US economy: 2020ರ ಆರ್ಥಿಕ ಹಿಂಜರಿತದಿಂದ ಚೇತರಿಸಿದ ಅಮೆರಿಕ ಆರ್ಥಿಕತೆ 2021ರಲ್ಲಿ ಶೇ 5.7ರಷ್ಟು ಬೆಳವಣಿಗೆ
2020ನೇ ಇಸವಿಯಲ್ಲಿ ಕೊವಿಡ್19 ಪರಿಣಾಮದಿಂದ ಆರ್ಥಿಕ ಹಿಂಜರಿತ ಅನುಭವಿಸಿದ ಅಮೆರಿಕದ ಆರ್ಥಿಕತೆಯು 2021ರಲ್ಲಿ ಶೇ 5.7ರ ದರದಲ್ಲಿ ಬೆಳವಣಿಗೆ ದಾಖಲಿಸಿದೆ.
ಈ ವರ್ಷ ಅಮೆರಿಕದ ಆರ್ಥಿಕತೆ (US economy) ಹೊಸದೊಂದು ದಾಖಲೆ ಬರೆದಿದೆ. ರೊನಾಲ್ಡ್ ರೇಗನ್ ಅಮೆರಿಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದಾಖಲಾಗಿದ್ದ ಜಿಡಿಪಿ ಬೆಳವಣಿಗೆಯ ನಂತರ ಕಳೆದ ವರ್ಷದಲ್ಲಿ ಭಾರೀ ವೇಗವಾಗಿ ಅಲ್ಲಿನ ಆರ್ಥಿಕತೆ ಪುಟಿದೆದ್ದಿದೆ. 2020ರಲ್ಲಿ ಕೊರೊನಾ ಪಾರಮ್ಯಕ್ಕೆ ಸಿಲುಕಿ ಅಲ್ಪಕಾಲದ ಹಿಂಜರಿತದ ನಂತರ ಚಿಗಿತುಕೊಂಡಿದೆ. ದೇಶದ ಜಿಡಿಪಿಯು- ಅದರ ಒಟ್ಟು ಸರಕು ಮತ್ತು ಸೇವೆಗಳ ಉತ್ಪಾದನೆ – 2021ರಲ್ಲಿ ಶೇ 5.7ರಷ್ಟು ವಿಸ್ತರಿಸಿದೆ. ಆರ್ಥಿಕ ಹಿಂಜರಿತ ಕಂಡ ನಂತರ 1984ನೇ ಇಸವಿಯಲ್ಲಿ ಶೇ 7.2ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ಆ ನಂತರದಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ಕಾಣುತ್ತಿರುವ ಪ್ರಮುಖ ಬೆಳವಣಿಗೆ ಇದಾಗಿದೆ. ಅಮೆರಿಕದ ಆರ್ಥಿಕತೆಯು ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಅನಿರೀಕ್ಷಿತವಾಗಿ ಶೇ 6.9ರ ವಾರ್ಷಿಕ ವೇಗದಲ್ಲಿ ಬೆಳೆಯುವ ಮೂಲಕ ವರ್ಷವನ್ನು ಕೊನೆಗೊಳಿಸಿತು ಎಂದು ವಾಣಿಜ್ಯ ಇಲಾಖೆ ಗುರುವಾರ ವರದಿ ಮಾಡಿದೆ.
