ಕೋಟಿ ಕೋಟಿ ಕುಬೇರನಿಗೆ ಚಿಲ್ಲರೆ ಕಾಟ; ಅಮೆರಿಕಕ್ಕೆ ಪೆನ್ನಿ ಸಂಕಟ

|

Updated on: Feb 25, 2025 | 5:07 PM

USA penny production cost: 33 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ಅಮೆರಿಕ ಈಗ ಒಂದು ಸೆಂಟ್ ನಾಣ್ಯ ತಯಾರಿಸಲು ಹಿಂದೇಟು ಹಾಕುತ್ತಿದೆ. ಒಂದು ಸೆಂಟ್ ಮುಖಬೆಲೆಯ ಪೆನ್ನಿ ನಾಣ್ಯದ ತಯಾರಿಕೆಯಿಂದ ಅಮೆರಿಕಕ್ಕೆ ವರ್ಷಕ್ಕೆ 85 ಮಿಲಿಯನ್ ಡಾಲರ್ ನಷ್ಟವಾಗುತ್ತಿದೆಯಂತೆ. ಈ ಚಿಲ್ಲರೆ ನಾಣ್ಯದ ಅವಶ್ಯಕತೆಯೂ ಇಲ್ಲದ್ದರಿಂದ ಅದರ ತಯಾರಿಕೆಯನ್ನು ನಿಲ್ಲಿಸುವಂತೆ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ.

ಕೋಟಿ ಕೋಟಿ ಕುಬೇರನಿಗೆ ಚಿಲ್ಲರೆ ಕಾಟ; ಅಮೆರಿಕಕ್ಕೆ ಪೆನ್ನಿ ಸಂಕಟ
ಪೆನ್ನಿ
Follow us on

ನವದೆಹಲಿ, ಫೆಬ್ರುವರಿ 25: ಆರ್ಥಿಕತೆಯ ಚಟುವಟಿಕೆ ಸರಾಗವಾಗಿ ನಡೆಯಲು ಹಣದ ಚಲಾವಣೆ ಬಹಳ ಮುಖ್ಯ. ಅದಕ್ಕೆಂದೇ ಸರ್ಕಾರಗಳು ವಿವಿಧ ಮುಖಬೆಲೆಯ ನೋಟು ಮತ್ತು ನಾಣ್ಯಗಳನ್ನು ಮುದ್ರಿಸುತ್ತವೆ. ಹಿಂದಿನ ಕಾಲದಲ್ಲಿ ಚಿನ್ನ, ತಾಮ್ರ ಇತ್ಯಾದಿ ಲೋಹಗಳಿಂದ ಮಾಡಿದ ನಾಣ್ಯಗಳಿದ್ದುವು. ಆ ನಾಣ್ಯಗಳ ಮೌಲ್ಯ ಅವುಗಳ ಮುಖಬೆಲೆಗೆ ಸಮವಾಗಿರುತ್ತಿತ್ತು. ಈಗ ಹಲವು ದೇಶಗಳಲ್ಲಿ ನಾಣ್ಯಗಳ ತಯಾರಿಕೆಯ ವೆಚ್ಚ ಹೆಚ್ಚುತ್ತಲೇ ಇದೆ. ಹೀಗಾಗಿ, ನಾಣ್ಯದ ತಯಾರಿಕೆ ವೆಚ್ಚವು ಅದರ ಮುಖಬೆಲೆಗಿಂತ ಹೆಚ್ಚೇ ಇದೆ. ಅಮೆರಿಕ ಸರ್ಕಾರಕ್ಕೆ ಇದು ತಲೆನೋವು ತರುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೆಂಟ್ ಅಥವಾ ಪೆನ್ನಿ ನಾಣ್ಯಗಳ ತಯಾರಿಕೆ ನಿಲ್ಲಿಸಲು ಸೂಚಿಸಿದ್ದಾರೆ.

ರುಪಾಯಿಗೆ ಪೈಸೆ ಹೇಗೋ ಹಾಗೆ ಅಮೆರಿಕದಲ್ಲಿ ಡಾಲರ್​ಗೆ ಸೆಂಟ್ ಇದೆ. ಒಂದು ಡಾಲರ್​ಗೆ 100 ಸೆಂಟ್ ಅಥವಾ ಪೆನ್ನಿ ಇದೆ. ಅಮೆರಿಕದಲ್ಲಿ 1 ಸೆಂಟ್, 2 ಸೆಂಟ್, 5 ಸೆಂಟ್, 10 ಸೆಂಟ್, 25 ಸೆಂಟ್ ಮುಖಬೆಲೆಯ ನಾಣ್ಯಗಳಿವೆ. ಹಣಕಾಸು ನಿಯಮಗಳ ಪ್ರಕಾರ, ಈ ನಾಣ್ಯಗಳ ತಯಾರಿಕೆಯ ವೆಚ್ಚವು ಅದರ ಮುಖಬೆಲೆಗಿಂತ ಹೆಚ್ಚು ಇರಬಾರದು. ಆದರೆ, ಅಮೆರಿಕದಲ್ಲಿ ಇವುಗಳ ತಯಾರಿಕೆ ವೆಚ್ಚವು ಮುಖಬೆಲೆಗಿಂತ ಹಲವು ಪಟ್ಟು ಹೆಚ್ಚೇ ಇದೆ.

ಇದನ್ನೂ ಓದಿ: ಜನವರಿಯಲ್ಲಿ ಕ್ರೆಡಿಟ್ ಕಾರ್ಡ್​ನಿಂದ ಜನರ ವೆಚ್ಚ 1.84 ಲಕ್ಷ ಕೋಟಿ ರೂ

ಅಮೆರಿಕದಲ್ಲಿ ನಾಣ್ಯಗಳ ತಯಾರಿಕೆ ವೆಚ್ಚ ಎಷ್ಟಿದೆ?

ಅಮೆರಿಕದಲ್ಲಿ ಒಂದು ಸೆಂಟ್ ಹಣಕ್ಕೆ ಒಂದು ಪೆನ್ನಿ ಎನ್ನುತ್ತಾರೆ. 5 ಸೆಂಟ್ ಹಣಕ್ಕೆ ಒಂದು ನಿಕಲ್; 10 ಸೆಂಟ್ ಹಣಕ್ಕೆ ಡೈಮ್; 25 ಸೆಂಟ್​ಗೆ ಒಂದು ಕ್ವಾರ್ಟರ್ ಡಾಲರ್ ಎನ್ನುತ್ತಾರೆ. ಇದರಲ್ಲಿ ಪೆನ್ನಿ ಮತ್ತು ನಿಕಲ್ ತಯಾರಿಕೆಯ ವೆಚ್ಚ ಬಹಳ ಹೆಚ್ಚಿದೆ.

ಒಂದು ಸೆಂಟ್ ಮುಖಬೆಲೆಯ ಒಂದು ಪೆನ್ನಿ ನಾಣ್ಯ ತಯಾರಿಕೆಗೆ ಆಗುವ ವೆಚ್ಚವು ಅದರ ಮುಖಬೆಲೆಗಿಂತ ಶೇ. 370ರಷ್ಟಿದೆ. ಅಂದರೆ ಒಂದು ಪೆನ್ನಿ ತಯಾರಿಸಲು ಸರ್ಕಾರ 3.7 ಪೆನ್ನಿ ವ್ಯಯಿಸುತ್ತದೆ. ವರ್ಷಕ್ಕೆ 320 ಕೋಟಿ ಪೆನ್ನಿ ನಾಣ್ಯಗಳನ್ನು ತಯಾರಿಸಲಾಗುತ್ತಿದೆ. ಇದರಿಂದ ಅಮೆರಿಕದ ಖಜಾನೆಗೆ ವಾರ್ಷಿಕವಾಗಿ 85 ಮಿಲಿಯನ್ ಡಾಲರ್​ನಷ್ಟು ನಷ್ಟ ಆಗುತ್ತಿದೆ.

