ಲಾರಿಗಳ ಓಡಾಟ ನಿಲ್ಲಿಸಿದರೆ ತಮ್ಮ ಅನ್ನದ ತಟ್ಟೆಯೂ ಖಾಲಿ ಆಗುತ್ತದೆ ಎಂಬ ಸಂಗತಿ ಗೊತ್ತಿದ್ದರೂ ಲಾರಿ ಮಾಲೀಕರು ಶುಕ್ರವಾರ (ಫೆ.26) ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದ ಲಾರಿ ಮಾಲೀಕರಷ್ಟೇ ಅಲ್ಲ, ಚಾಲಕರಿಗೂ ಸಮಸ್ಯೆಯೇ. ಇಡೀ ದೇಶದ ಸಾಗಾಟ ವ್ಯವಸ್ಥೆಗೆ ತಡೆ ಆಗುತ್ತದೆ. ನಿಮಗೆ ಗೊತ್ತಿರಲಿ, 2020ರ ಮಾರ್ಚ್ ಮಧ್ಯಭಾಗದಿಂದ ಹತ್ತಿರಹತ್ತಿರ ಮೂರು ತಿಂಗಳು ಓಡದೆ ನಿಂತಿದ್ದ ಲಾರಿಗಳನ್ನು ಕಂಡು, ಅದೆಂಥ ಮಾಲೀಕರು, ಚಾಲಕರೇ ಆದರೂ ಕರುಳು ಚುರ್ ಎಂದಿರುತ್ತದೆ. ಆದರೆ ಅದರ ಆಚೆಗೂ ಬೇಡಿಕೆ ಏನೂ ಚೇತರಿಸಿಕೊಂಡಿರಲಿಲ್ಲ. ಆ ಹೊಡೆತದ ಬೆನ್ನಿಗೆ ಬರೆಯಂತೆ ಬೀಳುತ್ತಾ ಬಂದಿದ್ದು ಡೀಸೆಲ್ ಬೆಲೆ ಏರಿಕೆ ವಿದ್ಯಮಾನ. ಒಂದು ದಿನ ಮುಷ್ಕರ ಮಾಡುವುದರಿಂದ ಲಾರಿ ಖರೀದಿಗೆ ತೆಗೆದುಕೊಂಡ ಸಾಲದ ಮೇಲಿನ ಕಂತು, ಅದರ ನಿರ್ವಹಣೆ ವೆಚ್ಚ, ಮತ್ತಿತರ ಖರ್ಚುಗಳೆಲ್ಲ ಸೇರಿ ಎಷ್ಟೆಲ್ಲ ಹೊರೆ ಆಗಬಹುದು?
ಪ್ರೊಸೆಸಿಂಗ್ ಇಂಡಸ್ಟ್ರೀಸ್ ಎಂಬುದಿದೆ. ಅದರಲ್ಲಿ ಉತ್ಪಾದನೆಯು ಒಂದೊಂದೇ ಪ್ರಕ್ರಿಯೆಯನ್ನು ದಾಟಿ, ಮುಂದಕ್ಕೆ ಸಾಗಬೇಕಾಗುತ್ತದೆ. ಕೊನೆಗೆ ಫಿನಿಷ್ಡ್ ಪ್ರಾಡಕ್ಟ್ ಬರುತ್ತದೆ. ಪ್ರೊಸೆಸ್ ಅಂದರೆ ಪ್ರಕ್ರಿಯೆ. ವಿವಿಧ ಪ್ರಕ್ರಿಯೆಗಳನ್ನು ದಾಟಿ, ಅಂತಿಮ ಹಂತಕ್ಕೆ ತಲುಪಬೇಕಾಗುತ್ತದೆ. ಈ ಪ್ರಕ್ರಿಯೆ ಸರಪಣಿಯಲ್ಲಿ ಒಂದು ಕೊಂಡಿ ಕಳಚಿಕೊಂಡರೂ ಎಲ್ಲವೂ ಅಸ್ತವ್ಯಸ್ತ ಆಗುತ್ತದೆ. ಈಗಿನ ಲಾರಿ ಮಾಲೀಕರ ಮುಷ್ಕರ ಸಹ ಹಾಗೆಯೇ. ಕೃಷಿ ಉತ್ಪನ್ನಗಳನ್ನು ಒಂದು ನಿರ್ದಿಷ್ಟ ಅವಧಿಯ ಅಥವಾ ಸ್ಥಿತಿಯ ನಂತರ ಕಟಾವು ಮಾಡದಿರಲು ಸಾಧ್ಯವಿಲ್ಲ. ಆ ನಂತರ ಕೂಡ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಮಾರುಕಟ್ಟೆಗೆ ತಲುಪಿಸಬೇಕು ಹಾಗೂ ಆ ಮೂಲಕ ಗ್ರಾಹಕರಿಗೆ ಮುಟ್ಟಿಸಬೇಕು. ಹಾಲು, ಹಣ್ಣು, ತರಕಾರಿ, ಸೊಪ್ಪು- ಸದೆ, ಹೂವು ಇತ್ಯಾದಿಗಳೆಲ್ಲ ಇದೇ ಥರದ್ದು. ಅವುಗಳ ಸಾಗಾಟಕ್ಕೆ ಲಾರಿಗಳು ಮುಖ್ಯ.