ಹಣದುಬ್ಬರದಿಂದ ಕುಗ್ಗಿ ಮತ್ತು ಇನ್ನೂ ಕೊವಿಡ್-19 ಹಿಡಿತದಲ್ಲಿದ್ದರೂ ಆರ್ಥಿಕತೆಯು ಈ ವರ್ಷ ನಿಧಾನಗತಿಯಲ್ಲಿ ವಿಸ್ತರಿಸುವುದನ್ನು ನಿರೀಕ್ಷಿಸಲಾಗಿದೆ. ಅನೇಕ ಅರ್ಥಶಾಸ್ತ್ರಜ್ಞರು ಪ್ರಸ್ತುತ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ತಮ್ಮ ಮುನ್ಸೂಚನೆಗಳನ್ನು ಡೌನ್‌ಗ್ರೇಡ್ ಮಾಡುತ್ತಿದ್ದಾರೆ. ಇದು ಒಮಿಕ್ರಾನ್ ರೂಪಾಂತರದ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ. 2022ನೇ ಇಸವಿಗೆ ದೇಶದ ಜಿಡಿಪಿ ಬೆಳವಣಿಗೆಯು ಶೇ 4ಕ್ಕೆ ನಿಧಾನವಾಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಮುನ್ಸೂಚನೆ ನೀಡಿದೆ. ಅಮೆರಿಕದ ಅನೇಕ ವ್ಯವಹಾರಗಳು, ವಿಶೇಷವಾಗಿ ರೆಸ್ಟೋರೆಂಟ್‌ಗಳು, ಬಾರ್‌ಗಳು, ಹೋಟೆಲ್‌ಗಳು ಮತ್ತು ಮನರಂಜನಾ ಸ್ಥಳಗಳು ಒಮಿಕ್ರಾನ್ ರೂಪಾಂತರದಿಂದ ಒತ್ತಡದಲ್ಲಿ ಇರುತ್ತವೆ. ಇದು ಜನಸಂದಣಿಯನ್ನು ತಪ್ಪಿಸಲು ಲಕ್ಷಾಂತರ ಜನರನ್ನು ಮನೆಯಲ್ಲಿಯೇ ಇರಿಸಿದೆ.
ಗ್ರಾಹಕರು ಖರ್ಚು ಮಾಡುವುದು ಆರ್ಥಿಕತೆಗೆ ಪ್ರಾಥಮಿಕ ಚಾಲಕ ಶಕ್ತಿ. ಆದರೆ ಈ ವರ್ಷ ಸರ್ಕಾರದಿಂದ ಕುಟುಂಬಗಳಿಗೆ ನೆರವು ಸಿಗದ ಕಾರಣಕ್ಕೆ ಹಿಂದುಳಿಯಬಹುದು. 2020 ಮತ್ತು 2021ರಲ್ಲಿ ಚಟುವಟಿಕೆಯನ್ನು ಇದೇ ಪೋಷಿಸಿತ್ತು. ಆದರೆ ಅದೀಗ ಮುಗಿದಿದೆ. ಇನ್ನೂ ಹೆಚ್ಚೇನೆಂದರೆ, ಫೆಡರಲ್ ರಿಸರ್ವ್ ಸುಮಾರು ನಾಲ್ಕು ದಶಕಗಳಲ್ಲಿ ಅತ್ಯಂತ ಹೆಚ್ಚು ಹಣದುಬ್ಬರವನ್ನು ಎದುರಿಸಲು ಈ ವರ್ಷ ಅನೇಕ ಬಾರಿ ಬಡ್ಡಿದರಗಳನ್ನು ಜಾಸ್ತಿ ಮಾಡಲು ಯೋಜಿಸಿದೆ ಎಂದು ಬುಧವಾರ ಸ್ಪಷ್ಟಪಡಿಸಿದೆ. ಆ ದರ ಹೆಚ್ಚಳವು ಸಾಲವನ್ನು ದುಬಾರಿಯಾಗಿಸುತ್ತದೆ ಮತ್ತು ಬಹುಶಃ ಈ ವರ್ಷ ಆರ್ಥಿಕತೆಯನ್ನು ನಿಧಾನಗೊಳಿಸುತ್ತದೆ.
