ನವದೆಹಲಿ, ಜುಲೈ 27: ಕಳೆದ ಒಂದು ವರ್ಷದಿಂದ ಹಣದುಬ್ಬರದ (Inflation) ವಿರುದ್ಧ ಹೋರಾಡುತ್ತಿರುವ ಅಮೆರಿಕದಲ್ಲಿ ನಿರೀಕ್ಷೆಯಂತೆ ಈ ಬಾರಿ ಬ್ಯಾಂಕ್ ಬಡ್ಡಿ ದರ ಹೆಚ್ಚಿಸಲಾಗಿದೆ. ಫೆಡರಲ್ ರಿಸರ್ವ್ ಬ್ಯಾಂಕ್ (US Fed Reserve) ಜುಲೈ 26ರಂದು ಬಡ್ಡಿ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಇದರೊಂದಿಗೆ ಅಮೆರಿಕದಲ್ಲಿ ಬಡ್ಡಿ ದರ ಶೇ. 5.25ರಿಂದ ಶೇ. 5.50ಕ್ಕೆ ಹೆಚ್ಚಳವಾಗಿದೆ. ಇದು ಅಮೆರಿಕದಲ್ಲಿ ಕಳೆದ 22 ವರ್ಷಗಳಲ್ಲೇ ಗರಿಷ್ಠ ಬಡ್ಡಿ ದರ ಎನಿಸಿದೆ. ಅಮೆರಿಕದ ಈ ಸೆಂಟ್ರಲ್ ಬ್ಯಾಂಕು ಕಳೆದ 12 ಸಂದರ್ಭಗಳಲ್ಲಿ 11 ಬಾರಿ ಬಡ್ಡಿದರ ಹೆಚ್ಚಿಸಿದೆ. ಕಳೆದ ಬಾರಿ ಮಾತ್ರ ಬಡ್ಡಿದರ ಹೆಚ್ಚಿಸದೇ ಯಥಾಸ್ಥಿತಿ ಉಳಿಸಿಕೊಂಡಿತ್ತು.
ಮತ್ತೊಂದೆಡೆ, ಭಾರತವೂ ಅಮೆರಿಕದ ಹಾದಿ ತುಳಿಯುವ ಸಾಧ್ಯತೆ ತೋರುತ್ತಿದೆ. ಅಂದರೆ ಭಾರತದಲ್ಲೂ ಬಡ್ಡಿ ದರ ಮುಂದಿನ ಬಾರಿ ಏರಿಕೆ ಆಗಬಹುದು. ಕಳೆದ ಎರಡು ಬಾರಿ ಯಾವುದೇ ಹೆಚ್ಚಳ ಮಾಡದ ಆರ್ಬಿಐ ಮುಂದಿನ ಬಾರಿ ರೆಪೋ ದರ ಹೆಚ್ಚಿಸುವ ಸಾಧ್ಯತೆ ಇದೆ.
ಭಾರತದಲ್ಲಿ ಹಣದುಬ್ಬರ ಹೆಚ್ಚಾಗುವ ಲಕ್ಷಣಗಳಿವೆ. ಜುಲೈ ತಿಂಗಳ ಹಣದುಬ್ಬರ ಅಂಕಿಅಂಶಗಳು ಆಗಸ್ಟ್ ಎರಡನೇ ವಾರದಲ್ಲಿ ಬಂದರೆ, ಅವು ಶೇಕಡಾ 6 ಕ್ಕಿಂತ ಹೆಚ್ಚು ಅಂದರೆ ಆರ್‌ಬಿಐನ ಹಣದುಬ್ಬರ ತಾಳಿಕೆಮಿತಿಗಿಂತ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಅದರ ಜೊತೆಗೆ ಅಮೆರಿಕದ ಫೆಡರಲ್ ರಿಸರ್ವ್ ಈ ಬಾರಿ ಮಾತ್ರವಲ್ಲ, ಮುಂದಿನ ದಿನಗಳಲ್ಲೂ ಬಡ್ಡಿ ದರ ಏರಿಕೆ ಮಾಡಲಾಗುವುದು ಎಂದಿದೆ. ಹೀಗಾಗಿ ಎಲ್ಲಾ ಕೋನದಲ್ಲಿ ನೋಡಿದರೂ ಆರ್ಬಿಐ ಬಡ್ಡಿ ದರ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: Inflation: ಹಣದುಬ್ಬರ ಎಫೆಕ್ಟ್; ಭಾರತದಲ್ಲಿ ಬ್ಯಾಂಕ್ ಬಡ್ಡಿ ದರಗಳು ಇನ್ನಷ್ಟು ಹೆಚ್ಚಾಗಲಿವೆಯೇ?