ಲಾರಿ ಓಡುತ್ತಲೇ ಇರಬೇಕು, ದುಡಿಯುತ್ತಲೇ ಇರಬೇಕು:
ಹಾಗಂತ ತಮ್ಮ ಮುಷ್ಕರವನ್ನು ಒಂದು ದಿನಕ್ಕಿಂತ ಹೆಚ್ಚು ಮುಂದುವರಿಸಿಕೊಂಡು ಹೋಗುವ ಸ್ಥಿತಿಯಲ್ಲಿ ಲಾರಿ ಮಾಲೀಕರೂ ಇಲ್ಲ. ಏಕೆಂದರೆ, ಲಾರಿ ಮಾಲೀಕರಿಗೆ ಕಳೆದ ವರ್ಷ ಕಂಡರಿಯದಂಥ ಪೆಟ್ಟು ಬಿದ್ದಿದೆ. ಲಾರಿ ಖರೀದಿಗೆ ಮಾಡಿದ ಸಾಲ ಪಾವತಿ, ಚಾಲಕ- ಕ್ಲೀನರ್ಗೆ ವೇತನ, ಸವಕಳಿ (ಡಿಪ್ರಿಸಿಯೇಷನ್), ಮತ್ತಿತರ ನಿರ್ವಹಣೆ ವೆಚ್ಚಕ್ಕಾಗಿ ಸತತವಾಗಿ ವಾಹನ ಓಡಾಟದಲ್ಲಿ ಇರಲೇಬೇಕು, ದುಡಿಯುತ್ತಿರಲೇಬೇಕು.
ಲಾರಿಯೊಂದು ಒಂದು ಕಿಮೀ ಓಡಲು ಎಷ್ಟು ಖರ್ಚು ಬರುತ್ತದೆ ಎಂದು ಕಾಸ್ಟ್ ಶೀಟ್ ಮಾಡಿಕೊಳ್ಳುತ್ತಾರೆ. ಅದನ್ನು ವೆಚ್ಚ ಪಟ್ಟಿ ಅಂತ ಕರೆಯಲಾಗುತ್ತದೆ. ಲಾರಿ ಖರೀದಿಗೆ ಮಾಡಿರುವ ವೆಚ್ಚ, ಆ ಲಾರಿ ಎಷ್ಟು ವರ್ಷಗಳ ಕಾಲ ಬಳಕೆಯಲ್ಲಿ ಇರುತ್ತದೆ, ಸಾಲ ಮಾಡಿದ್ದಲ್ಲಿ ಅದಕ್ಕೆ ಕಟ್ಟುವ ಬಡ್ಡಿ, ಡೀಸೆಲ್ ವೆಚ್ಚ, ಟೋಲ್, ತೆರಿಗೆ, ಇನ್ಷೂರೆನ್ಸ್, ಚಾಲಕ- ಕ್ಲೀನರ್ ವೇತನ, ಟೈರ್- ಆಯಿಲ್ ಬದಲಾವಣೆ, ಇತರ ವೆಚ್ಚಗಳನ್ನೆಲ್ಲ ಲೆಕ್ಕ ಹಾಕಿ, ಪ್ರತಿ ಕಿಲೋಮೀಟರ್ಗೆ ಇಷ್ಟು ದರ ಎಂದು ತೀರ್ಮಾನಿಸಲಾಗುತ್ತದೆ.