ಕಳೆದ ವರ್ಷ ಬೆಳವಣಿಗೆಯು ಗ್ರಾಹಕರ ವೆಚ್ಚದಲ್ಲಿ ಶೇ 7.9ರಷ್ಟು ಏರಿಕೆ ಮತ್ತು ಖಾಸಗಿ ಹೂಡಿಕೆಯಲ್ಲಿ ಶೇ 9.5ರಷ್ಟು ಹೆಚ್ಚಳವಾಗಿದೆ. 2021ರ ಅಂತಿಮ ಮೂರು ತಿಂಗಳುಗಳಲ್ಲಿ ಗ್ರಾಹಕರ ಖರ್ಚು ಹೆಚ್ಚು ಸ್ತಬ್ಧವಾದ ಕಾರಣ ಶೇ 3.3ರ ವಾರ್ಷಿಕ ವೇಗದಲ್ಲಿ ಏರಿತು. ಆದರೆ ಖಾಸಗಿ ಹೂಡಿಕೆಯು ಶೇ 32ರಷ್ಟು ಹೆಚ್ಚಾಗಿದೆ. 2020ರಲ್ಲಿ ಕೊರೊನಾದ ಕಾರಣಕ್ಕೆ ಕಾಣಿಸಿಕೊಂಡ ಆರ್ಥಿಕ ಹಿಂಜರಿತದಿಂದ 2021ಕ್ಕೆ ಆರೋಗ್ಯಕರ ಚೇತರಿಕೆ ನಿರೀಕ್ಷಿಸಲಾಗಿತ್ತು. 2020ರಲ್ಲಿ ಜಿಡಿಪಿ ಶೇ 3.4 ಕುಗ್ಗಿಸಿತು. 1946ನೇ ಇಸವಿಯಲ್ಲಿ ಶೇ 11.6ರಷ್ಟು ಕುಸಿತದ ನಂತರದ ಸಂಪೂರ್ಣ ವರ್ಷದ ಕುಸಿತ ಇದಾಗಿತ್ತು. ಎರಡನೆ ಮಹಾಯುದ್ಧದ ನಂತರ ದೇಶವು ಸಜ್ಜುಗೊಳಿಸಿದಂತೆ ಇತ್ತು.
ಮಾರ್ಚ್ 2020ರಲ್ಲಿ ಕೋವಿಡ್ ಸ್ಫೋಟವು ಲಾಕ್‌ಡೌನ್‌ಗಳು ಮತ್ತು ವ್ಯವಹಾರಗಳನ್ನು ಥಟ್ಟನೆ ಮುಚ್ಚಲು ಅಥವಾ ಸಮಯವನ್ನು ಕಡಿಮೆ ಮಾಡಲು ಆದೇಶಿಸಲು ಅಧಿಕಾರಿಗಳಿಗೆ ಕಾರಣವಾಯಿತು. ಉದ್ಯೋಗದಾತರು 22 ಮಿಲಿಯನ್ ಉದ್ಯೋಗಗಳನ್ನು ಕಡಿತಗೊಳಿಸಿದರು. ಆರ್ಥಿಕತೆಯು ಆಳವಾದ ಹಿಂಜರಿತದಲ್ಲಿ ಮುಳುಗಿತು. ಆದರೆ ಅತಿ ಕಡಿಮೆ ಬಡ್ಡಿದರಗಳು, ಸರ್ಕಾರದ ನೆರವಿನ ಬೃಹತ್ ಉತ್ತೇಜನಗಳು, ಹೆಚ್ಚಿನ ಮನೆಗಳಿಗೆ 1,400 ಡಾಲರ್ ಚೆಕ್‌ಗಳು ಮತ್ತು ಅಂತಿಮವಾಗಿ, ಲಸಿಕೆಗಳನ್ನು ವ್ಯಾಪಕವಾಗಿ ಹಾಕಿದ್ದು ಆರ್ಥಿಕತೆಯನ್ನು ಪುನಶ್ಚೇತನಗೊಳಿಸಿತು. ಅನೇಕ ಗ್ರಾಹಕರು ವಿಶ್ವಾಸ ಮತ್ತು ಆರ್ಥಿಕ ಚೈತನ್ಯವನ್ನು ಮರಳಿ ಪಡೆದುಕೊಂಡರು ಮತ್ತು ಈಗ ಮತ್ತೆ ಹೊರ ಹೋಗುತ್ತಿದ್ದಾರೆ ಹಾಗೂ ಖರ್ಚು ಮಾಡುತ್ತಾರೆ.