ಯುಎಸ್ ಫೆಡರಲ್ ರಿಸರ್ವ್ ಬ್ಯಾಂಕ್ನ ಬಡ್ಡಿದರಗಳು 22 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿವೆ. ಶೇ. 5.50ಯಲ್ಲಿರುವ ಬಡ್ಡಿ ದರ ಈ ವರ್ಷಾಂತ್ಯಕ್ಕೆ ಶೇ.5.75ಕ್ಕೆ ತಲುಪುವ ನಿರೀಕ್ಷೆ ಇದೆ. ಅಮೆರಿಕದಲ್ಲಿ ಹೆಚ್ಚುತ್ತಿರುವ ಹಣದುಬ್ಬರವು ಈಗಾಗಲೇ ಅದರ ಆರ್ಥಿಕತೆಯನ್ನು ಅಲುಗಾಡಿಸಿದೆ. ಇದಲ್ಲದೆ, ಇದು ಭಾರತದಂತಹ ಉದಯೋನ್ಮುಖ ಆರ್ಥಿಕತೆಗಳಿಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಬಂಡವಾಳದ ಒಳಹರಿವು ಕಡಿಮೆ ಆಗಬಹುದು. ಅಮೆರಿಕದ ಡಾಲರ್ ಕರೆನ್ಸಿ ಎದುರು ರುಪಾಯಿ ಇನ್ನಷ್ಟು ಮಂಕಾಗಬಹುದು.
ಬಲವಾದ ಡಾಲರ್ ಹಿಂದಿನ ಪ್ರಮುಖ ಶಕ್ತಿ ಫೆಡರಲ್ ರಿಸರ್ವ್ ಬ್ಯಾಂಕ್ ಆಗಿದೆ. ಅಮೆರಿಕದ ರಫ್ತುಗಳು ವಿದೇಶಿ ಮಾರುಕಟ್ಟೆಗಳಲ್ಲಿ ದುಬಾರಿಯಾದಾಗ ಮತ್ತು ಅದರ ದೇಶೀಯ ಮಾರುಕಟ್ಟೆಗಳಲ್ಲಿ ಅಗ್ಗವಾದಾಗ ಡಾಲರ್ ಅನ್ನು ಪ್ರಬಲವೆಂದು ಪರಿಗಣಿಸಲಾಗುತ್ತದೆ. ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಿದಾಗ, ಡಾಲರ್ ಏರುತ್ತದೆ. ನಂತರ ವಿದೇಶಿ ಹೂಡಿಕೆದಾರರು ಅಮೆರಿಕದ ಬಂಡವಾಳ ಮಾರುಕಟ್ಟೆಯಲ್ಲಿ ಉತ್ತಮ ಆದಾಯ ಪಡೆಯಲು ಹೂಡಿಕೆ ಮಾಡುತ್ತಾರೆ. ಈ ಸನ್ನಿವೇಶವು ಡಾಲರ್ ಮೌಲ್ಯಕ್ಕೆ ಮತ್ತಷ್ಟು ಪುಷ್ಟಿಕೊಡುತ್ತದೆ. ಹೂಡಿಕೆದಾರರ ನಿರ್ಧಾರಗಳ ಮೇಲೂ ಪ್ರಭಾವ ಬೀರುವ ಅಮೆರಿಕ ವಿಶ್ವದ ಬಲಿಷ್ಠ ಆರ್ಥಿಕತೆ ಎಂಬುದರಲ್ಲಿ ಸಂದೇಹವಿಲ್ಲ. ಈ ಎಲ್ಲ ಅಂಶಗಳಿಂದ ಡಾಲರ್‌ನಲ್ಲಿ ಹೆಚ್ಚಿನ ಶಕ್ತಿ ಕಂಡುಬರುತ್ತಿದೆ.