ಲಾರಿ ಓಡದಿದ್ದರೂ ಈ ಎಲ್ಲ ವೆಚ್ಚಗಳು ಇದ್ದೇ ಇವೆ:
ಒಂದು ಲಾರಿ ಒಂದು ದಿನ ಓಡದೆ ನಿಂತರೆ ಡೀಸೆಲ್- ಆಯಿಲ್ ಹೊರತುಪಡಿಸಿ ಉಳಿದ ವೆಚ್ಚಗಳೆಲ್ಲ ಬಿದ್ದೇ ಬೀಳುತ್ತದೆ. ಇನ್ಷೂರೆನ್ಸ್, ತೆರಿಗೆ, ಚಾಲಕ- ಕ್ಲೀನರ್ ವೇತನ, ಸಾಲ ಪಡೆದಿದ್ದಲ್ಲಿ ಅದರ ಮೇಲಿನ ಬಡ್ಡಿ, ಸವಕಳಿ (ಡಿಪ್ರಿಸಿಯೇಷನ್), ಒಂದೇ ಸಲಕ್ಕೆ ಟೋಲ್ ಪಾವತಿಸಿದ್ದಲ್ಲಿ ಅದರ ಹಣ ಅವೆಲ್ಲವೂ ಮಾಲೀಕರಿಗೆ ಹೊರೆಯೇ. ಹೀಗೆ ದೇಶಾದ್ಯಂತ ಮುಷ್ಕರ ಮಾಡಿದರೆ ಲಾರಿ ಮಾಲೀಕರಿಗೆ ಒಂದು ದಿನದಲ್ಲಿ ಅದೆಷ್ಟು ಕೋಟಿ ಹೊರೆ ಆಗುತ್ತದೆ ಎಂಬುದರ ಅಂದಾಜು ಕೂಡ ಸಾಧ್ಯವಿಲ್ಲ.
ಇನ್ನು ಒಂದು ಲಾರಿ ಖರೀದಿ ಮಾಡಬೇಕು ಅಂದರೆ ಅದಕ್ಕೆ ಎಷ್ಟು ಹಣ ಹಾಗೂ ಅದರ ಹಿಂದಿನ ಲೆಕ್ಕಾಚಾರ ಏನು ಅಂತ ನೋಡುವುದಾದರೆ, ಅಶೋಕ್ ಲೇಲ್ಯಾಂಡ್, ಟಾಟಾ ಮೋಟಾರ್ಸ್, ಭಾರತ್ ಬೆಂಜ್, ಐಷರ್, ವೊಲ್ವೋ ಇವುಗಳು ಲಾರಿ ಉತ್ಪಾದಿಸುವ ಪ್ರಮುಖ ಕಂಪೆನಿಗಳು. ಒಂದು ಲಾರಿ ರಸ್ತೆ ಮೇಲೆ ಇಳಿಯುವ ಹೊತ್ತಿಗೆ 20ರಿಂದ 40- 45 ಲಕ್ಷ ರೂಪಾಯಿ ತನಕ ಬೇಕಾಗುತ್ತದೆ. ಅದು ಎಷ್ಟು ತೂಕವನ್ನು (ಪೇ ಲೋಡ್) ಒಯ್ಯುತ್ತದೆ ಹಾಗೂ ಲಾರಿಗಳಿಗೆ ಕಟ್ಟುವ “ಬಾಡಿ” ಹೇಗಿರಬೇಕು ಎಂಬುದರ ಆಧಾರದಲ್ಲಿ ನಿರ್ಧಾರ ಆಗುತ್ತದೆ. ಬಾಡಿ ಕಟ್ಟುವುದಕ್ಕೆ ಅಂತ ಎರಡರಿಂದ ನಾಲ್ಕು ಲಕ್ಷದ ತನಕ ಆಗುತ್ತದೆ. ಇದಕ್ಕಾಗಿ ಬಹುತೇಕರು ತಮಿಳುನಾಡಿನ ನಾಮಕ್ಕಲ್, ತಿರುಚೆಂಗೂಡ್ಗೆ ಹೋಗುತ್ತಾರೆ.
ಫಯಾಜ್ ಅಹ್ಮದ್
ಯಾರ ಮೇಲಾದರೂ ದ್ವೇಷ ಇದ್ದರೆ ಸೆಕೆಂಡ್ ಹ್ಯಾಂಡ್ ಲಾರಿ ಕೊಡಿಸಬೇಕು
‘ನಿಮಗೆ ಯಾರ ಮೇಲಾದರೂ ದ್ವೇಷ ಇದ್ದಲ್ಲಿ ಅವರನ್ನು ಪುಸಲಾಯಿಸಿ ಸೆಕೆಂಡ್ ಹ್ಯಾಂಡ್ ಲಾರಿ ಕೊಡಿಸಿದರೆ ಸಾಕು. ಅವರನ್ನು ಹಾಳು ಮಾಡಿದಂತೆ’ ಎಂಬ ಮಾತಿದೆ. ಇದು ಪರಿಸ್ಥಿತಿಯ ವ್ಯಂಗ್ಯವನ್ನು ಹೇಳುತ್ತದೆ. ಏಕೆಂದರೆ, ಹೊಸ ಲಾರಿಯಾದರೂ ಅದನ್ನು ಸಾಕುವುದು ಕಷ್ಟವೇ. ಆದರೆ ರಿಪೇರಿಗಳು ಅಷ್ಟಾಗಿ ಇರುವುದಿಲ್ಲ. ಅದೇ ಸೆಕೆಂಡ್ ಹ್ಯಾಂಡ್ ಆದಲ್ಲಿ ಅದರ ರಿಪೇರಿ ಖರ್ಚು ಸಹ ವಿಪರೀತ. ಮಾಲೀಕರು ಹೈರಾಣಾಗಿ ಬಿಡುತ್ತಾರೆ ಎಂದು ವ್ಯಂಗ್ಯದ ಧ್ವನಿಯಲ್ಲಿ ಹೇಳುವುದಕ್ಕೆ ಬಳಸುವ ರೂಪಕ ಇದು.
ಬೆಂಗಳೂರು ಸ್ಥಳೀಯ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿಗಳಾದ 67 ವರ್ಷದ ಫಯಾಜ್ ಅಹ್ಮದ್ ‘ಟಿವಿ 9 ಕನ್ನಡ ಡಿಜಿಟಲ್’ ಜತೆಗೆ ಮಾತನಾಡಿ, ‘ನನಗೆ ಇದು ಫ್ಯಾಮಿಲಿ ಬಿಜಿನೆಸ್. ನನ್ನ ಬ್ರದರ್ ಕೂಡ ಇದೇ ವ್ಯವಹಾರದಲ್ಲಿ ಇದ್ದಾರೆ. ನಲವತ್ತು ವರ್ಷದಿಂದ ಈ ವ್ಯಾಪಾರ ಮಾಡಿಕೊಂಡು ಬರ್ತಿದ್ದೀನಿ. ನನ್ನ ಹತ್ತಿರ ಮೂರು ಲಾರಿ ಇದೆ. ಡೀಸೆಲ್ ಬೆಲೆ ಜಾಸ್ತಿ ಆಗಿರೋದು ನಮಗೆ ತುಂಬ ದೊಡ್ಡ ಹೊಡೆತ. ಲಾರಿಗಳು 3ರಿಂದ 4 ಕಿಮೀ ಮೈಲೇಜ್ ಕೊಡುತ್ತೆ. ಇದರ ಜತೆಗೆ ಡ್ರೈವರ್ಗೆ 500 ರೂಪಾಯಿ, ಊಟ- ತಿಂಡಿ, ರೋಡ್ ಟ್ಯಾಕ್ಸ್, ಇನ್ಷೂರೆನ್ಸ್, ವರ್ಷಕ್ಕೆ ಒಮ್ಮೆ ಎಫ್.