ಬೇಡಿಕೆಯ ಪುನಶ್ಚೇತನವು ಎಷ್ಟು ದೃಢವಾಗಿತ್ತು ಅಂದರೆ, ಗ್ರಾಹಕರ ಆರ್ಡರ್ಗಳಲ್ಲಿನ ಶೀಘ್ರ ಹೆಚ್ಚಳವನ್ನು ಪೂರೈಸಲು ಸಾಕಷ್ಟು ಸರಬರಾಜು ಮತ್ತು ಕೆಲಸಗಾರರನ್ನು ಪಡೆಯಲು ಅನೇಕರು ಹೆಣಗಾಡಿದರು. ಅನೇಕ ಜನರು ಈಗ ದೂರದಿಂದಲೇ ಕೆಲಸ ಮಾಡುವುದರಿಂದ ವಿಶೇಷವಾಗಿ ಮನೆಗಳಿಗೆ ಆರ್ಡರ್ ಮಾಡಿದ ಸರಕುಗಳಿಗೆ, ಉಪಕರಣಗಳಿಂದ ಕ್ರೀಡಾ ಸಾಮಗ್ರಿಗಳ ತನಕ, ಎಲೆಕ್ಟ್ರಾನಿಕ್ ಉಪಕರಣಗಳಿಗೆ ಕೊರತೆಯು ತೀವ್ರವಾಯಿತು. ಮತ್ತು ವಿಶೇಷವಾಗಿ ಚಿಪ್ ಪೂರೈಕೆ ಕಡಿಮೆಯಾಗಿ ಕಂಪ್ಯೂಟರ್ ಮತ್ತು ವಾಹನಗಳ ವಿತರಕರು ವಾಹನಗಳ ಕೊರತೆಯನ್ನು ಎದುರಿಸುತ್ತಿದ್ದಾರೆ.
ಕಾರ್ಖಾನೆಗಳು, ಬಂದರುಗಳು ಮತ್ತು ಸರಕು ಯಾರ್ಡ್‌ಗಳು ಮುಳುಗಿದವು. ಪೂರೈಕೆ ಸರಪಳಿಗಳು (ಸಪ್ಲೈ ಚೈನ್) ಸಿಲುಕಿಕೊಂಡವು. ಹಣದುಬ್ಬರವು ವೇಗಗೊಳ್ಳಲು ಪ್ರಾರಂಭಿಸಿತು. ಕಳೆದ 12 ತಿಂಗಳಲ್ಲಿ ಗ್ರಾಹಕರ ಬೆಲೆಗಳು ಶೇ 7ರಷ್ಟು ಹೆಚ್ಚಿವೆ. ವರ್ಷದಿಂದ ವರ್ಷದ ಬೆಳವಣಿಗೆ ಲೆಕ್ಕ ಹಾಕಿದರೆ 1982ರಿಂದ ಈಚೆಗೆ ಇದು ಬಹಳ ವೇಗದ ಹಣದುಬ್ಬರ ಆಗಿದೆ. ಆಹಾರ, ಇಂಧನ ಮತ್ತು ವಾಹನಗಳ ಬೆಲೆಗಳು ಹೆಚ್ಚು ಏರಿದ ವಸ್ತುಗಳ ಪೈಕಿ ಸೇರಿವೆ. ಕಳೆದ ವರ್ಷದ ಕೊನೆಯಲ್ಲಿ ಆರ್ಥಿಕತೆಯು ಆಯಾಸದ ಲಕ್ಷಣಗಳನ್ನು ತೋರಿಸಲು ಆರಂಭಿಸಿತು. ಉದಾಹರಣೆಗೆ, ರೀಟೇಲ್ ಮಾರಾಟವು ಡಿಸೆಂಬರ್‌ನಲ್ಲಿ ಶೇ 1.9ಕ್ಕೆ ಕುಸಿಯಿತು. ಮತ್ತು ಇನ್‌ಸ್ಟಿಟ್ಯೂಟ್ ಫಾರ್ ಸಪ್ಲೈ ಮ್ಯಾನೇಜ್‌ಮೆಂಟ್‌ನ ಉತ್ಪಾದನಾ ಸೂಚ್ಯಂಕದ ಪ್ರಕಾರ, ಉತ್ಪಾದನೆಯು ಡಿಸೆಂಬರ್‌ನಲ್ಲಿ 11 ತಿಂಗಳಲ್ಲಿ ಅದರ ಕಡಿಮೆ ಮಟ್ಟಕ್ಕೆ ನಿಧಾನವಾಯಿತು.
ಇದನ್ನೂ ಓದಿ: ಒಮಿಕ್ರಾನ್ ರೂಪಾಂತರಿಯಿಂದಾಗಿ ಅಮೆರಿಕದಲ್ಲಿ ಕೊವಿಡ್ ಉಲ್ಬಣ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಏರಿಕೆ