ಅಮೆರಿಕದಲ್ಲಿ ಬಡ್ಡಿದರ 25 ಮೂಲಾಂಕಗಳಷ್ಟು ಇಳಿಕೆ; ಮತ್ತೆ ತಡವರಿಸಿದ ಷೇರು ಮಾರುಕಟ್ಟೆ

|

Updated on: Dec 19, 2024 | 2:57 PM

US Fed rates effect on Indian equities: ಅಮೆರಿಕದಲ್ಲಿ ಬಡ್ಡಿದರ ಪರಿಷ್ಕರಣೆ ಬಳಿಕ ಭಾರತದ ಷೇರು ಮಾರುಕಟ್ಟೆ ಕುಸಿಯುತ್ತಿದೆ. 25 ಮೂಲಾಂಕಗಳಷ್ಟು ಬಡ್ಡಿ ಕಡಿಮೆ ಆಗಿದೆ. ಇದು ನಿರೀಕ್ಷಿತವೇ ಆದರೂ ಮಾರುಕಟ್ಟೆ ಕುಸಿತಕ್ಕೆ ಬೇರೆ ಕಾರಣಗಳಿವೆ. 2025ರಲ್ಲಿ ಕನಿಷ್ಠ ನಾಲ್ಕು ಬಾರಿ ಬಡ್ಡಿದರ ಇಳಿಸಬಹುದು ಎನ್ನುವ ಎಣಿಕೆ ಇತ್ತು. ಆದರೆ, ಎರಡು ಬಾರಿ ಮಾತ್ರವೇ ಬಡ್ಡಿ ಇಳಿಸಬಹುದು ಎನ್ನಲಾಗಿದೆ. ಇದು ಷೇರುಪೇಟೆ ಕುಸಿತಕ್ಕೆ ಒಂದು ಕಾರಣ.

ಅಮೆರಿಕದಲ್ಲಿ ಬಡ್ಡಿದರ 25 ಮೂಲಾಂಕಗಳಷ್ಟು ಇಳಿಕೆ; ಮತ್ತೆ ತಡವರಿಸಿದ ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ
Follow us on

ನವದೆಹಲಿ, ಡಿಸೆಂಬರ್ 19: ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರ ಕಡಿತಗೊಳಿಸಿರುವುದು ಷೇರುಪೇಟೆ ಮೇಲೆ ಪರಿಣಾಮ ಬೀರಿದೆ. ನಿಫ್ಟಿ ಸೂಚ್ಯಂಕ ಸುಮಾರು 240 ಅಂಕಗಳ ಕುಸಿತ ಕಂಡಿದೆ. ಸೆನ್ಸೆಕ್ಸ್ ಕೂಡ ಹೆಚ್ಚೂಕಡಿಮೆ 1,000 ಅಂಕಗಳನ್ನು ಕಳೆದುಕೊಂಡಿದೆ. ಈ ಎರಡು ಪ್ರಮುಖ ಸೂಚ್ಯಂಕಗಳು ಶೇ. 1ಕ್ಕಿಂತಲೂ ಹೆಚ್ಚು ನಷ್ಟ ಕಂಡಿವೆ. ಅಮೆರಿಕದಲ್ಲಿ ಬಡ್ಡಿದರವನ್ನು ಶೇ. 4.25-4.50 ಶ್ರೇಣಿಗೆ ಇಳಿಸಲಾಗಿದೆ. ಈ 25 ಮೂಲಾಂಕಗಳಷ್ಟು ಬಡ್ಡಿ ಇಳಿಕೆ ನಿರೀಕ್ಷಿತವೇ ಆಗಿತ್ತು. ಆದರೂ ಕೂಡ ಷೇರು ಮಾರುಕಟ್ಟೆ ಋಣಾತ್ಮಕವಾಗಿ ಸ್ಪಂದಿಸಿದ್ದು ಯಾಕೆ?