ಸಿ. ಇವೆಲ್ಲ ಖರ್ಚಿದೆ. ನಮ್ಮ ಈಗಿನ ಸಮಸ್ಯೆಗೆ ಪರಿಹಾರ ಬೇಕೇ ಬೇಕು. ಕೊರೊನಾ ಬಂದ ಮೇಲೆ ಪರಿಸ್ಥಿತಿ ಬಿಗಡಾಯಿಸಿದೆ. ಮಾರ್ಕೆಟ್ನಲ್ಲಿ ಕಾಂಪಿಟೇಷನ್ ಜಾಸ್ತಿ. ವ್ಯಾಪಾರ ಕೊಡುವವರೇ ಇಲ್ಲ. ಜತೆಗೆ ಡ್ರೈವರ್ಗಳು ಸಿಗುತ್ತಿಲ್ಲ. ಈ ಕಾರಣಕ್ಕೆ ಎಷ್ಟೋ ಜನ ತಮ್ಮ ಲಾರಿಗಳನ್ನು ಮಾರಿಕೊಂಡು ಬೇರೆ ವ್ಯವಹಾರಕ್ಕೇ ಹೋಗ್ತಿದ್ದಾರೆ’ ಹೀಗೆ ಒಂದೇ ಸಲಕ್ಕೆ ತಮ್ಮ ಸಂಕಷ್ಟಗಳನ್ನು ತೆರೆದಿಟ್ಟರು.
ಇನ್ನೂ ಮುಂದುವರಿದು, ಬೆಂಗಳೂರು ಒಂದರಲ್ಲೇ 20ರಿಂದ 25 ಸಾವಿರ ಲಾರಿಗಳಿವೆ. ಇನ್ನು ಕರ್ನಾಟಕದಲ್ಲಿ 17 ಲಕ್ಷ ಲಾರಿಗಳಿವೆ. ನಾವು ಅಸಹಾಯಕರಾಗಿದ್ದೀವಿ. ಕಿಲೋಮೀಟರ್ಗೆ ಇಷ್ಟು ಅಂತ ಸರ್ಕಾರ ದರ ನಿಗದಿ ಮಾಡಿದೆ. ಅದರಂತೆ ನಡೆದುಕೊಳ್ಳುವುದು ಕಷ್ಟವಾಗಿದೆ. ಸರ್ಕಾರಗಳು ನಮ್ಮ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಒಂದು ಲಾರಿ ನಿಂತುಬಿಟ್ಟರೆ ಬ್ಯಾಟರಿ ಸೇರಿದಂತೆ ಇತರ ಬಿಡಿ ಭಾಗಗಳು ಹಾಳಾಗುತ್ತವೆ ಎಂಬ ಆತಂಕವೂ ನಮ್ಮದು ಎಂದು ನಿಡುಸುಯ್ದರು.
ಮುಂದಿನ ಮಾರ್ಚ್ 8ನೇ ತಾರೀಕಿನಂದು ರಾಜ್ಯ ಬಜೆಟ್ ಇದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲಾರಿ ಮಾಲೀಕರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸು ಮಾಡಬಹುದು. ಎಫ್.ಸಿ. ದರದಲ್ಲಿ ಇಳಿಕೆ, ಡೀಸೆಲ್ ಮೇಲಿನ ವ್ಯಾಟ್ ಇಳಿಸುವುದು ಹಾಗೂ ದಂಡ ವಿಧಿಸುವುದರಲ್ಲಿ ಇಳಿಕೆ ಇಂಥ ಕ್ರಮಗಳ ಮೂಲಕ ನೆರವಾಗಬಹುದು. ಅದಕ್ಕೆ ಯಡಿಯೂರಪ್ಪನವರು ಮನಸ್ಸು ಮಾಡಬೇಕಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಲಾರಿ ಮುಷ್ಕರದ ಬಿಸಿ; ಪ್ರತಿಭಟನೆ ಕೈಬಿಡಲು ಸಚಿವ ಈಶ್ವರಪ್ಪ ಮನವಿ