ಅಮೇರಿಕಾ ವಿಶ್ವದ ಪ್ರಬಲ ಆರ್ಥಿಕತೆಯಾಗಿದೆ; ಸ್ವಾಭಾವಿಕವಾಗಿ, ಅವರು ಬಡ್ಡಿದರಗಳನ್ನು ಹೆಚ್ಚಿಸಿದಾಗ, ಭಾರತೀಯ ಮಾರುಕಟ್ಟೆ ಸೇರಿದಂತೆ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ವಿದೇಶಿ ಹೂಡಿಕೆದಾರರು ಅಮೆರಿಕದತ್ತ ಆಕರ್ಷಿತರಾಗುತ್ತಾರೆ. ಕಳೆದ 5 ತಿಂಗಳಿಂದ ಭಾರತದಲ್ಲಿ ನಿರಂತರವಾಗಿ ವಿದೇಶಿ ಹೂಡಿಕೆ ಹೆಚ್ಚಾಗುತ್ತಿದ್ದು, ಇದಕ್ಕೆ ತಡೆಯಾಗುವ ಸಾಧ್ಯತೆ ಹೆಚ್ಚಲಿದೆ.
ಗಮನಿಸಬೇಕಾದ ಅಂಶವೆಂದರೆ ಫೆಡ್ ದರಗಳ ಹೆಚ್ಚಳವು ಡಾಲರ್ ಸೂಚ್ಯಂಕದಲ್ಲಿ ಹೆಚ್ಚಳಕ್ಕೆ ಮತ್ತು ರೂಪಾಯಿ ದುರ್ಬಲಗೊಳ್ಳಲು ಕಾರಣವಾಗುತ್ತದೆ. ಇದು ದೀರ್ಘಾವಧಿಯ ಹೂಡಿಕೆದಾರರ ಮೇಲೆ ಪರಿಣಾಮ ಬೀರದಿರಬಹುದು, ಆದರೆ ಮಾರುಕಟ್ಟೆಯ ಚಂಚಲತೆ ಮತ್ತು ದುರ್ಬಲ ರೂಪಾಯಿಯಿಂದಾಗಿ, ಅಲ್ಪಾವಧಿಯ ಹೂಡಿಕೆದಾರರು ನಿರಾಶೆಗೊಳ್ಳುತ್ತಾರೆ ಮತ್ತು ಭಾರತೀಯ ಮಾರುಕಟ್ಟೆಗಳಿಂದ ಲಾಭವನ್ನು ಬುಕ್ ಮಾಡಲು ಪ್ರಾರಂಭಿಸುತ್ತಾರೆ.
ಇದನ್ನೂ ಓದಿ: Retail Inflation: ಬೆಲೆ ಏರಿಕೆ ಪರಿಣಾಮ; ಜೂನ್ನಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ
ಭಾರತವು ಆಮದು ಹೆಚ್ಚುವರಿ ದೇಶವಾಗಿದೆ. ಇದರರ್ಥ ದೇಶವು ರಫ್ತು ಮಾಡುವುದಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ಇದರಿಂದಾಗಿ ಭಾರತದ ವಿತ್ತೀಯ ಕೊರತೆ ಹೆಚ್ಚುತ್ತದೆ. ವಿದೇಶಿ ಬಂಡವಾಳ ಕಡಿಮೆಯಾಗುವ ನಿರೀಕ್ಷೆಯಿದೆ. ದೇಶದಲ್ಲಿ ಹಣದುಬ್ಬರವೂ ಹೆಚ್ಚಾಗಲಿದೆ. ಏಪ್ರಿಲ್ ಮತ್ತು ಮೇ ತಿಂಗಳ ಅಂಕಿಅಂಶಗಳ ಪ್ರಕಾರ, ಭಾರತದ ವಿತ್ತೀಯ ಕೊರತೆ 2.10 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯ ಗುರಿಯನ್ನು 17.87 ಲಕ್ಷ ಕೋಟಿ ರೂ.ಗೆ ಇರಿಸಲಾಗಿದೆ. ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಈ ಗುರಿಯೊಳಗೆ ಇರಿಸಿಕೊಳ್ಳಲು ಭಾರತ ಪ್ರಯತ್ನಿಸುತ್ತದೆ.
ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಳವಾದ ಬೆನ್ನಲ್ಲೇ ಭಾರತದಲ್ಲೂ ಬಡ್ಡಿ ದರ ಹೆಚ್ಚಾಗಬಹುದು. ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಿಸಿರುವುದು ಮತ್ತು ಹಣದುಬ್ಬರ ಹೆಚ್ಚುತ್ತಿರುವುದು ಆರ್ಬಿಐಗೆ ಬಡ್ಡಿ ದರ ಹೆಚ್ಚಿಸಲು ಪ್ರಬಲ ಕಾರಣಗಳಾಗಿವೆ. ಮುಂದಿನ ಎಂಪಿಸಿ ಸಭೆ ಇರುವ ಆಗಸ್ಟ್ ತಿಂಗಳಲ್ಲಿ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿ, ಅಕ್ಟೋಬರ್ ಅಥವಾ ಡಿಸೆಂಬರ್ ಚಕ್ರದಲ್ಲಿ ಬಡ್ಡಿದರ ಹೆಚ್ಚಿಸಲು ಆರ್ಬಿಐ ನಿರ್ಧರಿಸಬಹುದು. ಅಂದಹಾಗೆ, RBI ಮೇ 2022 ರಿಂದ ಫೆಬ್ರವರಿ 2023 ರವರೆಗೆ ಶೇ 2.50 ರಷ್ಟು ಬಡ್ಡಿ ದರ ಹೆಚ್ಚಿಸಿದೆ. ಸದ್ಯ ಆರ್‌ಬಿಐನ ರೆಪೋ ದರ ಶೇ. 6.5ರಲ್ಲಿದೆ. ಇದು ಕಳೆದ 7 ವರ್ಷದಲ್ಲೇ ಗರಿಷ್ಠ ಬಡ್ಡಿದರ ಎನಿಸಿದೆ.
ಇದನ್ನೂ ಓದಿ: Indian Economy: 2014 ಮತ್ತು 2023- ಜಿಡಿಪಿ ಆಗ ಎಷ್ಟಿತ್ತು, ಈಗ ಎಷ್ಟಿದೆ?: ಇಲ್ಲಿದೆ ಹೋಲಿಕೆ
ಮುಂಬರುವ ತಿಂಗಳುಗಳಲ್ಲಿ ಅಮೇರಿಕಾ ಮತ್ತೆ ಇನ್ನೊಂದು ಸುತ್ತು ಬಡ್ಡಿ ಹೆಚ್ಚಿಸಬಹುದು. ಇದು ಸಂಭವಿಸಿದಲ್ಲಿ, ವಿಶ್ವದ ಅತಿದೊಡ್ಡ ಆರ್ಥಿಕತೆಯ ಮೇಲೆ ಆರ್ಥಿಕ ಹಿಂಜರಿತದ ಒತ್ತಡವು ಸ್ಪಷ್ಟವಾಗಿ ಗೋಚರಿಸುತ್ತದೆ, ಯುಎಸ್ ಹಣಕಾಸು ಕಾರ್ಯದರ್ಶಿ ಜಾನೆಟ್ ಯೆಲೆನ್ ಅವರು ದೇಶವು ಇನ್ನೂ ಆರ್ಥಿಕ ಹಿಂಜರಿತದ ಪರಿಧಿಯನ್ನು ಪ್ರವೇಶಿಸಿಲ್ಲ ಎಂದು ಹೇಳಿದ್ದರೂ, ಅಮೆರಿಕದಲ್ಲಿ ಬೇಡಿಕೆ ನಿರಂತರವಾಗಿ ಕಡಿಮೆಯಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಹಣದುಬ್ಬರ ಶೇ.2ರ ಮಟ್ಟಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಡಾಲರ್ ಕೂಡ ನಿರಂತರವಾಗಿ ಕುಸಿಯುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಯುಎಸ್ ಫೆಡ್ ನಿರಂತರವಾಗಿ ಬಡ್ಡಿದರಗಳನ್ನು ಹೆಚ್ಚಿಸುವ ಒತ್ತಡಕ್ಕೆ ಬಿದ್ದಿದೆ. ಇದರ ಪ್ರಭಾವವು ಭಾರತ ಸೇರಿದಂತೆ ವಿಶ್ವದ ಆರ್ಥಿಕತೆಯ ಮೇಲೆ ಬೀಳುತ್ತದೆ. ಅಂದಹಾಗೆ, 2023ರಲ್ಲಿ ಭಾರತದ ಆರ್ಥಿಕತೆ ಶೇ. 6.1ರಷ್ಟು ಬೆಳೆಯಬಹುದು ಎಂದು ಅಂದಾಜು ಪರಿಷ್ಕರಿಸಿದ್ದ ಐಎಂಎಫ್ ಇದೀಗ ಮುಂದಿನ ದಿನಗಳಲ್ಲಿ ತನ್ನ ನಿಲುವನ್ನು ಬದಲಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