ಫೆಡರಲ್ ರಿಸರ್ವ್ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಕೆ ಮಾಡಿದ್ದು ನಿರೀಕ್ಷಿತವೇ ಆಗಿದ್ದರೂ 2025ರಲ್ಲಿ ಅದು ಹೆಚ್ಚಿನ ಬಡ್ಡಿದರ ಕಡಿತ ಮಾಡುವುದಿಲ್ಲ ಎನ್ನುವ ಸುಳಿವನ್ನು ನೀಡಿರುವುದು ಇಲ್ಲಿ ಗಮನಾರ್ಹ. ಮುಂದಿನ ವರ್ಷ ಹೆಚ್ಚಿನ ಬಡ್ಡಿದರ ಇಳಿಕೆಯನ್ನು ಮಾರುಕಟ್ಟೆ ನಿರೀಕ್ಷಿಸಿತ್ತು. ವರದಿಗಳ ಪ್ರಕಾರ 2025ರಲ್ಲಿ ನಾಲ್ಕು ಬಾರಿ ಬಡ್ಡಿದರ ಕಡಿತ ಆಗಬಹುದು ಎಂದು ಎಣಿಸಲಾಗಿತ್ತು. ಆದರೆ, ಫೆಡರಲ್ ರಿಸರ್ವ್ ಸಂಸ್ಥೆಯು ಮುಂದಿನ ವರ್ಷ ಎರಡು ಬಾರಿ ಮಾತ್ರವೇ ಬಡ್ಡಿದರ ಇಳಿಸುವುದಾಗಿ ಪರೋಕ್ಷವಾಗಿ ಸುಳಿವು ನೀಡಿದೆ. ಇದು ಈಕ್ವಿಟಿ ಹೂಡಿಕೆದಾರರನ್ನು ಗೊಂದಲಕ್ಕೆ ಕೆಡವಿರಬಹುದು. ಹೀಗಾಗಿ, ಮಾರುಕಟ್ಟೆ ಕುಸಿದಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಫೆಬ್ರುವರಿ 1 ಶನಿವಾರವಾದರೂ ತೆರೆದಿರಬಹುದು ಷೇರು ಮಾರುಕಟ್ಟೆ; ಎನ್​ಎಸ್​ಇ ಮತ್ತು ಬಿಎಸ್​ಇ ಆಲೋಚನೆ

ರುಪಾಯಿ ಮೌಲ್ಯ ಕುಸಿದ ಪರಿಣಾಮ..

ಅಮೆರಿಕದ ಡಾಲರ್ ಎದುರು ರುಪಾಯಿ ಕರೆನ್ಸಿ ಮೌಲ್ಯ ಹೊಸ ತಳಕ್ಕೆ ಕುಸಿದಿದೆ. ಒಂದು ಡಾಲರ್​ಗೆ 85.3 ರೂಪಾಯಿ ಮಟ್ಟಕ್ಕೆ ಇಳಿದಿದೆ. ಇದು ವಿದೇಶೀ ಹೂಡಿಕೆಗಳ ಹೊರಹರಿವಿಗೆ ಎಡೆ ಮಾಡಿಕೊಟ್ಟಿರಬಹುದು. ಕಳೆದ ಮೂರು ಸೆಷನ್​ಗಳಲ್ಲಿ 8,000 ಕೋಟಿ ರೂನಷ್ಟು ವಿದೇಶೀ ಹೂಡಿಕೆಗಳು ಹೊರಹೋಗಿವೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಲಿಸ್ಟೆಡ್ ಕಂಪನಿಗಳು ನಷ್ಟ ಕಂಡ ಮಾರುಕಟ್ಟೆ ಬಂಡವಾಳ 13 ಲಕ್ಷ ಕೋಟಿ ರೂನಷ್ಟಾಗಿದೆ.

ಇದನ್ನೂ ಓದಿ: ಏ. 1ರಿಂದ ಡಿ. 17ರವರೆಗೆ ನೇರ ತೆರಿಗೆ ಸಂಗ್ರಹ 19,21,508 ಕೋಟಿ ರೂ

ಕಾರ್ಪೊರೇಟ್ ಕಂಪನಿಗಳ ಆದಾಯ ಕುಸಿತ…

ಭಾರತದ ಕಂಪನಿಗಳ ತ್ರೈಮಾಸಿಕ ಹಣಕಾಸು ವರದಿಗಳು ಆಶಾದಾಯಕ ಎನಿಸಿಲ್ಲ. ಈ ಹಣಕಾಸು ವರ್ಷದ ಮೊದಲೆರಡು ಕ್ವಾರ್ಟರ್​ಗಳಲ್ಲಿ ನಿರಾಶಾದಾಯಕ ವರದಿಗಳು ಬಂದಿವೆ. ಇವು ಒಟ್ಟಾರೆ ಮಾರುಕಟ್ಟೆಯ ಜಂಘಾಬಲವನ್ನು ದುರ್ಬಲಗೊಳಿಸಿವೆ. ಹೀಗಾಗಿ, ಹೂಡಿಕೆದಾರರು ಷೇರುಗಳನ್ನು ಮಾರುವ ಭರಾಟೆ ಕೈಗೊಂಡಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:56 pm, Thu, 19 December 24