀನಾ ತನಗೆ ಅನುಕೂಲವಾಗುವ ರೀತಿಯಲ್ಲಿ ಬಳಸಿಕೊಳ್ಳಲು ಮುಂದಾಗುತ್ತಿದೆ.
ಅವಿಶ್ವಾಸಾರ್ಹ ಸಂಸ್ಥೆಗಳ ಪಟ್ಟಿಗೆ 11 ಅಮೆರಿಕನ್ ಕಂಪನಿಗಳು
ಚೀನಾದ ದೇಶವು ಅಮೆರಿಕದ 11 ಕಂಪನಿಗಳನ್ನು ತನ್ನ ‘ಅವಿಶ್ವಾಸಾರ್ಹ ಸಂಸ್ಥೆಗಳ’ ಪಟ್ಟಿಗೆ ಸೇರಿಸಿದೆ. ಚೀನಾದಲ್ಲಿ ವ್ಯವಹಾರ ನಡೆಸಲು ಈ ಕಂಪನಿಗಳಿಗೆ ಅವಕಾಶ ಇರುವುದಿಲ್ಲ. ಯಾವುವು ಈ 11 ಸಂಸ್ಥೆಗಳು ಎಂಬ ಮಾಹಿತಿ ಸದ್ಯ ಗೊತ್ತಾಗಿಲ್ಲ.
ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ನಿಂದ ಭಾರತದ ಆರ್ಥಿಕತೆಗೆ, ವಿವಿಧ ಸೆಕ್ಟರ್ಗಳಿಗೆ ಎಷ್ಟು ಹಾನಿ? ಇಲ್ಲಿದೆ ಡೀಟೇಲ್ಸ್
ಇದರ ಜೊತೆಗೆ, ಅಮೆರಿಕ ಮತ್ತು ಭಾರತದಿಂದ ಆಮದು ಮಾಡಿಕೊಳ್ಳಲಾದ ಮೆಡಿಕಲ್ ಸಿಟಿ ಎಕ್ಸ್ ರೇ ಟ್ಯೂಬ್ಗಳ ಗುಣಮಟ್ಟದ ಬಗ್ಗೆ ಚೀನೀ ಅಧಿಕಾರಿಗಳು ತನಿಖೆ ನಡೆಸಲು ನಿರ್ಧರಿಸಿದ್ದಾರೆ. ಹಾಗೆಯೇ, ಎರಡು ಅಮೆರಿಕನ್ ಕಂಪನಿಗಳಿಂದ ಪೌಲ್ಟ್ರಿ ಉತ್ಪನ್ನಗಳ ಆಮದಿಗೆ ತಡೆ ಕೊಡಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Fri, 4 April 25