ಇನ್ನು, 5 ಸೆಂಟ್​ನ ಮುಖಬೆಲೆಯಾದ ನಿಕಲ್ ನಾಣ್ಯ ತಯಾರಿಸಲು 15 ಸೆಂಟ್ ವೆಚ್ಚವಾಗುತ್ತದೆ. ಇದರಿಂದಲೂ ಅಮೆರಿಕದ ಖಜಾನೆಗೆ 108 ಮಿಲಿಯನ್ ಡಾಲರ್ ನಷ್ಟವಾಗುತ್ತಿದೆ ಎಂದು ಅಲ್ಲಿಯ ಟ್ರೆಷರಿ ಇಲಾಖೆಯ ದತ್ತಾಂಶಗಳು ಹೇಳುತ್ತಿವೆ. ಈಗ ಟ್ರಂಪ್ ಅವರು ಒಂದು ಸೆಂಟ್ ಮುಖಬೆಲೆಯ ಪೆನ್ನಿ ನಾಣ್ಯದ ತಯಾರಿಕೆಯನ್ನು ನಿಲ್ಲಿಸುವಂತೆ ತಿಳಿಸಿದ್ದಾರೆ.

ಇದನ್ನೂ ಓದಿ: ಕೃಷಿ ಕ್ಷೇತ್ರಕ್ಕೆ ಎಐ ಟೆಕ್ನಾಲಜಿ ಎಷ್ಟು ಲಾಭಕಾರಿ ಗೊತ್ತಾ? ಭಾರತೀಯ ರೈತರ ಉದಾಹರಣೆ ಕೊಟ್ಟ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಲ್ಲ

ಭಾರತದಲ್ಲಿ ನಾಣ್ಯ ತಯಾರಿಕೆ ವೆಚ್ಚ ಎಷ್ಟು?

ಭಾರತದಲ್ಲಿ ಒಂದು ರುಪಾಯಿ ನಾಣ್ಯದ ತಯಾರಿಕೆಗೆ ಆಗುವ ವೆಚ್ಚವು ಅದರ ಮುಖಬೆಲೆಗಿಂತ ಹೆಚ್ಚಿದೆ. ಒಂದು ರುಪಾಯಿಗೆ 1.11 ರೂ ವೆಚ್ಚವಾಗುತ್ತದೆ. ಅದು ಬಿಟ್ಟರೆ ಉಳಿದ ನಾಣ್ಯಗಳಿಗೆ ತಯಾರಿಕೆಯ ವೆಚ್ಚವು ಮುಖಬೆಲೆಗಿಂತ ಸಾಕಷ್ಟು ಕಡಿಮೆಯೇ ಇದೆ. ಆದರೆ, ಭಾರತದಲ್ಲಿ ಐದು ರುಪಾಯಿ ನಾಣ್ಯದ ನಿಜ ಮೌಲ್ಯವು ಅದಕ್ಕಿಂತಲೂ ಹೆಚ್ಚಿದೆ ಎನ್ನುವ ಮಾಹಿತಿ ಇದೆ. ಒಂದು ಐದು ರುಪಾಯಿ ನಾಣ್ಯವನ್ನು ಕರಗಿಸಿ ಅದರಿಂದ ಮೂರ್ನಾಲ್ಕು ಶೇವಿಂಗ್ ಬ್ಲೇಡ್​ಗಳನ್ನು ತಯಾರಿಸಬಹುದಂತೆ. ಅಂತೆಯೇ, ಇಂಥ ನಾಣ್ಯಗಳ ದುರ್ಬಳಕೆಯೂ ಆಗುತ್ತಿರುವುದು ಹೌದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